ಅಂಬೇಡ್ಕರ್ ಎಲ್ಲರಿಗೂ ನ್ಯಾಯ ತಂದ ಮಹಾನ್ ಚಿಂತಕ: ಅನಿಲ್ ಕುಮಾರ್ ಕಂಕನಾಡಿ

ಬೆಳ್ತಂಗಡಿ: ಕಾರ್ಮಿಕರ ಹಕ್ಕುಗಳಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ನಿರಂತರ ಹೋರಾಟ ನಡೆಸಿ ನ್ಯಾಯ ಒದಗಿಸಿದ್ದಾರೆ. ಅವರ ಹೋರಾಟದ ಫಲವಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಿಸುವಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಕಂಕನಾಡಿ ಹೇಳಿದರು.

ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿಯ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ಎಲ್ಲರಿಗೂ ನ್ಯಾಯ ಒದಗಿಸಿದ ಮಹಾನ್ ಜ್ಞಾನಿ, ಭಾರತದ ಅಮೂಲ್ಯ ರತ್ನ” ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಮಾತನಾಡಿ, ಕಾರ್ಮಿಕರ ಬಗ್ಗೆ ಅನುಕಂಪ ತೋರಿಸುವುದಕ್ಕಿಂತ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು. “ಕಾರ್ಮಿಕರ ಶ್ರಮದಿಂದಲೇ ದೇಶ ನಿರ್ಮಾಣವಾಗಿದೆ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು” ಎಂದರು. ಅಂಬೇಡ್ಕರ್ ದುಡಿಯುವ ವರ್ಗದ ಪರ ಹಲವಾರು ಕಾನೂನುಗಳನ್ನು ಸಂವಿಧಾನದ ಮೂಲಕ ರೂಪಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು. “ಪೌರ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗುವುದು ಅಗತ್ಯ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಪೌರ ಕಾರ್ಮಿಕರ ಮಕ್ಕಳಾದ ಗಗನ್ ಕುಮಾರ್, ಹರ್ಷಿತಾ, ಕೀರ್ತನಾ, ಶ್ರಾವ್ಯ, ಧನುಶ್ರೀ, ಕಿರಣ್ ಹಾಗೂ ಹರಿಣಾಕ್ಷಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಎಸ್.ಪಿ., ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂಚಾಲಕ ಬಿ.ಕೆ. ವಸಂತ, ಬೆಳ್ತಂಗಡಿ ತಾಲೂಕು ಘಟಕ ಸಂಚಾಲಕ ರಮೇಶ್ ಆರ್., ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷೆ ರೇಣುಕಾ, ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಪ್ರೇಮ್ ಬಲ್ಲಾಳ್ ಬಾಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಘದ ಗೌರವ ಸಲಹೆಗಾರ ಶೇಖರ್ ಲಾಯಿಲಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು. ಪಟ್ಟಣ ಪಂಚಾಯತ್ ಚಾಲಕ ಶಿವಕುಮಾರ್ ಸ್ವಾಗತಿಸಿದರು.

ಇದನ್ನೂ ನೋಡಿ : “(ಲೇಬರ್‌ ಕೋಡ್ಸ್‌) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media

Donate Janashakthi Media

Leave a Reply

Your email address will not be published. Required fields are marked *