ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮಾನ್ಸೂನ್ ಚುರುಕುಗೊಂಡಿದ್ದು, ಕರಾವಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಜೂನ್ 9ರ ವರೆಗೂ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬಳಿಕ ಜೂನ್ 12ರವರೆಗೆ ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಸಂಜೆ ವೇಳೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ವಿಜ್ಞಾನಿ ಸಿಎಸ್ ಪಾಟೀಲ್ ಅವರ ಪ್ರಕಾರ, ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಕೂಡ ಮಳೆ ದಾಖಲಾಗಿದೆ. ಉತ್ತರ ಕನ್ನಡ, ಉಡುಪಿ, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 12 ರವರೆಗೆ ಭಾರಿ ಮಳೆ
ನೈರುತ್ಯ ಮಾನ್ಸೂನ್ ಕರ್ನಾಟಕದಾದ್ಯಂತ ಆವರಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 8 ರಿಂದ ಜೂನ್ 12 ರವರೆಗೆ ವ್ಯಾಪಕವಾಗಿ ಮಳೆಯಾಗಲಿದ್ದು, ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ- ಉಡುಪಿ-ದಕ್ಷಿಣ ಕನ್ನಡದ ಕೆಲವೆಡೆ ಅತಿಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜೂನ್ 8 ರಿಂದ ಜೂನ್ 11 ರವರೆಗೆ ಅತಿಭಾರಿ ಮಳೆಯ ಅಲರ್ಟ್ ಕೊಡಲಾಗಿದೆ.
ಇದನ್ನೂ ಓದಿ: ‘ಹಿಟ್ಲರ್ ಪ್ರೇರಣೆ’ ಹೇಳಿಕೆ ವಿವಾದ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಪಿಣರಾಯಿ ವಿಜಯನ್ ಟೀಕೆ
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಂಗಳೂರು, ಹಾಸನ , ಕೊಡಗು ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜೂನ್ 11 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿ ಜೂನ್ 8 ರಿಂದ ಜೂನ್ 11 ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದರು.
ಬೆಂಗಳೂರಲ್ಲಿ ಇಂದು, ನಾಳೆ ಮಳೆ ಸಾಧ್ಯತೆ, ಸುರಕ್ಷತೆಗೆ ಸಲಹೆ
ರಾಜಧಾನಿಯಲ್ಲಿ ಸೋಮವಾರದಿಂದ (ಜೂ.8) ಎರಡು ದಿನಗಳ ಕಾಲ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಮಳೆಯ ಸಂದರ್ಭದಲ್ಲಿ ಅನಗತ್ಯ ಪ್ರಯಾಣ ತಪ್ಪಿಸಲು ಹಾಗೂ ಸುಗಮ ಸಂಚಾರ ಸೇರಿದಂತೆ ಇತರೆ ನೈಜ ಮಾಹಿತಿಗಾಗಿ ಸಾರ್ವಜನಿಕರು ಬಿಟಿಪಿ ಅಸ್ತ್ರಂ ಆ್ಯಪ್ ಮತ್ತು ಬಿಟಿಪಿ ಸಾಮಾಜಿಕ ಜಾಲತಾಣ ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ನಗರದಲ್ಲಿ ಜೂ.8 ಮತ್ತು ಜೂ.9ರಂದು ಎರಡು ದಿನ ಹೆಚ್ಚಿನ ಮಳೆ ಆಗಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣೆ ಕೇಂದ್ರವು ಮುನ್ಸೂಚನೆ ನೀಡಿದೆ. ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಮಳೆ ನೀರು ನಿಂತಿರುವ ಪ್ರದೇಶದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಮಳೆಯ ಸಂದರ್ಭದಲ್ಲಿ ರಕ್ಷಣೆಗಾಗಿ ಮರಗಳ ಕೆಳಗೆ ಆಶ್ರಯ ಪಡೆಯುವುದನ್ನು ತಪ್ಪಿಸಬೇಕು. ಮಳೆಯಿಂದ ಪಾರಾಗಲು ಅಂಡರ್ಪಾಸ್ಗಳಲ್ಲಿಆಶ್ರಯಿಸುತ್ತಿರುವುದರಿಂದ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಆಗದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪೊಲೀಸರು ಕೋರಿದ್ದಾರೆ.
