ಅಮೆರಿಕ: ಪ್ರಮುಖ ಆಟೋಮೊಬೈಲ್ ಕಂಪನಿಯಾದ ಜನರಲ್ ಮೋಟಾರ್ಸ್ (ಜಿಎಂ) ತನ್ನ ಮಿಚಿಗನ್ ರಾಜ್ಯದ ಫ್ಯಾಕ್ಟರಿ ಜೀರೋ ಘಟಕದಲ್ಲಿ 50ಕ್ಕೂ ಹೆಚ್ಚು ರೋಬೋಟ್ಗಳನ್ನು ನಿಯೋಜಿಸಿರುವ ಹಿನ್ನೆಲೆ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ 1,000ಕ್ಕೂ ಹೆಚ್ಚು ಕಾರ್ಮಿಕರನ್ನು ವಜಾಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ರೋಬೋಟ್
ಉತ್ಪಾದನಾ ವೆಚ್ಚ ಕಡಿತಗೊಳಿಸುವುದು ಹಾಗೂ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಂಪನಿ ಆಟೊಮೇಷನ್ ಕಡೆಗೆ ಮುಖಮಾಡಿದ್ದು, ಈ ಕ್ರಮ ಕಾರ್ಮಿಕ ಸಂಘಟನೆಗಳ ತೀವ್ರ ಟೀಕೆಗೆ ಗುರಿಯಾಗಿದೆ.
ವರದಿಗಳ ಪ್ರಕಾರ, ‘ಕೋಬೋಟ್’ಗಳು ಈಗ ಉತ್ಪಾದನಾ ಘಟಕಗಳಲ್ಲಿ ಮಾನವ ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಾಹನಗಳ ಬಾಡಿ ಪ್ಯಾನೆಲ್ಗಳನ್ನು ಜೋಡಿಸುವಂತಹ ಪ್ರಮುಖ ಕಾರ್ಯಗಳಲ್ಲಿ ಬಳಸಲಾಗುತ್ತಿದೆ. ಆದರೆ, ಇದೇ ವೇಳೆ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿರುವುದಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ: ಹಾಸನ| ‘ಟೀಚರ್’ ಪತ್ರಿಕೆ ವಿಜ್ಞಾನ ಬರಹಗಾರರ ರಾಜ್ಯಮಟ್ಟದ 2 ದಿನಗಳ ಅಧ್ಯಯನ ಕಮ್ಮಟಕ್ಕೆ ಚಾಲನೆ
ಜಿಎಂ ಸಂಸ್ಥೆ ಉದ್ಯೋಗ ಕಡಿತವನ್ನು ಕೇವಲ ಉತ್ಪಾದನಾ ಘಟಕಕ್ಕೆ ಮಾತ್ರ ಸೀಮಿತಗೊಳಿಸದೇ, ಇತರೆ ವಿಭಾಗಗಳಲ್ಲಿಯೂ ಮುಂದುವರಿಸಿದೆ. ಮೇ ತಿಂಗಳಲ್ಲಿ ಐಟಿ ವಿಭಾಗದ 600ಕ್ಕೂ ಹೆಚ್ಚು ಎಂಜಿನಿಯರ್ಗಳನ್ನು ವಜಾಗೊಳಿಸಿದ್ದರೆ, 2025ರ ಅಕ್ಟೋಬರ್ನಲ್ಲಿ 200ಕ್ಕೂ ಹೆಚ್ಚು ವಿನ್ಯಾಸ ಎಂಜಿನಿಯರ್ಗಳನ್ನೂ ಕೆಲಸದಿಂದ ತೆಗೆಯಲಾಗಿತ್ತು.
ಎಲೆಕ್ಟ್ರಿಕ್ ವಾಹನಗಳಿಗೆ ನಿರೀಕ್ಷಿತ ಮಟ್ಟದ ಬೇಡಿಕೆ ಇಲ್ಲದಿರುವುದರಿಂದ ಕಂಪನಿ ತನ್ನ ಉತ್ಪಾದನಾ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡುತ್ತಿದೆ ಎಂದು ಹೇಳಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಎಂ, ರೋಬೋಟ್ಗಳ ಅಳವಡಿಕೆ ಕಾರ್ಮಿಕರನ್ನು ಬದಲಾಯಿಸಲು ಅಲ್ಲ, ಬದಲಾಗಿ ಅವರಿಗೆ ಸಹಾಯ ಮಾಡಲು ಮಾತ್ರ ಎಂದು ಸಮರ್ಥಿಸಿಕೊಂಡಿದೆ. ಕಂಪನಿಯ ವಕ್ತಾರ ಕೆವಿನ್ ಕೆಲ್ಲಿ, “ಆಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದು ನಮ್ಮ ಉದ್ದೇಶ. ಫ್ಯಾಕ್ಟರಿ ಜೀರೋದಲ್ಲಿ ಕೋಬೋಟ್ಗಳು ತಂಡದೊಂದಿಗೆ ಕೆಲಸ ಮಾಡುತ್ತಿವೆ” ಎಂದು ತಿಳಿಸಿದ್ದಾರೆ.
ಆದರೆ, ಯುನೈಟೆಡ್ ಆಟೋ ವರ್ಕರ್ಸ್ (ಯುಎಡಬ್ಲ್ಯೂ) ಸಂಘಟನೆ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದೆ. “ಆಟೊಮೇಷನ್ ಹೆಸರಿನಲ್ಲಿ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಯುಎಡಬ್ಲ್ಯೂ ಲೋಕಲ್ 22 ಅಧ್ಯಕ್ಷ ಜೇಮ್ಸ್ ಕಾಟನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯಮ ವಿಶ್ಲೇಷಕರು ಈ ಬೆಳವಣಿಗೆಯನ್ನು ‘ಸ್ಕಿಲ್ಸ್ ಸ್ವಾಪ್’ ಎಂದು ಕರೆಯುತ್ತಿದ್ದು, ಸಾಂಪ್ರದಾಯಿಕ ಉದ್ಯೋಗಗಳನ್ನು ಕಡಿತಗೊಳಿಸಿ, ಎಐ ಮತ್ತು ಆಟೊಮೇಷನ್ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲಾಗುತ್ತಿದೆ ಎಂದು ಸೂಚಿಸಿದ್ದಾರೆ.
ಇದೇ ವೇಳೆ, ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕುಸಿದಿದ್ದರೂ, 2026ರ ಮೊದಲ ತ್ರೈಮಾಸಿಕದಲ್ಲಿ ಜಿಎಂ ಕಂಪನಿ ಶೇ.22ರಷ್ಟು ಹೆಚ್ಚಿದ ಲಾಭ ದಾಖಲಿಸಿದ್ದು, 4.25 ಬಿಲಿಯನ್ ಡಾಲರ್ ಆದಾಯ ಗಳಿಸಿದೆ.
ಈ ಬೆಳವಣಿಗೆಗೆ ವಿರೋಧ ವ್ಯಕ್ತಪಡಿಸಿರುವ ಯುಎಡಬ್ಲ್ಯೂ ಅಧ್ಯಕ್ಷ ಶಾನ್ ಫೈನ್, “ಇದು ಕೇವಲ ಉದ್ಯೋಗದ ಪ್ರಶ್ನೆಯಲ್ಲ, ಮಾನವೀಯತೆಗಾಗಿ ನಡೆಯುತ್ತಿರುವ ಹೋರಾಟ” ಎಂದು ಅಭಿಪ್ರಾಯಪಟ್ಟಿದ್ದಾರೆ. ಕಂಪನಿಗಳ ಲಾಭ ಹೆಚ್ಚಾಗುತ್ತಿದ್ದರೂ, ಕಾರ್ಮಿಕರಿಗೆ ಅದರ ಲಾಭ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ನೋಡಿ: ಆರೋಗ್ಯ ಸೇವೆ ವ್ಯಾಪಾರವಲ್ಲ, ಜನರ ಹಕ್ಕು Janashakthi Media
