– ವಸಂತರಾಜ ಎನ್.ಕೆ
ಕಳೆದ ವರ್ಷದ ಕೇರಳ ಫಿಲಂ ಉತ್ಸವದಲ್ಲಿ ಕೆಲವು ಫಿಲಂಗಳಿಗೆ ಅನುಮತಿಯನ್ನು ಕೇಂದ್ರ ಸರಕಾರ ನಿರಾಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ‘ಪ್ಯಾಲೆಸ್ಟೀನ್ 36’ ಕೇಂದ್ರ ಸರಕಾರ ಅನುಮತಿ ನೀಡಿ ಕೇರಳ ಮತ್ತು ಬೆಂಗಳೂರು ಎರಡೂ ಫಿಲಂ ಉತ್ಸವದಲ್ಲಿ ಪ್ರದರ್ಶಿತವಾದ ಒಂದು ಫಿಲಂ. ಈ ಫಿಲಂ ಗೆ ಯಾಕೆ ಅನುಮತಿ ದೊರಕಿತು, ಇತರ ಫಿಲಂಗಳಿಗೆ ಯಾಕೆ ದೊರೆಯಲಿಲ್ಲ ಎಂಬುದು ಇದರ ಬಗ್ಗೆ ಮಾತಾಡುತ್ತಾ ಹೋದ ಹಾಗೆ ಸ್ಪಷ್ಟವಾಗುತ್ತದೆ. ಪ್ಯಾಲೆಸ್ಟೀನ್ 36’, 1936-39ರ ಅವಧಿಯಲ್ಲಿ ಪ್ಯಾಲೆಸ್ಟೀನ್ ನಲ್ಲಿ ಬ್ರಿಟಿಶ್ ಆಡಳಿತದ ವಿರುದ್ಧ ನಡೆದ ಮೊದಲ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ. ನಾನು ಈ ಫಿಲಂನ್ನು ಬೆಂಗಳೂರು ಫಿಲಂ ಉತ್ಸವದಲ್ಲಿ ನೋಡಿದೆ.
ಈಗ ಇರಾನ್ ಮೇಲೆ ನಡೆಯುತ್ತಿರುವ ಯುದ್ಧ, ಗಾಜಾದಲ್ಲಿ ಕಳೆದ ಎರಡುವರೆ ವರ್ಷಗಳಿಂದ ನಡೆಯುತ್ತಿರುವ ಎಪ್ಪತ್ತು ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನ್ ರನ್ನು ಬಲಿ ತೆಗೆದುಕೊಂಡ ನರಮೇಧದ ವಿರುದ್ಧ ಆಕ್ರೋಶವನ್ನು ಮರೆಗೆ ಸರಿಸಿದೆ. ಆದರೆ ಆಗಲೇ – ಯಾಕೀ ನರಮೇಧ? ಏನಿದು ಪ್ಯಾಲೆಸ್ಟೀನ್ ಸಮಸ್ಯೆ? ಏನದರ ಇತಿಹಾಸ ?- ಇತ್ಯಾದಿ ಪ್ರಶ್ನೆಗಳ ಬಗ್ಗೆ ಮತ್ತೆ ಹೆಚ್ಚಿನ ಕುತೂಹಲ ಮೂಡಿತ್ತು. ಪ್ಯಾಲೆಸ್ಟೀನ್ ಜನತೆಯ ಪ್ರಸಕ್ತ ಪ್ರತಿರೋಧ, ದುರಂತಗಳ ಬೇರೆ ಬೇರೆ ಆಯಾಮಗಳ ಕುರಿತು ಹಲವು ಫಿಲಂ ಗಳು ಬಂದಿವೆ. ಕಳೆದ ವರ್ಷದ ಕೇರಳ ಫಿಲಂ ಉತ್ಸವದಲ್ಲಿ ಕೆಲವು ಫಿಲಂಗಳಿಗೆ ಅನುಮತಿಯನ್ನು ಕೇಂದ್ರ ಸರಕಾರ ನಿರಾಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ‘ಪ್ಯಾಲೆಸ್ಟೀನ್ 36’ ಕೇಂದ್ರ ಸರಕಾರ ಅನುಮತಿ ನೀಡಿ ಕೇರಳ ಮತ್ತು ಬೆಂಗಳೂರು ಎರಡೂ ಫಿಲಂ ಉತ್ಸವದಲ್ಲಿ ಪ್ರದರ್ಶಿತವಾದ ಒಂದು ಫಿಲಂ. ಈ ಫಿಲಂ ಗೆ ಯಾಕೆ ಅನುಮತಿ ದೊರಕಿತು, ಇತರ ಫಿಲಂಗಳಿಗೆ ಯಾಕೆ ದೊರೆಯಲಿಲ್ಲ ಎಂಬುದು ಇದರ ಬಗ್ಗೆ ಮಾತಾಡುತ್ತಾ ಹೋದ ಹಾಗೆ ಸ್ಪಷ್ಟವಾಗುತ್ತದೆ. ನಾನು ಈ ಫಿಲಂನ್ನು ಮ್ಯಾಂಡೇಟ್ದಲ್ಲಿ ನೋಡಿದೆ.
1936ರ ಪ್ಯಾಲೆಸ್ಟೀನ್ ದಂಗೆಯ ಭಾಗವಾಗಿ ನಡೆದ ಪ್ರದರ್ಶನದ ಚಾರಿತ್ರಿಕ ಫೊಟೊ (ಫಿಲಂ ನಿಂದ ಅಲ್ಲ)
1936ರ ಪ್ಯಾಲೆಸ್ಟೀನ್ ದಂಗೆಯ ಭಾಗವಾಗಿ ನಡೆದ ಪ್ರದರ್ಶನದ ಚಾರಿತ್ರಿಕ ಫೊಟೊ (ಫಿಲಂ ನಿಂದ ಅಲ್ಲ)
ಚಾರಿತ್ರಿಕ ಹಿನ್ನೆಲೆ
ಸಾಮಾನ್ಯವಾಗಿ ಇಂದಿನ ಪ್ಯಾಲೆಸ್ಟೀನ್ ಸಮಸ್ಯೆ ಇತಿಹಾಸದ ಬಗ್ಗೆ ಮಾತಾಡುವಾಗ ಏಳು ಲಕ್ಷ ಪ್ಯಾಲೆಸ್ಟೀನ್ ಜನರನ್ನು ರಾತ್ರೋರಾತ್ತಿ ಹೊರ ದಬ್ಬಿದ 1948ರ ‘ನಕ್ಬಾ’ದಿಂದ ಆರಂಭಿಸಲಾಗುತ್ತದೆ. ಆದರೆ ‘ಪ್ಯಾಲೆಸ್ಟೀನ್ 36’, 1936-39ರ ಅವಧಿಯಲ್ಲಿ ಪ್ಯಾಲೆಸ್ಟೀನ್ ನಲ್ಲಿ ಬ್ರಿಟಿಶ್ ಆಡಳಿತದ ವಿರುದ್ಧ ನಡೆದ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ. ಇದು ಬಹುಶಃ ಹೆಚ್ಚಾಗಿ ಪರಿಚಿತವಲ್ಲದ ಮೊದಲ ರಾಷ್ಟ್ರೀಯ ದಂಗೆಯ ಆದರೆ ಇಂದಿನ ಪ್ಯಾಲೆಸ್ಟೀನ್ ಸಮಸ್ಯೆಯ ಮೂಲವನ್ನು ಸ್ಪಷ್ಟವಾಗಿ ತೋರಿಸುವ ಫಿಲಂ. ಹಾಗಾಗಿ ಈ ಫಿಲಂ ಪ್ರಮುಖವಾಗುತ್ತದೆ.
ಈ ಫಿಲಂ ಕಥನಕ್ಕೆ ಹೋಗುವ ಮೊದಲು ಅದರ ಸ್ಥೂಲ ಚಾರಿತ್ರಿಕ ಹಿನ್ನೆಲೆಯನ್ನು ತಿಳಿಯುವುದು ಸೂಕ್ತ. ಮೊದಲ ಮಹಾಯುದ್ಧದ ಮೊದಲು 400 ವರ್ಷಗಳ ಕಾಲ ಪ್ಯಾಲೆಸ್ಟೀನ್ ಒಟ್ಟೊಮನ್ ಸಾಮ್ರಾಜ್ಯದ ಭಾಗವಾಗಿತ್ತು. ಬ್ರಿಟನ್ ಈ ಪ್ರದೇಶವನ್ನು 1918ರ ಹೊತ್ತಿಗೆ ಗೆದ್ದುಕೊಂಡಿತು. ಸೋತ ಕೂಟಕ್ಕೆ ಸೇರಿದ್ದ ಒಟ್ಟೊಮನ್ ಸಾಮ್ರಾಜ್ಯ ಮೊದಲ ಮಹಾಯುದ್ಧದ ನಂತರ ಒಡೆದು ಹೋಯಿತು. ಲೀಗ ಆಫ್ ನೇಶನ್ಸ್ ಈಗಿನ ಪ್ಯಾಲೆಸ್ಟೀನ್ ಪ್ರದೇಶದ ಆಡಳಿತ ನಡೆಸಲು ಬ್ರಿಟನ್ ಗೆ ಅಧಿಕಾರ (ಮ್ಯಾಂಡೇಟ್) ಕೊಟ್ಟಿತು. ಯೆಹೂದಿಯರಿಗೆ ಪ್ಯಾಲೆಸ್ಟೀನ್ ನಲ್ಲಿ ‘ರಾಷ್ಟ್ರೀಯ ಗೃಹ’ (ನೇಶನಲ್ ಹೋಂ)’ ಸೃಷ್ಟಿಸುವ 1917ರ ‘ಬಾಲ್ ಫೋರ್ ಘೋಷಣೆ’ಯನ್ನು ಆಗಿನ ಬ್ರಿಟಿಶ್ ವಿದೇಶಾಂಗ ಕಾರ್ಯದರ್ಶಿ ಬಾಲ್ ಫೋರ್ ಹೊರಡಿಸಿದರು. ಆಗಿನ ಪ್ಯಾಲೆಸ್ಟೀನ್ ನಲ್ಲಿ ಬಹುಸಂಖ್ಯಾತ ಅರಬ್ ಮುಸ್ಲಿಮರು, ಅಲ್ಪಸಂಖ್ಯಾತ ಅರಬ್ ಕ್ರಿಶ್ಚಿಯನ್ನರು ನೆಲೆಸಿದ್ದರು. ಬಹಳ ಸಣ್ಣ ಪ್ರಮಾಣದ ಯೆಹೂದಿಯರು ಇದ್ದರು. ಆ ನಂತರ ಬ್ರಿಟಿಶ್ ವಸಾಹತುಶಾಹಿ ಆಡಳಿತ ಪ್ಯಾಲೆಸ್ಟೀನ್ ನ ಅರಬ್ ರೈತರ ಶೋಷಣೆ, ಯುರೋಪಿನಲ್ಲಿ ದಮನಕ್ಕೆ ಒಳಗಾದ ಯೆಹೂದಿಯರ ವಲಸಿಗರಿಗಾಗಿ ಅರಬ್ ರೈತರ ಜಮೀನನ್ನು ಕಿತ್ತುಕೊಳ್ಳುವುದು ನಡೆಸಿತು. 1930ರ ದಶಕ ದ ಮಧ್ಯದ ಹೊತ್ತಿಗೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮತ್ತು ನಾಜಿಗಳಿಂದ ಯೆಹೂದಿಯರ ಮಾರಣಹೋಮದ ಬೆದರಿಕೆಗಳಿಂದಾಗಿ ಇವೆರಡೂ ತೀವ್ರವಾದವು. ಇದಕ್ಕೆ ಪ್ರತಿಕ್ರಿಯೆಯಾಗಿ 1936-39 ಅವಧಿಯಲ್ಲಿ ನಡೆದ ರಾಷ್ಟ್ರೀಯ ದಂಗೆಯೇ ಈ ಫಿಲಂ ನ ಕಥಾವಸ್ತು.

‘ಯಾರೂ ಮುಖ್ಯರಲ್ಲ’ ದ ಪಾತ್ರಗಳು
‘ಪ್ಯಾಲೆಸ್ಟೀನ್ 36’ ಘಟನಾವಳಿಯ ಬಹು ಪಾಲು ಅಲ್ ಬಸ್ಮಾ ಎಂಬ ಹಳ್ಳಿ, ಜೆರೂಸಲೆಂ, ಜಾಫ್ಫಾ ಬಂದರುಗಳಲ್ಲಿ ನಡೆಯುತ್ತದೆ. ಇಲ್ಲಿ ಬರುವ ಪಾತ್ರಗಳು ಹಲವು. ಇವರಲ್ಲಿ ‘ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ”, ಹೆಚ್ಚು ಅಥವಾ ಕಡಿಮೆ ಮುಖ್ಯರೂ ಅಲ್ಲ. ಹಾಗಾಗಿ ಯಾರೂ ನಾಯಕ-ನಾಯಕಿ ರಿಲ್ಲ ಇಲ್ಲಿ. ಜೆರೂಸಲೆಂ ನಲ್ಲಿನ ಪತ್ರಿಕೋದ್ಯಮಿ ರಾಜಕಾರಣಿ ಅಮೀರ್ ಮತ್ತು ಆತನ ಆಧುನಿಕ ಗಂಡಸಿನ ಹುಸಿ ಹೆಸರಲ್ಲಿ ಬರೆಯುವ ರಾಷ್ಟ್ರವಾದಿ ಪತ್ರಕರ್ತೆ ಪತ್ನಿ ಖೋಲೌದ್; ಹಾಗೂ ಅವರ ಡ್ರೈವರ್ ಆಗಿ ನಗರದಲ್ಲಿ ಮತ್ತು ಹಳ್ಳಿಯಲ್ಲಿ ಹೊಲದಲ್ಲಿ ಸಹ ಕೆಲಸ ಮಾಡುವ ಯೂಸೂಫ್ – ಇವರು ಮೊದಲ ಭಾಗದಲ್ಲಿ ತೆರೆ ಸಮಯದ ಬಹುಭಾಗ ತೆಗೆದುಕೊಳ್ಳುತ್ತಾರೆ. ಆದರೂ ಫಿಲಂ ಕಥನ ಅವರ ಮೇಲೇನೇ ಹೆಚ್ಚೇನೂ ಒತ್ತು ಕೊಡುವುದಿಲ್ಲ. ಮುಂದೆ ದಂಗೆಯ ಪ್ರಮುಖ ನಾಯಕನಾಗುವ ಬಂದರು ಕಾರ್ಮಿಕ ಖಲೀದ್, ಹಳ್ಳಿಯ ಹುಡುಗಿ ಆಫ್ರಾ, ಆಕೆಯ ತಾಯಿ ರಬಾಬ್ ಮತ್ತು ಅಜ್ಜ-ಅಜ್ಜಿ; ಅಫ್ರಾ ಗೆಳೆಯ ತನ್ನ ತಂದೆಯಿಂದ ಚರ್ಮದ ಕೆಲಸ ಕಲಿಯುತ್ತಿರುವ ಕರೀಂ; ಕ್ರಿಶ್ಚಿಯನ್ ಪಾದ್ರಿ ಬೌಲೋಸ್ ಮತ್ತು ಅವನ ಮಗ – ಇವರೂ ದಂಗೆಯಲ್ಲೂ ಫಿಲಂ ನಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಇವರಲ್ಲದೆ ಹಲವು ಬ್ರಿಟಿಶ್ ಅಧಿಕಾರಿಗಳ ಪಾತ್ರಗಳೂ ಇವೆ. ತಾನು ಅರಬರು ಮತ್ತು ಯೆಹೂದಿಯರು ಇಬ್ಬರನ್ನೂ ಸಮಾನವಾಗಿ ಕಾಣುವವ ಎನ್ನುತ್ತಾ ಯೇಹೂಧಿಯರ ಪರವಾಗಿಯೇ ಇರುವ ಹೈಕಮಿಶನರ್ ವೌಕೊಪ್, ಸ್ವತಂತ್ರ ಮುಕ್ತ ಪ್ಯಾಲೆಸ್ಟೀನ್ ತಾಯ್ನಾಡಿನ ಬೆಂಬಲಿಗ ಕಮೀಶನರ್ ಥಾಮಸ್, ದಂಗೆ ದಮನದ ಪರಿಣತ ಚಾರ್ಲ್ಸ್ ತೆಗಾರ್ತ ಮತ್ತು ಝೀಯೊನಿಸ್ಟ್ ಬೆಂಬಲಿಗ ಹಾಗೂ ಎಲ್ಲ ಪ್ಯಾಲೆಸ್ಟೀನರನ್ನು ಪ್ರಾಣಿಗಳಂತೆ ಕಾಣುವ ಹಿಂಸಾತ್ಮಕ ದಮನಚಕ್ರ ಹರಿಯ ಬಿಡುವ ಮಿಲಿಟರಿ ಅಧಿಕಾರಿ ಕ್ಯಾಪ್ಟನ್ ವಿನ್ ಗೇಟ್ – ಹೀಗೆ ಹಲವು ವಿಧದ ಬ್ರಿಟಿಶ್ ಪಾತ್ರಗಳಿವೆ.
ಚಿತ್ರಕತೆ
ಜೆರೂಸಲೆಂ ರೆಡಿಯೊ ಸ್ಟೇಶನ್ ನ ಉದ್ಘಾಟನೆಯಿಂದ ಫಿಲಂ ಆರಂಭವಾಗಿ ರೈತ-ಡ್ರೈವರ್ ಯೂಸುಫ್, ಪತ್ರಿಕೋದ್ಯಮಿ ಅಮೀರ್, ಖೋಲೌದ್ ಅವರ ಪಾತ್ರಗಳನ್ನು ಪರಿಚಯಿಸುತ್ತದೆ. ಅಮೀರ್ ಮತ್ತು ಖೋಲೌದ್ ಪ್ಯಾಲೆಸ್ಟೀನ್ ಉಚ್ಛ ವರ್ಗವನ್ನು ಪ್ರತಿನಿಧಿಸಿದರೆ , ಯೂಸುಫ್ ಹಳ್ಳಿಯಲ್ಲಿ ಒಕ್ಕಲುತನದ ಸಂಕಷ್ಟ ಬವಣೆಗಳಿಂದ ನಗರದಲ್ಲಿಯೂ ಕೆಲಸ ಮಾಡಬೇಕಾಗಿ ಬಂದಿರುವ ಯುವರೈತರನ್ನು ಪ್ರತಿನಿಧಿಸುತ್ತಾನೆ. ಇವರು ಮೂವರೂ ಮುಂದೆ ದಂಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮೊದಲ ಭಾಗ ಈ ಮೂವರ, ಹಳ್ಳಿಯ, ಜೆರೂಸಲೇಂ ನಗರದ, ಮತ್ತು ಜಾಫ್ಫಾ ಬಂದರು ಕಾರ್ಮಿಕರ ದೈನಂದಿನ ಬದುಕನ್ನು ದಾಖಲಿಸುತ್ತಾ ಈ ಎಲ್ಲ ಪಾತ್ರಗಳ ಸ್ವಲ್ಪ ಆಳವಾದ ಪರಿಚಯ ಮಾಡುತ್ತಾ ಹೋಗುತ್ತದೆ. ಅಮೀರ್ ಬ್ರಿಟಿಶರ ಜತೆ ಉತ್ತಮ ಸಂಬಂಧವಿಟ್ಟುಕೊಂಡು ತನ್ನ ಉದ್ಯಮವನ್ನು ಬೆಳೆಸಬೇಕು ಎನ್ನುವವ. ಜತೆಗೆ ಪ್ಯಾಲೆಸ್ಟೀನ್ ನ ವಿವಿಧ ಜನರ ಬದುಕಿನಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಮುಂಬರುವ ದಂಗೆಗೆ ಕಾರಣವಾದ ಪರಿಸ್ಥಿತಿಯನ್ನು ಸಹ ಫಿಲಂ ತೆರೆದಿಡುತ್ತಾ ಹೋಗುತ್ತದೆ. ಜಾಫ್ಫಾ ಬಂದರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದಿಳಿಯುತ್ತಿರುವ ಯೆಹೂದಿಯರು, ಬಂದರಿನಲ್ಲಿ ಕಾರ್ಮಿಕರ ಶೋಷಣೆಯ ದೃಶ್ಯಗಳು ಸಹ ಮೊದಲಿಗೆ ಬರುತ್ತವೆ. ಬಂದರು ಕಾರ್ಮಿಕ ಖಲೀದ್ ನ ಓವರ್-ಟೈಮ್ ಕೂಲಿ (ಈಗಾಗಲೇ ಕಡಿಮೆ ಇರುವ) ದರಕ್ಕಿಂತ ಕಡಿಮೆ ಕೊಟ್ಟಾಗ ರೊಚ್ಚಿಗೆದ್ದು ಪ್ರತಿಭಟಿಸಿದಾಗ ಹಲ್ಲೆಗೆ ಒಳಗಾಗ್ತಾನೆ. ಬಂದರಿನಲ್ಲಿ ಅರಬ್ ಕಾರ್ಮಿಕರನ್ನು ಬಿಟ್ಟು ಹೆಚ್ಚೆಚ್ಚು ಯೆಹೂದಿ ಕಾರ್ಮಿಕರನ್ನು ಹೆಚ್ಚಿನ ಕೂಲಿಗೆ ನೇಮಿಸುವುದು ಸಹ ಅರಬ್ ಕಾರ್ಮಿಕರಲ್ಲಿ ತೀವ್ರ ಆಕ್ರೋಶ ಉಂಟು ಮಾಡುತ್ತದೆ. ಅದೇ ಸಮಯದಲ್ಲಿ ಜಾಫ್ಫಾ ಬಂದರಿನಲ್ಲಿ ಹಡಗಗಳಲ್ಲಿ ಸಿಮೆಂಟ್ ಬಾಕ್ಸ್ ಗಳಲ್ಲಿ ಅಡಗಿಸಿ ತರಲಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಯೆಹೂದಿಯರು ಪ್ಯಾಲೆಸ್ಟೀನ್ ನ್ನು ಮಿಲಿಟರಿ ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂಬ ಸುದ್ದಿ ಹರಡಲು ಕಾರಣವಾಗಿ ಅರಬರಲ್ಲಿ ಆತಂಕ ಹುಟ್ಟಿಸುತ್ತದೆ.

