ಸ್ವಾಮಿ ವಿವೇಕಾನಂದರ ಹೆಸರು ಕೇಳಿದಾಗ ನಮಗೆ ಮೊದಲು ನೆನಪಾಗುವುದು ಆಧ್ಯಾತ್ಮಿಕತೆ, ದೇಶಭಕ್ತಿ ಮತ್ತು ಯುವಕರಿಗೆ ನೀಡಿದ ಪ್ರೇರಣೆ. ಆದರೆ ಅವರ ಕುಟುಂಬದಲ್ಲೇ ಬ್ರಿಟಿಷರ ಎದೆ ನಡುಗಿಸಿದ ಮತ್ತೊಬ್ಬ ವ್ಯಕ್ತಿ ಇದ್ದರು ಅವರೇ ಭೂಪೇಂದ್ರನಾಥ ದತ್ತ. ವಿವೇಕಾನಂದರ ಕಿರಿಯ ಸಹೋದರರಾದ ಭೂಪೇಂದ್ರನಾಥರು ಕೇವಲ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ, ಮಾರ್ಕ್ಸವಾದಿ ಚಿಂತಕ, ಸಮಾಜಶಾಸ್ತ್ರಜ್ಞ ಮತ್ತು ಲೇಖಕರೂ ಆಗಿದ್ದರು. ಜೈಲು ಜೀವನ, ವಿದೇಶ ಪ್ರವಾಸ, ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಲೆನಿನ್ವರಗೂ ತಲುಪಿದ ಅವರ ರಾಜಕೀಯ ಚಿಂತನೆ ಇವೆಲ್ಲವೂ ಅವರ ಬದುಕನ್ನು ವಿಶೇಷವಾಗಿಸಿವೆ. ಇತಿಹಾಸ ಹೆಚ್ಚು ಹೇಳದ ಈ ವ್ಯಕ್ತಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಸ್ಥಾನ ಹೊಂದಿದ್ದಾರೆ.
– ಗುರುರಾಜ ದೇಸಾಯಿ
ವಿವೇಕಾನಂದರ ಭಾಷಣಗಳು ಮತ್ತು ಚಿಂತನೆಗಳು ಇಂದಿಗೂ ಅನೇಕ ಯುವಕರಿಗೆ ದಾರಿದೀಪವಾಗಿವೆ, ಸ್ಪೂರ್ತಿಯಾಗಿವೆ. ದೇಶದ ಸ್ವಾಭಿಮಾನ, ಆತ್ಮಗೌರವ ಮತ್ತು ಸಮಾಜದ ಜಾಗೃತಿಯ ಕುರಿತು ಅವರು ಮೂಡಿಸಿದ ಅರಿವು, ಅವರನ್ನು ಕೇವಲ ಸನ್ಯಾಸಿಯಲ್ಲ, ಒಂದು ಯುಗದ ಪ್ರೇರಣಾಶಕ್ತಿಯನ್ನಾಗಿ ರೂಪಿಸಿತು. ಭಾರತದ ಯುವಶಕ್ತಿಯನ್ನು ಎಚ್ಚರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಆದರೆ ಅವರ ಕಿರಿಯ ಸಹೋದರ ಭೂಪೇಂದ್ರನಾಥ ದತ್ತ ಅವರ ಜೀವನವೂ ಅದೇ ಮಟ್ಟಿಗೆ ಅದ್ಭುತವಾಗಿತ್ತು ಬಹುಶಃ ಇನ್ನಷ್ಟು ಸಾಹಸಮಯವಾಗಿಯೂ ಇತ್ತು. ಅಣ್ಣನಂತೆ ಅವರು ಆಧ್ಯಾತ್ಮಿಕ ಹಾದಿಯನ್ನು ಹಿಡಿಯಲಿಲ್ಲ; ಬದಲಾಗಿ ಬ್ರಿಟಿಷರ ವಿರುದ್ಧ ನೇರ ಹೋರಾಟದ ಕ್ರಾಂತಿಕಾರಿ ಮಾರ್ಗವನ್ನು ಆರಿಸಿಕೊಂಡರು.
ಭೂಪೇಂದ್ರನಾಥ ದತ್ತ ಅವರು ಲಾನ್ಸ್ಬರಿಗೆ ಒಂದು ಮಹತ್ವದ ಪತ್ರವನ್ನು ಬರೆಯುತ್ತಿದ್ದರು. ಜರ್ಮನಿಯಿಂದ ಬ್ರಿಟನ್ಗೆ, ಅಲ್ಲಿಂದ ಭಾರತಕ್ಕೆ ಪ್ರಯಾಣಿಸಲು ಪಾಸ್ಪೋರ್ಟ್ ಪಡೆಯಲು ಸಹಾಯ ಕೋರಿ ಅವರು ಮನವಿ ಮಾಡಿದ್ದರು. ಆದರೆ, ವಿಶ್ವಪ್ರಸಿದ್ಧ ಸ್ವಾಮಿ ವಿವೇಕಾನಂದರ ತಮ್ಮ ಎಂಬ ಅತ್ಯಂತ ಮಹತ್ವದ ವಿವರವನ್ನು ಅವರು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿರಲಿಲ್ಲ. ಆ ಪತ್ರದ ಸಾರಾಂಶ ಹೀಗಿತ್ತು:
ಇದನ್ನೂ ಓದಿ: ಮಣಿಪುರ ಜನಾಂಗೀಯ ಹಿಂಸಾಚಾರ: 58,821 ಜನರು ಸ್ಥಳಾಂತರ, 217 ಸಾವು
“ನಾನು ಭೂಪೇಂದ್ರನಾಥ ದತ್ತ. ನನ್ನ ಪಾಸ್ಪೋರ್ಟ್ ಅರ್ಜಿಗೆ ಬೇಕಾದ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ್ದೇನೆ. ಆದರೂ ನನ್ನ ಅರ್ಜಿ ಲಂಡನ್ಗೆ ಕೂಡ ಕಳುಹಿಸಲ್ಪಟ್ಟಿಲ್ಲವೆಂದು ತೋರುತ್ತಿದೆ. ಕಲ್ಕತ್ತಾದಲ್ಲಿರುವ ಸ್ನೇಹಿತರು ನನ್ನ ವಾಪಸಿಗಾಗಿ ಬೆಂಗಾಲ್ ಸರ್ಕಾರವನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿದಿದ್ದೇನೆ. ನನ್ನ ವಿಷಯಕ್ಕೆ ಬಂದರೆ, ನಾನು ಮೂಲತಃ ಪ್ರಕೃತಿ ವಿಜ್ಞಾನಿ; ಭಾರತದಲ್ಲಿ ಮಾನವಶಾಸ್ತ್ರೀಯ ಸಂಶೋಧನೆಗೆ ನನ್ನ ಸಮಯವನ್ನು ಮೀಸಲಿಡಲು ಬಯಸುತ್ತೇನೆ; ಮತ್ತು ಸಾಮಾಜಿಕ-ಆರ್ಥಿಕ ಪ್ರಶ್ನೆಗಳ ಬಗ್ಗೆ ನನಗೆ ಮಾರ್ಕ್ಸವಾದಿ ದೃಷ್ಟಿಕೋನವಿದೆ.”
ಈ ಪತ್ರ ಕೇವಲ ಪಾಸ್ಪೋರ್ಟ್ಗೆ ಸಂಬಂಧಿಸಿದ ಮನವಿಯಲ್ಲ; ಅದು ಬ್ರಿಟಿಷರ ಅನುಮಾನ, ನಿಗಾವಳಿ ಮತ್ತು ರಾಜಕೀಯ ಒತ್ತಡದ ನಡುವೆಯೂ ತಮ್ಮ ಬೌದ್ಧಿಕ ಮತ್ತು ರಾಜಕೀಯ ನಿಲುವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವೂ ಆಗಿತ್ತು.
ಭೂಪೇಂದ್ರನಾಥ ದತ್ತ (1880–1961) ಒಬ್ಬ ಕ್ರಾಂತಿಕಾರಿ, ಸಮಾಜಶಾಸ್ತ್ರಜ್ಞ, ಲೇಖಕ ಹಾಗೂ ಸಮಾಜವಾದಿ ಚಿಂತಕರಾಗಿದ್ದರು. 1880ರ ಸೆಪ್ಟೆಂಬರ್ 4ರಂದು ಜನಿಸಿದ ಅವರು, ಸ್ವಾಮಿ ವಿವೇಕಾನಂದರ ಆರು ಸಹೋದರ-ಸಹೋದರಿಯರಲ್ಲಿ ಕಿರಿಯವರು; ವಿವೇಕಾನಂದರಿಗಿಂತ 17 ವರ್ಷ ಕಿರಿಯರು. ಬಾಲ್ಯದಲ್ಲಿಯೇ ಅವರು ಬ್ರಿಟಿಷರನ್ನು ಹೊರಹಾಕುವ ಉದ್ದೇಶದೊಂದಿಗೆ ಬೆಂಗಾಲ್ನ ಸಶಸ್ತ್ರ ಕ್ರಾಂತಿಕಾರಿ ಚಳವಳಿಗೆ ಸೇರಿದರು.
ಅವರು ಅನುಶೀಲನ ಸಮಿತಿಯೊಂದಿಗೆ ಆಪ್ತ ಸಂಬಂಧ ಹೊಂದಿದ್ದು, ಅದರ ಪ್ರಕಟಣೆಯಾದ ಜುಗಾಂತರ್ ಪತ್ರಿಕೆಯನ್ನು ನಿರ್ವಹಿಸುತ್ತಿದ್ದರು. ಈ ಪತ್ರಿಕೆ ಯುವಕರಲ್ಲಿ ಸ್ವಾತಂತ್ರ್ಯದ ಜ್ವಾಲೆಯನ್ನು ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿತು. 1907ರ ಜುಲೈ 5ರಂದು ತಮ್ಮ ಬರಹಗಳ ಕಾರಣದಿಂದ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿ, ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾದರು.

ಈ ಶಿಕ್ಷೆ ಸಾರ್ವಜನಿಕ ಗಮನ ಸೆಳೆಯಿತು. ಭೂಪೇಂದ್ರನಾಥರು ಜೈಲಿನಲ್ಲಿದ್ದಾಗ, ನೂರಾರು ಮಹಿಳೆಯರು ಅವರ ತಾಯಿಯ ಧೈರ್ಯ ಮತ್ತು ತ್ಯಾಗಮಯ ಮಗನನ್ನು ಬೆಳೆಸಿದ ಪಾತ್ರವನ್ನು ಗೌರವಿಸಲು ಸಾರ್ವಜನಿಕ ಸಭೆ ಆಯೋಜಿಸಿದರು. ಅವರಿಗೆ ಬೆಳ್ಳಿಯ ತಟ್ಟೆಯಲ್ಲಿ ಗೌರವಪತ್ರವನ್ನು ನೀಡಲಾಯಿತು. ದತ್ತರು ಹಾಸ್ಯವಾಗಿ ಹೇಳಿದ್ದೇನಂದರೆ, ಪ್ರಸಿದ್ಧ ವಿವೇಕಾನಂದರ ತಾಯಿಯಾಗಿದ್ದರೂ ಅವರಿಗೆ ಇಷ್ಟು ಪ್ರೀತಿ ಮತ್ತು ಗೌರವದ ಅನುಭವ ಆಗಿರಲಿಲ್ಲ.
ಬ್ರಿಟಿಷ್ ಸರ್ಕಾರ ಅವರಿಗೆ ಸಾಮಾನ್ಯ ರಾಜಕೀಯ ವಿರೋಧಿಯಂತೆ ನೋಡಲಿಲ್ಲ; ಅವರು ಅಪಾಯಕಾರಿ ಕ್ರಾಂತಿಕಾರಿಯೆಂದು ಭಯಪಟ್ಟರು. 1908ರಲ್ಲಿ ಬಿಡುಗಡೆಯಾದ ನಂತರ, “ಅತ್ಯಂತ ಅಪಾಯಕಾರಿ” ದತ್ತರನ್ನು ದೇಶದಿಂದ ಹೊರಹಾಕುವಂತೆ ಬ್ರಿಟಿಷ್ ಸರ್ಕಾರ ಬೆಂಗಾಲ್ ಆಡಳಿತಕ್ಕೆ ನಿರ್ದೇಶಿಸಿತು.
1908ರ ಡಿಸೆಂಬರ್ನಲ್ಲಿ, ದತ್ತರು ಬೆಲೂರು ಮಠದ ರಾಮಕೃಷ್ಣ ಆಶ್ರಮದಲ್ಲಿ “ಬಸಂತ ಕುಮಾರ್ ಬ್ರಹ್ಮಚಾರಿ” ಎಂಬ ಹೆಸರಿನಲ್ಲಿ ಇದ್ದಾರೆ ಎಂದು ಬೆಂಗಾಲ್ ಸರ್ಕಾರ ವರದಿ ನೀಡಿತು. ಆದರೆ 1909ರ ಜನವರಿ 1ರಂದು ನ್ಯೂಯಾರ್ಕ್ನ ಬ್ರಿಟಿಷ್ ಗುಪ್ತಚರ ಅಧಿಕಾರಿಯೊಬ್ಬರು ಸಲ್ಲಿಸಿದ ವರದಿ ಸತ್ಯವನ್ನು ಬಹಿರಂಗಪಡಿಸಿತು—ದತ್ತರು ಈಗಾಗಲೇ ಐದು-ಆರು ತಿಂಗಳಿನಿಂದ ಅಮೆರಿಕದಲ್ಲಿದ್ದರು. ಅಂದರೆ, ಅವರು ತಿಂಗಳುಗಳ ಹಿಂದೆಯೇ ರಹಸ್ಯವಾಗಿ ಭಾರತವನ್ನು ತೊರೆದಿದ್ದರು.
ಈ ರಹಸ್ಯ ಪ್ರಯಾಣವನ್ನು ಸ್ವಾಮಿ ವಿವೇಕಾನಂದರ ಐರಿಷ್ ಮೂಲದ ಶಿಷ್ಯೆ ಸಿಸ್ಟರ್ ನಿವೇದಿತಾ ವ್ಯವಸ್ಥೆ ಮಾಡಿದ್ದರು. ನ್ಯೂಯಾರ್ಕ್ನಲ್ಲಿ ಅವರು ಭಾರತೀಯ ರಾಷ್ಟ್ರೀಯ ಚಟುವಟಿಕೆಗಳ ಕೇಂದ್ರವಾಗಿದ್ದ ಇಂಡಿಯಾ ಹೌಸ್ನಲ್ಲಿ ವಾಸವಿದ್ದು, ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಅಲ್ಲಿ ಅವರ ರಾಜಕೀಯ ಚಿಂತನೆ ಇನ್ನಷ್ಟು ತೀಕ್ಷ್ಣವಾಯಿತು.

ಪ್ರಥಮ ವಿಶ್ವಯುದ್ಧದ ಸಮಯದಲ್ಲಿ, ಬರ್ಲಿನ್ನ ಭಾರತೀಯ ಕ್ರಾಂತಿಕಾರಿಗಳು ಬ್ರಿಟನ್ ವಿರುದ್ಧ ಜರ್ಮನ್ ಸರ್ಕಾರದೊಂದಿಗೆ ಸಹಕರಿಸಿದರು. ದತ್ತರೂ ಬರ್ಲಿನ್ಗೆ ತೆರಳಿ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲೇ ಅವರು ಇಂಡೋ- ಜರ್ಮನ್ ಸಂಚಿನಲ್ಲೂ ಭಾಗಿಯಾದರು. ಬ್ರಿಟಿಷರ ದೃಷ್ಟಿಯಲ್ಲಿ ಅವರು ಕೇವಲ ರಾಜಕೀಯ ವಿರೋಧಿಯಲ್ಲ, ಬೃಹತ್ ಮಟ್ಟದ ಅಂತಾರಾಷ್ಟ್ರೀಯ ಕ್ರಾಂತಿಕಾರಿ ಜಾಲದ ಭಾಗವಾಗಿದ್ದರು.
1917ರ ರಷ್ಯಾದ ಅಕ್ಟೋಬರ್ ಕ್ರಾಂತಿ ಬರ್ಲಿನ್ನ ನಾಯಕರ ಮೇಲೆ ಆಳವಾದ ಪರಿಣಾಮ ಬೀರಿತು. ಮಾರ್ಕ್ಸವಾದಿ ಚಿಂತನೆಗೆ ಆಕರ್ಷಿತರಾದ ಅವರು ಬೋಲ್ಶೆವಿಕ್ ಪಕ್ಷ ಮತ್ತು ಕಮ್ಯುನಿಸ್ಟ್ ಇಂಟರ್ನ್ಯಾಷನಲ್ನೊಂದಿಗೆ ಸಂಪರ್ಕ ಬೆಳೆಸಿದರು. ಈ ಅವಧಿಯನ್ನು ದತ್ತರು ತಮ್ಮ ಬಂಗಾಳಿ ಕೃತಿ ಅಪ್ರಕಟಿತ ರಾಜಕೀಯ ಇತಿಹಾಸದಲ್ಲಿ ದಾಖಲಿಸಿದ್ದಾರೆ.
ಬರ್ಲಿನ್ ಸಮಿತಿಯಿಂದ ವಿರೇಂದ್ರನಾಥ ಚಟ್ಟೋಪಾಧ್ಯಾಯ (“ಚಟ್ಟೋ”) ಮತ್ತು ದತ್ತರು ಲೆನಿನ್ ಅವರನ್ನು ಭೇಟಿಯಾಗಲು ಮಾಸ್ಕೋಗೆ ಪ್ರಯಾಣಿಸಿದರು. ಭಾರತೀಯ ವಿಮೋಚನೆ ಕುರಿತಾಗಿ ದತ್ತರು ಬರೆದ ಪ್ರಬಂಧಕ್ಕೆ ಲೆನಿನ್ ಪ್ರತಿಕ್ರಿಯೆಯನ್ನೂ ನೀಡಿದ್ದರು. ಆ ಉತ್ತರ ಲೆನಿನ್ ಅವರ ಸಂಗ್ರಹಿತ ಕೃತಿಗಳಲ್ಲಿ ಸೇರಿಸಲಾಗಿದೆ. ಭಾರತೀಯ ಕ್ರಾಂತಿಕಾರಿಯೊಬ್ಬರ ಆಲೋಚನೆಗೆ ಲೆನಿನ್ ಸ್ಪಂದಿಸಿದ್ದೇ ದತ್ತರ ಬೌದ್ಧಿಕ ಆಳವನ್ನು ತೋರಿಸುತ್ತದೆ.

ಭಾರತೀಯ ಗುಂಪಿನೊಳಗೆ ಏಕಾಭಿಪ್ರಾಯ ಇರಲಿಲ್ಲ—ಕೆಲವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಳಗೆ ಕೆಲಸ ಮಾಡಲು ಒಲವು ತೋರಿದರೆ, ಇನ್ನು ಕೆಲವರು ಸ್ವತಂತ್ರ ಕಮ್ಯುನಿಸ್ಟ್ ಪಕ್ಷ ರಚನೆಗೆ ಬೆಂಬಲಿಸಿದರು. ನಂತರ ದತ್ತರು ಹೀಗೆ ಚಿಂತಿಸಿದರು: “ಕೊನೆಗೆ, ಮಾಸ್ಕೋದಲ್ಲಿನ ನಮ್ಮ ಅನುಭವಗಳು ಭಾರತದಲ್ಲಿನ ಕ್ರಾಂತಿಕಾರಿ ಚಳವಳಿಯನ್ನು ಭಾರತದ ಸ್ವಂತ ಪರಿಸ್ಥಿತಿಗಳ ಪ್ರಕಾರವೇ ರೂಪಿಸಬೇಕು ಎಂದು ನಮಗೆ ಕಲಿಸಿತು.”
1924ರಲ್ಲಿ, ಬ್ರಿಟನ್ನಲ್ಲಿ ಇಳಿಯದೆ ಭಾರತಕ್ಕೆ ಪ್ರಯಾಣಿಸಲು ದತ್ತರಿಗೆ ವೀಸಾ ದೊರೆಯಿತು. 16 ವರ್ಷಗಳ ವಿದೇಶ ವಾಸದ ನಂತರ ಅವರು ಭಾರತಕ್ಕೆ ಮರಳಿ ರೈತರು ಮತ್ತು ಕಾರ್ಮಿಕರ ನಡುವೆ ಸಂಘಟಕರಾದರು.
ಅವರು ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರಲಿಲ್ಲವಾದರೂ, ಮಾರ್ಕ್ಸವಾದಿ ಅಧ್ಯಯನ ವಲಯಗಳನ್ನು ರಚಿಸಿ ತಮ್ಮ ಸೈದ್ಧಾಂತಿಕ ಕಾರ್ಯವನ್ನು ಮುಂದುವರಿಸಿದರು. ಅವರು ರಾಷ್ಟ್ರೀಯ ಚಳವಳಿಯಲ್ಲೂ ಭಾಗವಹಿಸಿ, ಎಐಸಿಸಿ ಸದಸ್ಯರಾದರು, ಮೀರಟ್ ಸಂಚು ಪ್ರಕರಣದ ಆರೋಪಿತ ಕಮ್ಯುನಿಸ್ಟರಿಗೆ ಸಕ್ರಿಯ ಬೆಂಬಲ ನೀಡಿದರು, ಕಿಸಾನ್ ಸಭೆಯ ಅಧ್ಯಕ್ಷರಾಗಿದ್ದರು ಹಾಗೂ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಉಪಾಧ್ಯಕ್ಷರಾಗಿದ್ದರು.
ಭೂಪೇಂದ್ರನಾಥರು ಕೇವಲ ಶಸ್ತ್ರಸಜ್ಜಿತ ಹೋರಾಟಗಾರರಷ್ಟೇ ಅಲ್ಲ; ಅವರು ಗಂಭೀರ ಚಿಂತಕರೂ ಆಗಿದ್ದರು. ಭಾರತೀಯ ಸಮಾಜ, ಸಂಸ್ಕೃತಿ ಮತ್ತು ರಾಜಕೀಯದ ಬಗ್ಗೆ ಹಲವು ಕೃತಿಗಳನ್ನು ಬರೆದರು. Swami Vivekananda: Patriot-Prophet ಎಂಬ ಪುಸ್ತಕದಲ್ಲಿ ತಮ್ಮ ಅಣ್ಣನನ್ನು ದೇಶಭಕ್ತ ಮತ್ತು ಕ್ರಾಂತಿದರ್ಶಿಯಾಗಿ ವಿವರಿಸಿದರು. “Swami Vivekananda – The Socialist” ಎಂಬ ಕೃತಿ ಬ್ರಿಟಿಷ್ ಸರ್ಕಾರದಿಂದ ನಿಷೇಧಿಸಲ್ಪಟ್ಟಿತೆಂಬುದೂ ಗಮನಾರ್ಹ.

