NEET ಗದ್ದಲದ ನಡುವೆ ಸಂಸತ್ ಸಮಿತಿ ವರದಿ ತಳ್ಳಿಹಾಕಿದ ಶಿಕ್ಷಣ ಸಚಿವ ಪ್ರಧಾನ್

ನವದೆಹಲಿ: ಪ್ರಶ್ನೆಪತ್ರಿಕೆ ‘ಗಸ್ ಪೇಪರ್‌’ಗಳ ಮೂಲಕ ಸೋರಿಕೆಯಾಗಿದೆ ಎಂಬ ಆರೋಪಗಳ ನಡುವೆಯೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET 2026 ಪರೀಕ್ಷೆಯನ್ನು ರದ್ದುಗೊಳಿಸಿದ ಹಿನ್ನೆಲೆ ತೀವ್ರ ಟೀಕೆ ಎದುರಿಸುತ್ತಿರುವ ವೇಳೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೇ 15ರಂದು ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯನ್ನು ಸರ್ಕಾರ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

“ನಾನು ಸಂಸತ್ತಿನ ಸಮಿತಿಯ ಅಭಿಪ್ರಾಯಗಳ ಆಧಾರದ ಮೇಲೆ ಹೋಗಲು ಇಷ್ಟಪಡುವುದಿಲ್ಲ. ರಾಧಾಕೃಷ್ಣನ್ ಸಮಿತಿಯ ವರದಿಯನ್ನೇ ನಾನು ಪರಿಗಣಿಸುತ್ತೇನೆ. ನಿಜಾಂಶಗಳ ಆಧಾರದ ಮೇಲೆ ನಡೆದುಕೊಳ್ಳುತ್ತೇನೆ, ರಾಜಕೀಯ ಹೇಳಿಕೆಗಳನ್ನು ಮಾಡಲು ಇಷ್ಟಪಡುವುದಿಲ್ಲ,” ಎಂದು ಪ್ರಧಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಸಂಸತ್ತಿನ ಸಮಿತಿಯಲ್ಲಿ ವಿರೋಧ ಪಕ್ಷದ ಸದಸ್ಯರು ಇದ್ದಾರೆ. ಅವರು ವರದಿಗಳನ್ನು ಹೇಗೆ ಸಿದ್ಧಪಡಿಸುತ್ತಾರೆ ಎಂಬುದು ನಿಮಗೆ ಗೊತ್ತೇ ಇದೆ,” ಎಂದು ಅವರು ಸೇರಿಸಿದರು.

ಇದನ್ನೂ ಓದಿ: ಸಿಎಂ ಬದಲಾವಣೆ ಪ್ರಶ್ನೆ: ಖರ್ಗೆ ಮಾತ್ರ ಅರ್ಹರು – ಬಸವರಾಜ ರಾಯರೆಡ್ಡಿ

ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಶಿಕ್ಷಣ ಸಂಬಂಧಿತ ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯ ಶಿಫಾರಸುಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುವ ವೇಳೆ ಪ್ರಧಾನ್ ಈ ಹೇಳಿಕೆ ನೀಡಿದರು. ಈ ವರದಿಯಲ್ಲಿ, ಕಳೆದ ವರ್ಷದಲ್ಲಿ NTA ಕಾರ್ಯಕ್ಷಮತೆ “ವಿಶ್ವಾಸ ಹುಟ್ಟಿಸುವಂತಿರಲಿಲ್ಲ” ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಈ ಸಮಿತಿಗೆ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಅಧ್ಯಕ್ಷರಾಗಿದ್ದು, ಸರ್ಕಾರ ಹಾಗೂ ವಿರೋಧ ಪಕ್ಷದ ಒಟ್ಟು 30 ಸದಸ್ಯರನ್ನು ಒಳಗೊಂಡಿದೆ.

2018ರಲ್ಲಿ ಸ್ಥಾಪನೆಯಾದ NTA, NIT ಸೇರಿದಂತೆ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ನಡೆಯುವ JEE (ಮೇನ್) ಮತ್ತು ವೈದ್ಯಕೀಯ ಕಾಲೇಜು ಪ್ರವೇಶಕ್ಕಾಗಿ ನಡೆಯುವ NEET-UG ಸೇರಿದಂತೆ ಪ್ರಮುಖ ಪರೀಕ್ಷೆಗಳ ಆಯೋಜನೆ ಹೊಣೆಗಾರಿಕೆಯನ್ನು ಹೊಂದಿದೆ.

“2024ರಲ್ಲಿ ನಡೆದ 14 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನಿಷ್ಠ ಐದು ಪರೀಕ್ಷೆಗಳು ಗಂಭೀರ ಸಮಸ್ಯೆಗಳನ್ನು ಎದುರಿಸಿವೆ. ಅದರ ಪರಿಣಾಮವಾಗಿ UGC-NET, CSIR-NET ಮತ್ತು NEET-PG ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. NEET-UGನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಕಂಡುಬಂದಿದ್ದು, CUET (UG/PG) ಫಲಿತಾಂಶಗಳು ವಿಳಂಬಗೊಂಡಿವೆ,” ಎಂದು ಸಮಿತಿ ವರದಿ ತಿಳಿಸಿದೆ.

ಇದನ್ನೇ ವೇಳೆ, ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಪರಿಚಯಿಸುವುದಾಗಿ ಪ್ರಧಾನ್ ಘೋಷಿಸಿದ್ದು, ಅಕ್ರಮಗಳಿಗೆ “ಶೂನ್ಯ ಸಹಿಷ್ಣುತೆ” (zero tolerance) ಇರುವುದಾಗಿ ತಿಳಿಸಿದ್ದಾರೆ.

ಇನ್ನೊಂದೆಡೆ, ಸಂಸತ್ತಿನ ಸಮಿತಿ ಪೆನ್-ಅಂಡ್-ಪೇಪರ್ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಶಿಫಾರಸು ಮಾಡಿದೆ. CBSE ಮತ್ತು UPSC ಪರೀಕ್ಷೆಗಳು ಹಲವು ವರ್ಷಗಳಿಂದ ಸೋರಿಕೆ ರಹಿತವಾಗಿ ನಡೆಯುತ್ತಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ವಿಚಾರದಲ್ಲಿ, ಇವುಗಳನ್ನು ಕೇವಲ ಸರ್ಕಾರಿ ಅಥವಾ ಸರ್ಕಾರ ನಿಯಂತ್ರಿತ ಕೇಂದ್ರಗಳಲ್ಲಿ ಮಾತ್ರ ನಡೆಸಬೇಕು, ಖಾಸಗಿ ಕೇಂದ್ರಗಳಲ್ಲಿ ನಡೆಸಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.

ಈ ಕುರಿತು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿದ್ದು, ಸಂಸತ್ತಿನ ಸಮಿತಿಯನ್ನು ಕಡೆಗಣಿಸುವುದು “ಸಂಸತ್ತಿನ ದ್ವಿಪಕ್ಷೀಯ ಪರಂಪರೆಯನ್ನು ತಳ್ಳಿಹಾಕುವಂತದ್ದು” ಎಂದು ಹೇಳಿದ್ದಾರೆ.

“30 ಸದಸ್ಯರಲ್ಲಿ 17 ಮಂದಿ ಬಿಜೆಪಿ ಸದಸ್ಯರೇ ಇದ್ದಾರೆ. ಸಮಿತಿಯ ಶಿಫಾರಸುಗಳಲ್ಲಿ ಸಚಿವರು ಉಲ್ಲೇಖಿಸುವ ರಾಧಾಕೃಷ್ಣನ್ ಸಮಿತಿಯ ವರದಿಯನ್ನೂ ಒಳಗೊಂಡಿದೆ. ಇದನ್ನು ತಳ್ಳಿಹಾಕುವುದು ಸ್ವಂತ ಪಕ್ಷದ ಸಂಸದರು ಹಾಗೂ ಸಂಸತ್ತಿನ ಪರಂಪರೆಯನ್ನು ನಿರ್ಲಕ್ಷಿಸುವಂತಾಗಿದೆ,” ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ಎನ್‌ಸಿಪಿ–ಎಸ್‌ಪಿ ನಾಯಕಿ ಫೌಝಿಯಾ ಖಾನ್ ಪ್ರತಿಕ್ರಿಯೆ ನೀಡಿದ್ದು, “ಸಂಸತ್ತಿನ ಸಮಿತಿ ಎರಡೂ ಪಕ್ಷಗಳ ಸದಸ್ಯರೊಂದಿಗೆ ಶಿಕ್ಷಣ ವ್ಯವಸ್ಥೆಯ ಒಳಿತಿಗಾಗಿ ಪರಿಶೀಲನೆ ಮತ್ತು ಶಿಫಾರಸು ಮಾಡಲು ಅಸ್ತಿತ್ವದಲ್ಲಿದೆ” ಎಂದು ಹೇಳಿದ್ದಾರೆ.

“ವಿರೋಧ ಪಕ್ಷದ ಧ್ವನಿಗಳು ಇದ್ದವೆಂಬ ಕಾರಣಕ್ಕೆ ವರದಿಯನ್ನು ತಳ್ಳಿಹಾಕುವುದು, ಸಚಿವರು ಸಂಸತ್ತಿನ ಪ್ರಜಾಪ್ರಭುತ್ವಕ್ಕಿಂತ ಪಕ್ಷ ರಾಜಕೀಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದನ್ನು ತೋರಿಸುತ್ತದೆ,” ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ನೋಡಿ: ಎಲ್ಲವೂ ಸರಿಯಿದೆ ಎಂದು ಹೇಳುತ್ತಲೇ ಈಗ ಸಂಕಷ್ಟ ತಂದಿಟ್ಟರೇ ಮೋದಿಜೀ? ! ಬಿ.ಶ್ರೀಪಾದ ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *