ಶಾಂತಿ ಸ್ಥಾಪನೆಯ ಮಾತುಕತೆಯತ್ತ ಯು.ಎಸ್-ಇರಾನ್ ಒಡಂಬಡಿಕೆ ಪತ್ರ(MoU) – ಪೂರ್ಣ ಪಠ್ಯ

ಯು.ಎಸ್ ಮತ್ತು ಇರಾನ್ ಸರಕಾರಗಳ ನಡುವೆ ದೀರ್ಘ ಕಾಲ ಮಾತುಕತೆ ಮತ್ತು ಚೌಕಾಶಿಯ ನಂತರ ಪಶ್ಚಿಮ ಏಶ್ಯಾ ಯುದ್ಧ ನಿಲ್ಲಿಸುವ ಮತ್ತು ಶಾಂತಿ ಸ್ಥಾಪನೆಯ ಒಡಂಬಡಿಕೆ ಪತ್ರ (ಎಂ.ಒ.ಯು) ವನ್ನು ಅಂತಿಮಗೊಳಿಸಿವೆ. ಇದು ಒಪ್ಪಂದವಲ್ಲ. ಆದರೆ ತಕ್ಷಣದ ಕೆಲವು ಕ್ರಮಗಳ ಜಾರಿ ಮತ್ತು ಅಂತಿಮ ಒಪ್ಪಂದದ ಚೌಕಟ್ಟು ಇದರಲ್ಲಿದೆ. ಈ ಚಾರಿತ್ರಿಕ ಒಡಂಬಡಿಕೆ ಪತ್ರಕ್ಕೆ ಅಧ್ಯಕ್ಷ ಟ್ರಂಪ್ ಮತ್ತು ಇರಾನ್ ಅಧ್ಯಕ್ಷರು ಈಗಾಗಲೇ ಇ-ಸಹಿಯನ್ನು ಮಾಡಿದ್ದಾರೆ. ಶುಕ್ರವಾರ (ಜೂನ್ 19) ರಂದು ಜಿನೆವಾದಲ್ಲಿ ಎರಡೂ ದೇಶಗಳ ವಿದೇಶ ಸಚಿವರು ಭೌತಿಕವಾಗಿ ಸಹಿ ಹಾಕಲಿದ್ದಾರೆ. ಈ ಚಾರಿತ್ರಿಕ ಒಡಂಬಡಿಕೆ ಪತ್ರದ ಮುಖ್ಯ ಅಂಶಗಳನ್ನು ಸಂಕ್ಷಿಪ್ತವಾಗಿ ಮಾತ್ರ ಹಲವು ಪತ್ರಿಕೆಗಳು ಪ್ರಕಟಿಸಿವೆ. ಇದು ‘ನ್ಯೂ ಯಾರ್ಕ್ ಟೈಮ್ಸ್’ ಪ್ರಕಟಿಸಿದ ಎಂ.ಒ.ಯು ನ ಪೂರ್ಣ ಪಠ್ಯ. ಇದನ್ನು ಕೆಲವು ಪ್ರಮುಖ ಮಾಧ್ಯಮಗಳಿಗೆ ಒಬ್ಬ ಹೆಸರು ಬಹಿರಂಗ ಪಡಲಿಚ್ಛಿಸದ ಯು.ಎಸ್ ಅಧಿಕಾರಿ ಓದಿ ಹೇಳಿದ ಅಂತ ‘ನ್ಯೂ ಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಈ ಪೂರ್ಣ ಪಠ್ಯದ 14 ಅಂಶಗಳು ಇಲ್ಲಿವೆ:

  1. ಯು.ಎಸ್,ಎ (ಇನ್ನು ಮುಂದೆ ಯು.ಎಸ್) ಮತ್ತು ಇರಾನ್ ಇಸ್ಲಾಮಿಕ್ ರಿಪಬ್ಲಿಕ್ (ಇನ್ನು ಮುಂದೆ ಇರಾನ್) ಮತ್ತು ಅವರ ಸಹಚರರು, ಈ ಒಡಂಬಡಿಕೆ ಪತ್ರ ಸಹಿ ಹಾಕುವ ಮೂಲಕ, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ  ತಕ್ಷಣ ಮತ್ತು ಶಾಶ್ವತವಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವುದಾಗಿ ಘೋಷಿಸುತ್ತೇವೆ. ಹಾಗೂ ಇಂದಿನಿಂದ ಪರಸ್ಪರರ ವಿರುದ್ಧ ಯಾವುದೇ ಯುದ್ಧದ ಕ್ರಮಗಳು ಅಥವಾ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸುವುದಿಲ್ಲ ಅಥವಾ ಬಲಪ್ರಯೋಗದ ಬೆದರಿಕೆಯನ್ನು ಹಾಕುವುದಿಲ್ಲವೆಂದು ಮತ್ತು ಲೆಬನಾನ್ ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಖಚಿತ ಪಡಿಸುತ್ತೇವೆಂದು ಮಾತು ಕೊಡುತ್ತೇವೆ.
  2. ಯು.ಎಸ್ ಮತ್ತು ಇರಾನ್ ಪರಸ್ಪರರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತೇವೆ ಮತ್ತು ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಮಾತು ಕೊಡುತ್ತೇವೆ.
  3. ಯು.ಎಸ್ ಮತ್ತು ಇರಾನ್ ಪರಸ್ಪರ ಒಪ್ಪಿಗೆಯಿಂದ ವಿಸ್ತರಿಸದಿದ್ದರೆ, 60 ದಿನಗಳೊಳಗಾಗಿ ಮಾತುಕತೆ ನಡೆಸಿ ಅಂತಿಮ ಒಪ್ಪಂದಕ್ಕೆ ಬರಲು ಬದ್ಧವಾಗಿವೆ.
  4. ಒಡಂಬಡಿಕೆ ಪತ್ರ ಸಹಿ ಹಾಕಿದ ಕೂಡಲೇ, ಇರಾನ್ ವಿರುದ್ಧ ಯು.ಎಸ್ ವಿಧಿಸಿದ ನೌಕಾ ದಿಗ್ಬಂಧನ ಮತ್ತು ಅಡೆತಡೆಗಳನ್ನು ಅಥವಾ ತೊಡಕುಗಳನ್ನು ತೆರವು ಮಾಡಲು ಆರಂಭಿಸಿ, 30 ದಿನಗಳ ಒಳಗೆ ಪೂರ್ಣವಾಗಿ ತೆರವು ಮಾಡುತ್ತದೆ. ಈ ಅವಧಿಯಲ್ಲಿ, ಇರಾನ್ ಮತ್ತೆ ಮೂಲಸ್ಥಿತಿಗೆ ತರುವ ಹಡಗುಗಳ ಸಾಗಾಣಿಕೆಗಳ ಸಂಖ್ಯೆ, ಅಂತಹ ಯುದ್ಧ-ಪೂರ್ವ ಸಂಖ್ಯೆಗೆ ಅನುಪಾತದಲ್ಲಿರಬೇಕು. ಅಂತಿಮ ಒಪ್ಪಂದದ 30 ದಿನಗಳೊಳಗಾಗಿ, ಯು.ಎಸ್, ಇರಾನಿನ ನೆರೆಹೊರೆಯಿಂದ  ಪಡೆಗಳನ್ನು ಹಿಂತೆಗೆಯುವ ಮಾತು ಕೊಡುತ್ತದೆ.
