ಸೇಲಂ: ಪಕ್ಷದೊಳಗಿನ ಗೊಂದಲಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆ, ಎಐಎಡಿಎಂಕೆಗೆ (AIADMK) ದೊಡ್ಡ ಹಿನ್ನಡೆಯಾಗಿ ಹಿರಿಯ ನಾಯಕ ಎಸ್. ಸೆಮ್ಮಲೈ ಮೇ 18ರಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ, ಪಕ್ಷದೊಳಗಿನ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದ ಅವರು, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನದ ಬಳಿಕ ಅವಕಾಶಗಳ ಕೊರತೆಯೂ ಉಂಟಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತ ನಂತರ ಎಐಎಡಿಎಂಕೆಯೊಳಗೆ ನಡೆದ ಬೆಳವಣಿಗೆಗಳು ಕಾರ್ಯಕರ್ತರಲ್ಲಿ ಆಳವಾದ ಬೇಸರ ಉಂಟುಮಾಡಿವೆ ಎಂದು ಸೆಮ್ಮಲೈ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್ಚುವರಿ ವೈದ್ಯಕೀಯ ಸೀಟುಗಳು: ಕೇಂದ್ರದಿಂದ ₹1,090 ಕೋಟಿ ನೆರವು
“ಚುನಾವಣೆಯ ನಂತರ ಪಕ್ಷದಲ್ಲಿ ನಡೆದ ಘಟನೆಗಳು ದೊಡ್ಡ ಮಟ್ಟದ ನೋವುಂಟುಮಾಡಿವೆ. ಈ ಭಾವನೆ ಲಕ್ಷಾಂತರ ಕಾರ್ಯಕರ್ತರಲ್ಲಿಯೂ ಇದೆ,” ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ರಾಜೀನಾಮೆ ಪತ್ರವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಮ್ಮಲೈ, “ನಾಯಕತ್ವದ ಅಹಂಕಾರವೇ ಪಕ್ಷದ ಬೆಳವಣಿಗೆಗೆ ಅಡ್ಡಿಯಾಗಿದೆ. ಸಂಘಟನೆಯೊಳಗೆ ಸಮೂಹ ನಿರ್ಧಾರ ಪ್ರಕ್ರಿಯೆ ಅಥವಾ ಆರೋಗ್ಯಕರ ಚರ್ಚೆಗಳು ನಡೆಯುತ್ತಿಲ್ಲ. ಎಂ.ಜಿಆರ್ ಮತ್ತು ಅಮ್ಮ ಅವರು ಈ ಪಕ್ಷವನ್ನು ಹೇಗೆ ಕಟ್ಟಿದರು ಎಂಬುದನ್ನು ನಾಯಕರು ನೆನಪಿಸಿಕೊಳ್ಳಬೇಕು,” ಎಂದು ಹೇಳಿದರು.
“ಪಕ್ಷ ನಿರಂತರವಾಗಿ ದುರ್ಬಲವಾಗುತ್ತಿದೆ. ತುಂಬಾ ಭಾರವಾದ ಮನಸ್ಸಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾಯಕರು ಅಹಂಕಾರ ಬಿಟ್ಟು ಪಕ್ಷವನ್ನು ಬಲಪಡಿಸಬೇಕು,” ಎಂದೂ ಅವರು ಹೇಳಿದರು.
ಇನ್ನೊಂದು ಪಕ್ಷ ಸೇರುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು.
ಇದಕ್ಕೂ ಕೆಲವೇ ದಿನಗಳ ಹಿಂದೆ, ವಿಧಾನಸಭೆಯಲ್ಲಿ ವಿಶ್ವಾಸ ಮತದಾನದ ವೇಳೆ ಟಿವಿಕೆ (TVK) ಸರ್ಕಾರಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಬಂಡಾಯ ಶಾಸಕರು ಸೇರಿದಂತೆ ಹಿರಿಯ ನಾಯಕರುಗಳಾದ ಎಸ್.ಪಿ. ವೆಲುಮಣಿ, ಸಿ.ವಿ. ಶಣ್ಮುಗಂ, ಸಿ. ವಿಜಯಭಾಸ್ಕರ್ ಮತ್ತು ನಾಥಂ ಆರ್. ವಿಶ್ವನಾಥನ್ ಅವರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿದ್ದರು.
ಇದನ್ನೂ ನೋಡಿ: ಕರ್ನಾಟಕಕ್ಕೂ ಬಂದೇ ಬಿಡ್ತು..SIR….ಎಚ್ಚರ ಎಚ್ಚರ Janashakthi Media
