ಮಣಿಪುರ| ಬಾಂಬ್‌ ದಾಳಿ ಬಳಿಕ ಪ್ರತಿಭಟನೆ; ಗುಂಡಿನ ದಾಳಿಯಲ್ಲಿ ಇಬ್ಬರು ಸಾವು

ಮಣಿಪುರ: ಏಪ್ರಿಲ್‌ 6ರ ತಡರಾತ್ರಿ ಇಲ್ಲಿನ ವಿಷ್ಣುಪುರ ಜಿಲ್ಲೆಯಲ್ಲಿ  ಮನೆಯೊಂದರ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ, ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಣಿಪುರ
ಪರಿಸ್ಥಿತಿ ನಿಯಂತ್ರಿಸಲು ಕೇಂದ್ರಿಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪ್ರತಿಭಟನಕಾರರು ಮೃತಪಟ್ಟಿದ್ದಾರೆ.

‘ಜಿಲ್ಲೆಯ ಮೌರ್‍ಯಾಂಗ್‌ ಟ್ರೋಂಗ್ಲಾಬಿಯಲ್ಲಿ ಬೆಳಿಗ್ಗೆ ಒಂದು ಗಂಟೆ ಸುಮಾರಿಗೆ ಶಂಕಿತ ಕುಕಿ ಬಂಡುಕೋರರು ಬಾಂಬ್‌ ದಾಳಿ ನಡೆಸಿದ್ದಾರೆ. ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಕೋಣೆಯಲ್ಲಿ ಮಲಗಿದ್ದ ವೇಳೆ ಬಾಂಬ್‌ ಸ್ಫೋಟಗೊಂಡಿದೆ. ಇದರಿಂದ ನಿದ್ದೆಯಲ್ಲಿದ್ದ ಐದು ವರ್ಷದ ಮಗು ಹಾಗೂ ಆರು ತಿಂಗಳ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಬಾಂಬ್ ದಾಳಿ; ಇಬ್ಬರು ಮಕ್ಕಳು ಮೃತ್ಯು

ದಾಳಿಯನ್ನು ‘ಅನಾಗರಿಕ ಕೃತ್ಯ’ ಎಂದು ಖಂಡಿಸಿದ ಮಣಿಪುರ ಮುಖ್ಯಮಂತ್ರಿ ವೈ. ಖೇಮಚಂದ್‌ ಸಿಂಗ್‌, ‘ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನವನ್ನು ಹಳಿ ತಪ್ಪಿಸುವ ಕೃತ್ಯವಾಗಿದೆ. ಯಾವುದೇ ಸಂದರ್ಭದಲ್ಲಿಯೂ ಇಂತಹ ಭಯೋತ್ಪಾದಕ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರನ್ನು ಪತ್ತೆಹಚ್ಚಿ, ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತೀವ್ರವಾಗಿ ಗಾಯಗೊಂಡ ತಾಯಿಯನ್ನು ಇಂಫಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖ್ಯಮಂತ್ರಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಗಾಯಗೊಂಡ ತಾಯಿಗೆ ಅತ್ಯುನ್ನತ ಮಟ್ಟದ ಚಿಕಿತ್ಸೆ ಕಲ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

‘ರಾಜ್ಯದ ಪ್ರತಿಯೊಬ್ಬ ನಾಗರಿಕರನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದ್ದು, ಶಾಂತಿ, ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವವರ ವಿರುದ್ಧ ರಾಜ್ಯದ ಜನರು ಒಗ್ಗಟ್ಟಿನಿಂದ ಇರಬೇಕು’ ಎಂದು ಕರೆ ನೀಡಿದ್ದಾರೆ.

ಪ್ರತಿಭಟನೆ

ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ, ಸ್ಥಳೀಯರು ಮಂಗಳವಾರ ಬೆಳಿಗ್ಗೆ ಬಿಷ್ಣು‍ಪುರ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇಂಫಾಲ್‌ ಪೂರ್ವ ಜಿಲ್ಲೆಯ ಪಂಗೈ ಹಾಗೂ ಖುರೈ, ಪಶ್ಚಿಮ ಜಿಲ್ಲೆಯ ಲಂಗ್ತಾಬಲ್‌ನಲ್ಲಿ ವಾಹನಗಳ ಓಡಾಟ ತಡೆದರು.

ಮೌರ್‍ಯಾಂಗ್‌ ಠಾಣೆಯ ಮುಂಭಾಗದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಹೊರಠಾಣೆಯೂ ಸಂಪೂರ್ಣವಾಗಿ ನಾಶಗೊಂಡಿದೆ. ಪೆಟ್ರೋಲ್‌ ಪಂಪ್‌ ಸಮೀಪ ನಿಲ್ಲಿಸಿದ್ದ ಟ್ಯಾಂಕರ್‌ಗಳಿಗೆ ಬೆಂಕಿ ಹಚ್ಚಿದರು. ಪ್ರತಿಭಟನಕಾರರನ್ನು ನಿಯಂತ್ರಿಸಲು ಸಿಆರ್‌ಪಿಎಫ್‌ನ ಯೋಧರು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಪ್ರತಿಭಟನಕಾರರು ಮೃತಪಟ್ಟಿದ್ದಾರೆ.

ಸ್ಥಳದಲ್ಲಿ ಹೆಚ್ಚುವರಿ ಬಂದೋಬಸ್ತ್‌ ಕಲ್ಪಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಿದ್ದೇನು?