ಸ್ವಾಮಿ ವಿವೇಕಾನಂದರ ಪ್ರಭಾವವೇ ಭೂಪೇಂದ್ರನಾಥರ ರಾಜಕೀಯ ಚಿಂತನೆಗೆ ಮೂಲವಾಗಿತ್ತು. ಬ್ರಿಟಿಷರ ವಿರುದ್ಧ ನೇರ ರಾಜಕೀಯ ಘೋಷಣೆಗಳನ್ನು ವಿವೇಕಾನಂದರು ನೀಡದಿದ್ದರೂ, ಅವರ ಬರಹಗಳು ಯುವ ಕ್ರಾಂತಿಕಾರಿಗಳಿಗೆ ಅಪಾರ ಪ್ರೇರಣೆ ನೀಡಿದ್ದವು. ಬ್ರಿಟಿಷರೇ ಗಮನಿಸಿದ್ದಂತೆ, ಅನೇಕ ರಾಜಕೀಯ ಕೈದಿಗಳ ಜೈಲು ಕೋಣೆಗಳಲ್ಲಿ ವಿವೇಕಾನಂದರ ಪುಸ್ತಕಗಳು ಕಂಡುಬರುತ್ತಿದ್ದವು. ಆತ್ಮೋನ್ನತಿ ಮತ್ತು ರಾಷ್ಟ್ರೀಯ ಚೇತನದ ನಡುವಿನ ಸಂಬಂಧವನ್ನು ದತ್ತರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದರು.
ಸ್ವಾತಂತ್ರ್ಯದ ನಂತರ ಅವರು ಬರವಣಿಗೆ ಮತ್ತು ಸಂಶೋಧನೆಗೆ ತೊಡಗಿಕೊಂಡು, ಭಾರತೀಯ ಸಮಾಜ, ಇತಿಹಾಸ ಮತ್ತು ಸಂಸ್ಕೃತಿಯನ್ನು ಮಾರ್ಕ್ಸವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಿದರು. ಫ್ರಿಡ್ರಿಕ್ ಎಂಗೆಲ್ಸ್ ಅವರ ಸೋಶಲಿಸಂ: ಯೂಟೋಪಿಯನ್ ಅಂಡ್ ಸೈಂಟಿಫಿಕ್ ಕೃತಿಯನ್ನು ಬಂಗಾಳಿಗೆ ಅನುವಾದಿಸಿದರು. ಸಮಾಜ ಪರಿವರ್ತನೆಗೆ ಬೌದ್ಧಿಕ ಹೋರಾಟವೂ ಅಗತ್ಯವೆಂದು ಅವರು ನಂಬಿದ್ದರು.
ಬಂಗಾಳದಲ್ಲಿನ ತಮ್ಮ ಕುಟುಂಬದ ಮನೆಯಲ್ಲಿ ತಮ್ಮ ಸಹೋದರ ಮಹೇಂದ್ರನಾಥರೊಂದಿಗೆ ಸರಳ ಜೀವನ ನಡೆಸಿದ ಭೂಪೇಂದ್ರನಾಥ ದತ್ತರು, 1961ರಲ್ಲಿ 81ನೇ ವಯಸ್ಸಿನಲ್ಲಿ ನಿಧನರಾದರು.
ಹೀಗಾಗಿ, ಸ್ವಾಮಿ ವಿವೇಕಾನಂದರ ತಮ್ಮ ಭೂಪೇಂದ್ರನಾಥ ದತ್ತ ಕೇವಲ “ಒಬ್ಬ ಸಹೋದರ” ಅಲ್ಲ; ಅವರು ಸ್ವತಂತ್ರ ಭಾರತದ ಕನಸಿಗಾಗಿ ಬದುಕನ್ನೇ ಪಣಕ್ಕಿಟ್ಟ ಕ್ರಾಂತಿಕಾರಿ. ಬ್ರಿಟಿಷರು ಭಯಪಟ್ಟ, ಇತಿಹಾಸ ಕಡಿಮೆ ಮಾತನಾಡಿದ, ಆದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಗುರುತು ಬಿಟ್ಟ ವ್ಯಕ್ತಿ. ಅವರ ಜೀವನವು ನಮಗೆ ಒಂದು ಮಹತ್ವದ ಪಾಠವನ್ನು ಹೇಳುತ್ತದೆ.
ಇದನ್ನೂ ನೋಡಿ: ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media
