ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದ ಮಹಿಳೆ!

ವಿಜಯನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ ಯೋಜನೆ’ಯ ಹಣವನ್ನು ಸದುಪಯೋಗಪಡಿಸಿಕೊಂಡು ಮಹಿಳೆಯೊಬ್ಬರು ಐಸ್‌ಕ್ರೀಮ್ ಉದ್ಯಮ ಆರಂಭಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ನಡೆದಿದೆ. ಗೃಹಲಕ್ಷ್ಮಿ
ಹರಾಳು ಗ್ರಾಮದ ನಿವಾಸಿ ಎನ್. ವಿಶಾಲಾಕ್ಷಿ ಅವರು ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದವರು. ಅಲ್ಪ ಆದಾಯದಲ್ಲಿ ಸಂಸಾರ ನಿಭಾಯಿಸುವುದೇ ಅವರಿಗೆ ದೊಡ್ಡ ಸವಾಲಾಗಿತ್ತು. ಇಂತಹ ಸಂದರ್ಭದಲ್ಲಿ ಆಸರೆಯಾಗಿ ಬಂದಿದ್ದು ಗೃಹಲಕ್ಷ್ಮಿ ಯೋಜನೆ. ಪ್ರತಿ ತಿಂಗಳು ತಮ್ಮ ಖಾತೆಗೆ ಜಮೆಯಾಗುತ್ತಿದ್ದ 2,000 ರೂಪಾಯಿಗಳನ್ನು ಅನಗತ್ಯವಾಗಿ ಖರ್ಚು ಮಾಡದ ವಿಶಾಲಾಕ್ಷಿ, ಅದನ್ನು ಭವಿಷ್ಯದ ಬಂಡವಾಳವಾಗಿ ಉಳಿಸುವ ನಿರ್ಧಾರ ಮಾಡಿದರು. ಸುಮಾರು ಒಂದು ವರ್ಷದ ಹಣವನ್ನು ಒಗ್ಗೂಡಿಸಿ, ಇಂದು ಅವರು ಸ್ವಂತ ಐಸ್‌ಕ್ರೀಮ್ ಅಂಗಡಿಯ ಮಾಲೀಕರಾಗಿ ಬೆಳೆದಿದ್ದಾರೆ.

ಬಿಸಿಲ ನಾಡಿನಲ್ಲಿ ತಂಪು ಉದ್ಯಮ

ವಿಜಯನಗರ ಜಿಲ್ಲೆಯ ಕಡು ಬಿಸಿಲನ್ನು ಗಮನದಲ್ಲಿಟ್ಟುಕೊಂಡು ವಿಶಾಲಾಕ್ಷಿ ಅವರು ಐಸ್‌ಕ್ರೀಮ್ ಉದ್ಯಮವನ್ನು ಆರಿಸಿಕೊಂಡರು. ತಮ್ಮ ಪತಿ ಬಸವರಾಜ ಅವರ ಬೆಂಬಲದೊಂದಿಗೆ ಕಿಶನ್ ಎಂಟರ್ಪ್ರೈಸ್ ವಿತರಕರನ್ನು ಸಂಪರ್ಕಿಸಿ ವ್ಯಾಪಾರ ಆರಂಭಿಸಿದರು. ಪ್ರಸ್ತುತ ಇವರ ಅಂಗಡಿಯಲ್ಲಿ:

ಇದನ್ನೂ ಓದಿ: ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ: ಡಿಸಿಆರ್‌ಇ ಇನ್‌ಸ್ಪೆಕ್ಟರ್ ಆರೋಪ

ಚಾಕೋಬಾರ್ ಮತ್ತು ಕುಲ್ಫಿ

ವಿವಿಧ ಫ್ಲೇವರ್‌ಗಳ ಐಸ್‌ ಕ್ಯಾಂಡಿ

ಕೋನ್ ಮತ್ತು ಕಪ್ ಐಸ್‌ಕ್ರೀಮ್‌ಗಳು

ತಂಪು ಪಾನೀಯಗಳು ಲಭ್ಯವಿವೆ.

ಗ್ರಾಮದ ಮಕ್ಕಳು ಹಾಗೂ ಹಿರಿಯರು ಇವರ ಅಂಗಡಿಯ ಖಾಯಂ ಗ್ರಾಹಕರಾಗಿದ್ದು, ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.

ಕುಟುಂಬದ ಬೆಂಬಲ – ಆರ್ಥಿಕ ಸಬಲೀಕರಣ

“ಸರ್ಕಾರ ನೀಡುವ ಹಣ ಕೇವಲ ಅಡುಗೆ ಮನೆಗೆ ಸೀಮಿತವಾಗಬಾರದು. ಅದು ನಮ್ಮನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಬೇಕು ಎನ್ನುವುದು ನಮ್ಮ ಆಶಯವಾಗಿತ್ತು,” ಎನ್ನುತ್ತಾರೆ ವಿಶಾಲಾಕ್ಷಿ ಅವರ ಪತಿ ಬಸವರಾಜ.

ಕೂಲಿ ಕೆಲಸದ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಗೌರವಯುತ ಬದುಕು ಕಟ್ಟಿಕೊಂಡಿರುವ ಈ ದಂಪತಿಯ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇತರರಿಗೆ ಸ್ಫೂರ್ತಿಯಾದ ವಿಶಾಲಾಕ್ಷಿ

“ಸರ್ಕಾರದ ನೆರವು ನಮ್ಮ ಪಾಲಿಗೆ ವರದಾನವಾಗಿದೆ. ಸಣ್ಣ ಮೊತ್ತವನ್ನು ಯೋಜಿತವಾಗಿ ಉಳಿಸಿದರೆ ಸ್ವಂತ ಉದ್ಯೋಗ ಮಾಡಲು ಸಾಧ್ಯ ಎಂಬುದಕ್ಕೆ ನನ್ನ ಈ ಪುಟ್ಟ ಅಂಗಡಿಯೇ ಸಾಕ್ಷಿ,” ಎಂದು ವಿಶಾಲಾಕ್ಷಿ ಸಂತಸ ಹಂಚಿಕೊಂಡಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಸೃಜನಾತ್ಮಕವಾಗಿ ಬಳಸಿಕೊಂಡು ಸಬಲರಾಗಬಹುದು ಎಂಬುದನ್ನು ಸಾಬೀತುಪಡಿಸಿರುವ ಇವರು, ಇಂದು ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಇದನ್ನೂ ನೋಡಿ: ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media

Donate Janashakthi Media

Leave a Reply

Your email address will not be published. Required fields are marked *