ಗುವಾಹಟಿ ಮೂಲದ ನರ್ಸ್‌ ಬಿನಿತಾ ಅವರು ಕಳೆದ ಜನವರಿ ತಿಂಗಳಲ್ಲಿ ಹೆರಿಗೆ ರಜೆಗಾಗಿ ಊರಿಗೆ ಮರಳಿದ್ದರು. ಇವರ ಪತಿ ಓಯಿನಾಮ್‌ ಮಂಗಲ್‌ಸನ್‌ ಅವರು ಗಡಿ ಭದ್ರತಾ ಪಡೆಯಲ್ಲಿದ್ದು (ಬಿಎಸ್‌ಎಫ್‌), ಬಿಹಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಪತಿಯ ಊರಾದ ಮೌರ್‍ಯಾಂಗ್‌ ಟ್ರೋಂಗ್ಲಾಬಿಯಲ್ಲಿರುವ ನಿವಾಸದಲ್ಲಿ ಅತ್ತೆಯ ಜೊತೆಗೆ ನೆಲಸಿದ್ದರು.

‘ತಡರಾತ್ರಿ ವೇಳೆ ನನ್ನ ಸೊಸೆಗೆ ಸಹಾಯಕ್ಕಾಗಿ ಕಿರುಚಿಕೊಂಡರು. ಏನಾಯಿತು ಎಂದು ಪ್ರಶ್ನಿಸಿದ ವೇಳೆ ಬಾಂಬ್‌ ಸ್ಫೋಟವಾಗಿದೆ ಎಂದು ತಿಳಿಸಿದಳು. ನಾನು ಕೋಣೆಗೆ ಹೋಗಿ ನೋಡುವಷ್ಟರಲ್ಲಿ ಇಬ್ಬರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು’ ಎಂದು ಬಿನಿತಾ ಅವರ ಅತ್ತೆ ಒಯಿನಮ್‌ ಬಾಲ ನೋವು ತೋಡಿಕೊಂಡಿದ್ದಾರೆ.

ದಾಳಿ ನಡೆದ ಕೆಲವು ಮೀಟರ್‌ಗಳ ದೂರದಲ್ಲಿ ಮಂಗಳವಾರ ಬೆಳಿಗ್ಗೆ ರಾಕೆಟ್‌ ಚಾಲಿತ ಜೀವಂತ ಗ್ರೆನೇಡ್‌ (ಆರ್‌ಪಿಜಿ) ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳು ಮನೆ ತೊರೆದಿದ್ದಾರೆ. ರಾಕೆಟ್‌ಗೆ ಸ್ವಯಂಚಾಲಿತ ಸಾಧನ ಅಳವಡಿಸಲಾಗಿದ್ದು, ಸುತ್ತಲಿನ ಮನೆಗಳನ್ನು ಗುರಿಯಾಗಿಸಲಾಗಿತ್ತು.

ಮಕ್ಕಳ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಲಾಗಿದೆ.

ಮೌರ್‍ಯಾಂಗ್‌ ಟ್ರೋಂಗ್ಲಾಬಿ ಗ್ರಾಮದ ಚುರಾಚಂದಾಪುರದ ತಗ್ಗು ಪ್ರದೇಶದಲ್ಲಿದೆ. 2023ರಿಂದ 24ರವರೆಗೆ ಮೈತೇಯಿ ಹಾಗೂ ಕುಕಿ ಸಮುದಾಯಗಳ ಸಂಘರ್ಷಕ್ಕೆ ತುತ್ತಾದ ಪ್ರದೇಶದ ಸನಿಹದಲ್ಲಿದೆ. ಈ ಸಂಘರ್ಷದಲ್ಲಿ ಇದುವರೆಗೆ 260 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರ್ವಸತಿಗರಾಗಿದ್ದಾರೆ.

ಉನ್ನತ ಮಟ್ಟದ ಸಭೆ: 5 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ ‌

ಮಕ್ಕಳ ಸಾವಿನ ಬೆನ್ನಲ್ಲೇ ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನೆಗಳು ನಡೆದವು. ಕಾನೂನು- ಸುವ್ಯವಸ್ಥೆಯ ಸ್ಥಿತಿಗತಿ ಕುರಿತಂತೆ ಮುಖ್ಯಮಂತ್ರಿ ವೈ.ಖೇಮಚಂದ್‌ ಸಿಂಗ್‌ ಅವರು ಉನ್ನತ ಮಟ್ಟದ ಸಭೆ ನಡೆಸಿದರು.

‘ರಾಜ್ಯದ ಶಾಂತಿ ಹಾಗೂ ಸ್ಥಿರತೆ ಕಾಪಾಡುವ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ’ ಎಂದು ಅವರು ಭರವಸೆ ನೀಡಿದ್ದಾರೆ. ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರವು ಕಣಿವೆ ಭಾಗದ ಐದು ಜಿಲ್ಲೆಗಳಲ್ಲಿ ಮೊಬೈಲ್‌ ಡೇಟಾ ಸೇವೆ ಬ್ರಾಂಡ್‌ಬ್ಯಾಂಡ್‌ ವಿಪಿಎನ್‌ ಸೇರಿದಂತೆ ಎಲ್ಲ ಮಾದರಿಯ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ವದಂತಿಗಳನ್ನು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಣಿಪುರ ಇಂಫಾಲ್‌ ಪಶ್ಚಿಮ ಪೂರ್ವ ಥೌಬಾಲ್‌ ಕಾಕ್‌ಚಿಂಗ್‌ ಹಾಗೂ ವಿಷ್ಣುಪುರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವಾಲಯದ ಆಯುಕ್ತ ಎನ್‌. ಅಶೋಕ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಜನಾರೋಗ್ಯದಲ್ಲಿ ಕೇರಳ ಮಾದರಿ – ಪ್ರಸನ್ನ ಸಾಲಿಗ್ರಾಮ, ಕೆ.ಎಸ್.‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *