ಬೆಂಗಳೂರು: ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್‌ನ ಹಿರಿಯ ಅಧಿಕಾರಿಗಳ ವಿರುದ್ಧ ವ್ಯಾಲಿಡ್ ಟಿಕೆಟ್ ಹೊಂದಿದ್ದರೂ ಕೊನೆಯ ಕ್ಷಣದಲ್ಲಿ ಎಂಟು ಮಂದಿಯ ಕುಟುಂಬಕ್ಕೆ ವಿಮಾನ ಏರಲು ಅವಕಾಶ ನಿರಾಕರಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲು ಕರ್ನಾಟಕದ ನ್ಯಾಯಾಲಯ ಆದೇಶಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 49 ಲಕ್ಷ ರೂಪಾಯಿ ವೆಚ್ಚದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದ ಎಂಟು ಜನರ ಕುಟುಂಬಕ್ಕೆ ಬೋರ್ಡಿಂಗ್ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ ಸಿಇಒ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೇವನಹಳ್ಳಿ ನ್ಯಾಯಾಲಯ ಆದೇಶಿಸಿದೆ.
ವೀಸಾ ನಿಯಮಗಳ ತಪ್ಪು ವ್ಯಾಖ್ಯಾನದಿಂದಾಗಿ ಇಡೀ ಕುಟುಂಬಕ್ಕೆ ಅವಮಾನ ಮಾಡಿದ್ದಲ್ಲದೆ, ಕಾನೂನು ಕ್ರಮಕ್ಕೆ ಮುಂದಾದಾಗ ಅವರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದು, ಈ ವಿವಾದ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: 12.9 ಕೋಟಿ ಸ್ಮಾರ್ಟ್ ಟಿವಿ ಬಳಕೆದಾರರಿಗೆ ಶಾಕ್: ಉಚಿತ ಚಾನಲ್‌ಗಳಿಗೆ ಶುಲ್ಕ?
ಘಟನೆಯ ಹಿನ್ನೆಲೆ
ಜೂನ್ 2024 ರಲ್ಲಿ ಸೇಲಂ ಮೂಲದ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಜೆ.ಎಸ್. ಸತೀಶ್‌ಕುಮಾರ್ ಅವರ ನೇತೃತ್ವದ ಎಂಟು ಜನರ ಕುಟುಂಬ ಬೆಂಗಳೂರಿನಿಂದ ಪೆರುವಿಗೆ ಪ್ರಯಾಣಿಸಲು ನಿರ್ಧರಿಸಿತ್ತು. ಇದಕ್ಕಾಗಿ ಅವರು ಸುಮಾರು 49 ಲಕ್ಷ ರೂಪಾಯಿ ವೆಚ್ಚದ ಎಂಟು ನಾನ್-ರಿಫಂಡಬಲ್ ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು.
ಏನಿದು ವಿವಾದ?
ಬೋರ್ಡಿಂಗ್ ನಿರಾಕರಣೆ: ಕುಟುಂಬವು ನಿಗದಿತ ಸಮಯಕ್ಕಿಂತ ಮೊದಲೇ ವಿಮಾನ ನಿಲ್ದಾಣಕ್ಕೆ ತಲುಪಿ ಆರಂಭಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ಆದರೆ, ಚೆಕ್-ಇನ್ ಕೌಂಟರ್‌ನಲ್ಲಿ ಗಂಟೆಗಟ್ಟಲೆ ಕಾಯಿಸಿದ ನಂತರ, ವಿಮಾನ ಹೊರಡುವ ಕೆಲವೇ ಕ್ಷಣಗಳ ಮೊದಲು ಅವರಿಗೆ ಪ್ರಯಾಣಿಸಲು ಅನುಮತಿ ಇಲ್ಲ ಎಂದು ತಿಳಿಸಲಾಯಿತು.
ವೀಸಾ ಗೊಂದಲ: ಪೆರು ದೇಶದ ವೀಸಾ ಇಲ್ಲ ಎಂಬ ಕಾರಣ ನೀಡಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಇವರನ್ನು ತಡೆದಿದ್ದರು. ಆದರೆ, ಸತೀಶ್‌ಕುಮಾರ್ ಅವರ ಪ್ರಕಾರ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಅಥವಾ ಷೆಂಗೆನ್ ದೇಶಗಳ ಮಾನ್ಯತೆ ಪಡೆದ ವೀಸಾ ಹೊಂದಿರುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಪೆರು ಪ್ರವೇಶಿಸಲು ಪ್ರತ್ಯೇಕ ವೀಸಾ ಅಗತ್ಯವಿರುವುದಿಲ್ಲ. ಏರ್‌ಲೈನ್ ಸಿಬ್ಬಂದಿ ಈ ನಿಯಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬುದು ಅವರ ಆರೋಪ.
ಕೋರ್ಟ್ ಆದೇಶ ಮತ್ತು ಎಫ್‌ಐಆರ್:
ಈ ಘಟನೆಯ ಬಗ್ಗೆ ಸತೀಶ್‌ಕುಮಾರ್ ದೂರು ನೀಡಿದ ಹಿನ್ನೆಲೆಯಲ್ಲಿ, ದೇವನಹಳ್ಳಿಯ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಕೆಎಲ್‌ಎಂ ಏರ್‌ಲೈನ್ಸ್‌ನ ಸಿಇಒ ಮತ್ತು ಸಿಒಒ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದ್ದಾರೆ.
ರೆಡ್-ಫ್ಲಾಗ್ ಮತ್ತು ಕಾನೂನು ಹೋರಾಟ:
ಕುಟುಂಬದ ಸದಸ್ಯರು ಈ ನಿರ್ಧಾರವನ್ನು ಪ್ರತಿಭಟಿಸಿದಾಗ ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದಾಗ, ಏರ್‌ಲೈನ್ ಸಂಸ್ಥೆಯು ಇವರ ಹೆಸರನ್ನು ‘ರೆಡ್-ಫ್ಲಾಗ್’ (ಕಪ್ಪು ಪಟ್ಟಿ) ಮಾಡಿದೆ ಎಂದು ಸತೀಶ್‌ಕುಮಾರ್ ಆರೋಪಿಸಿದ್ದಾರೆ. ಇದರಿಂದಾಗಿ ನಂತರದ ದಿನಗಳಲ್ಲಿ ಅವರ ಮಗ ಸಿಂಗಾಪುರದಲ್ಲಿ ತೊಂದರೆ ಅನುಭವಿಸಬೇಕಾಯಿತು ಮತ್ತು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವಾಗಲೂ ಅವರು ವಿಚಾರಣೆಯನ್ನು ಎದುರಿಸಬೇಕಾಯಿತು.
ಇದನ್ನೂ ನೋಡಿ: SC ಒಳಮೀಸಲಾತಿ| ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಸಿಪಿಐ(ಎಂ) ಆಗ್ರಹ Janashakthi Media
