ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ: ಡಿಸಿಆರ್‌ಇ ಇನ್‌ಸ್ಪೆಕ್ಟರ್ ಆರೋಪ

ಬೆಂಗಳೂರು: ಗೃಹ ಇಲಾಖೆಯ ಅಧೀನದಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಈ ಬಗ್ಗೆ ಡಿಸಿಆರ್‌ಇನ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರಿಗೆ ಬರೆದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಡಿಸಿಆರ್‌ಇ (ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ) ಇನ್‌ಸ್ಪೆಕ್ಟರ್ ಟಿ. ಆರ್. ಶ್ರೀನಿವಾಸ್ ಆರೋಪಿಸಿದ್ದಾರೆ.

ಈ ಸಂಬಂಧ ಇತ್ತೀಚೆಗೆ ವೀಡಿಯೊವನ್ನು ಕೂಡಾ ಬಿಡುಗಡೆ ಮಾಡಿರುವ ಅವರು, ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ಪ್ರಕರಣ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ಕಿರುಕುಳ ಆಗುತ್ತಿದೆ ಎಂದು ದೂರಿದ್ದಾರೆ.

ಟಿ.ಆರ್.ಶ್ರೀನಿವಾಸ್ ಅವರು ವೀಡಿಯೊದಲ್ಲಿ ಡಿಸಿಆರ್‌ಇನ ಎಸ್ಪಿ ಕರಿಬಸನಗೌಡ ಹಾಗೂ ಡಿವೈಎಸ್ಪಿ ಮಹೇಶ್ವರಗೌಡ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಮೇಲ್ಜಾತಿಯ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಮತ್ತು ತನ್ನ ವಿರುದ್ಧ ಸುಳ್ಳು ದೂರುಗಳನ್ನು ಸ್ವೀಕರಿಸಿ, ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಎಂದು ಇನ್‌ಸ್ಪೆಕ್ಟರ್ ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ-ಇರಾನ್ ಮಾತುಕತೆ: ಪಾಕಿಸ್ತಾನದ ಪಾತ್ರಕ್ಕೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ

ತನ್ನನ್ನು ಅಧಿಕೃತವಾಗಿ ಡಿಸಿಆರ್‌ಇನಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ. ಆದರೆ, ಎಸ್ಪಿ ಕರಿಬಸನಗೌಡರು ಹಾಗೂ ಕೆಳಹಂತದ ಡಿವೈಎಸ್ಪಿ ಮಹೇಶ್ವರಗೌಡ ಅವರು, ತನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆಯೆಂದು ನಕಲಿ ದಾಖಲೆ ಸೃಷ್ಟಿಸಿ ಕಳಿಸಿದ್ದಾರೆ. ಇದು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ( ಕೆಎಟಿ) ಆದೇಶಕ್ಕೆ ವಿರುದ್ಧವಾದುದಾಗಿದೆ. 20 ವರ್ಷ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಕೆಲಸ ಮಾಡಿದ್ದು, ಈಗ ನನ್ನ ವಿರುದ್ಧ ಕುತಂತ್ರ ನಡೆಸಲಾಗುತ್ತಿದೆ ಎಂದು ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.

ದಲಿತರ ಪರ ಕೆಲಸ ಮಾಡುವುದು, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ದೊಡ್ಡ ತಪ್ಪು ಅಂತನಿಸುತ್ತದೆ. ಅದರಲ್ಲೂ ನಾವು ದಲಿತರೆಂದು ಸಾಕಷ್ಟು ಕೆಲಸ ಕಾರ್ಯ ಮಾಡುತ್ತಾ ಬರುತ್ತಿದ್ದೇವೆ. ದಲಿತ ಅಧಿಕಾರಿಗಳಿಗೆ ಕರ್ನಾಟಕ ಸರಕಾರದಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಇಲಾಖೆಯಲ್ಲಿ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ, ಬದಲಿಗೆ ಎಲ್ಲವೂ ಮೇಲ್ಜಾತಿಯವರದ್ದೇ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅವಘಡ ಆಗುವುದಕ್ಕೆ ಕಾರಣ ಮಾಡಿಕೊಡಬೇಡಿ ಎಂದು ಟಿ.ಆರ್.ಶ್ರೀನಿವಾಸ್ ವೀಡಿಯೊದಲ್ಲಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ಅವಘಡಕ್ಕೆ ನೀವೇ ಹೊಣೆಗಾರರು ಎಂದು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಡಿಜಿ-ಐಜಿಪಿ ಅವರನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಕಳೆದ ತಿಂಗಳು ಶ್ರೀನಿವಾಸ್ ಅವರನ್ನು ಡಿಸಿಆರ್‌ಇನಿಂದ ವರ್ಗಾವಣೆ ಮಾಡಲಾಗಿತ್ತು. ಆದರೆ ಶ್ರೀನಿವಾಸ್ ಅವರು ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ (ಕೆಎಟಿ)ದ ಮೊರೆಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು.

ಡಿಸಿಆರ್‌ಇ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮಾಡಿರುವ ಆರೋಪಗಳನ್ನು ಎಸ್ಪಿ ಕರಿಬಸನ ಗೌಡ ನಿರಾಕರಿಸಿದ್ದಾರೆ.

ಇದನ್ನೂ ನೋಡಿ: ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media

Donate Janashakthi Media

Leave a Reply

Your email address will not be published. Required fields are marked *