ಎಸ್‌ಐಆರ್‌ ಅವಧಿ ವಿಸ್ತರಿಸಿ, ಗೊಂದಲ ನಿವಾರಿಸಿ: ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ಮನವಿ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಬೇಕು ಹಾಗೂ ಮತದಾರರು ಮತ್ತು ಬಿಎಲ್‌ಒಗಳು ಎದುರಿಸುತ್ತಿರುವ ಗೊಂದಲಗಳನ್ನು ನಿವಾರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಎಸ್‌ಐಆರ್‌

ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರಿಗೆ ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್‌ ಪತ್ರ ಬರೆದಿದ್ದಾರೆ.  ರಾಜ್ಯದಲ್ಲಿ ಸದ್ಯ ಯಾವುದೇ ಚುನಾವಣೆ ಇಲ್ಲದಿರುವ ಕಾರಣ ಎಸ್‌ಐಆರ್‌ ಪ್ರಕ್ರಿಯೆಯನ್ನು ಅವಸರದಲ್ಲಿ ಪೂರ್ಣಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಆಂಧ್ರಪ್ರದೇಶ ಹಾಗೂ ಹರಿಯಾಣ ರಾಜ್ಯಗಳಲ್ಲಿ ಗಡುವು ವಿಸ್ತರಿಸಿರುವ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದೆ. ಎಸ್‌ಐಆರ್‌

ಮನೆ ಮನೆಗೆ ಭೇಟಿ ನೀಡುತ್ತಿರುವ ಅನೇಕ ಬಿಎಲ್‌ಒಗಳ ಬಳಿ 2002ರ ಮೂಲ ಮತದಾರರ ಪಟ್ಟಿ ಲಭ್ಯವಿಲ್ಲ. ಸಮರ್ಪಕ ತರಬೇತಿ ಇಲ್ಲದ ಕಾರಣ ಹಲವೆಡೆ ಗೊಂದಲ ಸೃಷ್ಟಿಯಾಗಿದೆ. ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿ ಮತ್ತು ಅನುಭವಿ ಸಿಬ್ಬಂದಿಯ ಕಾರ್ಯವೈಖರಿಯಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಮತದಾರರಿಗೆ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎಸ್‌ಐಆರ್‌ ಅರ್ಜಿಯಲ್ಲಿ ನೀಡಲಾಗುತ್ತಿರುವ ಮಾಹಿತಿಯ ನಿಖರತೆಯ ಹೊಣೆಯನ್ನು ಮತದಾರರ ಮೇಲೆಯೇ ಹಾಕಲಾಗುತ್ತಿದೆ. ಆದರೆ ಬಿಎಲ್‌ಒಗಳ ಬಳಿಯೇ ಸಮಗ್ರ ದಾಖಲೆಗಳಿಲ್ಲದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪಕ್ಷವು ಹೇಳಿದೆ. ಕೆಲವು ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಮಾಹಿತಿಯನ್ನು ಸಂಗ್ರಹಿಸಿ ಅರ್ಜಿಗಳನ್ನು ಇತರರೇ ಭರ್ತಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಆರೋಪಿಸಲಾಗಿದೆ.

2002ರ ಮತದಾರರ ಪಟ್ಟಿಯಲ್ಲಿ ಸಂಬಂಧಗಳ ವಿವರ, ಹೆಸರುಗಳ ಕಾಗುಣಿತ ಹಾಗೂ ಇತರೆ ಕ್ಲೆರಿಕಲ್‌ ದೋಷಗಳು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸುವ ಹೊಣೆಯನ್ನು ಮತದಾರರ ಮೇಲೆ ಹೊರಿಸಲಾಗುತ್ತಿದೆ. ಒಂದೇ ವ್ಯಕ್ತಿಯ ಹೆಸರು ಹಲವು ಕಡೆಗಳಲ್ಲಿ ದಾಖಲಾಗಿರುವ ಪ್ರಕರಣಗಳೂ ಕಂಡುಬಂದಿದ್ದು, ಸರಿಯಾದ ಮಾಹಿತಿಯನ್ನು ಪತ್ತೆಹಚ್ಚಲು ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳೇ ಲಭ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಎಸ್‌ಐಆರ್‌

ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್‌: ಒಬ್ಬ BLOಗೆ ನೂರಾರು ಮನೆಗಳು; ಮತದಾರರ ಪಟ್ಟಿ ಪರಿಷ್ಕರಣೆಯ ಸವಾಲುಗಳೇನು?

ಆನ್‌ಲೈನ್‌ ಮತ್ತು ಮುದ್ರಿತ ಮತದಾರರ ಪಟ್ಟಿಗಳ ನಡುವೆ ವ್ಯತ್ಯಾಸಗಳಿದ್ದು, ಕನ್ನಡ ಹಾಗೂ ಇಂಗ್ಲಿಷ್‌ ಆವೃತ್ತಿಗಳಲ್ಲೂ ಮಾಹಿತಿ ಹೊಂದಿಕೆಯಾಗುತ್ತಿಲ್ಲ. ಹಲವೆಡೆ ಮನೆ ವಿಳಾಸ, ಗ್ರಾಮಗಳ ಹೆಸರು ಮತ್ತು ಮತದಾರರ ವಿವರಗಳಲ್ಲಿ ತಪ್ಪುಗಳಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ ಎಂದು ಸಿಪಿಐ(ಎಂ) ಹೇಳಿದೆ.

ಆನ್‌ಲೈನ್‌ನಲ್ಲಿ ಲಭ್ಯವಿರುವ 2002ರ ಮತದಾರರ ಪಟ್ಟಿಯಲ್ಲಿ ಕೆಲವು ಪೂರಕ ಪುಟಗಳು ಅಪ್‌ಲೋಡ್‌ ಆಗಿಲ್ಲ. ಇದರಿಂದ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಮತದಾರರ ಪಟ್ಟಿಯಲ್ಲಿರುವ ದೋಷಗಳಿಗೆ ಚುನಾವಣಾ ಆಯೋಗವೇ ಹೊಣೆ ಹೊರಬೇಕು, ಮತದಾರರನ್ನು ಹೊಣೆಗಾರರನ್ನಾಗಿಸಬಾರದು ಎಂದು ಪಕ್ಷವು ಆಗ್ರಹಿಸಿದೆ.

ಚುನಾವಣಾ ಆಯೋಗದಿಂದ ಪ್ರತಿದಿನ ಹೊಸ ಹೊಸ ಸ್ಪಷ್ಟೀಕರಣಗಳು ಹೊರಬರುತ್ತಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಶಿಕ್ಷಣದಿಂದ ವಂಚಿತರು, ವಲಸೆ ಕಾರ್ಮಿಕರು, ಹಿರಿಯ ನಾಗರಿಕರು ಮತ್ತು ತಾಂತ್ರಿಕ ಸೌಲಭ್ಯಗಳ ಕೊರತೆ ಇರುವ ಜನರು ಈ ಪ್ರಕ್ರಿಯೆಯಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿಯೂ ಮತದಾರರ ಪಟ್ಟಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಕಂಡುಬಂದಿವೆ. ಹಲವೆಡೆ ಬಿಎಲ್‌ಒಗಳು ಅರ್ಜಿ ನಮೂನೆಗಳನ್ನು ಮಾತ್ರ ನೀಡಿ, ಅಗತ್ಯ ಮಾಹಿತಿ ನೀಡದೆ ತೆರಳುತ್ತಿರುವ ಘಟನೆಗಳು ವರದಿಯಾಗಿವೆ ಎಂದು ಪಕ್ಷವು ತಿಳಿಸಿದೆ.

ಕ್ಲೆರಿಕಲ್‌ ದೋಷಗಳ ನೆಪದಲ್ಲಿ ಲಕ್ಷಾಂತರ ಮತದಾರರ ಹೆಸರನ್ನು ಪ್ರಶ್ನಿಸುವಂತಾಗಬಾರದು. ರೇಷನ್‌ ಕಾರ್ಡ್‌ ಸೇರಿದಂತೆ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಹಲವು ಮತದಾರರ ಹೆಸರುಗಳು 2002ರ ಪಟ್ಟಿಯಲ್ಲಿ ಇಲ್ಲದಿದ್ದರೂ ಅವರು ನೈಜ ಮತದಾರರಾಗಿದ್ದಾರೆ. ಅಂತಹ ಸಂದರ್ಭಗಳಲ್ಲಿ ಕುಟುಂಬದ ಇತರೆ ಸದಸ್ಯರ ದಾಖಲೆಗಳ ಆಧಾರದ ಮೇಲೆ ಹೆಸರುಗಳನ್ನು ಜೋಡಿಸಲು ಅವಕಾಶ ಕಲ್ಪಿಸಬೇಕು ಎಂದು ಪಕ್ಷವು ಸಲಹೆ ನೀಡಿದೆ.

ಎಸ್‌ಐಆರ್‌ ಪ್ರಕ್ರಿಯೆಯ ಉದ್ದೇಶ ನಕಲಿ ಮತ್ತು ಪುನರಾವರ್ತಿತ ಹೆಸರುಗಳನ್ನು ತೆಗೆದುಹಾಕುವುದೇ ಹೊರತು ಅರ್ಹ ಮತದಾರರನ್ನು ಹೊರಗಿಡುವುದಲ್ಲ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.

ಈ ಹಿನ್ನೆಲೆಯಲ್ಲಿ ಎಸ್‌ಐಆರ್‌ ಅವಧಿಯನ್ನು ವಿಸ್ತರಿಸುವುದು, ಬಿಎಲ್‌ಒ ಮತ್ತು ಬಿಎಲ್‌ಎಗಳಿಗೆ ಸಮರ್ಪಕ ತರಬೇತಿ ನೀಡುವುದು, 2002ರ ಮತದಾರರ ಪಟ್ಟಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು, ಅಗತ್ಯ ಸಂಖ್ಯೆಯ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯುವುದು, ನೆಟ್‌ವರ್ಕ್‌ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವುದು, ವೃದ್ಧರು ಮತ್ತು ವಲಸೆ ಕಾರ್ಮಿಕರಿಗೆ ವಿಶೇಷ ನೆರವು ಕಲ್ಪಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಆಗ್ರಹಿಸಿದೆ.

ಇದನ್ನೂ ನೋಡಿ : SIR ಕರ್ನಾಟಕ | ಕೆಲಸದ ಒತ್ತಡ, ಅಪಪ್ರಚಾರ: ಎಸ್‌ಐಆರ್‌ ಕೆಲಸದ ನೋವು ಬಿಚ್ಚಿಟ್ಟ ಬಿಎಲ್‌ಒ Janashakthi Media

Donate Janashakthi Media

Leave a Reply

Your email address will not be published. Required fields are marked *