ರಾಮ ಮಂದಿರ ದೇಣಿಗೆ ದುರ್ಬಳಕೆ ತನಿಖೆ ತೀವ್ರ: ಟ್ರಸ್ಟ್ ಪ್ರಮುಖರ ವಿಚಾರಣೆ ನಡೆಸಿದ ಎಸ್‌ಐಟಿ

ಅಯೋಧ್ಯೆ: ಭಕ್ತರ ದೇಣಿಗೆ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಮ ಮಂದಿರದಲ್ಲಿ ನಡೆಯುತ್ತಿರುವ ತನಿಖೆ ಮತ್ತೆ ವೇಗ ಪಡೆದುಕೊಂಡಿದ್ದು, ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ಜುಲೈ 2ರಂದು ಟ್ರಸ್ಟ್‌ನ ಪ್ರಮುಖ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದೆ. ರಾಮ

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಮಂದಿರ ಆಡಳಿತಾಧಿಕಾರಿ ಗೋಪಾಲ್ ರಾವ್ ಅವರನ್ನು ಎಸ್‌ಐಟಿ ಸುಮಾರು ಏಳು ಗಂಟೆಗಳ ಕಾಲ ಪ್ರತ್ಯೇಕವಾಗಿ ಪ್ರಶ್ನಿಸಿದೆ. ಮಧ್ಯಾಹ್ನ ಸುಮಾರು 2.30ಕ್ಕೆ ಮಂದಿರ ಸಂಕೀರ್ಣಕ್ಕೆ ಆಗಮಿಸಿದ ತಂಡ, ರಾತ್ರಿ 9.20ರವರೆಗೆ ವಿಚಾರಣೆ ನಡೆಸಿತು.

ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಜುಲೈ 15ರವರೆಗೆ ಅವಧಿ ವಿಸ್ತರಿಸಿರುವ ಹಿನ್ನೆಲೆ, ಈ ಹೊಸ ಹಂತದ ತನಿಖೆ ಆರಂಭವಾಗಿದೆ. ಈ ಹಿಂದೆ ಜೂನ್ 23ರಂದು ಪ್ರಾಥಮಿಕ ವರದಿ ಸಲ್ಲಿಸಿದ್ದ ಎಸ್‌ಐಟಿ, ಈಗ ತನಿಖೆಯನ್ನು ಮುಂದುವರಿಸಿದೆ. ರಾಮ

ಇದನ್ನೂ ಓದಿ: ಅಪಾರ್ಟ್‌ಮೆಂಟ್ ಸಂಘ ನೋಂದಣಿಗೆ ಸಮರ್ಥ ಪ್ರಾಧಿಕಾರ ಬೇಕು: BDA ಮನವಿ

ಇತ್ತೀಚಿನ ವಿಚಾರಣೆಯಲ್ಲಿ ದೇಣಿಗೆ ನಿರ್ವಹಣಾ ವ್ಯವಸ್ಥೆಯ ಹಲವು ಅಂಶಗಳನ್ನು ಮತ್ತೆ ಪರಿಶೀಲಿಸಿ, ನಗದು ಸಂಗ್ರಹ, ಎಣಿಕೆ ಹಾಗೂ ಬ್ಯಾಂಕ್‌ಗೆ ಜಮಾ ಮಾಡುವ ಪ್ರಕ್ರಿಯೆಗಳ ಬಗ್ಗೆ ಟ್ರಸ್ಟ್ ಅಧಿಕಾರಿಗಳಿಂದ ವಿವರವಾದ ಮಾಹಿತಿ ಕೋರಲಾಗಿದೆ.

ನಗದು ಎಣಿಕೆಗೆ ನಿಯೋಜಿಸಲಾದ ಔಟ್‌ಸೋರ್ಸ್ ಸಿಬ್ಬಂದಿ ನೇಮಕಾತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜತೆ ಮಾಡಿಕೊಂಡ ಒಪ್ಪಂದ, ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಗಳ ಕುರಿತು ತನಿಖಾಧಿಕಾರಿಗಳು ವಿಶ್ಲೇಷಣೆ ನಡೆಸಿದ್ದಾರೆ.

ಇದು ಅಯೋಧ್ಯೆಯಲ್ಲಿ ಎಸ್‌ಐಟಿ ನಡೆಸುತ್ತಿರುವ ಎರಡನೇ ಹಂತದ ಪ್ರಮುಖ ತನಿಖೆಯಾಗಿದ್ದು, ಜೂನ್ 15ರಿಂದ 20ರವರೆಗೆ ದಾಖಲೆಗಳ ಪರಿಶೀಲನೆ, ನಗದು ನಿರ್ವಹಣಾ ವ್ಯವಸ್ಥೆಯ ಪರಿಶೀಲನೆ ಮತ್ತು ಅಧಿಕಾರಿಗಳ ಹೇಳಿಕೆ ದಾಖಲಿಸುವ ಕಾರ್ಯ ನಡೆಸಲಾಗಿತ್ತು.

ಈಗ ತನಿಖೆ ಕೇವಲ ಬಂಧಿತರಾದ ಎಂಟು ಆರೋಪಿಗಳ ಮೇಲೆ ಮಾತ್ರ ಸೀಮಿತವಾಗದೆ, ದೇಣಿಗೆ ನಿರ್ವಹಣೆಯ ಸಂಪೂರ್ಣ ವ್ಯವಸ್ಥೆಯತ್ತ ವಿಸ್ತರಿಸಲಾಗಿದೆ. ಟ್ರಸ್ಟ್ ಅಧಿಕಾರಿಗಳ ಮೇಲ್ವಿಚಾರಣೆಯ ಮಟ್ಟ ಮತ್ತು ಯಾವುದೇ ಆಡಳಿತಾತ್ಮಕ ವೈಫಲ್ಯಗಳಿದ್ದವೆಯೇ ಎಂಬುದನ್ನು ತಿಳಿಯಲು ಈ ವಿಚಾರಣೆ ನಡೆಸಲಾಗಿದೆ.

ಬಂಧಿತ ಆರೋಪಿಗಳ ನೇಮಕಾತಿ ಪ್ರಕ್ರಿಯೆಯನ್ನೂ ಎಸ್‌ಐಟಿ ಪರಿಶೀಲಿಸುತ್ತಿದ್ದು, ಯಾರು ಅವರನ್ನು ಶಿಫಾರಸು ಮಾಡಿದರು, ನಿಯಮಾನುಸಾರ ನೇಮಕಾತಿ ನಡೆದಿತ್ತೆ, ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಇದೇ ವೇಳೆ, ದೇಣಿಗೆ ನಿರ್ವಹಣೆಯಲ್ಲಿ ಭಾಗಿಯಾಗಿರುವ ಎಸ್‌ಬಿಐ ಅಧಿಕಾರಿಗಳು, ಔಟ್‌ಸೋರ್ಸ್ ಏಜೆನ್ಸಿ ಹಾಗೂ ಭದ್ರತಾ ಕ್ರಮಗಳ ಅನುಷ್ಠಾನವನ್ನು ಕೂಡ ಪರಿಶೀಲಿಸಲಾಗುತ್ತಿದೆ. ಸಿಬ್ಬಂದಿಯ ತಪಾಸಣೆ, ಸಿಸಿಟಿವಿ ನಿಗಾವ್ಯವಸ್ಥೆ, ಮೇಲ್ವಿಚಾರಣೆ ಸೇರಿದಂತೆ ಭದ್ರತಾ ಕ್ರಮಗಳು ಸರಿಯಾಗಿ ಜಾರಿಯಾಗಿತ್ತೆ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಬಂಧಿತರಾದ ಆರೋಪಿಗಳು ಹೊಂದಿರುವ ಆಸ್ತಿಗಳನ್ನೂ ಪರಿಶೀಲಿಸಲಾಗುತ್ತಿದ್ದು, ತನಿಖೆ ಈಗ ಆಡಳಿತಾತ್ಮಕ ಜವಾಬ್ದಾರಿ ಹಾಗೂ ವ್ಯವಸ್ಥಾತ್ಮಕ ದೋಷಗಳತ್ತ ವಿಸ್ತರಿಸಿದೆ.

ಲಖ್ನೋ ವಿಭಾಗೀಯ ಆಯುಕ್ತ ವಿಜಯ ವಿಶ್ವಾಸ್ ಪಂತ್, ಲಖ್ನೋ ರೇಂಜ್ ಪೊಲೀಸ್ ಮಹಾನಿರೀಕ್ಷಕ ಕಿರಣ್ ಎಸ್ ಹಾಗೂ ಹಣಕಾಸು ವಿಶೇಷ ಕಾರ್ಯದರ್ಶಿ ನೀಲ್ ರತನ್ ಸೇರಿರುವ ಎಸ್‌ಐಟಿ ಜುಲೈ 15ರೊಳಗೆ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್‌ ಕಥೆ ಏನು? ಎಸ್‌ಐಆರ್‌ ಸುತ್ತ ಪ್ರಶ್ನೆಗಳ ಹುತ್ತ |

Donate Janashakthi Media

Leave a Reply

Your email address will not be published. Required fields are marked *