  5. ಒಡಂಬಡಿಕೆ ಪತ್ರ ಸಹಿ ಹಾಕಿದ ನಂತರ, ಪರ್ಶಿಯನ್ ಕೊಲ್ಲಿಯಿಂದ ಒಮನ್ ಸಮುದ್ರದ ವರೆಗೆ ಮತ್ತು ಮತ್ತು ಒಮನ್ ಸಮುದ್ರದಿಂದ ಪರ್ಶಿಯನ್ ಕೊಲ್ಲಿಯ ವರೆಗೆ ಸಾಗಾಣಿಕೆಯಲ್ಲಿ, ವಾಣಿಜ್ಯ ಹಡಗುಗಳು, 60 ದಿನಗಳ ವರೆಗೆ ಮಾತ್ರ ಯಾವುದೇ ಶುಲ್ಕವಿಲ್ಲದೆ, ಸುರಕ್ಷಿತವಾಗಿ ಹಾದು ಹೋಗಲು ಇರಾನ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ವಾಣಿಜ್ಯ ಹಡಗುಗಳ ಸಾಗಾಣಿಕೆ ತಕ್ಷಣವೇ ಆರಂಭವಾಗಿ, ಮತ್ತು ತಾಂತ್ರಿಕ ಹಾಗೂ ಮಿಲಿಟರಿ ತೊಡಕುಗಳನ್ನು ನಿವಾರಿಸುವ  ಮತ್ತು ಮೈನ್ (ಹುದುಗಿಸಿಟ್ಟ ಜಲ-ಸ್ಫೋಟಕ)ಗಳನ್ನು ತೆಗೆಯುವ ಸಮಯವನ್ನು ಪರಿಗಣಿಸಿ, 30 ದಿನಗಳೊಳಗೆ ಸಾಗಾಣಿಕೆ ಹಿಂದಿನ ಸ್ಥಿತಿಗೆ ಬರಬೇಕು. ಪರ್ಶಿಯನ್ ಕೊಲ್ಲಿಯ ಕಡಲ ತೀರದ ದೇಶಗಳು ಮತ್ತು ಒಮನ್ ಜತೆ ಚರ್ಚಿಸಿ ಇರಾನ್, ಇದಕ್ಕೆ ಅನ್ವಯವಾಗುವ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಕಡಲ ತೀರದ ದೇಶಗಳ ಸಾರ್ವಭೌಮ ಹಕ್ಕುಗಳನ್ನು ಪರಿಗಣಿಸಿ, ಹೊರ್ಮುಝ್ ಜಲಸಂಧಿಯಲ್ಲಿ ಭವಿಷ್ಯದ ಜಲಸಾರಿಗೆ ಸೇವೆ ಮತ್ತು ಸಾಗಾಣಿಕೆಯ ನಿರ್ವಹಣೆಯನ್ನು ರೂಪಿಸಬೇಕು.
  6. ಇರಾನ್ ನ ಪುನರ್-ರಚನೆ ಮತ್ತು ಆರ್ಥಿಕ ಅಭಿವೃದ್ಧಿಗೆ, ಪ್ರಾದೇಶಿಕ ಸಹಚರರ ಜತೆ ಸೇರಿ ಕನಿಷ್ಟ 300 ಶತಕೋಟಿ ಡಾಲರ್ ಗಳ ಪರಸ್ಪರ ಒಪ್ಪಿಗೆಯ ನಿರ್ದಿಷ್ಟ ಯೋಜನೆಯನ್ನು ತಯಾರಿಸಲಾಗುವುದು ಎಂದು ಯು.ಎಸ್ ಮಾತು ಕೊಡುತ್ತದೆ. ಈ ಯೋಜನೆಯನ್ನು ಜಾರಿ ಮಾಡುವ ವಿಧಾನವನ್ನು 60 ದಿನಗಳೊಳಗಾಗಿ ಅಂತಿಮಗೊಳಿಸುವ ಒಪ್ಪಂದದ ಭಾಗವಾಗಿ ನಿರ್ಣಯಿಸಲಾಗುವುದು.  ಸಂಬಂಧಪಟ್ಟ ಹಣಕಾಸು ವ್ಯವಹಾರಗಳಿಗೆ ಬೇಕಾಗುವ ಲೈಸೆನ್ಸ್ ಗಳು, ರಿಯಾಯಿತಿಗಳು, ಮತ್ತು ಪರವಾನಿಗೆ (ಪರ್ಮಿಟ್)ಗಳ – ಇವುಗಳನ್ನು ಯು.ಎಸ್ ಕೊಡುವುದು.,
  7. ವಿಶ್ವಸಂಸ್ಥೆ ನಿರ್ಣಯಗಳು, ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐ.ಎ.ಇ.ಎ) ಯ ಬೋರ್ಡ್ ನಿರ್ಣಯಗಳು, ಯು.ಎಸ್ ನ ಎಲ್ಲ ಏಕಪಕ್ಷೀಯ ಪ್ರಾಥಮಿಕ ಮತ್ತು ಅಧೀನ ದಿಗ್ಬಂಧನಗಳು ಸೇರಿದಂತೆ ಇರಾನ್ ವಿರುದ್ಧ ವಿಧಿಸಲಾದ ಎಲ್ಲ ರೂಪಗಳಲ್ಲಿರುವ ದಿಗ್ಬಂಧನಗಳನ್ನು ಯು.ಎಸ್, ಅಂತಿಮ ಒಪ್ಪಂದದಲ್ಲಿ ಪರಸ್ಪರ ಒಪ್ಪಿತವಾಗುವ  ಕಾಲಕ್ರಮದಲ್ಲಿ ಕೊನೆಗೊಳಿಸಲು ಕ್ರಮಗಳನ್ನು ಕೈಗೊಳ್ಳುತ್ತದೆ. ಇರಾನ್ ಮತ್ತು ಯು.ಎಸ್ ಈಗಾಗಲೇ ಹೇಳಿರುವ ದಿಗ್ಬಂಧನಗಳನ್ನು ತೆರವು ಮಾಡುವ ಕ್ರಮಗಳ ನಿರ್ಣಾಯಕ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ ಮತ್ತು ಈ ವಿಷಯವನ್ನು ಮಾತುಕತೆಗಳಲ್ಲಿ ತಕ್ಷಣವೇ ಚರ್ಚಿಸಿ ಪರಸ್ಪರ ಒಪ್ಪಿಗೆಯನ್ನು ರೂಪಿಸುವ ಉದ್ದೇಶವನ್ನು ವ್ಯಕ್ತಪಡಿಸುತ್ತವೆ.
  8. ಇರಾನ್ ಅಣ್ವಸ್ತ್ರಗಳನ್ನು ಖರೀದಿಸುವುದಿಲ್ಲ ಅಥವಾ ಅಭಿವೃದ್ಧಿ ಪಡಿಸುವುದಿಲ್ಲ ಎಂದು ಮತ್ತೆ ಖಚಿತಪಡಿಸುತ್ತದೆ. ಯು.ಎಸ್ ಮತ್ತು ಇರಾನ್, ಪುಷ್ಟೀಕರಿಸಿದ ಮತ್ತು ಶೇಖರಿಸಿದ ಅಣು ಸಾಮಗ್ರಿಗಳ ನಿರ್ವಹಣೆಯನ್ನು ಅಂಶ 7 ರಲ್ಲಿ ಹೇಳಲಾದ ಪರಸ್ಪರ ಒಪ್ಪಿತ ವಿಧಾನ ಮತ್ತು ಕಾಲಕ್ರಮದಲ್ಲಿ ನಿರ್ಧರಿಸಲು ಒಪ್ಪಿವೆ. ಅದೇ ಸ್ಥಳದಲ್ಲಿ ಐ.ಎ.ಇ.ಎ ಮೇಲ್ವಿಚಾರಣೆಯಲ್ಲಿ ಅಣು ಸಾಮಗ್ರಿಯನ್ನು ತೆಳುಗೊಳಿಸುವುದು ಕನಿಷ್ಟ ವಿಧಾನವಾಗಿರುತ್ತದೆ. ಇರಾನ್ ನ ಅಣು ಶಕ್ತಿ ಅಗತ್ಯಗಳಿಗೆ ಸಂಬಂಧಿತ ಅಣು ಸಾಮಗ್ರಿ ಪುಷ್ಟೀಕರಣ ಮತ್ತು ಇತರ ಪರಸ್ಪರ ಒಪ್ಪಿತ ವಿಷಯಗಳನ್ನು, ಅಂತಿಮ ಒಪ್ಪಂದದಲ್ಲಿ ಶಾಸನಬದ್ಧ ಚೌಕಟ್ಟಿನ ಆಧಾರದಲ್ಲಿ ಚರ್ಚಿಸಲು ಎರಡೂ ಪಕ್ಷಗಳು ಒಪ್ಪಿವೆ. ಅಂತಿಮ ಒಪ್ಪಂದವು ಈ ಅಂಶವನ್ನು ಖಚಿತಪಡಿಸುತ್ತದೆ. ಇರಾನ್ ಮತ್ತು ಯು.ಎಸ್ ಈಗಾಗಲೇ ಹೇಳಿರುವ ಅಣುಶಕ್ತಿ ಸಂಬಂಧಿತ  ವಿಷಯಗಳ ನಿರ್ಣಾಯಕ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ ಮತ್ತು ಈ ವಿಷಯವನ್ನು ಮಾತುಕತೆಗಳಲ್ಲಿ ತಕ್ಷಣವೇ ಚರ್ಚಿಸಿ ಪರಸ್ಪರ ಒಪ್ಪಿಗೆಯನ್ನು ರೂಪಿಸುವ ಉದ್ದೇಶವನ್ನು ವ್ಯಕ್ತಪಡಿಸುತ್ತವೆ.
  9. ಅಂತಿಮ ಒಪ್ಪಂದಕ್ಕೆ ಬರುವವರೆಗೆ, ಯು.ಎಸ್ ಮತ್ತು ಇರಾನ್ ಯಥಾಸ್ಥಿತಿಯನ್ನು ಮುಂದುವರೆಸಲು ಒಪ್ಪಿವೆ. ಇರಾನ್ ಅಣುಶಕ್ತಿ ಯೋಜನೆಯಲ್ಲಿ ಈಗಿನ ಸ್ಥಿತಿಯನ್ನು ಮುಂದುವರೆಸುತ್ತದೆ, ಹಾಗೂ ಯು.ಎಸ್ ಯಾವುದೇ ಹೊಸ ದಿಗ್ಬಂಧನ ವಿಧಿಸುವುದಿಲ್ಲ ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸುವುದಿಲ್ಲ
  10. ಒಡಂಬಡಿಕೆ ಪತ್ರ ಸಹಿ ಹಾಕಿದ ಕೂಡಲೇ ಮತ್ತು ದಿಗ್ಬಂಧನಗಳನ್ನು ಪೂರ್ತಿಯಾಗಿ ತೆರವು ಮಾಡುವವರೆಗೆ, ಯು.ಎಸ್ ಭಂಡಾರ (ಟ್ರೆಶರಿ) ಇಲಾಖೆಯು ಇರಾನಿ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಅದರ ಉಪ-ಉತ್ಪನ್ನಗಳ ರಫ್ತು ಮತ್ತು ಅದಕ್ಕೆ ಸಂಬಂಧಿತ ಬ್ಯಾಂಕಿಂಗ್, ವಿಮೆ ಮತ್ತು ಸಾಗಾಣಿಕೆ ಸೇವೆಗಳಿಗೆ (ಈಗಿರುವ ದಿಗ್ಬಂಧನಗಳಿಂದ) ವಿನಾಯಿತಿ ಘೋಷಿಸುತ್ತದೆ ಎಂದು ಯು.ಎಸ್ ಮಾತು ಕೊಡುತ್ತದೆ.
