ಬೆಂಗಳೂರು: ಮೃತ ವ್ಯಕ್ತಿ ಕೆನ್ಯಾದಲ್ಲಿ ಉದ್ಯೋಗದಲ್ಲಿದ್ದು ಉತ್ತಮ ಆದಾಯ ಹೊಂದಿದ್ದ ಹಾಗೂ ಐದು ವರ್ಷಗಳ ಕಾಲ ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದ ವಿಚಾರವನ್ನು ಪರಿಗಣಿಸಿ, ಕರ್ನಾಟಕ ಹೈಕೋರ್ಟ್ ಪರಿಹಾರ ಮೊತ್ತವನ್ನು ₹51.3 ಲಕ್ಷ ಹೆಚ್ಚಿಸಿದೆ.
ಇದರೊಂದಿಗೆ ಮೃತ ಶಂಕರ್ ಪೂಜಾರಿ ಅವರ ಕುಟುಂಬಕ್ಕೆ ಈಗ ₹84.4 ಲಕ್ಷ ಪರಿಹಾರವನ್ನು 6% ಬಡ್ಡಿಯೊಂದಿಗೆ ನೀಡಲು ಆದೇಶಿಸಲಾಗಿದೆ. ಇದಕ್ಕೂ ಮೊದಲು ಕುಂದಾಪುರ ಟ್ರಿಬ್ಯೂನಲ್ ₹33 ಲಕ್ಷ ಪರಿಹಾರವನ್ನು ನಿಗದಿಪಡಿಸಿತ್ತು.
2013ರ ಏಪ್ರಿಲ್ 22ರಂದು ಶಂಕರ್ ಪೂಜಾರಿ ಮಾರೂತಿ ಓಮ್ನಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಕುಂದಾಪುರ ತಾಲೂಕಿನ ಹಾಕ್ಲಾಡಿ ಬಳಿ ವೇಗವಾಗಿ ಬಂದ ಟಿಪ್ಪರ್ ಲಾರಿಯು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಮೇ 30ರಂದು ಗಾಯಗಳಿಗೆ ತುತ್ತಾಗಿ ಮೃತಪಟ್ಟಿದ್ದರು.
ಇದನ್ನೂ ಓದಿ: ಅರುಣಾಚಲದಲ್ಲಿ ಚೀನಾ ಅತಿಕ್ರಮಣ ವರದಿಗಳು ಸುಳ್ಳು: ಭಾರತೀಯ ಸೇನೆಯ ಸ್ಪಷ್ಟನೆ
ಮೃತರ ಪೋಷಕರು, ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳೂ ಪರಿಹಾರಕ್ಕಾಗಿ ಟ್ರಿಬ್ಯೂನಲ್ ಮೆಟ್ಟಿಲೇರಿದ್ದರು. ಕೆನ್ಯಾದಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪೂಜಾರಿ ತಿಂಗಳಿಗೆ ₹50,000 ಗಳಿಸುತ್ತಿದ್ದರು ಎಂದು ಅವರು ವಾದಿಸಿದ್ದರು. ಆದರೆ ಟ್ರಿಬ್ಯೂನಲ್ ಅವರ ಆದಾಯವನ್ನು ₹18,000 ಎಂದು ಪರಿಗಣಿಸಿ ₹33 ಲಕ್ಷ ಪರಿಹಾರ ನೀಡಿತ್ತು. ಇದರಿಂದ ಅಸಮಾಧಾನಗೊಂಡ ಕುಟುಂಬ ಹೈಕೋರ್ಟ್ ಮೊರೆ ಹೋಗಿತ್ತು.
ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಹಾಗೂ ತಾರಾ ವಿಟಾಸ್ತ ಗಣ್ಜು ಒಳಗೊಂಡ ವಿಭಾಗೀಯ ಪೀಠ, ಪೂಜಾರಿ 2009ರಿಂದಲೇ ಕೆನ್ಯಾದಲ್ಲಿ ವಿದೇಶಿ ಕರೆನ್ಸಿಯಲ್ಲಿ ಆದಾಯ ಗಳಿಸುತ್ತಿದ್ದರು ಮತ್ತು ಅಪಘಾತವು ಐದು ವರ್ಷಗಳ ಬಳಿಕ ಸಂಭವಿಸಿತು ಎಂದು ಗಮನಿಸಿದೆ.
ಅರ್ಜಿದಾರರು 2009ರಲ್ಲಿ ತಿಂಗಳಿಗೆ ಸುಮಾರು ₹72,000 ಮತ್ತು 2011ರಲ್ಲಿ ₹91,200 ಆದಾಯ ಹೊಂದಿದ್ದರು ಎಂದು ಸಾಬೀತುಪಡಿಸಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ಸರಾಸರಿ ₹70,000 ಆದಾಯದಿಂದ 30% ತೆರಿಗೆ ಕಡಿತ ಮಾಡಿ ತಿಂಗಳಿಗೆ ₹50,000 ಆದಾಯ ಎಂದು ಪರಿಗಣಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇದರಿಂದ ಅವಲಂಬನೆ ನಷ್ಟದಡಿ (loss of dependency) ಪರಿಹಾರವನ್ನು ₹78.7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಟಿಪ್ಪರ್ ಲಾರಿಯ ವಿಮಾ ಕಂಪನಿಯಾದ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಹೆಚ್ಚುವರಿ ₹51.3 ಲಕ್ಷವನ್ನು 6% ಬಡ್ಡಿಯೊಂದಿಗೆ ಪಾವತಿಸಲು ಕೋರ್ಟ್ ಆದೇಶಿಸಿದೆ.
ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
