ಶಿರಸಿ: ಮಳೆಗಾಲ ಆರಂಭವಾದ ಬೆನ್ನಲ್ಲೇ ನಗರದಲ್ಲಿ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಮತ್ತೆ ಆತಂಕ ವ್ಯಕ್ತವಾಗಿದೆ. ಜಲಶುದ್ಧೀಕರಣ ಘಟಕಗಳಲ್ಲಿ ಸಮರ್ಪಕ ಸ್ವಚ್ಛತೆ ಮತ್ತು ನಿರ್ವಹಣೆ ಕೊರತೆಯಿಂದಾಗಿ, ನಗರಸಭೆ ವ್ಯಾಪ್ತಿಯ ಅನೇಕ ವಾರ್ಡ್ಗಳಲ್ಲಿ ಕಳೆದ ಕೆಲವು ದಿನಗಳಿಂದ ಕಂದು ಬಣ್ಣದ, ಮಿಶ್ರಿತ ನೀರು ಪೂರೈಕೆಯಾಗುತ್ತಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿರಸಿ
ನಗರದ 31 ವಾರ್ಡ್ಗಳಿಗೆ ಕೆಂಗ್ರೆ ಮತ್ತು ಮಾರಿಗದ್ದೆ ಜಾಕ್ವೆಲ್ಗಳಿಂದ ನೀರು ಸರಬರಾಜಾಗುತ್ತಿದ್ದು, ಭೀಮನಗುಡ್ಡ ಮತ್ತು ರಾಘವೇಂದ್ರ ಸರ್ಕಲ್ ಬಳಿ ಇರುವ ಶುದ್ಧೀಕರಣ ಘಟಕಗಳಲ್ಲಿ ನೀರು ಶುದ್ಧಗೊಳ್ಳಬೇಕು. ಆದರೆ ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲು ನಗರಸಭೆ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರ ನಿವಾಸಿ ಗಣೇಶ ಭಟ್ ಮಾತನಾಡಿ, “ನೀರಿನ ಸಂಗ್ರಹಾಗಾರಗಳು ಬಹಳ ಹಳೆಯದಾಗಿದ್ದು, ಅವುಗಳನ್ನು ಆಧುನೀಕರಿಸಲು ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. 2023ರಲ್ಲಿ ಶುದ್ಧೀಕರಣ ಘಟಕಗಳ ಹೂಳು ತೆಗೆಯುವ ಕೆಲಸ ನಡೆದಿದ್ದರೂ, ನಂತರ ಸಮಗ್ರ ನಿರ್ವಹಣೆ ಕಾಣಿಸಿಕೊಂಡಿಲ್ಲ. ಸಣ್ಣ ಮಟ್ಟಿನ ತಾತ್ಕಾಲಿಕ ದುರಸ್ತಿ ಕಾರ್ಯಗಳಲ್ಲೇ ನಿರ್ವಹಣೆ ಸೀಮಿತವಾಗಿದೆ” ಎಂದು ಹೇಳಿದ್ದಾರೆ. ಶಿರಸಿ
ಇದನ್ನೂ ಓದಿ: ಕೇಂದ್ರ ಸಂಪುಟದಲ್ಲಿ ಶೀಘ್ರ ಪುನರ್ರಚನೆ ಸಾಧ್ಯತೆ: ಬಿಜೆಪಿ ವಲಯದಲ್ಲಿ ಚರ್ಚೆ
ಇದೀಗ ನೀರಿಗೆ ಬ್ಲೀಚಿಂಗ್ ಪೌಡರ್ ಹಾಕುವ ಕ್ರಮವಷ್ಟೇ ನಿರಂತರವಾಗಿ ನಡೆಯುತ್ತಿದ್ದು, ಘಟಕಗಳ ಆಳವಾದ ಸ್ವಚ್ಛತೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಮರಾಠಿಕೊಪ್ಪ, ರಾಘವೇಂದ್ರ ಸರ್ಕಲ್, ಕಸ್ತೂರಬಾನಗರ, ರಾಮನಬೈಲು, ಗಣೇಶನಗರ ಹಾಗೂ ನಿಲೇಕಣಿ ಭಾಗಗಳಲ್ಲಿ ಕಂದು ಬಣ್ಣದ ನೀರು ಪೂರೈಕೆಯಾಗುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.
ಕುಡಿಯಲು, ಅಡುಗೆಗೆ ಮತ್ತು ದೈನಂದಿನ ಬಳಕೆಗೆ ಈ ನೀರು ಅನರ್ಹವಾಗಿರುವುದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುವ ಭೀತಿ ಹೆಚ್ಚಾಗಿದೆ.
ಈ ಸಮಸ್ಯೆಯನ್ನು ಕೇವಲ ಮಳೆಗಾಲದ ತಾತ್ಕಾಲಿಕ ತೊಂದರೆ ಎಂದು ಪರಿಗಣಿಸದೇ, ಜಲಶುದ್ಧೀಕರಣ ಘಟಕಗಳ ಸಮಗ್ರ ಸ್ವಚ್ಛತೆ ಮತ್ತು ಹಳೆಯ ಸಂಗ್ರಹಾಗಾರಗಳ ದುರಸ್ತಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕು. ನಗರದ ಎಲ್ಲಾ ವಾರ್ಡ್ಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲು ನಗರಸಭೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media
