ಬೆಂಗಳೂರು: ಐಟಿ ಕ್ಷೇತ್ರದ ಹಿರಿಯ ವ್ಯಕ್ತಿ ಹಾಗೂ ಹೂಡಿಕೆದಾರ ಟಿ.ವಿ. ಮೋಹನದಾಸ್ ಪೈ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಪವನ್ ಖೇರಾ ಅವರನ್ನು ಕಾಂಗ್ರೆಸ್ ಪಕ್ಷ ನಾಮನಿರ್ದೇಶನ ಮಾಡಿದ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೂನ್ 7ರಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪೈ, “ಒಬ್ಬ ಕನ್ನಡಿಗನಲ್ಲದ, ಕರ್ನಾಟಕದೊಂದಿಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯನ್ನು ರಾಜ್ಯಸಭೆಗೆ ಕರ್ನಾಟಕದಿಂದ ಏಕೆ ಉತ್ತೇಜಿಸಲಾಗುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
“ಕರ್ನಾಟಕಕ್ಕೆ ನಿಷ್ಠೆಯಿಲ್ಲ, ಯಾವುದೇ ಸಂಬಂಧವಿಲ್ಲದ ವ್ಯಕ್ತಿಯನ್ನು ಇಲ್ಲಿ ಪ್ರತಿನಿಧಿಯಾಗಿ ಕಳುಹಿಸುವ ಅಗತ್ಯವೇನು? ಕರ್ನಾಟಕವನ್ನು ಪ್ರತಿನಿಧಿಸಲು ರಾಜ್ಯದಲ್ಲೇ ಯೋಗ್ಯ ವ್ಯಕ್ತಿಗಳಿಲ್ಲವೇ?” ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: ಉಚಿತ ಪಾಸ್ ಘೋಷಣೆ ಬಳಿಕ ಗೊಂದಲ: ವಿದ್ಯಾರ್ಥಿಗಳು ಟಿಕೆಟ್ ಖರೀದಿಸಿ ಪ್ರಯಾಣ
ಈ ಕ್ರಮವನ್ನು ರಾಜ್ಯದ ಮತದಾರರ ವಿರುದ್ಧದ “ಸಂಪೂರ್ಣ ಅವಮಾನ” ಎಂದು ಬಣ್ಣಿಸಿದ ಪೈ, ಕರ್ನಾಟಕ ಯಾವ ರಾಜಕೀಯ ಪಕ್ಷದ ಸ್ವತ್ತೂ ಅಲ್ಲ ಎಂದು ಹೇಳಿದ್ದಾರೆ.
“ಎಲ್ಲಾ ರಾಜಕೀಯ ಪಕ್ಷಗಳು ಕನ್ನಡಿಗರ ಮೇಲೆ ಹೀಗೆ ನಿರ್ಲಕ್ಷ್ಯ ತೋರಿಸುವುದನ್ನು ನಾವು ಪ್ರಶ್ನಿಸಬೇಕಾದ ಸಮಯ ಬಂದಿದೆ. ನಮ್ಮ ಪರವಾಗಿ ಕನ್ನಡಿಗರಲ್ಲದವರನ್ನು ಮುಂದಿರಿಸುವುದು ಕನ್ನಡಿಗರ ವಿರುದ್ಧದ ಅವಮಾನ. ಈ ಕೆಟ್ಟ ಪದ್ಧತಿಯನ್ನು ಎಲ್ಲಾ ಪಕ್ಷಗಳು ನಿಲ್ಲಿಸಬೇಕು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಕರ್ನಾಟಕ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದುದಲ್ಲ. ನಾವು ಪ್ರಜೆಗಳು, ಯಾರಿಗೂ ಅಧೀನದಲ್ಲಿಲ್ಲ,” ಎಂದು ಅವರು ಹೇಳಿದ್ದಾರೆ.
ಇದರ ನಡುವೆ, ಕಾಂಗ್ರೆಸ್ ಪಕ್ಷವು ಕರ್ನಾಟಕದಿಂದ ರಾಜ್ಯಸಭೆ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಖರ್ಗೆಯವರ ಅವಧಿ ಜೂನ್ 25ರಂದು ಮುಕ್ತಾಯಗೊಳ್ಳಲಿದೆ. ಪವನ್ ಖೇರಾ ಎಐಸಿಸಿ ಸದಸ್ಯರಾಗಿದ್ದು, ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಮನ್ಸೂರ್ ಅಲಿ ಖಾನ್ ಎಐಸಿಸಿ ಕಾರ್ಯದರ್ಶಿಯಾಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಇದನ್ನೂ ನೋಡಿ: ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media
