ನೆಲದಾಳದ ವಾಸನೆಯನ್ನು ಗ್ರಹಿಸದ ಆಳ್ವಿಕೆಗೆ ನೆಲದ ವಾಸ್ತವಗಳೂ ಅರ್ಥವಾಗುವುದಿಲ್ಲ
ಸ್ವತಂತ್ರ ಭಾರತದ ಎಂಟು ದಶಕಗಳ ಆಳ್ವಿಕೆಯನ್ನು ಒಳಹೊಕ್ಕು ನೋಡಿದಾಗ ಕಾಣುವ ಒಂದು ಸಮಾನ ಎಳೆ ಎಂದರೆ , ದೇಶದ ಮೂಲೆಮೂಲೆಯಲ್ಲಿ ಇರುವ ಅಮೂರ್ತ ಬಡತನ-ದಾರಿದ್ರ್ಯ ಮತ್ತು ಹಸಿವಿನ ಸಂಪೂರ್ಣ ಗ್ರಹಿಕೆ ಯಾವ ಸರ್ಕಾರಗಳಲ್ಲೂ ಗುರುತಿಸಲಾಗುವುದಿಲ್ಲ. ಇದು ಚುನಾಯಿತ ಪಕ್ಷಗಳ ತಾತ್ವಿಕ ಗ್ರಹೀತಗಳಿಗಿಂತಲೂ ಮಿಗಿಲಾಗಿ, ಈ ದೇಶದ ನರನಾಡಿಗಳಲ್ಲಿ ಪ್ರವಹಿಸುತ್ತಿರುವ ಸಾಮಾಜಿಕ ಮೇಲ್ಪಂಕ್ತಿಯ (Social Upper Echelons) ಧೋರಣೆಯ ಪರಿಣಾಮ. ಇದರ ನೇರ ಸಾಕ್ಷಿಯನ್ನು ಸ್ವಾತಂತ್ರ್ಯಾನಂತರದ ಬಡತನ ನಿವಾರಣೆಯ ಉಪಕ್ರಮಗಳಲ್ಲೇ ಗುರುತಿಸಬಹುದು. ಬಡತನ ನಿವಾರಣೆ ಮತ್ತು ನಿರ್ಮೂಲನೆ , ಈ ಎರಡು ಪ್ರಕ್ರಿಯೆಗಳ ನಡುವೆ ಇರುವ ಅಪಾರ ಅಂತರ ನಮ್ಮ ನೀತಿ ನಿರೂಪಕರ ಗಣನೆಗೇ ಬರುವುದಿಲ್ಲ.
– ನಾ ದಿವಾಕರ
‘ಸ್ವಾತಂತ್ರ್ಯಾ ನಂತರದ ಸರ್ಕಾರಗಳಿಗೆ ದೇಶದಲ್ಲಿ ಹಸಿವು, ಬಡತನ, ನಿರ್ಗತಿಕ ಸ್ಥಿತಿ ಮತ್ತು ದಾರಿದ್ರ್ಯ’ ಎಂದು ಅರಿವಾಗಿದ್ದೇ 1960ರ ದಶಕದ ಬರಗಾಲ ಮತ್ತು ಯುದ್ಧಗಳ ಪರಿಸ್ಥಿತಿಯಲ್ಲಿ. ಯಾವ ಪ್ರಮಾಣದಲ್ಲಿದೆ ಎಂದು ಅರಿವಾಗುವ ಹೊತ್ತಿಗೆ , ಹಸಿದ ಜನರ ಆಕ್ರೋಶ ಆಳುವ ವರ್ಗಗಳ ಅಡಿಪಾಯವನ್ನೇ ಅಲುಗಾಡಿಸಲಾರಂಭಿಸಿತ್ತು. 1970ರ ದಶಕದ ಯಾವುದೇ ಮುಷ್ಕರ ಹೋರಾಟಗಳನ್ನು ಸೂಕ್ಷ್ಮವಾಗಿ ಗಮನಿಸಿದರೂ ಇದು ಅರ್ಥವಾಗುತ್ತದೆ. ಈ ನೊಂದ ಜನರ ಗಟ್ಟಿ ಧ್ವನಿಯನ್ನು ಹತ್ತಿಕ್ಕುವ ಒಂದು ಆಡಳಿತಾತ್ಮಕ ಪ್ರಯತ್ನವನ್ನು ತುರ್ತುಪರಿಸ್ಥಿತಿಯ ಶಾಸನಾತ್ಮಕ ಕ್ರಿಯೆಯಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ ಜನಪ್ರಿಯವಾಗಿದ್ದ ಗರೀಬಿ ಹಟಾವೋ (ಬಡತನ ಹೋಗಲಾಡಿಸಿ) ಘೋಷಣೆ , ಬಡತನ ಮತ್ತು ದಾರಿದ್ರ್ಯದ ನಿವಾರಣೆಯ ಹೆಜ್ಜೆಯೇ ಹೊರತು, ನಿರ್ಮೂಲನೆಯ ಕ್ರಮ ಆಗಿರಲಿಲ್ಲ.
ನಿವಾರಣೆ – ನಿರ್ಮೂಲನೆಯ ಅಂತರ
ಸಮಾಜವಾದ ಎಂದು ಗುರುತಿಸಲಾಗುವ ಜನಕಲ್ಯಾಣ ನೀತಿ ಯೋಜನೆಗಳ ಫಲಶ್ರುತಿಯನ್ನು ಇಲ್ಲಿ ಕಾಣಬಹುದು. 50 ವರ್ಷಗಳು ಕಳೆದರೂ ಈ ಸಾಂವಿಧಾನಿಕ ಕ್ರಮಗಳನ್ನು ಪಲ್ಲಟಗೊಳಿಸಲು ನಮ್ಮಿಂದ ಸಾಧ್ಯವಾಗಿಲ್ಲ. ರೂಪಾಂತರಗೊಂಡ ಇದೇ ‘ಸಮಾಜವಾದಿ’ ಉಪಕ್ರಮಗಳನ್ನೇ ಪ್ರಸ್ತುತ ಮಾರುಕಟ್ಟೆ ಆರ್ಥಿಕತೆಯಲ್ಲೂ ಅನುಸರಿಸಲಾಗುತ್ತಿದೆ. 80 ಕೋಟಿ ಜನರಿಗೆ ಕಳೆದ ಏಳೆಂಟು ವರ್ಷಗಳಿಂದ ಉಚಿತ ಪಡಿತರ ಕೊಡುತ್ತಿರುವುದೇ ಬಡತನ ನಿವಾರಣೆಯೂ ಆಗಿಲ್ಲ ಎನ್ನುವುದನ್ನು ನಿರೂಪಿಸುತ್ತದೆ. ವಾಸ್ತವವಾಗಿ ಚುನಾಯಿತ ಸರ್ಕಾರಗಳು, ಪಕ್ಷಾತೀತವಾಗಿ ಅನುಸರಿಸುತ್ತಿರುವುದು ‘ಬಡತನ ನಿರ್ವಹಣೆ’ ಯ ನೀತಿಗಳನ್ನು. ಅಂದರೆ ಬಡ ಜನರು ರೊಚ್ಚಿಗೇಳದಂತೆ ಜಾಗ್ರತೆ ವಹಿಸುವ ಜನಕಲ್ಯಾಣ ಆರ್ಥಿಕತೆ (Welfare Economics) ಎಲ್ಲ ಸರ್ಕಾರಗಳ ಆದ್ಯತೆಯಾಗಿದೆ. ಈ ನಡುವೆಯೇ ದುಡಿಯುವ ಜನರ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳಲಾಗುತ್ತಿದ್ದು, ಜುಲೈ 1 ರಿಂದ ಗ್ರಾಮೀಣ ಶ್ರಮಿಕರ ಆಸರೆಯಾಗಿದ್ದ ಉದ್ಯೋಗ ಖಾತರಿಯೂ ಇಲ್ಲವಾಗುತ್ತಿದೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಲಾಭ ಕರ್ನಾಟಕದ ಮತದಾರರಿಗೆ ಮಾತ್ರ: ಡಿ.ಕೆ. ಶಿವಕುಮಾರ್
ಉಪಗ್ರಹ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿಶ್ವದ ಕಟ್ಟಕಡೆಯ ತುದಿಯಲ್ಲಿ ಸಂಭವಿಸುವ ಘಟನೆಗಳನ್ನೂ ಸೆರೆಹಿಡಿಯುವ ಸಮಾಜಗಳಿಗೆ, ನಮ್ಮ ನಡುವೆಯೇ ಕಣ್ಣಿಗೆ ಕಾಣುವಂತಿರುವ ಬಡತನ, ಹಸಿವೆ ಏಕೆ ಕಾಣುತ್ತಿಲ್ಲ ? ಬಹುಶಃ ಈ ಸಮಾಜಶಾಸ್ತ್ರೀಯ ಪ್ರಶ್ನೆಗೆ (Sociological Question) ಮನೋವೈಜ್ಞಾನಿಕ (Psychological) ಸಂಶೋಧನೆಯ ಮೂಲಕವೇ ಉತ್ತರ ಶೋಧಿಸಬೇಕಾಗುತ್ತದೆ. “ ಸಿರಿವಂತಿಕೆ ಪೂರ್ವ ಜನ್ಮದ ಪುಣ್ಯ ಬಡತನ ತಾವು ಮಾಡಿದ ಕರ್ಮ “ ಎಂಬ ಪ್ರಾಚೀನ ಮೌಢ್ಯವನ್ನೇ ನಂಬಿರುವ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ, ಬಡತನ-ಹಸಿವೆ ಮತ್ತು ಅದನ್ನು ಮೀರಿ ಬದುಕು ನಡೆಸಲು ಅತ್ಯಂತ ತಳಮಟ್ಟದ ಸಮಾಜಗಳ ಅಪಾರ ಪರಿಶ್ರಮ, ಕಾದಂಬರಿಯ ಕಥಾವಸ್ತುಗಳಾಗಿ ಮಾತ್ರ ಕಾಣುತ್ತವೆ.
ಇಂತಹ ಸಂಕಟಗಳ ನಡುವೆಯೂ ಭಾರತದ ಸುಶಿಕ್ಷಿತ ವಲಯದ ಯುವ ಸಮೂಹ ಕೆಲವು ಸಂಶೋಧನೆಗಳನ್ನು ನಡೆಸುತ್ತಿದ್ದು, ವಿಶಾಲ ಸಮಾಜಗಳಿಗೆ ಅಮೂರ್ತವಾಗಿರುವ, ಮೂರ್ತ ರೂಪದ ಜನಸಂಕಟಗಳನ್ನು ಹೊರಗೆಡಹುತ್ತಿದೆ. ಭೂಪಟದಲ್ಲೂ ಗುರುತಿಸಲಾಗದ ಒಂದು ಕುಗ್ರಾಮ, ಆದಿವಾಸಿಗಳ ಹಾಡಿ ಅಥವಾ ಬುಡಕಟ್ಟುಗಳ ಅರಣ್ಯ ಗ್ರಾಮಗಳಲ್ಲಿ ವಾಸಿಸುವ ಜನರು, ಆಧುನಿಕತೆಯ ದರ್ಶನವೇ ಇಲ್ಲದೆ ತಮ್ಮ ದೇಹ ಮತ್ತು ಜೀವವನ್ನು ಒಂದಾಗಿರಿಸಲು, ಬೆವರು ಸುರಿಸುವ ಕಥನಗಳು ನಮ್ಮ ನಡುವೆ ಹೇರಳವಾಗಿ ಸಿಗುತ್ತವೆ. ದುರದೃಷ್ಟವಶಾತ್ ಇಂತಹ ಘೋರ ದರ್ಶನಗಳನ್ನು ಗ್ರಾಂಥಿಕವಾಗಿ ಕಾಪಿಟ್ಟು, ಸಾಂಸ್ಥಿಕ ಕಣಜಗಳಲ್ಲಿ ಒಪ್ಪ ಮಾಡಿಡುವ ಬೌದ್ಧಿಕ ಸಂಸ್ಕೃತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ.
ಇಂತಹ ಒಂದು ಮನಕಲಕುವ ಸಮಾಜದ ಚಿತ್ರಣವನ್ನು ಮೋಹಿತ್ ರಘುವಂಶಿ ಎಂಬ ಸಂಶೋಧನಾ ವಿದ್ಯಾರ್ಥಿ ನಮ್ಮ ಮುಂದಿಡುತ್ತಾರೆ. ಈ ಚಿಕ್ಕ-ಚೊಕ್ಕ ಲೇಖನದ ಕನ್ನಡ ಭಾವಾನುವಾದ ಇಲ್ಲಿದೆ. (ಮೂಲ : Inside the daily struggle of itinerant labourers ದ ಹಿಂದೂ – ಮಾರ್ಚ್ 8 2026.)
ಕರಾಳ ವಾಸ್ತವದ ಪ್ರವೇಶಿಕೆ
ಪ್ರತಿ ದಿನ ನಡುರಾತ್ರಿ 2 ಗಂಟೆಗೆ ಮಧ್ಯಪ್ರದೇಶದ ಭರ್ವಾನಿ ಜಿಲ್ಲೆಯ ರಾಜಪುರ ತಹಸಿಲ್‌ನ ಆದಿವಾಸಿ ಕುಟುಂಬಗಳು ನಿದ್ರೆಯಿಂದ ಏಳುತ್ತವೆ. ನಾಲ್ಕು ಗಂಟೆಯ ವೇಳೆಗೆ 10 ಸಾವಿರ ಶ್ರಮಿಕರು ಸ್ಥಳೀಯ ಮಾರುಕಟ್ಟೆಯ ಬಳಿ ಸೇರುತ್ತಾರೆ. ಆ ದಿನದ ದುಡಿಮೆಗಾಗಿ ನೆರೆಯುವ ಇವರ ನಡುವೆ 6 ವರ್ಷದ ಮಕ್ಕಳಿಂದ 80 ವರ್ಷದ ವೃದ್ಧರವರೆಗೂ ಇರುತ್ತಾರೆ.
ಮಹಾರಾಷ್ಟ್ರದ ನಿಮಾದ್ ಎಂಬ ಊರಿಗೆ ಪ್ರಯಾಣಿಸುವ ಈ ಶ್ರಮಿಕರು ದಿನಕ್ಕೆ 300 ರಿಂದ 350 ರೂ ಕೂಲಿ ಗಳಿಸುತ್ತಾರೆ. ಅದರಲ್ಲಿ ಪ್ರಯಾಣದ ವೆಚ್ಚ ಕಳೆದು ಮನೆಗೆ 100 ರೂ ಕೊಂಡೊಯ್ಯುತ್ತಾರೆ. ಕಠಿಣ ಕೆಲಸಗಳಾದ ಭಾರ ಎತ್ತುವುದು, ಭೂಮಿ ಅಗೆಯುವುದು, ಸಾಗಾಣಿಕೆ ಮಾಡುವುದು ಮತ್ತು ಸಾಗಣೆಯ ಪ್ರಯಾಣ ಈ ತ್ರಾಸದಾಯಕ ದುಡಿಮೆಯನ್ನು ಕಳೆದು ಮನೆಗೆ ತಲುಪುವುದು ರಾತ್ರಿ 9ರ ನಂತರವೇ.
ಈ ಶ್ರಮಿಕರಿಗೆ ಕೌಟುಂಬಿಕ ಬದುಕು, ಹಬ್ಬ ಹರಿದಿನ, ವಿಶ್ರಾಂತಿಯ ಸಮಯ ಇವೆಲ್ಲವೂ ಭ್ರಮೆ ಮಾತ್ರ. ದಣಿದು ಮನೆಗೆ ಬರುವ ಈ ಶ್ರಮಿಕರ ನಿದ್ರೆಯ ಅವಧಿ ಎರಡು ಮೂರು ಗಂಟೆಗಳು ಮಾತ್ರ. ಇದು ಅವರ ಆಯ್ಕೆಯಲ್ಲ, ಬದುಕುಳಿಯುವ ಪ್ರಶ್ನೆ. ಆನಂದ್ ಜಿಲ್ಲೆಯ ಗ್ರಾಮೀಣ ಮೇನೇಜ್‌ಮೆಂಟ್ ಸಂಸ್ಥೆಯಲ್ಲಿ PGDRM ಸಂಶೋಧನಾ ವಿದ್ಯಾರ್ಥಿಯಾಗಿರುವ ಮೋಹಿತ್ ರಘುವಂಶಿ (ಲೇಖನದ ಕರ್ತೃ) ರಾಜಪುರದ ಬ್ಲಾಕ್‌ಗೆ ಒಳಪಡುವ ಗ್ರಾಮಗಳಲ್ಲಿ ಜನರ ಜೀವನೋಪಾಯದ ಸಂಶೋಧನೆಯನ್ನು ನಡೆಸುತ್ತಿದ್ದು, ಎರಡು ತಿಂಗಳ ಅವಧಿಯ ಗ್ರಾಮೀಣ ಕಾರ್ಯಕ್ಷೇತ್ರ ವಲಯ (VFS) ಯೋಜನೆಯಡಿ ಈ ಸಂಶೋಧನೆಯನ್ನು ಕೈಗೊಂಡಿದ್ದಾರೆ.
ನಾಳೆಗಳಿಗಾಗಿ ಉದ್ಯೋಗದ ಶೋಧ
ಈ ಅಧ್ಯಯನದ ಪ್ರಕಾರ ಈ ಕುಟುಂಬಗಳ ಪೈಕಿ ಶೇಕಡಾ 90ರಷ್ಟು ಬೇರೆ ಊರುಗಳಲ್ಲಿ ದೊರೆಯುವ ಕೆಲಸವನ್ನೇ ಅವಲಂಬಿಸಿರುತ್ತವೆ. ಪ್ರತಿಶತ ಜನಸಂಖ್ಯೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. “ ನಮ್ಮ ತಂದೆ ವಲಸೆ ಹೋಗುತ್ತಿದ್ದರು, ನಾನೂ ಹೋಗುತ್ತೇನೆ ” ಎನ್ನುವುದು ಸಾಮಾನ್ಯವಾಗ ಕೇಳಿಬರುವ ಅಭಿಪ್ರಾಯ. ಈ ನಿತ್ಯ ಬವಣೆಗೆ ಮೂಲ ಕಾರಣ ಈ ಗುಡ್ಡಗಾಡು ಪ್ರದೇಶದಲ್ಲಿ ಬೇಸಾಯ ಕ್ರಮೇಣ ನಶಿಸಿಹೋಗುತ್ತಿರುವುದು. ನೀರಾವರಿ ಸೌಲಭ್ಯವಿಲ್ಲದ ಈ ಪ್ರದೇಶದಲ್ಲಿ ಮಳೆಯನ್ನಾಧರಿಸಿ ವರ್ಷಕ್ಕೆ ಒಂದು ಬೆಳೆ ಮಾತ್ರ ಸಾಧ್ಯವಾಗುತ್ತದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (NSSO) ನಡೆಸುವ Situation assessment survey of Agricultural Households ( ಜನವರಿ –ಡಿಸೆಂಬರ್ 2018)̧ ಈ ಸಮೀಕ್ಷೆಯ ಅನುಸಾರ ಈ ಪ್ರದೇಶದಲ್ಲಿ ಕೃಷಿ ಕುಟುಂಬಗಳ ಸರಾಸರಿ ಮಾಸಿಕ ಆದಾಯ 10,218 ರೂಗಳು.
ಆದರೆ ರಾಜಪುರದ ವಲಸೆಗಾರರಿಗೆ ಇದೂ ಗಗನ ಕುಸುಮವೇ. ದಾರಿದ್ರ್ಯದ ವರ್ತುಲದಲ್ಲಿ ಈ ಕುಟುಂಬಗಳು ಹಲವು ತಲೆಮಾರುಗಳಿಂದ ಬದುಕು ಸವೆಸುತ್ತಿವೆ ಸರ್ಕಾರದ ಬಡತನ ನಿವಾರಣೆಯ ಕ್ರಮಗಳು ಸೀಮಿತ ಯಶಸ್ಸು ಕಾಣಲು ಸಾಧ್ಯವಾಗಿದೆ. ಈಗ ವಿಬಿ-ಜಿ ರಾಮ್ ಜಿ –ಯೋಜನೆ ಜಾರಿಯಾಗಿ, ಜುಲೈ 1ರಿಂದ ಅನುಷ್ಠಾನಗೊಳ್ಳುತ್ತಿದ್ದರೂ, ಇದಕ್ಕೂ ಮುಂಚೆ ಇದ್ದ ವರ್ಷಕ್ಕೆ ನೂರು ದಿನಗಳ ಉದ್ಯೋಗ ಒದಗಿಸುತ್ತಿದ್ದ, ನರೇಗಾ (MNREGA) ಯೋಜನೆ ಇಲ್ಲಿ ಸಮರ್ಪಕವಾಗಿ ಅನುಷ್ಠಾನವೇ ಆಗಿಲ್ಲ.

ಪರಿಶಿಷ್ಟ ಪ್ರದೇಶದ ಪಂಚಾಯತ್ ವಿಸ್ತರಣೆ (PESA) ಪ್ರದೇಶವಾಗಿ ಅಧಿಕೃತವಾಗಿ ಗುರುತಿಸಲ್ಪಟ್ಟಿರುವ ರಾಜಪುರದಲ್ಲಿ ಈ ಯೋಜನೆಯನ್ನು ಅಳವಡಿಸುವುದಕ್ಕೇ ಹಲವಾರು ಅಡ್ಡಗೋಡೆಗಳಿವೆ. ಗ್ರಾಮದ ಬಹುಪಾಲು ಜನರಿಗೆ ಇದರ ಅರಿವೇ ಇಲ್ಲ. ಈಗ ಅರಿವು ಮೂಡಿದರೂ ಉದ್ಯೋಗ ಖಾತರಿ ಇಲ್ಲ. ಕೃಪೆ ವಿಬಿ-ಜಿ ರಾಮ್ ಜಿ.
ಶೇಕಡಾ 30ರಷ್ಟು ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಆಧಾರ್ ಸಂಪರ್ಕದ ಬ್ಯಾಂಕ್ ಖಾತೆಗಳಿಲ್ಲ. ಹಾಗಾಗಿ ನೇರ ನಗದು ಪಾವತಿ ಜಾರಿಯಾಗುವುದೇ ಇಲ್ಲ. ತತ್ಪರಿಣಾಮವಾಗಿ ಯೋಜನೆಯ ಉಪಯೋಗಗಳು PESA ಪ್ರದೇಶಗಳಿಗೆ ತಲುಪಿಯೇ ಇಲ್ಲ. ಹಾಗಾಗಿ ಇಲ್ಲಿನ ಕುಟುಂಬಗಳು ಹೊರಗೆ ಉದ್ಯೋಗ ಅರಸುವುದು ಅನಿವಾರ್ಯವಾಗಿರುತ್ತದೆ. ಹೀಗೆ ದೊರೆಯುವ ಉದ್ಯೋಗಗಳೂ ಸಹ ಎಲ್ಲರಿಗೂ ಸಮರ್ಪಕ ಆದಾಯ ಒದಗಿಸುವುದಿಲ್ಲ. ದೀರ್ಘಕಾಲ ಇದೇ ಉದ್ಯೋಗಗಳನ್ನು ಅವಲಂಬಿಸುವುದು ಸಾಧ್ಯವಾಗುವುದೂ ಇಲ್ಲ.
ಆದರೂ ಕೆಲವರು ಸರಿದೂಗಿಸುತ್ತಿದ್ದಾರೆ. ಉದಾಹರಣೆಗೆ ಜಸ್ಮಾ ದಿ ಎಂಬ ಮಹಿಳೆ, ಹಿಂದೆ ವಲಸೆ ಕಾರ್ಮಿಕರಾಗಿದ್ದರೂ, ತದನಂತರ ಎನ್‌ಜಿಒ ಒಂದರ ಮೂಲಕ ಸ್ವ-ಸಹಾಯ ಗುಂಪು ಸೇರಿಕೊಂಡು, ಅಲ್ಲಿ ಪಡೆದ ಸಾಲದಿಂದ ತೋಟಗಾರಿಕೆಯನ್ನು ಆರಂಭಿಸಿದ ಮಾಸಿಕ 35-40 ಸಾವಿರ ಆದಾಯ ಗಳಿಸುತ್ತಿದ್ದಾರೆ. ಆಕೆಯ ಮಕ್ಕಳೂ ಶಾಲೆಗೆ ಹೋಗುತ್ತಿದ್ದಾರೆ. ಆದರೆ ಕೇವಲ 5 ರಿಂದ 10ರಷ್ಟು ಕುಟುಂಬಗಳು ಮಾತ್ರ ಈ ರೀತಿ ಸಂಪಾದಿಸುತ್ತಿವೆ. ಉಳಿದವರಿಗೆ ಇದು ಕನಸೇ ಸರಿ.
ಪರಿಹಾರ ಮಾರ್ಗಗಳ ಸಂಕಟಗಳು
ಎಲ್ಲರೂ ಇದೇ ಕೃಷಿ ಮಾಡಬಹುದಲ್ಲವೇ ? ಈ ಜಟಿಲ ಪ್ರಶ್ನೆಗೆ ಸ್ಥಳೀಯರ ಉತ್ತರ ನೇರವಾಗಿರುತ್ತದೆ. ಸ್ಥಳೀಯ ರೈತರು ಮತ್ತು ತಜ್ಞರ ಅಭಿಪ್ರಾಯದಲ್ಲಿ ತೋಟಗಾರಿಕೆ ಆರಂಭಿಸಲು ಕನಿಷ್ಠ ಒಂದು ಲಕ್ಷ ರೂ ಮೂಲ ಬಂಡವಾಳ ಅಗತ್ಯ. ನೀರಿನ ಕೊಳವೆಗಳು, ಬೀಜ, ಗೊಬ್ಬರ ಇತ್ಯಾದಿ ಸೌಕರ್ಯಗಳಿಗೆ ಇನ್ನೂ ಹೆಚ್ಚಿನ ವೆಚ್ಚ ತಗಲುತ್ತದೆ. ದಿನಕ್ಕೆ 300 ರೂ ಸಂಪಾದಿಸುವ ಈ ಶ್ರಮಿಕರಿಗೆ, ಅದರ ಅರ್ಧದಷ್ಟು ಪ್ರಯಾಣಕ್ಕೇ ಖರ್ಚಾಗುವುದರಿಂದ, ಇಷ್ಟು ದೊಡ್ಡ ಮೊತ್ತವನ್ನು ಉಳಿತಾಯ ಮಾಡುವುದು ಹೇಗೆ, ಯಾವ ಕಾಲಕ್ಕೆ ಎಂದು ಸ್ಥಳೀಯರು ಕೇಳುತ್ತಾರೆ. ಸ್ವ-ಸಹಾಯ ಸಂಘಗಳಲ್ಲಿ ನೀಡುವ 50-60 ಸಾವಿರ ರೂಗಳ ಸಾಲ ಸಾಕಾಗುವುದಿಲ್ಲ, ಬೆಳೆಯ ಫಸಲು ಬರಲು ಆರು ತಿಂಗಳು ಬೇಕಾಗುತ್ತದೆ. ದಿನಕ್ಕೆ 100 ರೂ ಸಂಪಾದಿಸುವ ಕುಟುಂಬಗಳು ಅಷ್ಟು ದೀರ್ಘಕಾಲ ನಿಭಾಯಿಸುವುದು ಅಸಾಧ್ಯ.
