1970ರ ದಶಕದಲ್ಲಿ ತಮಿಳು ಸಿನೆಮಾವನ್ನು ಸ್ಟುಡಿಯೋ-ಕೇಂದ್ರಿತ ಚಲನಚಿತ್ರ ನಿರ್ಮಾಣದಿಂದ ಗ್ರಾಮೀಣ ಪ್ರಾದೇಶಿಕತೆಯ ಕ್ಯಾನ್ವಾಸ್ ಗೆ ಬದಲಾಯಿಸಿದ, ಸಿನಿಮಾ ವ್ಯಾಕರಣವನ್ನು ಮರು ರೂಪಿಸಿದ ಹಾಗೂ ರಾಧಿಕಾ, ರೇವತಿ, ರಾಧಾ, ರೇಖಾ, ಕಾರ್ತಿಕ್, ಪಾಂಡಿಯನ್, ಚಂದ್ರಶೇಖರ್, ನೆಪೋಲಿಯನ್, ಜನಕರಾಜ್ ಅವರಂತಹ ಹಲವಾರು ಹೊಸ ಕಲಾವಿದರನ್ನು ಪರಿಚಯಿಸಿದ ಭಾರತೀರಾಜ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
– ಬಿ. ಶ್ರೀಪಾದ್ ಭಟ್
ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮ್ಮ ತಲೆಮಾರಿಗೆ ಭಾರತೀರಾಜ, ಮಹೇಂದ್ರನ್, ಬಾಲು ಮಹೇಂದ್ರ ತ್ರಿವಳಿ ನಿರ್ದೇಶಕರು ಸಿನಿಮಾ ಕುರಿತಾದ ಹೊಸ ಭಾಷೆಯನ್ನು ಪರಿಚಯಿಸಿದರು. ಸಿನೆಮಾ
‘ಪದಿನಾರು ವಯನದಿಲೆ’ ಸಿನಿಮಾ ಮೂಲಕ ಪಲಟ್ಟೈ, ಮಯಿಲು, ಚಪ್ಪಾನಿಯಂತಹ ಅಪ್ಪಟ ಹಳ್ಳಿ ಸೊಗಡಿನ ಪಾತ್ರಗಳನ್ನು ಸೃಷ್ಟಿಸಿದ ಭಾರತೀರಾಜ ತಮಿಳು ಅಸ್ಮಿತೆಯ ಕಥನಕ್ಕೆ ಹೊಸ ದಾರಿ ನಿರ್ಮಿಸಿದರು. ಸಿನೆಮಾ
ಇದನ್ನೂ ಓದಿ: ಫ್ರೀಡಂ ಪಾರ್ಕ್ ಪ್ರತಿಭಟನೆ ಹಿನ್ನೆಲೆ: ಸಿಬಿಡಿ ಪ್ರದೇಶದಲ್ಲಿ ಟ್ರಾಫಿಕ್ ನಿರ್ಬಂಧ, ಮಾರ್ಗ ಬದಲಾವಣೆ
‘ಕಿಳಕ್ಕೆ ಪೋಗಂ ರೈಲು’ ಸಿನಿಮಾದ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳೆ ಮೇಲಿನ ಕೌಟುಂಬಿಕ ದೌರ್ಜನ್ಯವನ್ನು ಸಿನಿಮಾಟಿಕ್ ಮೆಲೋಡ್ರಾಮಾ ಮೂಲಕ ವಿವರಿಸಿದರು. ಇಲ್ಲಿ ಜಾತಿ ತಾರತಮ್ಯವನ್ನೂ ಸಹ ಸೂಕ್ಷ್ಮವಾಗಿ ತೋರಿಸುತ್ತಾರೆ
ನಂತರ ಬಂದ ನಿಳಗಳ್, ನೀರಂ ಮಾರಾತ ಪೂಗಲ್ ತರಹದ ಸಿನಿಮಾಗಳು ಭಾರತೀರಾಜ ಲೆಗಸಿಯ ವೈವಿಧ್ಯತೆಗೆ ಉದಾಹರಣೆಯಾಗಿದೆ. ‘ವೇದಂಪುದಿದು’ ಸಿನಿಮಾದಲ್ಲಿ ಬ್ರಾಹ್ಮಣ ಯಜಮಾನ್ಯವನ್ನು ವಿಡಂಬನಾತ್ಮಕವಾಗಿ ಗೇಲಿ ಮಾಡುತ್ತಾ ತೀಕ್ಷ್ಣ ಸಂಭಾಷಣೆಗಳನ್ನು ಪೂರಕವಾಗಿ ಬಳಸಿಕೊಂಡು ಜಾತಿ ರೋಗದ ಕುರಿತು ವಿಮರ್ಶೆ ಮಾಡಿದರು.
‘ಅಲೈಗಳ್ ಒಯಿವತಿಲ್ಲೈ’ನಲ್ಲಿ ಬ್ರಾಹ್ಮಣ – ಕ್ರಿಶ್ಚಿಯನ್ ಅಂತರಧರ್ಮೀಯ ಪ್ರೇಮಕತೆಯನ್ನು ಹೇಳುತ್ತಾರೆ.
ಆದರೆ ಈ ನಿರೂಪಣೆಯಲ್ಲಿ ಬ್ರಾಹ್ಮಣ ಕುಟುಂಬವನ್ನು ಸಂತ್ರಸ್ತರಂತೆ, ಕ್ರಿಶ್ಚಿಯನ್ ಕುಟುಂಬವನ್ನು ಶೋಷಕರಂತೆ ತೋರಿಸಿದ್ದನ್ನು ಆಗ ವಿದ್ಯಾರ್ಥಿಗಳಾಗಿದ್ದ ನಾವು ಟೀಕಿಸಿ ವಾದ ಮಾಡಿದ್ದೆವು. ಬ್ರಾಹ್ಮಣರ ಪರ ಸಹಾನುಭೂತಿ ಯಾಕೆ ಎಂದು ಪ್ರಶ್ನಿಸಿದ್ದು ನೆನಪಿದೆ.
‘ಮೊದಲ್ ಮರ್ಯಾದೈ’ ಸಿನಿಮಾ ಮೂಲಕ ಶಿವಾಜಿ ಗಣೇಶನ್(ನಿಯಂತ್ರಿತ ನಾಟಕೀಯತೆ) ಮತ್ತು ರಾಧಾ(ಗ್ಲಾಮರ್ ಇಲ್ಲದ ಬೆಸ್ತ ಜಾತಿಯ ಪಾತ್ರ) ಅವರ ಇಮೇಜ್ ನ್ನು 180 ಡಿಗ್ರಿ ಬದಲಾಯಿಸಿ ಅದ್ಭುತ ನಟನೆಯನ್ನು ಹೊರತೆಗೆದ ಭಾರತಿರಾಜ ತಮ್ಮ ಸಿನಿಮಾ ಬದುಕಿನ ಹೊಸ ಎತ್ತರಕ್ಕೆ ತಲುಪಿದರು.
ಸತ್ಯರಾಜ್ ಗೆ ಹೀರೋ ಆಗಿ ಭಡ್ತಿ ಕೊಟ್ಟ ‘ಕಡಲೋರ ಕವಿತೆಗಳ್’ ಮತ್ತೊಂದು ಸ್ಮರಣೀಯ ಸಿನಿಮಾ. ಹಾಗೆಯೇ ‘ಕರುತ್ತಮ್ಮ’ ಸಹ. ಇಳೆಯರಾಜ ಅವರ ಸಂಗೀತವು ಭಾರತೀರಾಜ ಸಿನಿಮಾಗಳ ಆತ್ಮದಂತಿತ್ತು. ಎಂತೆಂಥ ಸ್ಮರಣೀಯ ಹಾಡುಗಳು.. ಇವುಗಳ ಪೈಕಿ ಮೊದಲ್ ಮರ್ಯಾದೈ ಹಾಡುಗಳು ನನ್ನ ಫೇವರಿಟ್.
ಮುಖ್ಯವಾಹಿನಿ ಸಿನಿಮಾರಂಗದಲ್ಲಿ ವಾಸ್ತವವಾದಿ ಕಥನ ಕಟ್ಟುವಲ್ಲಿ ಪರಿಣಿತರಾಗಿದ್ದ ಭಾರತೀರಾಜ master storyteller. ಹೊಸ ಕಥನಗಳ ವಿಳಾಸ.
ಇದನ್ನೂ ನೋಡಿ: ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media