ಇಂದು ಕಾಸರಗೋಡು ಸೇರಿದಂತೆ ಐದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಕೇರಳದಲ್ಲಿ ಸೋಮವಾರವೂ ಮಳೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಐದು ಜಿಲ್ಲೆಗಳಲ್ಲಿಆರೆಂಜ್ ಅಲರ್ಟ್ ನೀಡಲಾಗಿದೆ. ಭಾನುವಾರ ಕಾಸರಗೋಡು ಜಿಲ್ಲೆಯಲ್ಲಿಆರೆಂಜ್ ಅಲರ್ಟ್ ನೀಡಿದರೂ, ಮಳೆ ಬರಲಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸೋಮವಾರ ಕೇರಳದ ಮಲಪ್ಪುರಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿಆರೆಂಜ್ ಅಲರ್ಟ್ ನೀಡಿದೆ. ಮಳೆಯೊಂದಿಗೆ ಬಲವಾದ ಗಾಳಿಯು ಕೇರಳದಲ್ಲಿಅತಿ ಹೆಚ್ಚು ಹಾನಿ ಮತ್ತು ಜೀವಹಾನಿ ಉಂಟುಮಾಡುವ ರಾಜ್ಯ-ನಿರ್ದಿಷ್ಟ ವಿಪತ್ತು ತಿಳಿಸಿದೆ. ಜೋರಾದ ಗಾಳಿಗೆ ಮರಗಳು ಉರುಳಿ ಕೊಂಬೆಗಳು ಮುರಿದು ಬೀಳುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ.
ಅಸುರಕ್ಷಿತ ಜಾಹೀರಾತು ಫಲಕಗಳು, ಎಲೆಕ್ಟ್ರಿಕ್ ಪೋಸ್ಟ್ಗಳು, ಮಾಸ್ಟ್ಗಳು ಇತ್ಯಾದಿಗಳು ಗಾಳಿಯಲ್ಲಿಬೀಳುವ ಸಾಧ್ಯತೆಯಿದೆ. ಆದ್ದರಿಂದ ಗಾಳಿ ಅಥವಾ ಮಳೆ ಇಲ್ಲದಿದ್ದಾಗ ಅವುಗಳನ್ನು ಸರಿಯಾಗಿ ಬಿಗಿಗೊಳಿಸಲಾಗಿದೆಯೇ ಅಥವಾ ಸಡಿಲಗೊಳಿಸಲಾಗಿದೆಯೇ ಎಂದು ಖಚಿತಪಡಿಸುವಂತೆಯೂ ಗಾಳಿಗೆ ಬೀಳುವ ಸಾಧ್ಯತೆಯಿರುವ ಉಪಕರಣಗಳು ಮತ್ತು ಕಂಬಗಳಂತಹ ಇತರ ವಸ್ತುಗಳನ್ನು ಹಗ್ಗಗಳಿಂದ ಭದ್ರಪಡಿಸಬೇಕು. ಗಾಳಿ ಬೀಸಲು ಪ್ರಾರಂಭಿಸಿದ ತಕ್ಷಣ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಬೇಕು. ಕಿಟಕಿಗಳು ಮತ್ತು ಬಾಗಿಲುಗಳ ಬಳಿ ನಿಲ್ಲುವುದನ್ನು ತಪ್ಪಿಸಿ. ಮನೆಯ ಟೆರೇಸ್ ಮೇಲೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಮುನ್ನೆಚ್ಚರಿಕೆ ನೀಡಿದೆ.
ಜಿಲ್ಲಾದ್ಯಂತ ಮುಂದುವರಿದ ಮಳೆ
ಬೆಳಗಾವಿ ನಗರವೂ ಸೇರಿದಂತೆ ಜಿಲ್ಲಾದ್ಯಂತ ಭಾನುವಾರವೂ ಮಳೆಯಾಗಿದ್ದು, ಮುಂಗಾರು ಕೃಷಿ ಚಟುವಟಿಕೆ ಮತ್ತಷ್ಟು ಚುರುಕುಗೊಂಡಿದೆ. ಸ್ಥಳೀಯ ಶಿವಾಜಿ ನಗರ, ಮಹಾಂತೇಶ ನಗರ, ರಾಮತೀರ್ಥ ನಗರ, ಹಳೇ ಬೆಳಗಾವಿ ಪ್ರದೇಶ, ತಿಲಕವಾಡಿ, ಉದ್ಯಮಬಾಗ, ನೆಹರು ನಗರ, ಸದಾಶಿವ ನಗರ, ಹನುಮಾನ ನಗರ ಹಾಗೂ ಶಹಾಪುರ ಸೇರಿದಂತೆ ಹಲವೆಡೆ ಭಾನುವಾರ ಮಧ್ಯಾಹ್ನದಿಂದಲೇ ಜಿಟಿಜಿಟಿ ಮಳೆಯಾಗಿದೆ.
ಹು-ಧಾ ಅವಳಿ ನಗರದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದ್ದು, ಭಾನುವಾರವೂ ಮಧ್ಯಾಹ್ನದಿಂದ ಮಳೆ ಆರಂಭವಾಯಿತು. ಆಗಾಗ ಬಿಡುವು ನೀಡುತ್ತ ಸಂಜೆ ವೇಳೆ ರಭಸವಾಗಿ ಸುರಿಯಿತು.
ಇದನ್ನೂ ನೋಡಿ: ಖಾತೆ ಹಂಚಿಕೆಯಲ್ಲಿ ಅಸಮಾಧಾನ: ಹಿರಿತನ ಪರಿಗಣಿಸುತ್ತಿಲ್ಲ ಎಂದ ಸಚಿವ ಕೆ ಹೆಚ್ ಮುನಿಯಪ್ಪ Janashakthi Media