ಬ್ರಿಟಿಷರ ತೆರಿಗೆ ಭಾರ, 1930ರ ದಶಕದಲ್ಲಿ ಜಾಗತಿಕ ಆರ್ಥಿಕ ಕುಸಿತದ ಭಾಗವಾಗಿ ಬೆಳೆಗಳ ಬೆಲೆಯಲ್ಲಿ ಕುಸಿತ ಅರಬ್ ರೈತರನ್ನು ಆಗಲೇ ಹೈರಾಣಾಗಿಸಿತ್ತು. ಜೊತೆಗೆ ಪ್ಯಾಲೆಸ್ಟೀನ್ ಅರಬರ ವಿರುದ್ಧ ಮತ್ತು ಯೆಹೂದಿಯರ ಪರವಾಗಿ, ಬ್ರಿಟಿಶ್ ಸರಕಾರದ (ಅರಬ್ ರೈತರ – ಅದರಲ್ಲೂ ಫಲವತ್ತಾದ ಉತ್ತಮ – ಹೊಲ-ತೋಟಗಳಿಗೆ ಬೇಲಿ ಹಾಕಿ ಅದನ್ನು ಯೆಹೂದಿಯರಿಗೆ ಕೊಡುವುದರಲ್ಲಿ ಮತ್ತು ಕನಿಷ್ಟ ಕೂಲಿಯಲ್ಲಿ) ತಾರತಮ್ಯದ ನೀತಿಗಳ ವಿರುದ್ಧ ಆಕ್ರೋಶ ತೀವ್ರವಾಗುತ್ತದೆ. ಇವೆಲ್ಲದರಿಂದ ಅರಬ್ ಮತ್ತು ಯೇಹೂದಿಗಳ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗುತ್ತದೆ. ಈ ನಡುವೆ ಇಬ್ಬರು ಯೆಹೂದಿ ಟ್ರಕ್ ಡ್ರೈವರ್ ಗಳ ಕೊಲೆಯಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ಇಬ್ಬರು ಅರಬ್ ಕಾರ್ಮಿಕರ ಕೊಲೆಯಾಗುತ್ತದೆ. ಇದೇ ದಂಗೆಗೆ ಕಿಡಿಯಾಗುತ್ತದೆ. ಅರಬ್ ಆಕ್ರೋಶ ಕಟ್ಟೊಡೆಯುತ್ತದೆ.
ಅರಬ್ ವರ್ತಕರು, ಉದ್ಯಮಿಗಳು, ಐದು ರಾಜಕೀಯ ಪಕ್ಷಗಳು ಮತ್ತಿತರ ವಿಭಾಗದ ಪ್ರತಿನಿಧಿಗಳು ಇರುವ ‘ಅರಬ್ ಹೈಯರ್ ಕಮಿಟಿ’ 1936 ಎಫ್ರಿಲ್ ನಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಡುತ್ತದೆ. ಯೆಹೂದಿಯರ ವಲಸೆ ಮೇಲೆ ನಿರ್ಬಂಧ, ಅರಬ್ ರೈತರ ಹೊಲ-ತೋಟಗಳನ್ನು ವಶಪಡಿಸಿಕೊಂಡು ಯೆಹೂದಿಯರಿಗೆ ಮಾರುವುದರ ಮೇಲೆ ನಿಷೇಧ, ಸ್ವಾಯತ್ತ ಸರಕಾರದ ಸ್ತಾಪನೆಗೆ ಅವಕಾಶ – ಮುಷ್ಕರದ ಪ್ರಮುಖ ಹಕ್ಕೊತ್ತಾಯಗಳಾಗುತ್ತವೆ. ಕಾರ್ಮಿಕರ ಮುಷ್ಕರ, ಅರಬ್ ಉದ್ಯಮಗಳ ಮತ್ತು ಅಂಗಡಿಗಳ ಬಂದ್ – ಇವೆಲ್ಲ ಸೇರಿ ಅದು ಹರತಾಳದ ಸ್ವರೂಪ ಪಡೆಯುತ್ತದೆ. ಇದನ್ನು ನಿರ್ವಹಿಸಲು ಎಲ್ಲ ಹಳ್ಳಿ-ಪಟ್ಟಣಗಳಲ್ಲೂ ಮುಷ್ಕರ ಸಮಿತಿಗಳ ರಚನೆಯಾಗುತ್ತದೆ. ಹರತಾಳವನ್ನು ಮುರಿಯಲು – ಅದರ ನಾಯಕರನ್ನು ಹುಡುಕಲು ಮನೆಗಳ ಮೇಲೆ ದಾಳಿ, ಅಚಾನಕ್ ರಾತ್ರಿ ದಾಳಿಗಳು, ದಾಳಿಗಳಲ್ಲಿ ಅಮಾಯಕರನ್ನು ಥಳಿಸುವುದು, ಬಂಧನ, ಚಿತ್ರಹಿಂಸೆ, ಗಡಿಪಾರು –ಮುಂತಾದ ದಮನ ಕ್ರಮಗಳನ್ನು ಬ್ರಿಟಿಶ್ ಸರಕಾರ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಯೆಹೂದಿ ಸಶಸ್ತ್ರ ಪಡೆಗಳನ್ನು ರಚಿಸಿ ಅದರ ಸಹಾಯವನ್ನೂ ತೆಗೆದುಕೊಳ್ಳುತ್ತದೆ. ಇದಕ್ಕೆ ಪ್ರತಿರೋಧ ಒಡ್ಡಲು, ಪ್ರತೀಕಾರ ಮಾಡಲು ಅರಬ್ ಗೆರಿಲ್ಲಾ ಪಡೆಗಳನ್ನು ರಚಿಸಲಾಗುತ್ತದೆ. ಹಲವು ಬಾರಿ ಬ್ರಿಟಿಶ್ ಮತ್ತು ಯೆಹೂದಿಯರು, ಅವರ ಆಸ್ತಿ-ಪಾಸ್ತಿ ಸಂಸ್ಥೆಗಳ ಮೇಲೆ ದಾಳಿಯಲ್ಲಿ ಕೊನೆಗೊಳ್ಳುತ್ತವೆ. ಇದು ವ್ಯಾಪಕ ಅರಬರ ಬೆಂಬಲ ಪಡೆಯುತ್ತದೆ. ಅದು ಅಕ್ಟೋಬರ್ 1936ರ ವರೆಗೆ ಮುಂದುವರೆಯುತ್ತದೆ. ಈಗಾಗಲೇ ಹೇಳಲಾಗಿರುವ ಪಾತ್ರಗಳ ಮೂಲಕವೇ ಈ ಘಟನಾವಳಿಗಳ ನಿರೂಪಣೆ ಸಾಗುತ್ತದೆ. ಯೂಸುಫ್, ಅಮೀರ್ ‘ಅರಬ್ ಹೈಯರ್ ಕಮಿಟಿ’ ಯ ಸದಸ್ಯರಾಗಿರುತ್ತಾರೆ. ಖೊಲೌದ್ ಪತ್ರಿಕಾ ವರದಿಗಳ ಮೂಲಕ ಘಟನಾವಳಿಯ ನಿರೂಪಣೆ ಸಾಗುತ್ತದೆ. ಇತರ ಅರಬ್ ಗ್ರಾಮೀಣ ಮತ್ತು ಬ್ರಿಟಿಶ್ ಪಾತ್ರಗಳ ಮೂಲಕ ಹರತಾಳ-ಮುಷ್ಕರ ಮತ್ತು ಅದರ ಮೇಲಿನ ದಮನ, ಅದಕ್ಕೆ ಪ್ರತಿರೋಧ ಅನಾವರಣಗೊಳ್ಳುತ್ತದೆ.

ಅಕ್ಟೋಬರ್ 1936ರಲ್ಲಿ ಬ್ರಿಟಿಶ್ ಸರಕಾರ ಪ್ಯಾಲೆಸ್ಟೀನ್ ಜನತೆಯ ಹಕ್ಕೊತ್ತಾಯಗಳನ್ನು ಪರಿಶೀಲಿಸಲು ಪೀಲ್ ಕಮಿಶನ್ ನೇಮಿಸುತ್ತದೆ. ಆರು ತಿಂಗಳ ಮುಷ್ಕರ-ಹರತಾಳದಿಂದ ಜನಜೀವನದ ಮೇಲೆ ಆದ ಪರಿಣಾಮಗಳು, ಬ್ರಿಟಿಶರ ಕ್ರೂರ ದಮನಚಕ್ರ ಮತ್ತು ನೆರೆಯ ಇರಾಕ್, ಸೌದಿ ಅರೇಬಿಯ ಇತ್ಯಾದಿ ಅರಬ್ ದೊರೆಗಳ ಒತ್ತಡದ ಫಲವಾಗಿ ಮುಷ್ಕರ-ಹರತಾಳವನ್ನು ವಾಪಸು ತೆಗೆದುಕೊಂಡು, ಕಮಿಶನ್ ಎದುರು ತಮ್ಮ ಹಕ್ಕೊತ್ತಾಯ ಮಂಡಿಸಲು ಮತ್ತು ಅದರ ತೀರ್ಪಿಗೆ ಕಾಯಲು ಅರಬ್ ಹೈಯರ್ ಕಮಿಟಿ – ಸಾಕಷ್ಟು ಆಂತರಿಕ ಮತಬೇಧ, ವಿವಾದಗಳಿದ್ದರೂ – ಒಪ್ಪುತ್ತದೆ. ಅಕ್ಟೋಬರ್ 1936 ರಿಂದ ಪೀಲ್ ಕಮಿಶನ್ ಹಲವು ತಿಂಗಳುಗಳ ಕಾಲ ಪ್ಯಾಲೆಸ್ಟೀನ್ ಪ್ರವಾಸ ಕೈಗೊಂಡು ಸಮಸ್ಯೆ ಅಧ್ಯಯನ ಮಾಡಿ ಜುಲೈ 1937ರಲ್ಲಿ ವರದಿ ನೀಡುತ್ತದೆ. ಪ್ಯಾಲೆಸ್ಟೀನ್ ನ್ನು ಅರಬರು ಮತ್ತು ಯೆಹೂದಿಯರ ನಡುವೆ ಎರಡು ದೇಶಗಳಾಗಿ ವಿಭಜಿಸಬೇಕು ಎಂಬ ತೀರ್ಪನ್ನು ಕೊಡುತ್ತದೆ. ಇದರಿಂದಾಗಿ ಅರಬ್ ಆಕ್ರೋಶ ಭುಗಿಲೆದ್ದು ಎರಡನೆಯ ಹಂತದ ಸಶಸ್ತ್ರ ದಂಗೆ ಆರಂಭವಾಗುತ್ತದೆ.
ಎರಡನೆಯ ಹಂತದ ಸಶಸ್ತ್ರ ದಂಗೆ ಜುಲೈ 1937ರಿಂದ 1938 ಸೆಪ್ಟೆಂಬರ್ ವರೆಗೆ ನಡೆಯುತ್ತದೆ. ಈ ಹಂತದಲ್ಲಿ ಪ್ಯಾಲೆಸ್ಟೀನ್ ಅರಬ್ ಗೆರಿಲ್ಲಾ ಪಡೆಗಳು ಬ್ರಿಟಿಶ್-ಯೆಹೂದಿ ಪಡೆಗಳಿಗೆ ಸಾಕಷ್ಟು ಪ್ರತಿರೋಧ ಒಡ್ಡುವುದಲ್ಲದೆ, ನಾಡಿನ ದೊಡ್ಡ ಭಾಗ ಅವರ ನಿಯಂತ್ರಣದಲ್ಲಿರುತ್ತದೆ. ಗುಡ್ಡಗಾಡು ಪ್ರದೇಶಗಳು ಹೆಚ್ಚು ಕಡಿಮೆ ಪೂರ್ಣವಾಗಿ, ಹಳೆಯ ಜೆರೂಸಲೇಂ ನಗರ ಪೂರ್ಣವಾಗಿ ಅವರ ನಿಯಂತ್ರಣದಲ್ಲಿರುತ್ತದೆ. ಈ ಹಂತದಲ್ಲಿ ಬ್ರಿಟಿಶ್ ಸರಕಾರ ಅರಬ್ ಹೈಯರ್ ಕಮಿಟಿ ಮತ್ತು ರಾಜಕೀಯ ಪಕ್ಷಗಳನ್ನು ನಿಷೇಧಿಸುತ್ತದೆ ಮತ್ತು ಅದರ ಸದಸ್ಯರನ್ನು ಬಂಧಿಸುವ ಅಥವಾ ಗಡಿಪಾರು ಮಾಡುವ ಆಜ್ಞೆ ಹೊರಡಿಸುತ್ತದೆ. ಹಲವು ನಾಯಕರು ಬಂಧನ ತಪ್ಪಿಸಿ ನೆರೆಯ ದೇಶಗಳಲ್ಲಿ ನೆಲೆಸಿ ಅಲ್ಲಿಂದ ದಂಗೆಗೆ ನಿರ್ದೇಶನ-ಬೆಂಬಲ ನಡೆಸಲು ಪ್ರಯತ್ನಿಸುತ್ತಾರೆ.. ಬ್ರಿಟಿಶ್ ಸರಕಾರ ಇನ್ನಷ್ಟು ಕ್ರೂರ ದಮನ ಕ್ರಮಗಳನ್ನು ವ್ಯಾಪಕವಾಗಿ ಕೈಗೊಳ್ಳುತ್ತದೆ. ನಾಯಕರನ್ನು ಮತ್ತು ಶಸ್ತ್ರಾಸ್ತ್ರ ಹುಡುಕಲು ಮನೆ ಮನೆ ಹುಡುಕಾಟ ಮತ್ತು ಕುಟುಂಬದ ಸದಸ್ಯರನ್ನು ಥಳಿಸುವುದು; ಅವರು ಸಿಗದಿದ್ದರೆ ಅಥವಾ ಅವರ ಅಡಗುತಾಣ ತಿಳಿಸದಿದ್ದರೆ, ಸಿಕ್ಕ ಸಿಕ್ಕವರನ್ನು ಗುಂಡಿಟ್ಟು ಸಾಯಿಸುವುದು, ಮಾನವ ಒತ್ತೆಯಾಳು ಬಳಸುವುದು, ಇಡೀ ಹಳ್ಳಿಗೆ ಸಾಮೂಹಿಕ ದಂಡ ಅಥವಾ ಆಹಾರ-ನೀರು ನಿರಾಕರಿಸುವುದು; ಇಡೀ ಹಳ್ಳಿಯವರನ್ನು ಬಂಧಿಸುವುದು; ಮನೆಗಳನ್ನು ಸಾಮೂಹಿಕವಾಗಿ ನಾಶ ಮಾಡುವುದು, ಸಿಕ್ಕ ನಾಯಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದು – ಇದು ಸಾಮಾನ್ಯವಾಗಿ ಬಿಡುತ್ತದೆ. ಟ್ಯಾಂಕುಗಳು, ವಿಮಾನಗಳು, ಭಾರೀ ತೋಪುಗಳು ಮುಂತಾದ ಯುದ್ಧದಲ್ಲಿ ಬಳಸುವ ಮಿಲಿಟರಿ ಶಕ್ತಿಯನ್ನು ಬಳಸಲಾಗುತ್ತದೆ. ಈ ಹಂತವನ್ನು ಸಹ ಫಿಲಂ ನಲ್ಲಿ ಹಿಂದೆ ಹೇಳಿದ ಹಳ್ಳಿ, ಪಾತ್ರಗಳ ಮೂಲಕ ನಿರೂಪಿಸಲಾಗುತ್ತದೆ. ಬಂದರು ಕಾರ್ಮಿಕ ಖಲೀದ್ ಮತ್ತು ಮುಸ್ತಾಫಾ ದಂಗೆಯ ಗೆರಿಲ್ಲಾ ಪಡೆಯ ನಾಯಕರಾಗುತ್ತಾರೆ. ಅದರ ಜತೆಗೆ ಅಲ್ ಬಸ್ಮಾ ಹಳ್ಳಿ ಹಲವು ಸಾಮೂಹಿಕ ಶಿಕ್ಷೆಗಳಿಗೆ ಬಲಿಯಾಗುತ್ತದೆ. ಅಫ್ರಾ ಅಜ್ಜ-ಅಜ್ಜಿ, ಪಾದ್ರಿ ಬೊಲೌಸ್ ಇದಕ್ಕೆ ಬಲಿಯಾಗುತ್ತಾರೆ.

ಮೂರನೇ ಹಂತದ ದಂಗೆ 1938 ಅಕ್ಟೋಬರ್ ನಿಂದ 1939ರ ಬೇಸಗೆಯವರೆಗೆ ನಡೆಯುತ್ತದೆ. ಜನವರಿ 1938ರಲ್ಲಿ ಪೀಲ್ ಕಮಿಶನ್ ಪ್ರಸ್ತಾವಿಸಿದ ವಿಭಜನೆ ಕಾರ್ಯಸಾಧ್ಯವಲ್ಲವೆಂದು ನವೆಂಬರ್ 1938ರಲ್ಲಿ ವರದಿ ನೀಡುತ್ತದೆ. ಆದರೆ ಇದರ ಜತೆಗೆ ಕ್ರೂರ ದಮನಚಕ್ರ ಇನ್ನಷ್ಟು ಕ್ರೂರವಾಗುತ್ತಾ ಹೋಗುತ್ತದೆ. ಈ ಹಂತವನ್ನು ಖಲೀದ್ ಮತ್ತು ಮುಸ್ತಾಫಾ ಕೊನೆಯವರೆಗೆ ಹೋರಾಡಿ ಬ್ರಿಟಿಶ್ ಪಡೆಗಳಿಗೆ ಬಲಿಯಾಗುವ ಮೂಲಕ ನಿರೂಪಿಸಲಾಗುತ್ತದೆ. ಯುರೋಪಿನಲ್ಲಿ ಯುದ್ಧದ ಕಾರ್ಮೋಡಗಳು ಕವಿಯಲಾರಂಭಿಸಿದಂತೆ ಮೇ 1939ರಲ್ಲಿ ವಿಭಜನೆಯ ಯೋಜನೆಯನ್ನು ಹಿಂತೆಗೆದುಕೊಳ್ಳುವ ಶ್ವೇತಪತ್ರವನ್ನು ಪ್ರಕಟಿಸುತ್ತದೆ. ಶ್ವೇತಪತ್ರದ ಪ್ರಕಾರ ಯೆಹೂದಿಯರ ವಲಸೆಗೆ ವಾರ್ಷಿಕ ಸಂಖ್ಯಾತ್ಮಕ ನಿರ್ಬಂಧ, ಅರಬ್ ಹೊಲಗಳ ಮಾರಾಟಕ್ಕೆ ಹೆಚ್ಚಿನ ನಿರ್ಬಂಧಗಳು, 10 ವರ್ಷಗಳ ನಂತರ ‘ಉತ್ತಮ ಅರಬ್-ಯೆಹೂದಿ ಸಂಬಂಧ ಸಾಧ್ಯವಾದರೆ’ ಐಕ್ಯ ಪ್ಯಾಲೆಸ್ಟೀನ್ ಸರಕಾರದ ಸ್ಥಾಪನೆ – ಈ ಕ್ರಮಗಳ ಆಶ್ವಾಸನೆ ಕೊಡುತ್ತದೆ. ಇಷ್ಟು ಹೊತ್ತಿಗೆ ದಂಗೆ ಸಹ ಸಾಕಷ್ಟು ದುರ್ಬಲವಾಗಿರುತ್ತದೆ. ಈ ಶ್ವೇತಪತ್ರವು ದಂಗೆ ಪೂರ್ಣವಾಗಿ ವಿಫಲವಾಗಲಿಲ್ಲವೆಂದು ತೋರಿಸುತ್ತದೆ. ಆದರೆ ಎರಡನೇ ಮಹಾಯುದ್ಧ ಮತ್ತು ನಂತರದ ಭೌಗೋಳಿಕ-ರಾಜಕಾರಣ ಬೆಳವಣಿಗೆಗಳು ದಂಗೆಯ ಸಾಧನೆಗಳನ್ನು ಹೆಚ್ಚು ಕಡಿಮೆ ಅಳಿಸಿ ಹಾಕಿತು.
ಫಿಲಂನ ಕಥನ ಶೈಲಿ
ನಾಯಕ-ನಾಯಕಿ ಅಥವಾ ಕನಿಷ್ಟ ಕೆಲವು ಮುಖ್ಯ ಪಾತ್ರಗಳಿಲ್ಲದೆ, ಹಲವು ಪಾತ್ರಗಳ ಮೂಲಕ ಚಾರಿತ್ರಿಕ ನಿರೂಪಣೆಯನ್ನು ಗೊಂದಲ ಮತ್ತು ಅಸ್ಫಷ್ಟಗೊಳಿಸುತ್ತದೆ ಮತ್ತು ಪರಿಣಾಮಕಾರಿಯಾಗುವುದಿಲ್ಲ. ಅದರಲ್ಲೂ 1936ರ ದಂಗೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದಿರುವಾಗ ಈ ನಿರೂಪಣೆ ಸೂಕ್ತವಲ್ಲವೆಂದು, ಮೊದಲ ನೋಟಕ್ಕೆ ಕಾಣುವಾಗ (ಮತ್ತು ಕೆಲವು ವಿಮರ್ಶಕರು ಹೇಳಿರುವಂತೆ) ಅನಿಸುತ್ತದೆ. ಆದರೆ ಪ್ಲಾಲೆಸ್ಟೀನ್ ನ ವಿವಿಧ ಜನವಿಭಾಗಗಳನ್ನು ಪ್ರತಿನಿಧಿಸುವ ಮತ್ತು ಜೀವಂತ ಪಾತ್ರಗಳ ಸೃಷ್ಟಿಯ ಮೂಲಕ ಈ ಚಾರಿತ್ರಿಕ ಅವಧಿಯನ್ನು ಅದರ ಎಲ್ಲ ಸಮಗ್ರತೆಯೊಂದಿಗೆ ಸೆರೆ ಹಿಡಿಯುವ ಸಲುವಾಗಿ ನಿರ್ದೇಶಕಿ ಜಾಸಿರ್ ಈ ಕಥನಶೈಲಿಯನ್ನು ಉದ್ಧೇಶಪೂರ್ವಕವಾಗಿ ಆಯ್ಕೆ ಮಾಡಿದ್ದಾರೆ. ಚಾರಿತ್ರಿಕ ಘಟನಾವಳಿಯನ್ನು ಹಿನ್ನೆಲೆಯಾಗಿ ಮಾತ್ರವಿಟ್ಟುಕೊಂಡು ಅದರ ಪರಿಣಾಮಗಳನ್ನು ಕೆಲವು ಪ್ರಮುಖ ಪಾತ್ರಗಳ ಮೇಲೆ ನಿರೂಪಿಸುವ, ಇಂತಹ ಚಾರಿತ್ರಿಕ ಫಿಲಂಗಳಲ್ಲಿ ಸಾಮಾನ್ಯವಾಗಿ ಬಳಸುವ ಕಥನಶೈಲಿಯನ್ನು ತಮ್ಮ ‘ರಾಜಕೀಯ’ ಉದ್ಧೇಶಕ್ಕೆ ಸೂಕ್ತವಲ್ಲ ಎಂದು ಜಾಸಿರ್ ಅದನ್ನು ನಿರಾಕರಿಸಿದ್ದಾರೆ. ಅವರ ಕಥನಶೈಲಿ ನಿರೂಪಣೆಯ ಸಂಕೀರ್ಣತೆಯನ್ನು ಹೆಚ್ಚಿಸಿದೆ ನಿಜ, ಆದರೆ ಹೆಚ್ಚೇನೂ ಪರಿಚಿತವಿಲ್ಲದ 1936ರ ಪ್ಯಾಲೆಸ್ಟೀನ್ ಮೊದಲ ರಾಷ್ಟ್ರೀಯ ದಂಗೆಯನ್ನು ಸಮಗ್ರವಾಗಿ ಆಳವಾಗಿ ನಿರೂಪಿಸುವಲ್ಲಿ ಸಫಲವಾಗಿದೆಯೆನ್ನಬಹುದು.