ಇಂತಹ ಶ್ರಮಿಕರಿಗೆ ನೆರವಾಗುವ ಒಂದು ಉತ್ತಮ ಯೋಜನೆ ಎಂದರೆ 2011ರಲ್ಲಿ ಜಾರಿಯಾದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM). ಈ ಯೋಜನೆಯಡಿಯಲ್ಲಿ ಗ್ರಾಮೀಣ ಕುಟುಂಬಗಳಿಗೆ ಸ್ವ-ಸಹಾಯ ಗುಂಪುಗಳ ಮೂಲಕ 50 ಸಾವಿರದಿಂದ ಒಂದು ಲಕ್ಷ ರೂ ಸಾಲ ಒದಗಿಸಲಾಗುತ್ತದೆ. ಈ ಯೋಜನೆಯಡಿ ಸಾಲ ಮರುಪಾವತಿ ಪ್ರಮಾಣವೂ ಉತ್ತಮವಾಗಿದ್ದು, ಶೇಕಡಾ 97ರಷ್ಟು ಸಾಲಗಳನ್ನು ತೀರಿಸಲಾಗುತ್ತಿದೆ. ಆದರೆ ತೋಟಗಾರಿಕೆ ಆರಂಭಿಸಲು ಈ ಮೊತ್ತವೂ ಸಾಕಾಗುವುದಿಲ್ಲ. ದೂರದ ಪ್ರದೇಶಗಳಲ್ಲಿರುವವರಿಗೆ ಸಾಲ ಪಡೆಯಲು ಬೇಕಾಗುವ ದಾಖಲೆ ಪ್ರಕ್ರಿಯೆಯೇ ದುಸ್ತರವಾಗುತ್ತದೆ. ರಾಜಪುರದ ಆದಿವಾಸಿಗಳಿಗೆ ಈ ಯೋಜನೆಯ ಬಗ್ಗೆ ಅರಿವೇ ಇಲ್ಲ. ಸ್ವ-ಸಹಾಯ ಸಂಘದ ಸಾಲದ ಮೊತ್ತ ಹೆಚ್ಚಿಸುವುದು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವುದು ಈ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು ಎಂದು ಮೋಹಿತ್ ಹೇಳುತ್ತಾರೆ.

ಮತ್ತೊಂದು ಬಹುಮುಖ್ಯವಾದ ಪರಿಹಾರ ಎಂದರೆ ನೀರಾವರಿ ಸೌಲಭ್ಯ ಒದಗಿಸುವುದು. ರಾಜಪುರದ ಆದಿವಾಸಿಗಳು ಅರಿಶಿನ ಮತ್ತು ಹತ್ತಿ ಬೆಳೆಯಲು ಇಚ್ಛಿಸುತ್ತಾರೆ. ಆದರೆ ಅದಕ್ಕೆ ಬೇಕಾದ ವಿಶ್ವಾಸಾರ್ಹ ಜಲಸಂಪನ್ಮೂಲಗಳು ಲಭ್ಯವಿಲ್ಲ. ವಿಶ್ವ ಬ್ಯಾಂಕ್ 2021ರಲ್ಲಿ ನಡೆಸಿದ ದಕ್ಷಿಣ ಭಾರತದ ಅಧ್ಯಯನ ವರದಿಯಲ್ಲಿ ಹೇಳಿರುವಂತೆ, ಹನಿ ನೀರಾವರಿ (Drip irrigation) , ಚೆಕ್ ಡ್ಯಾಮ್‌ಗಳನ್ನು ಒದಗಿಸುವ ಮೂಲಕ ರಾಜಪುರದ ಆದಿವಾಸಿಗಳು ಲಾಭದಾಯಕವಾದ ಕೃಷಿ ಆರಂಭಿಸಿ ವಲಸೆಯಿಂದ ಪಾರಾಗಬಹುದು. ಇಲ್ಲಿ ಗಮನಾರ್ಹವಾದ ಮತ್ತೊಂದು ಅಂಶ ಎಂದರೆ, ಸ್ಥಳೀಯ ನಾಯಕರು ಮತ್ತು ಬಹುತೇಕ ಗ್ರಾಮಸ್ಥರಿಗೆ ಅವರ ಸಾಂವಿಧಾನಿಕ ಹಕ್ಕುಗಳ, ಸರ್ಕಾರಿ ಯೋಜನೆಗಳ ಪರಿವೆಯೇ ಇಲ್ಲ. ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವ ಮೂಲಕ, PESA ಪ್ರದೇಶಗಳಲ್ಲೂ ಈ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಕ್ರಿಯಾಶೀಲವಾಗಿದೆ.
ಕೊನೆಯದಾಗಿ ಸ್ಥಳೀಯ ಆಳ್ವಿಕೆಯನ್ನು ಬಲಪಡಿಸಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಮುಖ್ಯವಾಗುತ್ತದೆ. ಈ ಜಾರಿಯಾಗಿರುವ ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಿ ಮೊಬೈಲ್ ಕ್ಯಾಂಪ್‌ಗಳ ಮೂಲಕ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಪರ್ಕ ಸಾಧಿಸುವ ಕ್ರಮಗಳು ಅನಿವಾರ್ಯವಾಗಿವೆ. ಈ ಆದಿವಾಸಿ ಜನರ ವಲಸೆಯನ್ನು ತಪ್ಪಿಸುವ ಸಲುವಾಗಿ ತೋಟಗಾರಿಕೆಯನ್ನು ಉತ್ತೇಜಿಸುವುದೇ ಅಲ್ಲದೆ, ಹಣ ಹೂಡಿಕೆ ಮಾಡಿ ಆದಾಯ ಗಳಿಸಲು ಆರಂಭವಾಗುವ ನಡುವೆ ನಾಲ್ಕೈದು ತಿಂಗಳ ಕಾಲ ಈ ಜನರಿಗೆ ಆದಾಯ ಖಾತರಿ ಕಲ್ಪಿಸುವುದು ಬಹಳ ಮುಖ್ಯವಾಗುತ್ತದೆ. ಇತರ ಪ್ರದೇಶಗಳಲ್ಲಿರುವ ಶ್ರಮಿಕರಿಗೆ ರಾಜಪುರದ ಶ್ರಮಜೀವಿಗಳ ಬವಣೆ ಇಲ್ಲ. ಕಾಳಜಿ ವಹಿಸುವವರು ಯಾರೂ ಗತಿ ಇಲ್ಲವಾದಾಗ ಹೀಗಾಗುತ್ತದೆ ಎನ್ನುತ್ತಾರೆ ಮೋಹಿತ್ ರಘುವಂಶಿ.
ಕೊನೆಯ ಹನಿ
ಈ ಕೆಲವೇ ಸಮಾಧಾನಕರ ಬೆಳವಣಿಗೆಗಳ ನಡುವೆಯೂ ಪ್ರತಿದಿನ ಮುಂಜಾವಿನಲ್ಲೇ ದುಡಿಮೆಗಾಗಿ ಹೊರನಡೆಯುವ 10 ಸಾವಿರ ಶ್ರಮಜೀವಿಗಳ ಬೆನ್ನುಮುರಿಯುವ ಕೆಲಸ, ಶಿಕ್ಷಣ ವಂಚಿತ ಮಕ್ಕಳು ಮತ್ತು ಅನಿಶ್ಚಿತ ಬದುಕಿಗೆ ಇದಾವುದೂ ಪರ್ಯಾಯ ಆಗುವುದಿಲ್ಲ. ಈ ನಿತ್ಯವಲಸಿಗರ ಜೀವನೋಪಾಯಕ್ಕೆ ಕಾಯಕಲ್ಪ ಒದಗಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ.
ಇದನ್ನೂ ನೋಡಿ: ಹೋರ್ಮುಜ್ ಜಲಸಂಧಿ | 107 ದಿನಗಳಿಂದ ಸಮುದ್ರದಲ್ಲೇ ಸಿಲುಕಿರುವ 562 ಭಾರತೀಯ ನಾವಿಕರು Janashakthi Media
ಮೋಹಿತ್ ರಘುವಂಶಿ ಅವರ ಈ ಸಂಶೋಧನಾ ಲೇಖನ ಭಾರತದ ಗುಡ್ಡಗಾಡು ಪ್ರದೇಶಗಳು, ದೂರದ ಹಳ್ಳಿಗಳು (Remote villages), ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಅನಿಶ್ಚಿತ ಭವಿಷ್ಯವನ್ನು ಸ್ಥೂಲವಾಗಿ ಪರಿಚಯಿಸುವಂತಿದೆ. ಈ ಅಮೂರ್ತ ಬಡತನವನ್ನು ಗುರುತಿಸುವ ಹೊಣೆ ಸರ್ಕಾರಗಳ ಮೇಲಿದೆಯಾದರೂ, ವಿಶವ್ವಿದ್ಯಾಲಯಗಳ ಅಧ್ಯಯನ ಪೀಠಗಳು, ಸಾಮಾಜಿಕ ಕಳಕಳಿ ಇರುವ ರಾಜಕೀಯ ಪಕ್ಷ-ಸಂಘಟನೆಗಳು ಹಾಗೂ ವಿಶಾಲ ಸಮಾಜದ ಬೌದ್ಧಿಕ ವಲಯ , ಇಂತಹ ಒಂದು ಸಮಾಜಗಳ ಕಡೆ ಹೊರಳಿ ನೋಡಬೇಕಿದೆ. ಭಾರತದಲ್ಲಿ ಎಷ್ಟು ʼರಾಜಪುರ ʼಗಳಿವೆಯೋ ಯಾರು ಬಲ್ಲರು !!!!
ಮೂಲ ಬರಹದ ಲಿಂಕ್ ಇಲ್ಲಿದೆ :
