ಬಿಯರ್ ತಯಾರಿಕೆಗೆ ನೀರಿನ ಬಳಕೆ ಕಡಿತಕ್ಕೆ ಬೆಂಗಳೂರು ಬ್ರೂವರಿಗಳ ಹೊಸ ಹಸಿರು ಕ್ರಮಗಳು

ಬೆಂಗಳೂರು: ಒಂದು ಲೀಟರ್ ಬಿಯರ್ ತಯಾರಿಸಲು ಕನಿಷ್ಠ ಐದು ಲೀಟರ್ ನೀರು ಬೇಕಾಗುತ್ತದೆ ಎಂಬುದು ನಿಮಗೆ ಗೊತ್ತೇ? ಆದರೆ ಆ ನೀರು ಕೊನೆಗೆ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆಗೆ ಈಗ ಬೆಂಗಳೂರು ಬ್ರೂವರಿಗಳು ಪರಿಸರ ಸ್ನೇಹಿ ಪರಿಹಾರಗಳನ್ನು ಹುಡುಕುತ್ತಿವೆ.

ಸುಮಾರು 88 ಬ್ರೂವರಿಗಳಿರುವ ಬೆಂಗಳೂರಿನಲ್ಲಿ, ಉದ್ಯಮವು ತನ್ನ ನೀರಿನ ಬಳಕೆಯನ್ನು ಕಡಿಮೆ ಮಾಡಲು ಇಫ್ಲುವೆಂಟ್ ಟ್ರೀಟ್ಮೆಂಟ್ ಪ್ಲಾಂಟ್‌ಗಳು (ETP), ತ್ಯಾಜ್ಯ ನೀರಿನ ಮರುಬಳಕೆ ವ್ಯವಸ್ಥೆಗಳು ಮತ್ತು ವೃತ್ತಾಕಾರ ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಹೆಚ್ಚಾಗಿ ಅಳವಡಿಸಿಕೊಂಡಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪ್ರಕಾರ, ಬ್ರೂವರಿಗಳು, ಪಬ್‌ಗಳು ಹಾಗೂ ಆಹಾರ-ಪಾನೀಯ ಸಂಸ್ಥೆಗಳು ತಮ್ಮ ಅನುಮತಿ (CTE ಮತ್ತು CTO) ಪಡೆಯಲು ಹಾಗೂ ಮುಂದುವರಿಸಲು ಕಡ್ಡಾಯವಾಗಿ ETPಗಳನ್ನು ಅಳವಡಿಸಬೇಕು ಮತ್ತು ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಇದನ್ನೂ ಓದಿ: ʼಜನರ ಮೇಲೆ ಹೊರೆ ಹಾಕಿದ ಸರ್ಕಾರ’ : ಮೋದಿ ಪ್ರತಿಕೃತಿ ದಹಿಸಿ ಸಿಪಿಐ(ಎಂ) ಆಕ್ರೋಶ

ಬ್ರೂವರಿ ಉದ್ಯಮದ ಪ್ರತಿನಿಧಿಗಳ ಪ್ರಕಾರ, ನೀರು-ಬಿಯರ್ ಅನುಪಾತವನ್ನು ಕಡಿಮೆ ಮಾಡುವ ಹಾಗೂ ತ್ಯಾಜ್ಯ ನೀರಿನ ಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಕ್ರಮಗಳು ಕೈಗೊಳ್ಳಲಾಗುತ್ತಿದೆ. ಅನೇಕ ಸಂಸ್ಥೆಗಳು IoT ಆಧಾರಿತ ಮಾನಿಟರಿಂಗ್ ವ್ಯವಸ್ಥೆ, ಕ್ಲೀನಿಂಗ್-ಇನ್-ಪ್ಲೇಸ್ (CIP) ವ್ಯವಸ್ಥೆ, ಹೀಟ್ ಎಕ್ಸ್ಚೇಂಜರ್‌ಗಳು ಹಾಗೂ RO ರಿಕವರಿ ತಂತ್ರಜ್ಞಾನಗಳನ್ನು ಬಳಸುತ್ತಿವೆ.

ಶೋಧಿತ ತ್ಯಾಜ್ಯ ನೀರನ್ನು ಹಸಿರು ಪ್ರದೇಶಗಳ ನಿರ್ವಹಣೆ ಹಾಗೂ ನಿರ್ಮಾಣ ಕಾರ್ಯಗಳಿಗೆ ಮರುಬಳಕೆ ಮಾಡಲಾಗುತ್ತಿದೆ. ಜೊತೆಗೆ ಉತ್ಪಾದನೆಯ ನಂತರ ಉಳಿಯುವ ಧಾನ್ಯ (spent grain) ಅನ್ನು ಪಶು ಆಹಾರವಾಗಿ ಬಳಸಲಾಗುತ್ತಿದೆ ಮತ್ತು ಪ್ಯಾಕೇಜಿಂಗ್ ತ್ಯಾಜ್ಯವನ್ನು ಮರುಪರಿಷ್ಕರಣೆ ಮಾಡಲಾಗುತ್ತಿದೆ.

