ಅಮ್ಮ ಅರಿಯನ್: ಜಾನಣ್ಣನ ಒಡೆಸಿ

ನಿರ್ದೇಶಕ ಜಾನ್ ಅಬ್ರಹಾಂ ಅವರ ಅವರ ಕೊನೆಯ ಚಿತ್ರವಾದ ‘ಅಮ್ಮ ಅರಿಯನ್’ ಮಲಯಾಳಂ ಹಾಗೂ ಭಾರತೀಯ ಸಿನೆಮಾಗೆ ಹೊಸ ತಿರುವು ಕೊಟ್ಟ ಕೃತಿ. ರ್ಯಾಡಿಕಲ್ ಆಗಿ ಚಿಂತಿಸಿ ಅದೇ ರೀತಿ ಬದುಕಿದ ಜಾನ್ ತಮ್ಮ ರಾಜಕೀಯ ಮತ್ತು ತತ್ವಚಿಂತನೆಗಳನ್ನು ಸಂಪೂರ್ಣ ಧಾರೆ ಎರೆದು ನಿರ್ಮಿಸಿದ ಸಿನಿಮಾ ‘ಅಮ್ಮ ಅರಿಯನ್’ (ರಿಪೋರ್ಟ್ ಟು ಮದರ್). ಅಮ್ಮ

– ಬಿ. ಶ್ರೀಪಾದ ಭಟ್

ಮುಖ್ಯವಾಹಿನಿಯ ನಿರ್ಮಾಣ, ವಿತರಣಾ ವ್ಯವಸ್ಥೆಯ ಏಕಾಧಿಪತ್ಯ ಮತ್ತು ವ್ಯಾಪಾರೀಕರಣಕ್ಕೆ ಸವಾಲು ಹಾಕಿದ ‘ಒಡೆಸ್ಸಾ ಕಲೆಕ್ಟಿವ್’ ವೇದಿಕೆ ಈ ಸಿನಿಮಾ ನಿರ್ಮಿಸಿತು. ನಿರ್ದೇಶಕ ಜಾನ್ ಆ ವೇದಿಕೆಯ ಸ್ಥಾಪಕರಲ್ಲಿ ಒಬ್ಬರು.

ಒಡೆಸ್ಸಾ ಕಲಕ್ಟಿವ್ ‘ಜನರ ಸಿನೆಮಾ’ವನ್ನು ನಿರ್ಮಿಸಲು ಪ್ರಯತ್ನಿಸಿತು. ಅದರ ಭಾಗವಾಗಿ ಪ್ರೇಕ್ಷಕರೇ ಹಣಹೂಡಿ(ಕ್ರೌಡ್‌ಫಂಡೆಡ್) ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಜನರಿಗೆ ತಲುಪುವ ಉದ್ದೇಶದಿಂದ ನಿರ್ಮಾಣವಾದ ‘ಅಮ್ಮ ಅರಿಯನ್’ ಒಂದು ಘೋಷಣೆಯೊಂದಿಗೆ ಆರಂಭವಾಗುತ್ತದೆ.

ಇದನ್ನೂ ಓದಿ: ನಾಲ್ಕು ‌ಕಾರ್ಮಿಕ ಸಂಹಿತೆಗಳಿಗೆ ‌ನಿಯಮಾವಳಿಗಳ ಅಧಿಸೂಚನೆ- ಕಾರ್ಮಿಕರ ಆಕ್ರೋಶ

‘ಬಹುತೇಕ ಸಿನಿಮಾಗಳು ವಾಸ್ತವಿಕತೆಯನ್ನು ಅದರ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಂಶಗಳನ್ನು ದುರುಪಯೋಗಪಡಿಸಿಕೊಂಡು ಚಿತ್ರಿಸುತ್ತವೆ. ಒಡೆಸ್ಸಾದ ‘ಅಮ್ಮ ಅರಿಯನ್’ ಮಾತ್ರ ಕಲಾಮಾಧ್ಯಮವಾಗಿ ಸಿನೆಮಾದ ಆದರ್ಶವನ್ನು ಸಾಕಾರಗೊಳಿಸುತ್ತದೆ’.

ಜಾನ್ ಅವರ ಈ ಸಮಾಜೋ-ರಾಜಕೀಯ ಕಲಾ ಮೀಮಾಂಸೆ ವಾಸ್ತವ ಮತ್ತು ರೂಪಕಗಳ ಪ್ರಯೋಗವಾಗಿದೆ. ಅಲ್ಲಮನ ಅರಿವಿನ ನಿರಾಕರಣೆ ತಾತ್ವಿಕತೆ ಇಲ್ಲಿನ ಸ್ಥಾಯಿಭಾವ.

ಈ ಸಿನಿಮಾದ ಕಥನಕ್ಕೆ ಅನೇಕ ಪದರುಗಳಿವೆ. ಇವನ್ನು ಬಿಡಿ ಬಿಡಿಯಾಗಿ ಪೋಣಿಸಿದರೂ ಸಹ ಪ್ರತಿ ದೃಶ್ಯವು ಮತ್ತೊಂದರ ಹೆಗಲ ಮೇಲೆ ಕೈಹಾಕಿ ವಿಚಾರಿಸುವ ರೀತಿಯಲ್ಲಿ ಬೆಸೆದುಕೊಂಡಿದೆ.

ಪುರುಷನ್ ಎಂಬ ಯುವಕ ತನ್ನ ಸಂಶೋಧನೆಗಾಗಿ ದೆಹಲಿಗೆ ಹೊರಡಲು ಸಿದ್ಧವಾಗಿದ್ದಾನೆ. ಇದರ ಭಾಗವಾಗಿ ವಯನಾಡಿನಲ್ಲಿ ಪ್ರಯಾಣಿಸುತ್ತಿರುವಾಗ ರಸ್ತೆ ಬದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗುರುತಿಲ್ಲದ ಶವವನ್ನು ಹೊತ್ತುಕೊಂಡು ಹೋಗುತ್ತಿರುವ ಕೆಲ ಪೊಲೀಸ್ ಸಿಬ್ಬಂದಿಯನ್ನು ನೋಡುವ ಅವನು ಆ ಮೃತ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಾನೆ. ಅದು ಸಾಧ್ಯವಾಗದಿದ್ದರೂ ಸಹ ಆ ಮುಖ ತನಗೆ ಬಹಳ ಪರಿಚಿತವೆನ್ನಿಸುವ ಭಾವನೆ ಅವನನ್ನು ಕಾಡುತ್ತದೆ. ಆ ಯೋಚನೆಯಿಂದ ವಿಚಲಿತನಾಗುವ ಪುರುಷನ್ ಗೆ ಆ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚುವ ಗಾಢ ಆಸಕ್ತಿ ಮೂಡುತ್ತದೆ.

ಮೃತ ವ್ಯಕ್ತಿಯ ಗುರುತನ್ನು ತಿಳಿಯಲು ಪ್ರಯತ್ನಿಸುತ್ತಾ ಕೊನೆಗೆ ಒಬ್ಬ ಸ್ನೇಹಿತನಿಂದ ಆ ಮೃತನು ಹರಿ ಎಂಬ ತಬಲಾ ವಾದಕನೆಂದು ತಿಳಿದುಕೊಳ್ಳುತ್ತಾನೆ.

ಅಲ್ಲಿಂದ ಹರಿ ಯಾರು? ಎಂದು ಶುರುವಾದ ಹುಡುಕಾಟದ ಪಯಣವು ಆರಂಭದಲ್ಲಿ ಒಂದು ಸಣ್ಣ ಝರಿಯಂತೆ ಹರಿದು ನಂತರ ಹರಿವ ನದಿಗೆ ಮೈಯೆಲ್ಲ ಕಾಲು ಎಂಬಂತೆ ಅಲೆ ಅಲೆಯಾಗಿ ವಿಸ್ತರಿಸಿ ಕಡೆಗೆ ಹರಿಯ ತಾಯಿಯ ಮನೆ ಬಾಗಿಲಿಗೆ ತಲುಪುತ್ತದೆ.

ಸಿ.ಎಸ್.ವೆಂಕಟೀಶ್ವರನ್ ‘ಇದು ಕೇರಳವನ್ನು ಭೌಗೋಳಿಕವಾಗಿ (ವಯನಾಡಿನಿಂದ ಕೊಚ್ಚಿವರೆಗೆ), ಐತಿಹಾಸಿಕವಾಗಿ (ಕಮ್ಯುನಿಸ್ಟ್ ಸಂಘಟನೆಯಿಂದ ನಕ್ಸಲೈಟ್ ಚಳವಳಿಯ ಕ್ರಾಂತಿಕಾರಿ ಹಂತ) ಮತ್ತು ಭಾವನಾತ್ಮಕವಾಗಿ (ಇತಿಹಾಸದ ಅವಶೇಷಗಳಂತೆ ಅಥವಾ ಜೀವಂತ ಸ್ಮಾರಕಗಳಂತೆ ಇರುವ ವ್ಯಕ್ತಿಗಳು) ಚಿತ್ರಿಸುತ್ತದೆ’ ಎಂದು ಹೇಳುತ್ತಾರೆ

ಜಾನ್ ಅವರ ವೈಯುಕ್ತಿಕ ಬದುಕಿನಂತೆ ಇಲ್ಲಿಯೂ ಪಯಣ ಎನ್ನುವುದು ಎಲ್ಲಿಯೂ ತಲುಪದ ನಿರಂತರ ಅನ್ವೇಷಣೆಯಾಗಿದೆ. ಪ್ರತಿಯೊಂದು ಪ್ರೇಮಿನಲ್ಲಿ ರೂಪಕಗಳಾಗಿ ಕಾಡುವ ಈ ಕಥನ ಸಾಮಾಜಿಕದಿಂದ-ರಾಜಕೀಯದವರೆಗೆ, ಒಳಜಗತ್ತಿನಿಂದ ಹೊರಜಗತ್ತಿನವರೆಗೆ, ಸಿದ್ಧಾಂತದ ತಾತ್ವಿಕತೆಯಿಂದ ಅದರ ಸಾಧಕ ಬಾಧಕಗಳ ಜಿಜ್ಞಾಸೆಯವರೆಗೆ, ಇತಿಹಾಸದಿಂದ ವರ್ತಮಾನದ ನಡುವೆ ಜೋಕಾಲಿಯಂತೆ ಜೀಕುತ್ತಾ ಕಡೆಗೂ ಮರಣದಿಂದ ಶುರುವಾಗಿ ತಾಯಿಯ ಲಿವಿಂಗ್ ಗೆ ಬಂದು ತಲುಪುತ್ತದೆ.

ಮರಳಿ ತಾಯಿಯಿಂದ ಮಗನತ್ತ ಹಿಂದಿರುಗುವ ಇಡೀ ಕಥನ ನಮ್ಮನ್ನು ದಿಗ್ಭ್ರಮೆ ಗೊಳಿಸುತ್ತದೆ.

ಈ ಪಯಣ ತಾಯಿಯ ಮನೆ ಬಾಗಿಲಿಗೆ ತಲುಪಿದ ಸಂದರ್ಭದಲ್ಲಿ ಆಕೆ ನೇರವಾಗಿ ಕ್ಯಾಮೆರಾವನ್ನು ನೋಡುತ್ತಿರುವಾಗ ಕ್ಯಾಮೆರಾ ಹಿಂದಕ್ಕೆ ಸರಿದು ನಾವು ಒಂದು ಚಿತ್ರದೊಳಗಿನ ಚಿತ್ರವನ್ನು ನೋಡುತ್ತಿದ್ದೇವೆ ಎಂಬುದು ಮನದಟ್ಟಾಗುತ್ತದೆ. ಪರದೆಯ ಮೇಲೆ ಹರಿಯ ತಾಯಿಯನ್ನು ನೋಡುತ್ತಿದ್ದ ಜನಸ್ತೋಮ ನಂತರ ಅಲ್ಲಿಂದ ನಡೆದುಹೋಗುತ್ತದೆ.

ಈ ದೃಶ್ಯ ನಮ್ಮ ಮೇಲೆ ಬೀರುವ ಪರಿಣಾಮವನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ..

ಮಗನ ಮರಣದಿಂದ ತಾಯಿಯ ಬದುಕಿನವರೆಗೆ ನಡೆಯುವ ಈ ಪಯಣದ ಮಧ್ಯದಲ್ಲಿ ಅನೇಕ ರಾಜಕೀಯ ಹೋರಾಟಗಳು ಮತ್ತು ಸಾಮಾಜಿಕ ಸಂಘರ್ಷಗಳು ಕಂಡುಬರುತ್ತವೆ, ವಿದ್ಯಾರ್ಥಿ ಚಳವಳಿಗಳ ತಾತ್ವಿಕತೆಯಿದೆ, ಕಮ್ಯುನಿಸ್ಟ್ ಸಂಘಟನೆ ಹಾಗೂ ನಕ್ಸಲ್ ಹೋರಾಟದ ಸಂಘರ್ಷದ ಕಥನವಿದೆ.
1970ರ ದಶಕದಲ್ಲಿ ಕೇರಳದಲ್ಲಿ ತೀವ್ರವಾಗಿದ್ದ ರಾಜಕೀಯ ಚರ್ಚೆಯನ್ನು

ಆ ಕಾಲದ ಕ್ರಾಂತಿಕಾರಿ ಚಿಂತನೆಗಳ ಜೊತೆಗೆ ಕೊಲಾಜ್ ಮಾಡಿದ್ದು ಜಾನ್ ಪ್ರತಿಭೆಗೆ ಸಾಕ್ಷಿ. ಇಷ್ಟೊಂದು ಆಯಾಮಗಳನ್ನು ಒಂದೇ ದಾರದೊಂದಿಗೆ ಪೋಣಿಸುವ ಜಾನ್ ಅವರ ಇಂತಹ ಈಸ್ತೆಟಿಕ್ ಮತ್ತು ಸರ್ರಿಯಲಿಸಂ ಜಾನ್ ಗೆ ಮಾತ್ರ ಸಾಧ್ಯ.

ಸಿನಿಮಾ ನಿರ್ಮಾಣದ ಪೂರ್ವದಲ್ಲಿ ಒಡೆಸ್ಸಿ ಕಲೆಕ್ಟಿವ್ ನ ಕಾಮ್ರೇಡ್ಸ್ ಹಳ್ಳಿ ಹಳ್ಳಿಗೆ ಸಂಚರಿಸುತ್ತಾ ಸಣ್ಣ ನಾಟಕಗಳು ಮತ್ತು ಪ್ರದರ್ಶನಗಳನ್ನು ನಡೆಸಿ ಜನರಿಂದ ದೇಣಿಗೆಗಳನ್ನು ಸಂಗ್ರಹಿಸುತ್ತಿದ್ದರು. ಒಂದು ವಿಶೇಷ ದೃಶ್ಯದಲ್ಲಿ ದೀರ್ಘ ಸ್ವಗತದ ಮೂಲಕ ಜಾನ್ ಪ್ರಸಿದ್ಧ ಗ್ವಾಟೆಮಾಲಾದ ಕವಿ ಮತ್ತು ಕ್ರಾಂತಿಕಾರಿ Otto René Castilloರ ಮಾತುಗಳನ್ನು ಉಲ್ಲೇಖಿಸುತ್ತಾರೆ:

‘ಒಂದು ದಿನ ನನ್ನ ದೇಶದ apolitical ಬುದ್ಧಿಜೀವಿಗಳನ್ನು ನಮ್ಮ ದೇಶದ ಅತಿ ಸಾಮಾನ್ಯ ಜನರು ಪ್ರಶ್ನಿಸಲಿದ್ದಾರೆ.
ನಿಮ್ಮ ರಾಷ್ಟ್ರ ನಿಧಾನವಾಗಿ, ಒಂಟಿಯಾಗಿ ಹೊತ್ತಿ ಉರಿಯುತ್ತಾ ಸಿಹಿಯಾದ ಬೆಂಕಿಯಂತೆ ನಾಶವಾಗುತ್ತಿದ್ದಾಗ ನೀವು ಏನು ಮಾಡುತ್ತಿದ್ದಿರಿ ಎಂದು ಅವರು ಕೇಳಲಿದ್ದಾರೆ.’

ಇದು ಜಾನ್ ಅಬ್ರಹಾಂ..

ಈ ಸಿನಿಮಾದಲ್ಲಿ ಸ್ಥಗಿತತೆ ಮತ್ತು ಪ್ರಶಾಂತತೆ ಎಂಬುದೇ ಇಲ್ಲ. ಆರಂಭದಿಂದ ಅಂತ್ಯದವರೆಗೆ ಪ್ರತಿಯೊಬ್ಬರೂ ಚಲಿಸುತ್ತಲೇ ಇರುತ್ತಾರೆ.. ಆದರೆ ಒಂದು ಬಗೆಯ ಅಸ್ವಸ್ಥತೆ ಮತ್ತು ತಲ್ಲಣದ ಮನಸ್ಥಿತಿಯೊಂದಿಗೆ.. ಇದು ಅಲೆಮಾರಿಯಂತೆ ಬದುಕಿದ ಟಿಪಿಕಲ್ ಜಾನ್ ನ ಮನೋಭೂಮಿಕೆಯೂ ಹೌದು..
ಆ ಕ್ಷಣದಲ್ಲಿ ಬದುಕುವ ಸಹಜಸ್ಪೂರ್ತಿ ಮತ್ತು ಪೊಲಿಟಿಕಲ್ ಧ್ವನಿ ಈ ಸಿನಿಮಾದ ಆತ್ಮ..

ಜಾನ್ ಅವರ ತಾತ್ವಿಕತೆ ಮತ್ತು ಕ್ರಿಯಾಶೀಲ ಅರಾಜಕತೆಗೆ ಪೂರಕವಾಗಿ ಸಿನಿಮಾಟೋಗ್ರಾಫರ್ ವೇಣು ಕೆಲಸ ಮಾಡಿದ್ದಾರೆ. ಲಯಬದ್ಧತೆ ಮತ್ತು ನಾಟಕೀಯತೆಯನ್ನು ಕಪ್ಪುಬಿಳುಪು ಲೆನ್ಸ್ ನಲ್ಲಿ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ

ಈ ಸಿನಿಮಾದ ಸಂಕಲನಕಾರ ಬೀನಾ ಪೌಲ್ ‘ಈ ಸಿನಿಮಾ ಒಂದು ನೆಲೆಯಲ್ಲಿ ಕಾಲ್ಪನಿಕ(ಫಿಕ್ಷನ್) ಮತ್ತೊಂದು ನೆಲೆಯಲ್ಲಿ ವಾಸ್ತವ’ ಎಂದು ಹೇಳುತ್ತಾರೆ.

ಅಮ್ಮ ಅರಿಯನ್ ನಲ್ಲಿ ಕ್ರಾಂತಿಯ ಕಲಾ ಮೀಮಾಂಸೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಅನೇಕ ಉಲ್ಲೇಖಗಳು ನಿರೂಪಿತವಾಗಿದೆ. ಪುರುಷನ್ ನೆರೂಡಾನ Nothing But Death ಕವನದ ‘ಇದು ಸತ್ತವರನ್ನು ಹುಡುಕುತ್ತಿರುವ ಮರಣದ ನಾಲಿಗೆ / ದಾರವನ್ನು ಹುಡುಕುತ್ತಿರುವ ಮರಣದ ಸೂಜಿ’ ಸಾಲುಗಳನ್ನು ಓದುತ್ತಾನೆ.
ಮತ್ತೊಬ್ಬ ವ್ಯಕ್ತಿ ಚಗವೇರನ ದಿನಚರಿ ಪುಸ್ತಕ ಓದುತ್ತಿರುವಾಗ ಕ್ಯಾಮೆರಾ ಗೋಡೆ ಮೇಲೆ ಅಂಟಿಸಿದ ಮಾರ್ಕ್ಸ್, ಚೆ, ಮಾವೋ ಫೋಟೋಗಳ ಮೇಲೆ ಹರಿದಾಡುತ್ತದೆ.
ಓಹ್ ಎಷ್ಟೊಂದು ಪ್ರಯೋಗಗಳು!

ಈ ತಲೆಮಾರಿನ ಸಿನಿಮಾ ಉತ್ಸಾಹಿಗಳು ‘ಜಾನಣ್ಣ, ಜಾನಣ್ಣ’ ಎಂದು ತಬ್ಬಿಕೊಂಡು ಮಾತನಾಡುವುದ ಕಂಡಾಗ ಜಾನ್ ತೀರಿಕೊಂಡಿಲ್ಲ, ಇಲ್ಲೇ ಪಕ್ಕದಲ್ಲಿದ್ದಾರೆ ಅಂತ ಅನಿಸುತ್ತದೆ..

ಜಾನಣ್ಣ ಯಾವಾಗಲೂ ಹಾಗೆಯೇ…

ಮಿಗಬಾರದು, ಮಿಗದಿರಬಾರದು ರೀತಿ..

ಕಾನ್ 2026ರಲ್ಲಿ ‘ಅಮ್ಮ ಅರಿಯನ್’ ಪ್ರದರ್ಶನ ವಾಗುತ್ತದೆ ಎಂಬುದೇ ಒಂದು ಪುಳಕ..

ಇದನ್ನೂ ನೋಡಿ: ಆರೋಗ್ಯ ಸೇವೆ ಕಾರ್ಪೊರೇಟ್ ಕೈಗೆ? : ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ Janashakthi Media

Donate Janashakthi Media

Leave a Reply

Your email address will not be published. Required fields are marked *