  11. ಈ ಒಡಂಬಡಿಕೆ ಪತ್ರದ ಜಾರಿಯ ಭಾಗವಾಗಿ, ಸ್ಥಗಿತಗೊಳಿಸಿದ ಮತ್ತು ನಿರ್ಬಂಧಿಸಲಾದ ಇರಾನಿನ ಎಲ್ಲ ನಿಧಿ ಮತ್ತು ಆಸ್ತಿಗಳನ್ನು ಪೂರ್ಣವಾಗಿ ಇರಾನಿನ ಬಳಕೆಗೆ ಮುಕ್ತಗೊಳಿಸುತ್ತದೆ ಯೆಂದು ಯು.ಎಸ್ ಮಾತುಕೊಡುತ್ತದೆ. ಯು.ಎಸ್ ಮತ್ತು ಇರಾನ್ ಈ ನಿಧಿಗಳನ್ನು ಮುಕ್ತಗೊಳಿಸುವ ಪರಸ್ಪರ ಒಪ್ಪಿತ ಪ್ರಕ್ರಿಯೆಗಳನ್ನು ಅಂತಿಮ ಒಪ್ಪಂದದ ಮಾತುಕತೆಯಲ್ಲಿ ರೂಪಿಸುತ್ತವೆ. ಈ ನಿಧಿಗಳನ್ನು, ಮೂಲ ಅಕೌಂಟಿನಲ್ಲಿ ಇದ್ದರೂ ಬೇರಡೆಗೆ ವರ್ಗಾಯಿಸಿದರೂ, ಇರಾನಿನ ಕೇಂದ್ರೀಯ ಬ್ಯಾಂಕ್ ಸೂಚಿಸಿದ ಯಾರಿಗಾದರೂ ಪಾವತಿ ಮಾಡಲು ಬಳಕೆ ಮಾಡಬಹುದು. ಯು.ಎಸ್ ಅಗತ್ಯವಾದ ಎಲ್ಲ ಲೈಸೆನ್ಸ್ ಗಳು ಮತ್ತು ಅಧಿಕಾರಗಳನ್ನು ನೀಡುತ್ತದೆಯೆಂದು ಮಾತು ಕೊಡುತ್ತದೆ.
  12. ಯು.ಎಸ್ ಮತ್ತು ಇರಾನ್ ಈ ಒಡಂಬಡಿಕೆ ಪತ್ರ(ಎಂ.ಒ.ಯು) ದಲ್ಲಿರುವ ಮತ್ತು ಮುಂಬರುವ ಒಪ್ಪಂದದ ಜಾರಿಯ ಮೇಲ್ವಿಚಾರಣೆ ಮಾಡಲು ನಿರ್ವಾಹಕ ವ್ಯವಸ್ಥೆಯನ್ನು ಸ್ಥಾಪಿಸಲು ಒಪ್ಪಿವೆ.
  13. ಈ ಒಡಂಬಡಿಕೆ ಪತ್ರ(ಎಂ.ಒ.ಯು)ಕ್ಕೆ ಸಹಿ ಹಾಕಿದ ಮತ್ತು ಅಂಶ 1 (ಕದನವಿರಾಮ), 4 (ನೌಕಾ ದಿಗ್ಬಂಧನ ತೆರವು), 5(ಹೊರ್ಮುಝ್ ತೆರೆಯುವುದು), 10( ಇರಾನ್ ತೈಲ ರಫ್ತು/ಸಾಗಾಣಿಕೆ ವಿನಾಯಿತಿ) ಮತ್ತು 11 (ನಿಧಿ ಮುಕ್ತಗೊಳಿಸುವ) ಪ್ರಮುಖ ಅಂಶಗಳ ಜಾರಿಯ ಆರಂಭ ಮತ್ತು ಅದರ ಮುಂದುವರಿಕೆಯಾಗುತ್ತಿರುವಾಗ, ಯು.ಎಸ್ ಮತ್ತು ಇರಾನ್ ಅಂತಿಮ ಒಪ್ಪಂದಕ್ಕೆ ಮಾತುಕತೆ ಆರಂಭಿಸುತ್ತವೆ

ಅಂತಿಮ ಒಪ್ಪಂದವನ್ನು  ಎಲ್ಲರಿಗೂ ಬಾಧ್ಯವಾದ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದ ಮೂಲಕ ದೃಢೀಕರಿಸಲಾಗುತ್ತದೆ

Donate Janashakthi Media

Leave a Reply

Your email address will not be published. Required fields are marked *