ಹಾಗೆನೇ ಫಿಲಂ ನಲ್ಲಿ ಆ ಕಾಲದ ಚಾರಿತ್ರಿಕ ಆಕರದ – ಅದರಲ್ಲೂ ವಿಶೇಷವಾಗಿ ಗುಡ್ಡಗಾಡುಗಳಲ್ಲಿ ಗೆರಿಲ್ಲಾ ಕುದುರೆಗಳಲ್ಲಿ ಹೋಗುವುದು, ಮಿಲಿಟರಿ ಚಲನೆ ಇತ್ಯಾದಿಗಳ – ಡಾಕ್ಯುಮೆಂಟರಿ ‘ರೀಲ್ ಗಳನ್ನು ಬಣ್ಣ ಹಾಕಿ ಬಳಸಿರುವುದು ಚಾರಿತ್ರಿಕ ಅಧಿಕೃತತೆಯನ್ನು ಕೊಡುತ್ತದೆ. ಇದರಿಂದಾಗಿ ಕೆಲವು ಭಾಗಗಳು ಡಾಕ್ಯುಮೆಂಟರಿಯಂತಾಗಿದೆ ಎಂದು ಟೀಕೆಯೂ ಬಂದಿದೆ. ಪಾತ್ರಗಳು ದಟ್ಟವಾಗಿ ಬರುವ ಭಾಗಗಳನ್ನು ಪ್ಯಾಲೆಸ್ಟೀನ್ ನ ಸ್ಥಳಗಳಲ್ಲೇ ಚಿತ್ರಿಸಿರುವುದು ಮತ್ತು ಇವೆರಡನ್ನು ಕೌಶಲ್ಯಪೂರ್ಣ ಜೋಡಣೆ (ಎಡಿಟಿಂಗ್) ಒಟ್ಟು ಫಿಲಂನ ಚಾರಿತ್ರಿಕ ಅಧಿಕೃತತೆಯನ್ನು ಹೆಚ್ಚಿಸಿದೆ. ಇದರ ಜತೆಗೆ ಫಿಲಂನಲ್ಲಿ ಬರುವ ಹಳ್ಳಿಯ ಮನೆ ಇತ್ಯಾದಿ ಕೆಲವು ವಾಸ್ತವ, ಕೆಲವು ಸೆಟ್ ರಚನೆ, ಆ ಕಾಲದ ಪೋಶಾಕುಗಳ ವಿನ್ಯಾಸ ಚಾರಿತ್ರಿಕ ಅಧಿಕೃತತೆಯನ್ನು ಇನ್ನಷ್ಟು ಬಲಪಡಿಸಿದೆ. ಫೋಟೋಗ್ರಫಿ ನಿರ್ವಹಿಸಿರುವ ಹೆಲೆನ್ ಲುವಾರ್ಟ್, ಸಾರಾ ಬ್ಲುಮ್ ಮತ್ತು ಟಿಮ್ ಫ್ಲೆಮಿಂಗ್ ಅವರುಗಳ, ಎಡಿಟಿಂಗ್ ಮಾಡಿರುವ ತನಿಯಾ ರೆಡ್ಡಿನ್, ಸೆಟ್ ಡಿಸೈನರ್ ನಾಯಿಲ್ ಕಂಜ್ ಮತ್ತು ವಸ್ತ್ರ ವಿನ್ಯಾಸಕರಾದ ಹಮದ ಅತಲ್ಲಾ ಅವರ ಕೆಲಸ ಮೆಚ್ಚಲೇಬೇಕು. ಇವರೆಲ್ಲರ ಶ್ರಮದಿಂದಾಗಿ ಫಿಲಂ ಚಾರಿತ್ರಿಕವಾಗಿ ಅಥೆಂಟಿಕ್ ಆಗಿ ಮೂಡಿದೆ.
ಇಂದಿನ ಪ್ಯಾಲೆಸ್ಟೀನ ಜನತೆಯ ಆಕ್ರೋಶವನ್ನು ಧ್ವನಿಸುತ್ತದೆ
ಇದು ಪ್ಯಾಲೆಸ್ಟೀನ್ ನಾಡಲ್ಲಿ ಬಂದು ನೆಲೆಸಲು ಆರಂಭಿಸಿದ ಸಾವಿರಾರು ಯೆಹೂದಿಯರ ಮತ್ತು ಬಹುಪಾಲು ಅರಬ್ ಮೂಲ ನಿವಾಸಿಗಳ ನಡುವಿನ, 90 ವರ್ಷಗಳ ನಂತರವೂ ಈಗಲೂ ಹೊಗೆಯಾಡುತ್ತಿರುವ ಸಮಸ್ಯೆಯ, ಚಾರಿತ್ರಿಕ ಮೂಲದ ಬಗೆಗಿನ ಫಿಲಂ ಆದರೂ ಯೇಹೂದಿಗಳನ್ನು ಇಲ್ಲಿ ‘ವಿಲನ್’ಗಳಾಗಿ ಚಿತ್ರಿಸಿಲ್ಲ. ನಿಜ ಹೇಳಬೇಕೆಂದರೆ ದೂರದಲ್ಲಿ ಕಾಣುವ ಯೆಹೂದಿ ವಲಸೆಗಾರರ ಮತ್ತು ವಲಸಿಗ ಪಡೆಗಳ ಕುರಿತು ಫಿಲಂ ಮಾತಾಡುತ್ತದೆ. ಆದರೆ ಒಂದೇ ಒಂದು ಯೆಹೂದಿ ಪಾತ್ರವಿಲ್ಲ. ಇಲ್ಲಿ ‘ವಿಲನ್’ ಮತ್ತು ಕುತಂತ್ರಿಗಳಾಗಿ ಚಿತ್ರಿಸಲಾಗಿರುವುದು ಬ್ರಿಟಿಶ್ ಅಧಿಕಾರಿಗಳನ್ನು. ಇದು ನಿಜ ಕೂಡಾ. ಬ್ರಿಟಿಶರು ಈ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿ ರಕ್ಷಿಸಲು ಯೆಹೂದಿಯರ ಧಾರ್ಮಿಕ ನಂಬಿಕೆಗಳನ್ನು ಬಳಸಿ ಮೂಲನಿವಾಸಿ ಗಳ ಜತೆ ಚರ್ಚಿಸದೆ ಯೇಹೂದಿಯರನ್ನು ಇಲ್ಲಿ ನೆಲೆಗೊಳಿಸಿ, ಮೂಲನಿವಾಸಿ ಮತ್ತು ಅವರ ನಡುವೆ ಸಂಘರ್ಷ ತಂದಿಡುತ್ತಾರೆ. ಬ್ರಿಟಿಶರ ಒಡೆದಾಳುವ ನೀತಿ ಮತ್ತು ಮೂಲನಿವಾಸಿಗಳ ಹಕ್ಕುಗಳನ್ನು– ತಮ್ಮ ನಾಡಿನಲ್ಲೇ ಓಡಾಡಲು ನಿರ್ಬಂಧಗಳ, ಐಡಿ ಕಾರ್ಡ್ ಕೇಳುವ, ಸಾಮೂಹಿಕ ದಂಡ, ಕ್ರೂರ ಶಿಕ್ಷೆ ಇತ್ಯಾದಿಗಳ ಮೂಲಕ – ಹೊಸಕಿ ಹಾಕುವ ಸಾಮ್ರಾಜ್ಯಶಾಹಿಯ ದಮನ ನೀತಿಯ ನಿರೂಪಣೆಗೆ ಒತ್ತು ಕೊಡಲಾಗಿದೆ. ಯೆಹೂದಿಯರು ಅಥವಾ ಇಸ್ರೇಲ್ ಅಥವಾ ಯು.ಎಸ್ ನ್ನು ನ್ನು ನೇರವಾಗಿ ‘ವಿಲನ್’ ಆಗಿಸುವ ನಿರೂಪಣೆ ಇಲ್ಲದ್ದರಿಂದಲೋ ಏನೋ ನಮ್ಮ ಸರಕಾರದ ಸೆನ್ಸಾರ್-ಕಣ್ಣು ಇದರ ಮೇಲೆ ಬೀಳಲಿಲ್ಲ!
ಬ್ರಿಟಿಶರ ಇದೇ ನೀತಿಯನ್ನು ಯು.ಎಸ್ ಸಾಮ್ರಾಜ್ಯಶಾಹಿಯ ಕುಮ್ಮಕ್ಕಿನಿಂದ ಇಸ್ರೇಲ್ ಇಂದೂ ಮುಂದುವರೆಸುತ್ತಿದೆ ಎಂದು ನೇರವಾಗಿ ಹೇಳದಿದ್ದರೂ ಪರೋಕ್ಷಾಗಿ ಫಿಲಂ ಸೂಚಿಸುತ್ತದೆ. ಪ್ಯಾಲೆಸ್ಟೀನ್ ಯೆಹೂದಿಯರಿಗೆ ‘ದೇವರು ಕೊಟ್ಟ ನಾಡು’ ಎಂಬ ಹುಸಿ ಬೈಬಲ್ ವಾಣಿಯನ್ನು ನಂಭಿರುವ ಕ್ರೂರ ಬ್ರಿಟಿಶ್ ಕ್ಯಾಪ್ಟನ್ ಮತ್ತು ಒಬ್ಬ ಬ್ರಿಟಿಶ್ ಅಧಿಕಾರಿ ಅದನ್ನು ಅಲ್ಲಗಳೆಯುವ ವಾಗ್ವಾದ ಹಾಗೂ ಆತನ ‘ನಾವು ಇತಿಹಾಸದ ಯಾವ ಕಡೆಗೆ ಇದ್ದೇವೆ ಎಂದು ತೋರಿಸುವ ಕಾಲ ಬಂದಿದೆ’ ಎನ್ನುವ ಮಾತು ಇಂದಿನ ಪ್ಯಾಲೆಸ್ಟೀನ್ ಸಮಸ್ಯೆಯ ಮೂಲವನ್ನು ಸೂಚಿಸುತ್ತದೆ. ತಮ್ಮ ಬಂಧು, ಪ್ರಿಯರ ಕೊಲೆಯನ್ನು ಕಂಡು ಇಬ್ಬರು ಮಕ್ಕಳು ಇದರ ಪ್ರತೀಕಾರಕ್ಕೊ ಎಂಬಂತೆ ಓಢುತ್ತಾ ಹೋಗುವುದು, ನಂತರದ ಪ್ರತಿ ನರಮೇಧದ ನಂತರ ಪ್ಯಾಲೆಸ್ಟೀನ್ ನ ಪ್ರತಿ ಹೊಸ ಪೀಳಿಗೆಯ ನಿರಂತರ ಆಕ್ರೋಶವನ್ನು ಧ್ವನಿಸುತ್ತದೆ.

1936-39 ಅವಧಿಯ ಮೊದಲ ಪ್ಯಾಲೆಸ್ಟೀನ್ ರಾಷ್ಟ್ರೀಯ ದಂಗೆ’ಯ ಹೋರಾಟದ ಮೂಲಕ ಒಂದು ದೇಶವಾಗಿ ಹುಟ್ಟಿದ ಕತೆಯನ್ನೂ ‘ಪ್ಯಾಲೆಸ್ಟೀನ್ 36’ ಹೇಳುತ್ತದೆ ಎಂಬುದೂ ಅದರ ವಿಶಿಷ್ಟತೆ. ಗಾಜಾ ನರಮೇಧದ ಬಗ್ಗೆ ಇಡೀ ಜಗತ್ತು ಅಸಹಾಯಕವಾಗಿ ಮಿಡಿಯತ್ತಿರುವಾಗ ಇದರ ಚಾರಿತ್ರಿಕ ಮೂಲಕಾರಣವನ್ನು ನಿರೂಪಿಸುವ ಕಥನದ ತುರ್ತು ಆವಶ್ಯಕತೆಯನ್ನು ಈ ಫಿಲಂ ಪೂರೈಸುತ್ತದೆ. ಮಾತ್ರವಲ್ಲ, ಅದು ಜನರ ವೈಯಕ್ತಿಕ ಬದುಕು ಮತ್ತು ರಾಜಕೀಯ ಕಾರ್ಯಾಚರಣೆಗಳು, ಕೆಲವೊಮ್ಮೆ ಮೌನ, ಕೆಲವೊಮ್ಮೆ ಆಸ್ಫೋಟಕಾರಿ ರೂಪಗಳಲ್ಲಿ ಹೇಗೆ ವ್ಯಕ್ತವಾಗುತ್ತದೆ ಎಂದು ತೋರಿಸುವುದರಿಂದ ನಮ್ಮನ್ನು ಕಾಡುತ್ತದೆ.
ಇತಿಹಾಸವನ್ನು ಹಲವು ಜೀವಂತ ವ್ಯಕ್ತಿಗಳು ಹೇಗೆ ಸೃಷ್ಟಿಸಿದರು, ಅದು ಅವರನ್ನು ಹೇಗೆ ಪ್ರಭಾವಿಸಿತು ಎಂದು ಮಾನವೀಯ ಮಟ್ಟದಲ್ಲಿ ತೋರಿಸುವ ಸಫಲ ಚಾರಿತ್ರಿಕ ಫಿಲಂ ಆಗಿ ‘ಪ್ಯಾಲೆಸ್ಟೀನ್ 36’ ನೋಡಲೇಬೇಕಾದ ಚಿತ್ರ.
PALESTINE ’36 Trailer | TIFF 2026
**************************************
