ಬೆಂಗಳೂರು: ನಗರದ ರಾಜಾಜಿನಗರದಲ್ಲಿ ಮಹೋಗನಿ ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ನಾಗವಾರ ನಿವಾಸಿ ಎಸ್.ಕೆ. ಸುರೇಶ್ (53), ರಾಘವೇಂದ್ರ ಫೈನಾನ್ಸ್ ಕಂಪನಿಯಲ್ಲಿ ಪಿಗ್ಮಿ ಸಂಗ್ರಹಕರಾಗಿ ಕೆಲಸ ಮಾಡುತ್ತಿದ್ದು, ಜೂನ್ 24ರಂದು ರಸ್ತೆ ಮೂಲಕ ಸಂಚರಿಸುತ್ತಿದ್ದ ವೇಳೆ ಮರದ ಕೊಂಬೆ ಏಕಾಏಕಿ ಮುರಿದು ಅವರ ತಲೆಗೆ ಬಿದ್ದಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದಿದ್ದಾರೆ.
ಸ್ಥಳೀಯರು ತಕ್ಷಣ ಅವರನ್ನು ಇಎಸ್‌ಐ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಗಾಯದ ಗಂಭೀರತೆ ಹಿನ್ನೆಲೆ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಆತಂಕಕಾರಿ ಅಂಕಿಅಂಶ: 2023ರಲ್ಲಿ 6,669 ಕೃಷಿ ಕಾರ್ಮಿಕರು – ಕೃಷಿಕರ ಆತ್ಮಹತ್ಯೆ
ಅಧಿಕಾರಿಗಳ ಪ್ರಕಾರ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಗುರುವಾರ ಮೆದುಳಿನಲ್ಲಿ ರಕ್ತ ಗಟ್ಟಿಕೆ ಕಂಡುಬಂದ ಹಿನ್ನೆಲೆಯಲ್ಲಿ ಎರಡನೇ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ.
ಪ್ರಸ್ತುತ ಸುರೇಶ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಕುರಿತು ಬೆಂಗಳೂರು ಪಶ್ಚಿಮ ವಲಯದ ಅಧಿಕಾರಿಗಳು ಹಾಗೂ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಅವರ ಕಚೇರಿಗೆ ಮಾಹಿತಿ ನೀಡಲಾಗಿದೆ.
ಇದೇ ರಸ್ತೆಯಲ್ಲಿ ಜೂನ್ 3ರಂದು ನಿಯಮಿತ ನಿರ್ವಹಣಾ ಕಾರ್ಯದ ಭಾಗವಾಗಿ ಒಣ ಹಾಗೂ ಸತ್ತುಹೋದ ಕೊಂಬೆಗಳನ್ನು ತೆರವುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