ಮ್ಯಾನ್ಹೈಮ್ ಕ್ರಾಫ್ಟ್ ಬ್ರೂವರಿಯ ಸಹ-ಸ್ಥಾಪಕ ನಿಖಿಲ್ ಮೆನನ್ ಮಾತನಾಡಿ, “ನಾವು ಒಂದು ಲೀಟರ್ ಬಿಯರ್ ತಯಾರಿಸಲು 4.5 ಲೀಟರ್‌ಗಿಂತ ಕಡಿಮೆ ನೀರು ಬಳಸುತ್ತೇವೆ. ಇದನ್ನು ಇನ್ನಷ್ಟು ಕಡಿಮೆ ಮಾಡುವ ಗುರಿಯಿದೆ. ತ್ಯಾಜ್ಯ ನೀರನ್ನು ನಮ್ಮ ETPಯಲ್ಲಿ ಶೋಧಿಸಿ ಹಸಿರು ಪ್ರದೇಶಗಳು ಮತ್ತು ನಿರ್ಮಾಣ ಕೆಲಸಗಳಿಗೆ ಬಳಸುತ್ತೇವೆ,” ಎಂದು ಹೇಳಿದರು.

ಬಿಗ್ ಬ್ರೂಸ್ಕಿ ಸಂಸ್ಥೆಯ ಮಾಸ್ಟರ್ ಬ್ರೂವರ್ ಮೇಘಾ ದಾಲಿಂಬೆ ಮಾತನಾಡಿ, ಬ್ಯಾಚ್ ಆಧಾರಿತ ನೀರಿನ ಬಳಕೆಯನ್ನು ನಿಗಾ ವಹಿಸುತ್ತಿದ್ದು, ಮರುಬಳಕೆ ಸಾಧ್ಯವಾದ ನೀರನ್ನು ಪುನಃ ಉಪಯೋಗಿಸಲಾಗುತ್ತಿದೆ ಎಂದು ತಿಳಿಸಿದರು. ಹೆಚ್ಚುವರಿ ವೆಚ್ಚಗಳ ನಡುವೆಯೂ ಪರಿಸರ ಸ್ನೇಹಿ ಕ್ರಮಗಳನ್ನು ಮುಂದುವರಿಸಲಾಗುತ್ತಿದೆ ಎಂದರು.

ಅಮೆರಿಕನ್ ಬ್ರೂ ವರ್ಕ್ಸ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದಿತ್ಯ ಈಶ್ವರನ್ ಮಾತನಾಡಿ, ತ್ಯಾಜ್ಯ ನೀರಿನ ಶೋಧನೆ, ಸ್ವಯಂಚಾಲಿತ ಕ್ಲೀನಿಂಗ್ ವ್ಯವಸ್ಥೆ ಹಾಗೂ RO ರಿಜೆಕ್ಟ್ ವಾಟರ್ ಮರುಬಳಕೆಯ ಮೂಲಕ ನೀರಿನ ಬಳಕೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಹೇಳಿದರು. ಜೊತೆಗೆ ಫರ್ಮೆಂಟೇಶನ್ ವೇಳೆ ಉತ್ಪತ್ತಿಯಾಗುವ CO₂ ಅನ್ನು ಮರುಬಳಕೆ ಮಾಡುವ ಪ್ರಯತ್ನವೂ ನಡೆಯುತ್ತಿದೆ ಎಂದು ತಿಳಿಸಿದರು.

ಆದರೆ ಈ ಹಸಿರು ಪರಿವರ್ತನೆಗೆ ದೊಡ್ಡ ಸವಾಲುಗಳಿವೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ETP, ರಿಸೈಕ್ಲಿಂಗ್ ವ್ಯವಸ್ಥೆಗಳು ಮತ್ತು CO₂ ರಿಕವರಿ ಯಂತ್ರಗಳನ್ನು ಸ್ಥಾಪಿಸಲು ಹೆಚ್ಚಿನ ಬಂಡವಾಳ ಅಗತ್ಯವಿದೆ.

ಭಾರತೀಯ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಿವಕುಮಾರ್ ಈಶ್ವರನ್ ಮಾತನಾಡಿ, ದೊಡ್ಡ ಮಟ್ಟದ ಬ್ರೂವರಿಗಳು ಕಡಿಮೆ ನೀರಿನ ಬಳಕೆ ಹಾಗೂ ಕಠಿಣ ಪರಿಸರ ಮಾನದಂಡಗಳನ್ನು ಪಾಲಿಸುತ್ತಿವೆ ಎಂದು ಹೇಳಿದರು. ಬಿಯರ್ ಅನ್ನು ಗ್ಲಾಸ್‌ನಲ್ಲಿ ನೀಡುವುದರಿಂದ ಪ್ಲಾಸ್ಟಿಕ್ ಬಳಕೆ ಕೂಡ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ನೋಡಿ: ಖಾತೆ ಹಂಚಿಕೆಯಲ್ಲಿ ಅಸಮಾಧಾನ: ಹಿರಿತನ ಪರಿಗಣಿಸುತ್ತಿಲ್ಲ ಎಂದ ಸಚಿವ ಕೆ ಹೆಚ್ ಮುನಿಯಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *