ಹಿಂದೂಗಳದ್ದೇ ಎಂದು ಕರೆಯಲ್ಪಡುವ ಪ್ರಭುತ್ವವು ಬಹುಪಾಲು ಹಿಂದೂಗಳ ಲೌಕಿಕ ಜೀವನದ ಸ್ಥಿತಿ–ಗತಿಗಳನ್ನು ಬದಲಾಯಿಸುವ ಯಾವ ಭರವಸೆಯನ್ನೂ ನೀಡುವುದಿಲ್ಲ. ಹಾಗಾದರೆ, ಇಂತಹ ಪ್ರಭುತ್ವದ ಅಗತ್ಯತೆಯಾಗಿ ರೂಪ ತಳೆವ ಒಂದು ಸರ್ವಾಧಿಕಾರವನ್ನು ಯಾರ ಹಿತದಲ್ಲಿ ಚಲಾಯಿಸಲಾಗುತ್ತದೆ? ಸ್ಪಷ್ಟ ಉತ್ತರ- ಏಕಸ್ವಾಮ್ಯ ಬಂಡವಾಳದ ಹಿತದೃಷ್ಟಿಯಿಂದ. ಆರ್.ಎಸ್.ಎಸ್. ಪ್ರತಿಪಾದಿಸುವ ಹಿಂದೂರಾಷ್ಟ್ರ ಎಂಬುದು, ಆ ಹೆಸರು ಏನನ್ನು ಸೂಚಿಸುತ್ತದೆಯೋ ಅದಕ್ಕಿಂತ ಭಿನ್ನವಾಗಿ, ಏಕಸ್ವಾಮ್ಯ ಬಂಡವಾಳದ ಸರ್ವಾಧಿಕಾರವಲ್ಲದೆ ಮತ್ತೇನೂ ಅಲ್ಲ. ಅಲ್ಲದೆ ಇದು ಭಾರತಕ್ಕೇ ವಿಶಿಷ್ಟವಾದ ವಿದ್ಯಮಾನವೂ ಅಲ್ಲ. ನೂರು ವರ್ಷಗಳ ಕಾಲ ಅಧಿಕಾರದ ಹತ್ತಿರವೆಲ್ಲೂ ಇದ್ದಿರದಿದ್ದ ಆರ್.ಎಸ್.ಎಸ್. ಇಂದು ವಿಶ್ವದ “ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ” ಎಂದು ಹೆಮ್ಮೆಪಡುತ್ತ ಇದ್ದಕ್ಕಿದ್ದಂತೆ ಅಧಿಕಾರದಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದರೆ, ಅದಕ್ಕೆ ಏಕಸ್ವಾಮ್ಯ ಬಂಡವಾಳದಿಂದ ಅದು ಪ್ರಸ್ತುತ್ತ ಪಡೆಯುತ್ತಿರುವ ಬೃಹತ್ ಬೆಂಬಲವೇ ಕಾರಣ. ನವ ಉದಾರವಾದಿ ಬಂಡವಾಳಶಾಹಿಯು ಜಾಗತಿಕ ಅರ್ಥವ್ಯವಸ್ಥೆಯನ್ನು ಮುಂದಿನ ದಾರಿ ಕಾಣದ ಒಂದು ಪರಿಸ್ಥಿತಿಗೆ ತಂದಿರುವ ಸಂದರ್ಭದಲ್ಲಿ ಇದು ಸಂಭವಿಸಿದೆ ಮತ್ತು ನರೇಂದ್ರ ಮೋದಿ ಈ ಮೈತ್ರಿಕೂಟದ ಶಿಲ್ಪಿಯಾಗಿ ಆರ್.ಎಸ್.ಎಸ್. ಅಧಿಕಾರಶ್ರೇಣಿಯಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದಾರೆ ಎಂಬುದು ಗಮನಾರ್ಹ.
– ಪ್ರೊ. ಪ್ರಭಾತ್ ಪಟ್ನಾಯಕ್
– ಅನು: ಕೆ. ಎಂ. ನಾಗರಾಜ್
ಭಾರತದಲ್ಲಿ ಒಂದು ಹಿಂದೂ ಪ್ರಭುತ್ವವನ್ನು (“ಹಿಂದೂ ರಾಷ್ಟ್ರ”) ಸ್ಥಾಪಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಗುರಿ. ಆದರೆ, ಹಿಂದೂ ರಾಷ್ಟ್ರವೆಂದರೆ ಅದರ ಸರಿಯಾದ ಅರ್ಥವೇನು? ನಮಗೆ ಸಿಗಬಹುದಾದ ತಕ್ಷಣದ ಉತ್ತರವೆಂದರೆ, ಅಂತಹ ಒಂದು ಪ್ರಭುತ್ವದಲ್ಲಿ, ಎಲ್ಲ ನಾಗರಿಕರಿಗೂ ಭಾರತದ ಸಂವಿಧಾನದಲ್ಲಿ ಮತಧರ್ಮಾತೀತವಾಗಿ (ಅಂದರೆ, ಅವರು ಯಾವುದೇ ಧರ್ಮವನ್ನು ಅನುಸರಿಸಲಿ ಅಥವಾ ಬಿಡಲಿ) ಖಾತರಿಪಡಿಸಲಾದ ಸಮಾನತೆಯ ಬದಲಿಗೆ, ಬೇರೆ ಬೇರೆ ಮತಧರ್ಮಗಳಿಗೆ ಸೇರಿದವರಿಗಿಂತ, ಅದರಲ್ಲೂ ವಿಶೇಷವಾಗಿ ದೇಶದ ಅತಿ ದೊಡ್ಡ ಮತೀಯ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರಿಗಿಂತ, ಹಿಂದೂಗಳಿಗೆ ಒಂದು ಉನ್ನತವಾದ ಸ್ಥಾನ-ಮಾನವಿರುತ್ತದೆ ಎಂಬುದು.
ಅಂತಹ ಒಂದು ಅಸಮಾನತೆಯನ್ನು ನಿರ್ದಿಷ್ಟವಾಗಿ ದಮನಕಾರಿಯಾದ ಒಂದು ಪ್ರಭುತ್ವ ಮಾತ್ರವೇ ಒಪ್ಪಬಹುದು. ದಬ್ಬಾಳಿಕೆಯ ವರ್ಗ-ಸಮಾಜದಲ್ಲಿ ಎಲ್ಲ ಪ್ರಭುತ್ವಗಳೂ ದಮನಕಾರಿಯಾಗಿಯೇ ಇರುತ್ತವೆಯಾದರೂ ಅಸಮಾನತೆಯನ್ನು ಈ ರೀತಿಯಲ್ಲಿ ಸಂಸ್ಥೀಕರಿಸುವ ಪ್ರಭುತ್ವವು ಇನ್ನೂ ಹೆಚ್ಚು ನಿರ್ದಿಷ್ಟವಾಗಿ ದಮನಕಾರಿಯಾಗಿಯೇ ಇರಬೇಕಾಗುತ್ತದೆ. ಹಾಗಾದರೆ ಹಿಂದೂ ಪ್ರಭುತ್ವ ಎಂದರೆ ಹಿಂದೂಗಳು ಎಂಬೊಂದು ಸಮೂಹ ಇತರ ಮತಧರ್ಮಗಳಿಗೆ ಸೇರಿದವರ ಮೇಲೆ ಸರ್ವಾಧಿಕಾರವನ್ನು ಚಲಾಯಿಸುತ್ತಾರೆ ಎಂದಾಗುತ್ತದೆಯೇ?
ಇದನ್ನೂ ಓದಿ: ಐರ್ಲೆಂಡ್ ಶಾಕ್ ಬಳಿಕ ಇಂಗ್ಲೆಂಡ್ ಎದುರು ಭಾರತ: ಶ್ರೇಯಸ್ ತಂಡಕ್ಕೆ ಹೊಸ ಪರೀಕ್ಷೆ
ಈ ಪ್ರಶ್ನೆಯನ್ನು ಕೇಳಿದ ಕ್ಷಣವೇ, ಸ್ಪಷ್ಟವಾಗಿ “ಇಲ್ಲ” ಎಂಬ ಉತ್ತರವೇ ಬರುತ್ತದೆ. ಒಂದು ಹಿಂದೂ ಪ್ರಭುತ್ವದಲ್ಲಿ ರಿಕ್ಷಾ ಎಳೆಯುವವನೊಬ್ಬ ಯಾವುದೇ ಧರ್ಮದವನಾಗಿದ್ದರೂ ಅವನು ರಿಕ್ಷಾ ಎಳೆಯುವವನಾಗಿಯೇ ಇರುತ್ತಾನೆ. ಒಂದು ಹಿಂದೂ ಪ್ರಭುತ್ವದಲ್ಲಿ ಒಬ್ಬ ಜವಾನ ಯಾವುದೇ ಧರ್ಮದವನಾಗಿದ್ದರೂ ಅವನು ಜವಾನ ಆಗಿಯೇ ಇರುತ್ತಾನೆ. ಒಂದು ಹಿಂದೂ ಪ್ರಭುತ್ವದಲ್ಲಿ ಗಿಗ್-ಕೆಲಸಗಾರನೊಬ್ಬ (ಉದ್ಯೋಗದಾತ-ಉದ್ಯೋಗಿ ಸಂಬಂಧವಿಲ್ಲದೆ, ಸ್ವಿಗ್ಗಿ, ಜೊಮಾಟೊ, ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ಆನ್ಲೈನ್ ಪ್ಲಾಟ್ಫಾರ್ಮ್ಗಳೊಂದಿಗೆ ಹಾಗೂ ಓಲಾ, ಊಬರ್, ಇವುಗಳ ಚಾಲಕರಾಗಿ ಸೇವೆ ಒದಗಿಸುವ, ಮಾಸಿಕ ಸಂಬಳವಿರದ, ಬದಲಿಗೆ, ಕೆಲಸ ಅಥವಾ ಆರ್ಡರ್ಗಳ ಮೇಲೆ ನಿಗದಿಪಡಿಸಿದ ಹಣ ಪಡೆಯುವ ಕೆಲಸಗಾರರು- ಅನು), ಯಾವುದೇ ಧರ್ಮದವನಾಗಿದ್ದರೂ ಅವನು ಗಿಗ್-ಕೆಲಸಗಾರ ಆಗಿಯೇ ಇರುತ್ತಾನೆ.
ಅಂದರೆ, ಹಿಂದೂಗಳದ್ದೇ ಎಂದು ಕರೆಯಲ್ಪಡುವ ಪ್ರಭುತ್ವವು ಬಹುಪಾಲು ಹಿಂದೂಗಳ ಲೌಕಿಕ ಜೀವನದ ಸ್ಥಿತಿ-ಗತಿಗಳನ್ನು ಬದಲಾಯಿಸುವ ಯಾವ ಭರವಸೆಯನ್ನೂ ನೀಡುವುದಿಲ್ಲ ಮತ್ತು ಅದನ್ನು ಸಾಧಿಸುವುದೂ ಇಲ್ಲ. ಹಾಗಾದರೆ, ಇಂತಹ ಪ್ರಭುತ್ವದೊಂದಿಗೆ ಅಗತ್ಯವಾಗಿ ರೂಪ ತಳೆವ ಒಂದು ಸರ್ವಾಧಿಕಾರವನ್ನು ಯಾರ ಹಿತದಲ್ಲಿ ಚಲಾಯಿಸಲಾಗುತ್ತದೆ? ಸ್ಪಷ್ಟ ಉತ್ತರ- ಏಕಸ್ವಾಮ್ಯ ಬಂಡವಾಳದ ಹಿತದೃಷ್ಟಿಯಿಂದ. ಒಂದು ಹಿಂದೂ ಪ್ರಭುತ್ವವೆಂಬುದು, ಹೆಸರು ಏನನ್ನು ಸೂಚಿಸುತ್ತದೆಯೋ ಅದಕ್ಕಿಂತ ಭಿನ್ನವಾಗಿ, ಏಕಸ್ವಾಮ್ಯ ಬಂಡವಾಳದ ಸರ್ವಾಧಿಕಾರವಲ್ಲದೆ ಮತ್ತೇನೂ ಅಲ್ಲ.
ಒಂದು ಹಿಂದೂ ಪ್ರಭುತ್ವದಲ್ಲಿ ರಿಕ್ಷಾ ಎಳೆಯುವವನೊಬ್ಬ ಯಾವುದೇ ಧರ್ಮದವನಾಗಿದ್ದರೂ ಅವನು ರಿಕ್ಷಾ ಎಳೆಯುವವನಾಗಿಯೇ ಇರುತ್ತಾನೆ, ಒಬ್ಬ ಜವಾನ ಯಾವುದೇ ಧರ್ಮದವನಾಗಿದ್ದರೂ ಅವನು ಜವಾನ ಆಗಿಯೇ ಇರುತ್ತಾನೆ, ಗಿಗ್-ಕೆಲಸಗಾರನೊಬ್ಬ ಯಾವುದೇ ಧರ್ಮದವನಾಗಿದ್ದರೂ ಅವನು ಗಿಗ್-ಕೆಲಸಗಾರ ಆಗಿಯೇ ಇರುತ್ತಾನೆ. ಅಂದರೆ, ಹಿಂದೂಗಳದ್ದೇ ಎಂದು ಕರೆಯಲ್ಪಡುವ ಪ್ರಭುತ್ವವು ಬಹುಪಾಲು ಹಿಂದೂಗಳ ಲೌಕಿಕ ಜೀವನದ ಸ್ಥಿತಿ-ಗತಿಗಳನ್ನು ಬದಲಾಯಿಸುವ ಯಾವ ಭರವಸೆಯನ್ನೂ ನೀಡುವುದಿಲ್ಲ ಮತ್ತು ಅದನ್ನು ಸಾಧಿಸುವುದೂ ಇಲ್ಲ.
ಕಾರ್ಪೊರೇಟ್ಗಳ ಯಜಮಾನಿಕೆ
ಒಂದು ಹಿಂದೂ ಪ್ರಭುತ್ವದಲ್ಲಿ ಅದರ ಸಮಾರಂಭಗಳಲ್ಲಿ ಹಿಂದೂ ಮತೀಯ ಕ್ರಿಯಾ ವಿಧಿವಿಧಾನಗಳನ್ನು ಮತ್ತು ಹಿಂದೂ ಮತೀಯ ಆಚರಣೆಗಳನ್ನು ಅನುಸರಿಸುವ ನಯವಿನಯದ ಒಂದು ಸೋಗು ಇದ್ದೇ ಇರುತ್ತದೆ. ಉದ್ಯೋಗಿಗಳ ಆಯ್ಕೆಯಲ್ಲಿ ಇತರರಿಗೆ ಹೋಲಿಸಿದರೆ ನಿಸ್ಸಂದೇಹವಾಗಿ ಹಿಂದೂಗಳಿಗೆ ಆದ್ಯತೆ ಇರುತ್ತದೆ. ಆದರೆ ಇಂದಿನ ದಿನಗಳಲ್ಲಿ ಹೊಸ ಉದ್ಯೋಗಗಳು ಲಭ್ಯವಾಗುತ್ತಿಲ್ಲ. ಕೃತಕ ಬುದ್ಧಿಮತ್ತೆಯನ್ನು (AI) ಕಾರ್ಪೊರೇಟ್ಗಳು ಪರಿಚಯಿಸುವುದರಿಂದ ಅಸ್ತಿತ್ವದಲ್ಲಿರುವ ಉದ್ಯೋಗಗಳು ಮಾಯಯಾಗುತ್ತಿವೆ. ನಿಜ, ಮುಸ್ಲಿಮರು ಮತ್ತು ಇತರ ಮತೀಯ ಅಲ್ಪಸಂಖ್ಯಾತರು ಒಂದು ತೀವ್ರ ತರದ ಮತ್ತು ಅನೇಕ ರೀತಿಯ ದಬ್ಬಾಳಿಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ ಪ್ರಭುತ್ವದಲ್ಲಿ ಹಿಂದೂಗಳು ತಮ್ಮ ಮೇಲಿನ ದಬ್ಬಾಳಿಕೆಗಳಿಗೆ ಪರಿಹಾರ ಪಡೆಯುತ್ತಾರೆ ಎಂದೇನೂ ಅಲ್ಲ. ಇದರಡಿಯಲ್ಲಿ ತಮ್ಮ ಅಧಿಕಾರವನ್ನು ಹೆಚ್ಚು ಹೆಚ್ಚು ಬಲಪಡಿಸಿಕೊಳ್ಳುವ ವರ್ಗವೆಂದರೆ, ಅದು ಏಕಸ್ವಾಮ್ಯ ಬೂರ್ಜ್ವಾ ವರ್ಗವೇ. ಈ ಏಕಸ್ವಾಮ್ಯ ಬೂರ್ಜ್ವಾ ವರ್ಗದೊಳಗೂ ಸಹ ಒಂದು ಹೊಸ ಗುಂಪು ತನ್ನ ಅಧಿಕಾರವನ್ನು ಹೆಚ್ಚು ಹೆಚ್ಚು ಬಲಪಡಿಸಿಕೊಳ್ಳುತ್ತಲೇ ಹೋಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಹಿಂದೂ ಪ್ರಭುತ್ವವು ಸಾಮಾನ್ಯವಾಗಿ ಭಾರತದ ಬೃಹತ್ ಕಾರ್ಪೊರೇಟ್ಗಳು ಮತ್ತು ನಿರ್ದಿಷ್ಟವಾಗಿ ಅದಾನಿಗಳು ಮತ್ತು ಅಂಬಾನಿಗಳು ಯಜಮಾನಿಕೆ ನಡೆಸುವ ಒಂದು ಪ್ರಭುತ್ವವಾಗಿರುತ್ತದೆ.

“ಈತನ ಹಣ ನನಗೆ ಅಧಿಕಾರ ಕೊಡಿಸುತ್ತದೆ!”
“ಈತನ ಅಧಿಕಾರ ನನಗೆ ಹಣ ಕೊಡಿಸುತ್ತದೆ!”
ವ್ಯಂಗ್ಯಚಿತ್ರ ಕೃಪೆ: ಸ್ಯಾನಿಟರಿ ಪ್ಯಾನಲ್ಸ್@ ಫೇಸ್ಬುಕ್
ಇದು, 1930ರ ದಶಕದಲ್ಲಿ ನಾಜಿಗಳು ಜರ್ಮನಿಯಲ್ಲಿ, ಯಹೂದಿಗಳು(ಒಬ್ಬ ಯಹೂದಿ ವ್ಯಕ್ತಿಯು “ಆರ್ಯ ಯಹೂದಿ” ಆಗುವುದು ಅಸಾಧ್ಯವೆಂದು ಅವರು ಪರಿಗಣಿಸಿದ್ದರು) ಮತ್ತು ಜಿಪ್ಸಿಗಳಂತಹ (ಒಬ್ಬ ಜಿಪ್ಸಿ ವ್ಯಕ್ತಿಯು ಸಹ “ಆರ್ಯ ಜಿಪ್ಸಿ” ಆಗುವುದುಅಸಾಧ್ಯವೆಂದು ಪರಿಗಣಿಸಲಾಗಿತ್ತು) “ಆರ್ಯೇತರ” ಜನರನ್ನು ಬಲಿಪಶುಗಳನ್ನಾಗಿ ಮಾಡುವ ಮೂಲಕ “ಆರ್ಯನ್ ಶ್ರೇಷ್ಠತೆ”ಯನ್ನು ಸ್ಥಾಪಿಸುವುದಾಗಿ ಹೇಳಿಕೊಂಡ ಪರಿಸ್ಥಿತಿಯನ್ನು ನೆನಪಿಸುತ್ತದೆ. ಆದರೆ, ನಾಜಿ ಪ್ರಭುತ್ವವು “ಆರ್ಯನ್ ಪ್ರಭುತ್ವ” ಆಗಿರಲಿಲ್ಲ. ನಾಜಿಗಳು ಸ್ಥಾಪಿಸಿದ ಸರ್ವಾಧಿಕಾರ, ೧೯೩೫ರಲ್ಲಿ ಜರುಗಿದ ಕಮ್ಯುನಿಸ್ಟ್ ಅಂತಾರಾಷ್ಟ್ರೀಯದ ಏಳನೇ ಮಹಾಧಿವೇಶನದಲ್ಲಿ ಅದರ ಅಧ್ಯಕ್ಷ ಜಾರ್ಜಿ ಡಿಮಿತ್ರೊವ್ ಹೇಳಿರುವಂತೆ, “ಹಣಕಾಸು ಬಂಡವಾಳದ ಅತ್ಯಂತ ಪ್ರತಿಗಾಮಿ, ಅತ್ಯಂತ ಸಂಕುಚಿತವಾದಿ ಮತ್ತು ಅತ್ಯಂತ ಸಾಮ್ರಾಜ್ಯಶಾಹಿ ಅಂಶಗಳ ಮುಚ್ಚುಮರೆಯಿಲ್ಲದ ಭಯೋತ್ಪಾದಕ ಸರ್ವಾಧಿಕಾರ”.
ಪ್ರಭುತ್ವದ ನಾಯಕತ್ವ ವಹಿಸಿದವರು ತಮ್ಮ ಪ್ರಭುತ್ವದ ಬಗ್ಗೆ ನೀಡುವ ವಿವರಣೆಯು ಅದರ ವಾಸ್ತವ ಸ್ವರೂಪವನ್ನು ಬಿಂಬಿಸಲೇ ಬೇಕೆಂದೇನಿಲ್ಲ. ಆದ್ದರಿಂದ, ನಾವು ಕೇಳಬೇಕಾದ ಪ್ರಶ್ನೆ- ತನ್ನ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಭುತ್ವವನ್ನು ಬಳಸಿಕೊಳ್ಳುತ್ತಿರುವ ವರ್ಗ ಯಾವುದು ಎಂಬುದು. ಹಾಗೆ ನೋಡಿದರೆ, ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಮೂಲಕ ನಿರ್ದಿಷ್ಟ ಗುಂಪುಗಳನ್ನು ಎರಡನೇ ದರ್ಜೆಯ ನಾಗರಿಕರ ಸ್ಥಾನಮಾನಕ್ಕೆ ಇಳಿಸುವ ಮೂಲಕ ಕೆಲವು ಜನಾಂಗೀಯ ಹಿತಾಸಕ್ತಿಗಳನ್ನು ಅಥವಾ ಧಾರ್ಮಿಕ ಹಿತಾಸಕ್ತಿಗಳನ್ನು ಅಥವಾ ಭಾಷಿಕ ಗುಂಪಿನ ಹಿತಾಸಕ್ತಿಗಳನ್ನು ಹೆಚ್ಚಿಸುವುದಾಗಿ ಹೇಳಿಕೊಳ್ಳುವ ಎಲ್ಲ ಪ್ರಭುತ್ವಗಳೂ ವಾಸ್ತವಿಕವಾಗಿ ಏಕಸ್ವಾಮ್ಯ ಬಂಡವಾಳದ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ಅದರ ಸರ್ವಾಧಿಕಾರವನ್ನು ಸ್ಥಾಪಿಸುವ ಮೂಲಕ ಮತ್ತು ದುಡಿಯುವ ಜನರನ್ನು ಅವರ ಭಾಷೆ, ಕುಲ, ಜಾತಿ, ಮತ, ಸಂಸ್ಕೃತಿ ಇವುಗಳ ಆಧಾರದಲ್ಲಿ ವಿಭಜಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಒಂದು ಆಧುನಿಕ, ಬಹು-ವಿಭಾಗೀಯ ಸಮಾಜದಲ್ಲಿ ಒಂದು ವಿಭಾಗದ ಪ್ರಭುತ್ವವನ್ನು ಹೇರುವುದು ವಾಸ್ತವಿಕವಾಗಿ ಏಕಸ್ವಾಮ್ಯ ಬಂಡವಾಳದ ಸರ್ವಾಧಿಕಾರವಾಗಿರುತ್ತದೆ.
ಕೆಲವು ಜನಾಂಗೀಯ ಹಿತಾಸಕ್ತಿಗಳನ್ನು ಅಥವಾ ಧಾರ್ಮಿಕ ಹಿತಾಸಕ್ತಿಗಳನ್ನು ಅಥವಾ ಭಾಷಿಕ ಗುಂಪಿನ ಹಿತಾಸಕ್ತಿಗಳನ್ನು ಹೆಚ್ಚಿಸುವುದಾಗಿ ಹೇಳಿಕೊಳ್ಳುವ ಎಲ್ಲ ಪ್ರಭುತ್ವಗಳೂ ವಾಸ್ತವಿಕವಾಗಿ ಏಕಸ್ವಾಮ್ಯ ಬಂಡವಾಳದ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ಅದರ ಸರ್ವಾಧಿಕಾರವನ್ನು ಸ್ಥಾಪಿಸುವ ಮೂಲಕ ಮತ್ತು ದುಡಿಯುವ ಜನರನ್ನು ಅವರ ಭಾಷೆ, ಕುಲ, ಜಾತಿ, ಮತ, ಸಂಸ್ಕೃತಿ ಇವುಗಳ ಆಧಾರದಲ್ಲಿ ವಿಭಜಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಒಂದು ಆಧುನಿಕ, ಬಹು-ವಿಭಾಗೀಯ ಸಮಾಜದಲ್ಲಿ ಒಂದು ವಿಭಾಗದ ಪ್ರಭುತ್ವವನ್ನು ಹೇರುವುದು ವಾಸ್ತವಿಕವಾಗಿ ಏಕಸ್ವಾಮ್ಯ ಬಂಡವಾಳದ ಸರ್ವಾಧಿಕಾರವಾಗಿರುತ್ತದೆ.
ಹೊಸ ಪ್ರಾಬಲ್ಯ ಏಕೆ?
ಈಗಾಗಲೇ ಅಸ್ತಿತ್ವದಲ್ಲಿರುವ “ಜಾತ್ಯತೀತ” ಪ್ರಭುತ್ವದ ಮೇಲೆಯೇ ಏಕಸ್ವಾಮ್ಯ ಬಂಡವಾಳವು ಪ್ರಾಬಲ್ಯವನ್ನು ಅದಾಗಲೇ ಹೊಂದಿರುವುದರಿಂದ, ಅದಕ್ಕೆ ಒಂದು ಹೊಸ ಮತ್ತು ಸಂಪೂರ್ಣವಾಗಿ ವಿಭಿನ್ನವಾದ ಹಿಂದೂ-ಪ್ರಾಬಲ್ಯವಾದಿ ಸರ್ವಾಧಿಕಾರವನ್ನು ಸಾಕಾರಗೊಳಿಸುವ ಪ್ರಭುತ್ವದ ಅಗತ್ಯವಾದರೂ ಏನು, ಅದನ್ನು ಸ್ಥಾಪಿಸುವುದಕ್ಕಾಗಿ ಏಕಸ್ವಾಮ್ಯ ಬಂಡವಾಳವು ಏಕೆ ಸಹಾಯ ಮಾಡಬೇಕು ಎಂಬ ಪ್ರಶ್ನೆಯನ್ನು ಎತ್ತಬಹುದು. ಪ್ರಭುತ್ವವು ತನ್ನ ಹಿಂದಿನ ರೂಪದಲ್ಲಿದ್ದ ಅವಧಿಯಲ್ಲಿ ಒಂದು ಗಂಭೀರ ಬೆದರಿಕೆಯನ್ನು ಎದುರಿಸುತ್ತಿದ್ದಾಗ ಮಾತ್ರ ಅಂತಹ ಒಂದು ಬದಲಾವಣೆಯ ಅಗತ್ಯ ಉದ್ಭವಿಸುತ್ತದೆ ಮತ್ತು ಅರ್ಥವ್ಯವಸ್ಥೆಯು ಸ್ಥಗಿತತೆಗೆ ಸಿಲುಕಿದ ಪರಿಣಾಮವಾಗಿ ನಿರುದ್ಯೋಗದ ಸಮಸ್ಯೆಯು ಉಲ್ಬಣಗೊಂಡ ಒಂದು ಅವಧಿಯಲ್ಲಿ ಅದು ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಹಿಂದೂ ಪ್ರಭುತ್ವದ ಸೋಗಿನಲ್ಲಿ ಸರ್ವಾಧಿಕಾರದತ್ತ ಚಲಿಸುತ್ತಿರುವ ಏಕಸ್ವಾಮ್ಯ ಬಂಡವಾಳದ ಪ್ರಸ್ತುತ ನಡೆಯು, ಅರ್ಥವ್ಯವಸ್ಥೆಯನ್ನು ಸ್ಥಗಿತತೆಗೆ ಕೊಂಡೊಯ್ದ, ನಿರುದ್ಯೋಗವನ್ನು ಹೆಚ್ಚಿಸಿದ ಮತ್ತು ದುಡಿಯುವ ಜನರಿಗೆ ತೀವ್ರ ಸಂಕಷ್ಟವನ್ನು ತಂದಿರುವ ನವ-ಉದಾರವಾದಿ ಆಳ್ವಿಕೆಯು ಮುಂದಿನ ದಾರಿ ಕಾಣದ ಒಂದು ಹಂತವನ್ನು ತಲುಪಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಪ್ರಜಾಪ್ರಭುತ್ವವು ದುಡಿಯುವ ಜನರಿಗೆ, ಪ್ರತಿರೋಧಿಸುವ ಮತ್ತು ಹೋರಾಟ ಮಾಡುವ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ಈ ಕಾರಣದಿಂದಾಗಿ ಬಿಕ್ಕಟ್ಟಿನ ಯಾವುದೇ ಅವಧಿಯಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ ಮತ್ತು ಈ ಮೂಲಕ ಏಕಸ್ವಾಮ್ಯ ಬಂಡವಾಳದ ಪ್ರಾಬಲ್ಯಕ್ಕೆ ಎದುರಾಗುವ ಬೆದರಿಕೆಯನ್ನು ತಡೆಯಲಾಗುತ್ತದೆ. ಆದರೆ ಬಿಕ್ಕಟ್ಟು ಬಹಳ ಕಾಲ ಎಳೆದುಕೊಂಡು ಹೋದಾಗ ಮತ್ತು ತನ್ನ ಪ್ರಾಬಲ್ಯಕ್ಕೆ ಒಡ್ಡಿದ ಬೆದರಿಕೆ ಸತತವಾಗಿ ಇದ್ದಾಗ, ಏಕಸ್ವಾಮ್ಯ ಬಂಡವಾಳವು ಅತಿ ಉಗ್ರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಗೊಂದಲಗೊಳಿಸುವ ಒಂದು ಪರ್ಯಾಯ ಸಂವಾದವನ್ನು ಹುಟ್ಟಿಹಾಕಲು, ದುಡಿಯುವ ಜನರು ತಮ್ಮ ಒಗ್ಗಟ್ಟಿನ ಹೋರಾಟವನ್ನು ಆರಂಭಿಸುವುದನ್ನು ತಪ್ಪಿಸಲು, ಒಂದು ಸಂಕುಚಿತ ಮನೋಭಾವದ ಪ್ರಭುತ್ವವನ್ನು ಸ್ಥಾಪಿಸುವ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡುವುದನ್ನು ಸಮರ್ಥಿಸಲು ಮತ್ತು ಜನರನ್ನು ವಿಭಜಿಸಲು ಹೆಚ್ಚು ಸಮರ್ಥವಾಗಿರುವ ಯಾವುದೇ ಶಕ್ತಿಯೊಂದಿಗೆ ಏಕಸ್ವಾಮ್ಯ ಬಂಡವಾಳವು ಮೈತ್ರಿ ಮಾಡಿಕೊಳ್ಳುತ್ತದೆ. ಭಾರತದ ಸಂದರ್ಭದಲ್ಲಿ ಈ ಶಕ್ತಿಯೆಂದರೆ ಹಿಂದೂ ಪ್ರಭುತ್ವದ ವಾಗ್ದಾನ ಮಾಡಿದವರು.
ದುಡಿಯುವ ಜನರು ತಮ್ಮ ಒಗ್ಗಟ್ಟಿನ ಹೋರಾಟವನ್ನು ಆರಂಭಿಸುವುದನ್ನು ತಪ್ಪಿಸಲು, ಒಂದು ಸಂಕುಚಿತ ಮನೋಭಾವದ ಪ್ರಭುತ್ವವನ್ನು ಸ್ಥಾಪಿಸುವ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡುವುದನ್ನು ಸಮರ್ಥಿಸಲು ಮತ್ತು ಜನರನ್ನು ವಿಭಜಿಸಲು ಹೆಚ್ಚು ಸಮರ್ಥವಾಗಿರುವ ಯಾವುದೇ ಶಕ್ತಿಯೊಂದಿಗೆ ಏಕಸ್ವಾಮ್ಯ ಬಂಡವಾಳವು ಮೈತ್ರಿ ಮಾಡಿಕೊಳ್ಳುತ್ತದೆ. ಭಾರತದ ಸಂದರ್ಭದಲ್ಲಿ ಈ ಶಕ್ತಿಯೆಂದರೆ ಹಿಂದೂ ಪ್ರಭುತ್ವದ ವಾಗ್ದಾನ ಮಾಡಿದವರು.
ಆರ್ಎಸ್ಎಸ್-ಬಿಜೆಪಿ ನಡೆಸುವ ಸಂವಾದ ಗಮನವನ್ನು ಬೇರೆಡೆಗೆ ತಿರುಗಿಸುವ ಸ್ವರೂಪದ್ದು ಎಂಬುದು ಈಗ ಮೇಲ್ನೋಟಕ್ಕೇ ಸುಸ್ಪಷ್ಟವಾಗಿದೆ. ದೇಶದ ಕಾರ್ಮಿಕ-ಬಲ, ವಿಶೇಷವಾಗಿ ಯುವ ಜನತೆ ನಿರುದ್ಯೋಗದ ಭಾರದಿಂದ ಕುಗ್ಗಿರುವಾಗ, ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣವು ಅತಿ ಹೆಚ್ಚಿನ ಮಟ್ಟದಲ್ಲಿರುವಾಗ, ದೇಶದ ಆಡಳಿತ ನಡೆಸುವವರು ಈ ತುರ್ತಿನ ಸಮಸ್ಯೆಯ ಬಗ್ಗೆ ಬಾಯಿ ತೆರೆಯುವುದಿಲ್ಲ. ಬದಲಿಗೆ, ಅವರು ಬಾಂಗ್ಲಾದೇಶದಿಂದ ಒಳನುಸುಳುವ ಬಗ್ಗೆ ಕಿರಿಚುತ್ತಿದ್ದಾರೆ! ವಿಪರ್ಯಾಸವೆಂದರೆ, ಬಿಜೆಪಿಯೇ ಸ್ವತಃ ಹೇಳುವ ಲೆಕ್ಕಾಚಾರದ ಪ್ರಕಾರವೂ, ಒಂದು ದೇಶದ ತಲಾ ಜಿಡಿಪಿಯು ಅದರ ಪ್ರಗತಿಯ ಸೂಚ್ಯಂಕವಾಗಿರುವುದಾದರೆ, ಐಎಂಎಫ್ ಹೇಳುವ ಪ್ರಕಾರ ಭಾರತಕ್ಕಿಂತಲೂ ಹೆಚ್ಚಿನ ತಲಾ ಆದಾಯವನ್ನು ಪ್ರಸ್ತುತ ಹೊಂದಿರುವ ಬಾಂಗ್ಲಾದೇಶ ಭಾರತಕ್ಕಿಂತಲೂ ಹೆಚ್ಚು ಮುಂದುವರಿದಿದೆ ಎಂದು ಪರಿಗಣಿಸಬೇಕಾಗುತ್ತದೆ. ಹಾಗಿರುವಾಗ, ಹೆಚ್ಚು ಮುಂದುವರಿದ ದೇಶವೊಂದರಿಂದ ಕಡಿಮೆ ಮುಂದುವರಿದ ಒಂದು ದೇಶಕ್ಕೆ ಅದು ಹೇಳುವಷ್ಟು ಬೃಹತ್ ಪ್ರಮಾಣದಲ್ಲಿ ಒಳನುಸುಳಿಕೆ ನಡೆಯುವುದಾದರೂ ಹೇಗೆ ಎಂಬ ಬಗ್ಗೆ ಬಿಜೆಪಿಯ ಬಳಿ ವಿವರಿಸಬಲ್ಲುದೇ?
ಹಿಂದುತ್ವದ ಉತ್ಕರ್ಷ -ಏಕಸ್ವಾಮ್ಯ ಬಂಡವಾಳದ ಬೆಂಬಲ
ಭಾರತದಲ್ಲಿ ಹಿಂದುತ್ವವು ಇತ್ತೀಚೆಗೆ ಏಕೆ ಅಷ್ಟೊಂದು ಉತ್ಕರ್ಷದಲ್ಲಿದೆ ಎಂಬುದನ್ನು ವಿವರಿಸಲು ಉದಾರವಾದಿಗಳು ಕೆಲ ಕಾಲದಿಂದ ಪ್ರಯತ್ನಿಸಿದ್ದಾರೆ. ಆದರೆ, ಭಾರತದಲ್ಲಿ ಹಿಂದುತ್ವವು ಪಡೆದ ಏಳಿಗೆಯು ವಿಶ್ವಾದ್ಯಂತ ನವ-ಫ್ಯಾಸಿಸಂನ ಉತ್ಕರ್ಷದ ಭಾಗವಾಗಿದೆ ಎಂಬುದನ್ನು ಗಮನಿಸುವಲ್ಲಿ ಅವರು ವಿಫಲರಾಗಿದ್ದಾರೆ. ಆದ್ದರಿಂದ, ಈ ಮುನ್ನಡೆಗೆ ಭಾರತ-ನಿರ್ದಿಷ್ಟ ವಿವರಣೆ ಸಾಕಾಗುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ ಭಾರತದಲ್ಲಿ ಹಿಂದುತ್ವದ ಉತ್ಕರ್ಷ ಅದರದ್ದೇ ಆದ ಒಂದು ವಿಶಿಷ್ಟ ವಿದ್ಯಮಾನವೇನಲ್ಲ. ಅದನ್ನು ಏಕಸ್ವಾಮ್ಯ ಬಂಡವಾಳವು ಭಾರತದಂತೆಯೇ ಬಂಡವಾಳಶಾಹಿ ಜಗತ್ತಿನ ಇತರ ಭಾಗಗಳಲ್ಲಿ, ಅರ್ಜೆಂಟೀನಾದಿಂದ ಹಿಡಿದು ಯುಎಸ್, ಇಟಲಿ, ಫ್ರಾನ್ಸ್, ಜರ್ಮನಿ ಮತ್ತು ಯುಕೆ ವರೆಗೆ, ಗಣನೀಯ ಪ್ರಮಾಣದ ಹಣ ಮತ್ತು ಮಾಧ್ಯಮಗಳ ಬೆಂಬಲದ ಮೂಲಕ ಆಗುಮಾಡುತ್ತಿದೆ ಮತ್ತು ಅದು ನವ ಉದಾರವಾದಿ ಬಂಡವಾಳಶಾಹಿಯು ಜಾಗತಿಕ ಅರ್ಥವ್ಯವಸ್ಥೆಯನ್ನು ದಾರಿ ಕಾಣದ ಒಂದು ಹಂತಕ್ಕೆ ತಂದಿರುವ ಸಂದರ್ಭದಲ್ಲಿ ಸಂಭವಿಸಿದೆ.
ಆರ್ಎಸ್ಎಸ್ ತನ್ನ ಶತಮಾನೋತ್ಸವವನ್ನು ಇತ್ತೀಚೆಗೆ ಆಚರಿಸಿಕೊಂಡಿದೆ. ನೂರು ವರ್ಷಗಳ ಕಾಲ ಅಧಿಕಾರದ ಹತ್ತಿರವೆಲ್ಲೂ ಇದ್ದಿರದಿದ್ದ ಅದು ಇಂದು ವಿಶ್ವದ “ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ” ಎಂದು ಹೆಮ್ಮೆಪಡುತ್ತಿದ್ದರೂ, ಅದು ಇದ್ದಕ್ಕಿದ್ದಂತೆ ಅಧಿಕಾರದಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದರೆ, ಅದಕ್ಕೆ ಏಕಸ್ವಾಮ್ಯ ಬಂಡವಾಳದಿಂದ ಅದು ಪ್ರಸ್ತುತ್ತ ಪಡೆಯುತ್ತಿರುವ ಬೃಹತ್ ಬೆಂಬಲವೇ ಕಾರಣ.
ಮೋದಿ ಕೊಡುಗೆ
ಆದರೆ, ಏಕಸ್ವಾಮ್ಯ ಬಂಡವಾಳ ಮಾತ್ರವೇ ಹಿಂದುತ್ವದೊಂದಿಗೆ ಉತ್ತಮ ಸಂಬಂಧ ಕುದುರಿಸಿಕೊಳ್ಳಲು ಮುಂದಾದದ್ದಲ್ಲ. ಹಿಂದುತ್ವ ಮಂದಿ ಸಹ ಏಕಸ್ವಾಮ್ಯ ಬಂಡವಾಳದ ಬಗ್ಗೆ ಹೊಂದಿದ್ದ ತಮ್ಮ ಮನೋಭಾವವನ್ನು ಬದಲಾಯಿಸಿಕೊಂಡಿದ್ದಾರೆ. ಮೂಲತಃ ಆರ್ಎಸ್ಎಸ್ನ ಮುಖ್ಯ ಬೆಂಬಲ ನೆಲೆಯೆಂದರೆ ಅಂಗಡಿಯವರು, ಸಣ್ಣ ಬಂಡವಾಳಗಾರರು ಮತ್ತು ನಗರ ಮಧ್ಯಮ ವರ್ಗದವರು ಮತ್ತು ಅದು ಕೆಲವು ಊಳಿಗಮಾನ್ಯ ಮಂದಿಯ ಹಣಕಾಸು ಬೆಂಬಲವನ್ನೂ ಅದು ಪಡೆಯುತ್ತಿತ್ತು. ನಿಜ, ಆರೆಸ್ಸೆಸ್ ಎಂದೂ ಜರ್ಮನಿಯಲ್ಲಿ ನಾಜಿಗಳು ಅಧಿಕಾರಕ್ಕೆ ಬರುವ ಮೊದಲು ಎದ್ದು ಕಾಣುವ ರೀತಿಯಲ್ಲಿ ತೋರಿಸಿದಂತೆ ಏಕಸ್ವಾಮ್ಯ-ವಿರೋಧಿ ಅಬ್ಬರದ ನಿಲುವನ್ನು ಅಂಗೀಕರಿಸಿರಲಿಲ್ಲ; ಇತ್ತ ಸಂಪೂರ್ಣ ಏಕಸ್ವಾಮ್ಯ ಬಂಡವಾಳದ ಪರವಾಗಿಯೂ ಇರಲಿಲ್ಲ. ಹಿಂದುತ್ವ ಶಕ್ತಿಗಳಿಗೆ ಆರ್ಥಿಕ ನೀತಿಯಷ್ಟೇ ಒಂದು ಹೆಚ್ಚಿನ ಕಾಳಜಿಯ ವಿಷಯವಾಗಿರಲಿಲ್ಲವಾದರೂ, ಅದಕ್ಕೆ ಸಂಬಂಧಿಸಿದಂತೆ ಹಿಂದುತ್ವ ಶಿಬಿರದೊಳಗೆ ಪರ್ಯಾಯ ದನಿಗಳೂ ಇದ್ದವು.
ಇದೆಲ್ಲವನ್ನೂ ಬದಲಾಯಿಸುವಲ್ಲಿ ನರೇಂದ್ರ ಮೋದಿಯವರ ಕೊಡುಗೆ ಇದೆ. ಹಿಂದುತ್ವದ ಅಧಿಕಾರಶ್ರೇಣಿಯಲ್ಲಿ ಅವರು ಹೊಂದಿರುವ ಪ್ರಮುಖ ಸ್ಥಾನವು ಅವರು ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟದ ಶಿಲ್ಪಿಯಾಗಿ ಬಿಟ್ಟ ಕಾರಣದಿಂದ ಉದ್ಭವಿಸಿದೆ. ಈ ಮೈತ್ರಿಕೂಟವನ್ನು ರಚಿಸುವ ಮೂಲಕವೇ ಹಿಂದುತ್ವವು ಅಧಿಕಾರಕ್ಕೆ ಬಂದಿದೆ. ಹಾಗೆ ನೋಡಿದರೆ, ನರೇಂದ್ರ ಮೋದಿಯವರನ್ನು ದೇಶದ ಪ್ರಧಾನ ಮಂತ್ರಿಯಾಗಿ ಬಿಂಬಿಸುವ ಮತ್ತು ಪ್ರೋತ್ಸಾಹಿಸುವ ವಿಚಾರವನ್ನು ಮುಂದಿಟ್ಟದ್ದೇ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಆಯೋಜಿಸಿದ್ದ ಒಂದು “ಹೂಡಿಕೆದಾರರ ಶೃಂಗಸಭೆ”ಯಲ್ಲಿ ಸೇರಿದ್ದ ಬಂಡವಾಳಗಾರರ ಒಂದು ಕೂಟದಲ್ಲಿ.
ಅಂದಿನಿಂದ ಮೋದಿಯವರು ಯಾವುದೇ ಮುಲಾಜಿಲ್ಲದೆ ಏಕಸ್ವಾಮ್ಯ ಬಂಡವಾಳದ, ವಿಶೇಷವಾಗಿ ಅದರೊಳಗಿನ ಹೊಸ ಗುಂಪಿನ, ನಿರ್ಲಜ್ಜ ಪ್ರವರ್ತಕರಾದರು. ಈ ಪ್ರಕ್ರಿಯೆಯಲ್ಲಿ ಅವರು ಭಾರತದ ಏಕಸ್ವಾಮ್ಯ ಬಂಡವಾಳವು ನವ-ಉದಾರವಾದಿ ಯುಗದಲ್ಲಿ ಯಾವ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ಸಂಯೋಜಿತವಾಗಿತ್ತೋ ಅದರ ಪ್ರವರ್ತಕರೂ ಆದರು. ನವ-ಉದಾರವಾದಿ ಬಂಡವಾಳಶಾಹಿಯ ಸ್ಥಗಿತತೆಯ ಯುಗದಲ್ಲಿ, ಮೋದಿ ತಮ್ಮ ನವ-ಫ್ಯಾಸಿಸ್ಟ್ ಕಾರ್ಯಸೂಚಿಯೊಂದಿಗೆ ಭಾರತದ ಏಕಸ್ವಾಮ್ಯ ಬಂಡವಾಳಕ್ಕೆ ಒಂದು ಬಹು ಪ್ರಯೋಜನಕಾರೀ ಆಸ್ತಿಯೇ ಆಗಿ ಪರಿಣಮಿಸಿದ್ದಾರೆ.
ನವ-ಉದಾರವಾದಿ ಬಂಡವಾಳಶಾಹಿಯ ಸ್ಥಗಿತತೆಯ ಯುಗದಲ್ಲಿ, ಮೋದಿ ತಮ್ಮ ನವ-ಫ್ಯಾಸಿಸ್ಟ್ ಕಾರ್ಯಸೂಚಿಯೊಂದಿಗೆ ಭಾರತದ ಏಕಸ್ವಾಮ್ಯ ಬಂಡವಾಳಕ್ಕೆ ಒಂದು ಬಹು ಪ್ರಯೋಜನಕಾರೀ ಆಸ್ತಿಯೇ ಆಗಿ ಪರಿಣಮಿಸಿದ್ದಾರೆ.
ಇದನ್ನೂ ನೋಡಿ: “ಇರಾನ್ – ಯು.ಎಸ್. ನಡುವಿನ MoUನಲ್ಲಿ ಏನಿದೆ?” | ಎನ್ ಕೆ ವಸಂತರಾಜ, ಗುರುರಾಜ ದೇಸಾಯಿ ಮಾತುಕತೆ Janashakthi Media
