ಮೃತ, ನಿವೃತ್ತ ನೌಕರರ ಹೆಸರಿನಲ್ಲಿ ₹4.24 ಕೋಟಿ ಅಕ್ರಮ; ಸಹಾಯಕಿ ಅಮಾನತು

ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ನಿವೃತ್ತ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಸೌಮ್ಯರನ್ನು ಅಮಾನತು ಮಾಡಲಾಗಿದೆ.
ಪಂಚಾಯಿತಿ ವ್ಯಾಪ್ತಿಯ ನಿವೃತ್ತ ಹಾಗೂ ಮರಣ ಹೊಂದಿದ ನೌಕರರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಮೊದಲು ವ್ಯಕ್ತವಾಗಿತ್ತು. ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್‌ನಲ್ಲಿ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಯಿತು. ಈ ಮಾಹಿತಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜಾ ಅವರಿಗೆ ತಲುಪಿದ ನಂತರ ಸಮಗ್ರ ತನಿಖೆ ಆರಂಭಿಸಲಾಯಿತು.

ಇದನ್ನೂ ಓದಿ: ಹಿಂದಿ ಕೈಬಿಡುವ ಹೇಳಿಕೆ ಇಲ್ಲ; PIL ವಜಾ, ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ತನಿಖೆಯ ವೇಳೆ ನೌಕರರ ಸ್ವೀಕರಿಸುವ ಗುರುತು ಸಂಖ್ಯೆ ಹಾಗೂ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆದಾರರ ಹೆಸರುಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಟ್ಟು 21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರಿನಲ್ಲಿ ಅಕ್ರಮ ನಡೆಸಿರುವುದು ಬಹಿರಂಗವಾಗಿದೆ.

ಕಳೆದ ಐದು ವರ್ಷಗಳಲ್ಲಿ 29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳ ಮೂಲಕ ಸುಮಾರು 4.24 ಕೋಟಿ ರೂಪಾಯಿ ಸೌಮ್ಯ ಮತ್ತು ಅವರ ಕುಟುಂಬದ ಐದು ಸದಸ್ಯರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಅಂತಿಮವಾಗಿ ಕುಟುಂಬದ ಖಾತೆಗಳಿಗೆ ಸೇರಿಸಲಾಗಿದೆ.

ಈ ಪ್ರಕರಣದಲ್ಲಿ ಇತರ ಅಧಿಕಾರಿಗಳ ಭಾಗವಿರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ತನಿಖೆ ಮುಂದುವರಿದಿದೆ. ಸದ್ಯ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ನೋಡಿ: ಜನಾರೋಗ್ಯದಲ್ಲಿ ಕೇರಳ ಮಾದರಿ – ಪ್ರಸನ್ನ ಸಾಲಿಗ್ರಾಮ, ಕೆ.ಎಸ್.‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *