ಬೆಂಗಳೂರು: ಭಾರತ “ಫಿಲ್ತಿ ರಿಚ್” ಎಂಬ ಪದವನ್ನು ನಿಜಾರ್ಥದಲ್ಲೇ ಅರ್ಥೈಸಿಕೊಂಡಂತಿದೆ ಎನ್ನುವಂತೆ, ದೇಶದ ನಗರಗಳ ಆರ್ಥಿಕ ಬೆಳವಣಿಗೆ ಇನ್ನೂ ಮಾಲಿನ್ಯ ಉಂಟುಮಾಡುವ ಜೀವಾಶ್ಮ ಇಂಧನಗಳ ಮೇಲೆ ಅವಲಂಬಿತವಾಗಿಯೇ ಮುಂದುವರಿಯುತ್ತಿದೆ ಎಂದು ‘ನೇಚರ್ ಸಿಟೀಸ್’ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.
2019ರಿಂದ 2024ರವರೆಗೆ ವಿಶ್ವದ 5,435 ನಗರಗಳನ್ನು ಉಪಗ್ರಹ ಆಧಾರಿತ ನೈಟ್ರೋಜನ್ ಡೈಆಕ್ಸೈಡ್ (NO₂) ದತ್ತಾಂಶ ಮತ್ತು ಜಿಡಿಪಿ ಅಂದಾಜುಗಳ ಆಧಾರದಲ್ಲಿ ವಿಶ್ಲೇಷಿಸಿದ ಈ ಅಧ್ಯಯನದಲ್ಲಿ, ಆರ್ಥಿಕ ಬೆಳವಣಿಗೆಯ ಜೊತೆಗೆ ಮಾಲಿನ್ಯವೂ ಹೆಚ್ಚಾಗಿರುವ “ಕಲುಷಿತ ಹಾಗೂ ಶ್ರೀಮಂತ” ವರ್ಗಕ್ಕೆ ಸೇರಿರುವ 390 ನಗರಗಳಲ್ಲಿ 138 ನಗರಗಳು (ಸುಮಾರು 35.4%) ಭಾರತದಲ್ಲಿವೆ ಎಂದು ತಿಳಿಸಿದೆ.
ದೆಹಲಿ, ಮುಂಬೈ, ಕೊಲ್ಕತ್ತಾ ಮೊದಲಾದ ಮಹಾನಗರಗಳು ಸ್ವಲ್ಪ ಮಟ್ಟಿಗೆ ಸ್ವಚ್ಛ ಬೆಳವಣಿಗೆಯತ್ತ ಸಾಗುತ್ತಿದ್ದರೂ, ಅನೇಕ ಭಾರತೀಯ ನಗರಗಳು ಇನ್ನೂ ಸಾರಿಗೆ, ಕೈಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಜೀವಾಶ್ಮ ಇಂಧನಗಳ ಮೇಲೆಯೇ ಹೆಚ್ಚಿನ ಅವಲಂಬನೆ ಹೊಂದಿವೆ ಎಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ: ರಾಜ್ಯ ಶಿಕ್ಷಣ ನೀತಿ ವರದಿ ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚನೆ
ಅಧ್ಯಯನದ ಭಾಗವಾಗಿ ಸಂಶೋಧಕರು ನೈಟ್ರೋಜನ್ ಡೈಆಕ್ಸೈಡ್ (NO₂) ಮಟ್ಟಗಳನ್ನು ಉಪಗ್ರಹದ ಮೂಲಕ ಅಳೆಯುವ ಮೂಲಕ ನಗರಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದಾರೆ — “ಸ್ವಚ್ಛ ಮತ್ತು ಶ್ರೀಮಂತ”, “ಕಲುಷಿತ ಮತ್ತು ಶ್ರೀಮಂತ”, “ಸ್ವಚ್ಛ ಮತ್ತು ಬಡ”, “ಕಲುಷಿತ ಮತ್ತು ಬಡ”.
ಜಾಗತಿಕ ಮಟ್ಟದಲ್ಲಿ ಸುಮಾರು 80% ನಗರಗಳು “ಸ್ವಚ್ಛ ಮತ್ತು ಶ್ರೀಮಂತ” ವರ್ಗಕ್ಕೆ ಸೇರಿದ್ದು, ಆರ್ಥಿಕ ಬೆಳವಣಿಗೆ ಜೊತೆಗೆ ಮಾಲಿನ್ಯ ಕಡಿಮೆಯಾದ ಪ್ರವೃತ್ತಿ ಕಂಡುಬಂದಿದೆ. ಪೂರ್ವ ಏಷ್ಯಾ, ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೆರಿಕಾದ ನಗರಗಳು ಆರ್ಥಿಕ ಬೆಳವಣಿಗೆಯನ್ನು ಮಾಲಿನ್ಯದಿಂದ ಬೇರ್ಪಡಿಸುವಲ್ಲಿ ಯಶಸ್ಸು ಕಂಡಿವೆ.
ಆದರೆ ಅಧ್ಯಯನದಲ್ಲಿ ಪರಿಶೀಲಿಸಲಾದ 902 ಭಾರತೀಯ ನಗರಗಳಲ್ಲಿ 15.3% ನಗರಗಳಲ್ಲಿ 2019ರಿಂದ 2024ರವರೆಗೆ NO₂ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
“ಕಲುಷಿತ ಹಾಗೂ ಶ್ರೀಮಂತ” ವರ್ಗದಲ್ಲಿಯೂ ಭಾರತವೇ ಹೆಚ್ಚು ಪ್ರಮಾಣ ಹೊಂದಿದ್ದು, ಈ ವರ್ಗದ 390 ನಗರಗಳಲ್ಲಿ 35.4% ಭಾರತದಲ್ಲಿವೆ. “ಇವು ವಿಫಲ ನಗರಗಳಲ್ಲ, ಬೆಳೆಯುತ್ತಿರುವ ನಗರಗಳು” ಎಂದು ಅಧ್ಯಯನ ಹೇಳಿದ್ದು, ವಾಹನಾಧಾರಿತ ಸಾರಿಗೆ, ಭಾರೀ ಕೈಗಾರಿಕೆ, ನಗರ ವಿಸ್ತರಣೆ ಹಾಗೂ ಜೀವಾಶ್ಮ ಇಂಧನ ಆಧಾರಿತ ವಿದ್ಯುತ್ ಉತ್ಪಾದನೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದೆ.
ಈ ಪಟ್ಟಿಯಲ್ಲಿ ಮಹತ್ವದ ಭಾರತೀಯ ನಗರಗಳಲ್ಲಿ ನಾಸಿಕ್ ಕೂಡ ಸೇರಿದೆ. ಜೊತೆಗೆ “ಕಲುಷಿತ ಮತ್ತು ಬಡ” ಎಂಬ ಅತ್ಯಂತ ಆತಂಕಕಾರಿ ವರ್ಗದಲ್ಲಿಯೂ ಭಾರತ ಕಾಣಿಸಿಕೊಂಡಿದೆ, ಇಲ್ಲಿ ಮಾಲಿನ್ಯ ಹೆಚ್ಚಾಗುತ್ತಿದ್ದರೂ ಆರ್ಥಿಕತೆ ಸ್ಥಗಿತಗೊಳ್ಳುತ್ತದೆ ಅಥವಾ ಕುಸಿಯುತ್ತದೆ.
ಇದೇ ವೇಳೆ, ಚೀನಾದಲ್ಲಿ 719 ನಗರಗಳು “ಸ್ವಚ್ಛ ಮತ್ತು ಶ್ರೀಮಂತ” ವರ್ಗಕ್ಕೆ ಸೇರಿದ್ದು, ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸಂಖ್ಯೆಯಾಗಿದೆ. ಬೀಜಿಂಗ್, ಶಾಂಘೈ, ಗ್ವಾಂಗ್ಝೌ, ಚೆಂಗ್ಡು ಮೊದಲಾದ ನಗರಗಳಲ್ಲಿ ಆದಾಯ ಹೆಚ್ಚಳದೊಂದಿಗೆ NO₂ ಮಟ್ಟ ಕಡಿಮೆಯಾಗಿದೆ. ಇದಕ್ಕೆ ಕಟ್ಟುನಿಟ್ಟಿನ ಕೈಗಾರಿಕಾ ನಿಯಂತ್ರಣ, ಮಾಲಿನ್ಯಕಾರಕ ಕೈಗಾರಿಕೆಗಳ ಸ್ಥಳಾಂತರ ಹಾಗೂ ಸಾರ್ವಜನಿಕ ಸಾರಿಗೆಯ ವಿದ್ಯುದೀಕರಣ ಪ್ರಮುಖ ಕಾರಣಗಳಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ನಗರಗಳು ಶ್ರೀಮಂತವಾಗುವಾಗ ಸ್ವಚ್ಛವಾಗುತ್ತವೆಯೇ ಎಂಬುದನ್ನು ನಿರ್ಧರಿಸುವಲ್ಲಿ ಆಡಳಿತ ಗುಣಮಟ್ಟ, ಪರಿಸರ ನಿಯಂತ್ರಣ ಹಾಗೂ ತಂತ್ರಜ್ಞಾನ ಬಳಕೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಧ್ಯಯನ ಹೇಳಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 173| ಸಿನಿಮಾ – ಸಿರಾತ್, ʼಹುಡುಕಾಟದ ಗುಂಗಿನ ಸ್ಥಾಯಿ ಭಾವ ‘ Janashakthi Media
