ಕಾರವಾರ: ಪ್ರೀತಿ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧಕ್ಕೆ ಸೀಮಿತವಲ್ಲ; ಅದು ಬಹುರೂಪದ ಅರ್ಥ ಹೊಂದಿರುವ ಶಕ್ತಿ. ಗಂಡು-ಹೆಣ್ಣಿನ ಪ್ರೇಮ, ಲೈಂಗಿಕ ಸಂಬಂಧಗಳನ್ನು ಮೀರಿದ್ದುದಾಗಿದೆ. ಪ್ರೀತಿ ಎಂದರೆ ಸದೃಢ, ಮಾನವೀಯ ಹಾಗು ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸುವ ರಾಜಕೀಯ ಚಿಂತನೆಯೇ ಆಗಿದೆ ಎಂದು ಸಾಹಿತಿ ಡಾ. ರಹಮತ್ ತರೀಕೆರೆ ಹೇಳಿದರು. ಬಹುರೂಪಿ
ಅವರು ಕಾರವಾರ ನಗರದ ರಾಬಿಯಾ ಪ್ಲಾಜಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘ಪ್ರೀತಿಪದ’ (ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ) ಸಾಂಸ್ಕೃತಿಕ ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಹುರೂಪಿ
ವಿಠಲ ಭಂಡಾರಿ ಅವರು ಜಿಲ್ಲೆಯ ಅನೇಕ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ ಹೋರಾಟಗಾರರಾಗಿದ್ದರಷ್ಟೇ ಅಲ್ಲ, ಎಲ್ಲರೊಂದಿಗೆ ಪ್ರೀತಿಯಿಂದ, ಅತ್ಮೀಯತೆಯಿಂದ ಬದುಕಿದ ಮಾನವೀಯ ವ್ಯಕ್ತಿತ್ವವಾಗಿದ್ದರು. ಅವರ ಈ ಪ್ರೀತಿಯ ಬದುಕಿನ ನೆನಪಿಗಾಗಿಯೇ ‘ಪ್ರೀತಿಪದ’ ಎಂಬ ಅಧ್ಯಯನ ಕೇಂದ್ರ ರೂಪುಗೊಂಡಿದೆ ಎಂದು ಅವರು ಹೇಳಿದರು. ಬಹುರೂಪಿ
ಇದನ್ನೂ ಓದಿ: ಘಟಿಕೋತ್ಸವ ಹಾವೇರಿ ವಿ.ವಿ ಕ್ಯಾಂಪಸ್ ನಲ್ಲಿಯೇ ನಡೆಯಲಿ: ಪ್ರತಿರೋಧ ಸಭೆ
ಪ್ರೀತಿ ಕೇಡಿನ ವಿರುದ್ಧ ಮಾತಾಡಬೇಕು. ವಚನಕಾರ ಬಸವಣ್ಣನವರಿಂದ ಹಿಡಿದು ಸೂಫಿ ಸಂತರುಗಳವರೆಗೆ ತಮ್ಮ ಸಾಹಿತ್ಯದ ಮೂಲ ವಸ್ತುವಾಗಿ ಪ್ರೀತಿಯನ್ನು ಆರಿಸಿಕೊಂಡಿದ್ದಾರೆ. ಪ್ರೀತಿಗೆ ಜಾತಿ, ಧರ್ಮ, ಭಾಷೆ ಅಥವಾ ದೇಶದ ಗಡಿ ಇಲ್ಲ. ಅದಕ್ಕಾಗಿಯೇ ಜಗತ್ತಿನಾದ್ಯಂತ ಜನರು ನೆಲ್ಸನ್ ಮಂಡೇಲಾರಂತಹ ವ್ಯಕ್ತಿಗಳ ಬಗ್ಗೆ ಬರೆಯುತ್ತಾರೆ. ಪ್ಯಾಲಿಸ್ತೇನ್ ಮೇಲಿನ ಯುದ್ಧದ ವಿರುದ್ಧ ಮನ ಮಿಡಿಯುತ್ತಾರೆ. ಪ್ರೀತಿಯ ಅತಿ ದೊಡ್ಡ ಆಯಾಮವೇ ತ್ಯಾಗ. ರಾಷ್ಟ್ರೀಯತೆ ಎಂದರೆ ಕೇವಲ ಮಣ್ಣನ್ನು ಪ್ರೀತಿಸುವುದಲ್ಲ. ಸುತ್ತಲಿನ ಜನರನ್ನು ಪ್ರೀತಿಸುವುದೇ ನಿಜವಾದ ರಾಷ್ಟ್ರಪ್ರೇಮ. ರಾಷ್ಟ್ರಪ್ರೇಮದ ಹೆಸರಿನಲ್ಲಿ ಮತ್ತೊಂದು ರಾಷ್ಟçವನ್ನು ದ್ವೇಷಿಸುವುದು ಸರಿಯಲ್ಲ ಎಂದು ಡಾ. ರಹಮತ್ ತರೀಕೆರೆ ಅಭಿಪ್ರಾಯ ಪಟ್ಟರು. ಬಹುರೂಪಿ
ಪ್ರೀತಿ ಕಟ್ಟುವ ತತ್ವವಾಗಿ ಹೇಗೆ ಅಳವಡಿಸಬೇಕಿದೆ ಎಂಬುದನ್ನು ಸಾದ್ಯಂತ ವಿವರಿಸುತ್ತಾ “ಉತ್ತರ ಕನ್ನಡ ಗಾಯಗೊಂಡ ಜಿಲ್ಲೆ. ಜಗತ್ತಿನ ಅತಿಹೆಚ್ಚು ಸುಂದರ ಜಿಲ್ಲೆ ಉತ್ತರ ಕನ್ನಡ. ಆದರೆ ಅದೇ ಸಂದರ್ಭದಲ್ಲಿ ಯೋಜನೆಗಳಿಂದಾಗಿ ಅತಿಹೆಚ್ಚು ಗಾಯಗೊಂಡ ಜಿಲ್ಲೆ ಕೂಡಾ ಉತ್ತರ ಕನ್ನಡ ಅನ್ನೋದು ವಿಪರ್ಯಾಸದ ಸಂಗತಿ. ಗಾಯಗಳನ್ನು ಮಾಯವಾಗಿಸುವ ಕೆಲಸ ಜಿಲ್ಲೆಯ ಜನರಿಂದ ಆಗಬೇಕಿದೆ” ಎಂದು ಡಾ. ರಹಮತ್ ತರಿಕೆರೆ ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮಾನಿತ ಸಾಹಿತಿ ಹಾಗು ಉಪನ್ಯಾಸಕಿ ಡಾ. ವಿನಯ ಒಕ್ಕುಂದ ಮಾತನಾಡುತ್ತ, ಶಿಕ್ಷಕರು ಪಾಠ ಬೋಧನೆಗೆ ಮಾತ್ರ ಸೀಮಿತರಾಗದೇ ಸಮಾಜದ ಮೇಲಿನ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು ಎಂದು ಹೇಳಿದರು. ಅಧ್ಯಾಪಕರಾಗಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಬಹುರೂಪಿ
ರೈತವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸಿದ ಸಂದರ್ಭದಲ್ಲಿ ಮಾಧ್ಯಮವೊಂದರಿಂದ ಪ್ರಶಸ್ತಿ ಘೋಷಣೆ ಬಂದಿದ್ದರೂ, ಅದನ್ನು ತಿರಸ್ಕರಿಸುವ ಮೂಲಕವೇ ನಿಜವಾದ ಗೌರವ ಪಡೆದಿದ್ದೇನೆ. ಪ್ರೀತಿಗಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ಆಗ ವೃತ್ತಿಗೆ ಸಮಸ್ಯೆಯಾಗಬಹುದು ಎಂದು ವಿಠಲ ಎಚ್ಚರಿಸಿದ್ದರೂ, ಹೋರಾಟ ಮುಂದುವರೆಸಿ ಗೆಲುವು ಕಂಡಿದ್ದೇನೆ. ಆ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಆತ್ಮೀಯತೆ ನನಗಿತ್ತು. ಹೆಣ್ಣು ಅಂಜದೇ ಮುಂದೆ ಬರಬೇಕು. ವಿಠ್ಠಲ ಅವರ ಕನಸುಗಳನ್ನು ಜೀವಂತವಾಗಿ ಉಳಿಸಿ, ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು. ಬಹುರೂಪಿ

ಇನ್ನೋರ್ವ ಸಮ್ಮಾನಿತ ಶಿಕ್ಷಣ ತಜ್ಞ ಎಫ್.ಸಿ. ಚೇಗರಡ್ಡಿಯವರು ಮಾತನಾಡಿ, ಗೆಳೆಯ ನಗುಮುಗದ ಮತ್ತು ಸೂಕ್ಷ್ಮ ಮನದ ವಿಠ್ಠಲನ ನೆನಪಿನ ಈ ಪ್ರಶಸ್ತಿಯನ್ನು ಮುಜುಗರದಿಂದಲೇ ಸ್ವೀಕರಿಸುತ್ತೇನೆ. ಸಾಕ್ಷರತೆ, ವಿಜ್ಞಾನ ಚಳುವಳಿ, ಯುವಜನ ಚಳುವಳಿ ಸದಾ ನೆನಪಿಡಬೇಕಾದ ವ್ಯಕ್ತಿ ವಿಠ್ಠಲ ಅವರ ಗ್ರಹಿಕೆ ಮತ್ತು ಅಧ್ಯಯನದ ಹಸಿವು ಎಲ್ಲರೂ ಅಳವಡಿಸಿಕೊಳ್ಳಬೇಕಾದುದು. ನಾನೊಬ್ಬ ಕನ್ನಡ ಶಾಲೆಯ ಮಾಸ್ತರ್. ದ್ವೇಷವೇ ಸುತ್ತುವರಿದ ಈ ದಿನಮಾನಗಳಲ್ಲಿ ಪ್ರೀತಿಯೇ ಎಲ್ಲೆಡೆ ಬೆಳಗಬೇಕು ಎಂದು ಹೇಳಿದರು. ಬಹುರೂಪಿ
ಯಮುನಾ ಗಾಂವ್ಕರ್ ಅವರು ಬರೆದ ‘ಕಣ್ಮುಚ್ಚಿದ ಗುಬ್ಬಚ್ಚಿ’ ಕವನ ಸಂಕಲನವನ್ನು ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಬಿಡುಗಡೆಗೊಳಿಸಿ ಕೃತಿ ಪರಿಚಯ ಮಾಡಿದರು. “ಈ ಪುಸ್ತಕ ಬಿಡುಗಡೆ ಎಂಬುದು ಸಂದಿಗ್ಧ ತಂದಿದೆ. ಹಲವು ವರ್ಷಗಳ ಕಾಲ ತನ್ನ ಕೆಲಸದ ಮೂಲಕವೇ ಸಿದ್ಧಾಂತ ಕಟ್ಟಿಕೊಟ್ಟ ವಿಠ್ಠಲ ಮೌನದಲ್ಲಿ ಕಾಡಿದಷ್ಟು ಮಾತಿನಲ್ಲಿ ಕಾಡಲಾರ. ಅಲ್ಲಮಪ್ರಭು ಹೇಳಿದ ‘ಕಂಬ ಉರಿದಿತ್ತು ಹಂಸ ಹಾರಿತ್ತು’ ಎಂಬಂತೆ ಸಂಕಟದ ಸಂದರ್ಭ. ವಿಠ್ಠಲ ಕೋವಿಡ್ ನಿಂದ ಬಳಲಿ ಅಗಲಿದ ಆ ದಿನಗಳ ಕುರಿತು ಯಮುನಾಳಲ್ಲಿ ಬುಗ್ಗೆಬುಗ್ಗೆಗಳಾಗಿ ಎದ್ದ ಜ್ವಾಲೆಯನ್ನು ದಾಖಲಿಸಿದ್ದಾರೆ” ಎನ್ನುತ್ತಾ, ಅವರು ಕಾವ್ಯಾತ್ಮಕವಾಗಿ ವಿವರಿಸಿದ್ದು ಹೀಗೆ “ಅಗಲಿಕೆ ಎಂದರೆ ದೇಹದ ದೂರವಲ್ಲ, ಅದು ಮನಸ್ಸಿನೊಳಗಿನ ಶೂನ್ಯ. ಶಬ್ದದಿಂದ ತುಂಬದು ಆ ಶೂನ್ಯ ಪಾತ್ರ. ಅರ್ಥವಾಗಬಹುದು ಮೌನದಲ್ಲಿ ಮಾತ್ರ. ಈ ಕವಿತೆಗಳು, ಅಂತಹ ಮೌನದಿಂದ ಹುಟ್ಟಿವೆ.
ಇದು ಕಣ್ಣೀರಿನಿಂದ ಬರೆದ ವಿಷಾದ ಚಿತ್ರವಲ್ಲ, ಕಣ್ಣೀರೇ ಕರುಣೆಯೊಳಗಿಳಿದು ಬನಿಗೊಂಡಿದೆಯಲ್ಲ !! ಆಕ್ರಂದನವಿಲ್ಲ ಇಲ್ಲಿ ಪಿಸುಮಾತಿನ ಗಿಲಕಿ ಉಲಿಯುತ್ತಿದೆ. ಜೀವನ ನಾಶವಾಗುವುದಿಲ್ಲ, ಅದು ರೂಪಾಂತರಗೊಳ್ಳುತ್ತದೆ ಎಂದು. ದೇಹ ಹೋದರೂ, ಸಂಬಂಧ ಉಳಿಯುತ್ತದೆ. ಅದೇ ಸಂಬಂಧ ಮತ್ತೆ ಮಾತಾಡುತ್ತಿದೆ. ಕಣ್ಣೆದುರು ನಿಂದು. ಅಗಲಿಕೆಯ ನಂತರ ನಮ್ಮೊಳಗೆ ಉದಯಿಸುವ ಪ್ರಶ್ನೆ ಗುಬ್ಬಚ್ಚಿ ಎಲ್ಲಿದೆ ಎಂಬುದಲ್ಲ. ಅದರ ಚಿಲಿಪಿಲಿಯ ಕೇಳುವ ಕಿವಿಯಲ್ಲಿದೆ ಎಂದು. ಇಲ್ಲಿ ದುಃಖವಿದೆ, ಆದರೆ ಅದು ಕುಗ್ಗಿಸುವುದಿಲ್ಲ.
ವೇದನೆ ಇದೆ, ಸಂವೇದನೆಯನ್ನು ಹಿಗ್ಗಿಸುತ್ತಿದೆ. ಸಾವಿಗೆ ಹೊಸ ವ್ಯಾಖ್ಯೆ ಬರೆಯುತ್ತಿದೆ, ಸಂಜೀವಿನಿಯಾಗಿ ಮಿನುಗುತ್ತಿದೆ. ಈ ಕೃತಿ ನಮಗೆ ನೆನಪಿಸುತ್ತದೆ -ಕೇವಲ ಬದುಕುವುದೇ ಉದ್ದೇಶವಲ್ಲ, ಬದುಕಗೊಡುವುದು ಧರ್ಮವೆಂದು. ಅಗಲಿಕೆಯ ಕ್ಷಣ ಸ್ತಬ್ಧತೆಯಲ್ಲ ಅದು ಅಂತರಂಗದ ಧ್ಯಾನಸ್ಯ ಚಲನೆಯೆಂದು. ನಾವು ಒಂದು ಬದ್ಧತೆಗೆ ವಿದಾಯ ಹೇಳುತ್ತಿಲ್ಲ. ಒಂದು ಸಿದ್ಧಾಂತವನ್ನು ನಮ್ಮೊಳಗೆ ಮತ್ತೊಮ್ಮೆ ಸ್ವೀಕರಿಸುತ್ತಿದ್ದೇವೆ. ಕೆಂಪು ಮಣ್ಣಿನ ಹುಣ್ಣ ನಿವಾರಿಸಿ, ಹೊಸ ಹಸಿರ ಕಾಣಲು ತವಕಿಸುತ್ತಿದ್ದೇವೆ. ಈ ಕೃತಿ ದುಃಖಕ್ಕೆ ಸಾಂತ್ವನವಾಗಬೇಕು. ಚಿಂತನೆಯ ಬೀಜವಾಗಬೇಕು, ಮತ್ತು ಬದುಕಿನ ಅರ್ಥ ಹುಡುಕುವವರಿಗೆ ಒಂದು ತಾತ್ವಿಕತೆಯ ದೀಪವಾಗಬೇಕು.” ಎಂದರು.
ಶಾಂತಾರಾಮ ನಾಯಕ ಹಿಚ್ಕಡ ಅವರು ಮಾತನಾಡಿ “ಪ್ರೀತಿಯ ಬಾಯಾರಿಕೆ ಆರಿಸಲು ಶ್ರಮಿಸಿದವರಲ್ಲಿ ಪ್ರೀತಿಯ ನೆರಳು ನೀಡುವ ಮರ ಬೆಳೆಸಿದವರಲ್ಲಿ ಒಬ್ಬರು ವಿಠ್ಠಲ ಭಂಡಾರಿಯವರು. ತಮ್ಮ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಪ್ರೀತಿ ಗೌರವಗಳಿಂದ ಕಂಡ ಡಾ. ವಿಠ್ಠಲ ಭಂಡಾರಿ ಮತ್ತು ಡಾ. ಆರ್.ವಿ.ಭಂಡಾರಿಯವರೊಂದಿಗಿನ ಆಪ್ತ ಸಂಬಂಧವನ್ನು ಹಂಚಿಕೊಂಡರು. ತಮ್ಮ ಮನಮನೆಗಳಲ್ಲಿ ಪ್ರೀತಿಪದಗಳೇ ತುಂಬಿವೆ.” ಎಂದರು. ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ರೋಹಿದಾಸ ನಾಯ್ಕ ವಿಠ್ಠಲರ ಕಾರ್ಯಶೀಲತೆ, ಸೈದ್ಧಾಂತಿಕ ಬದ್ಧತೆ ವಿವರಿಸಿದರು.
ಸಿಐಟಿಯು ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಮೀನಾಕ್ಷಿ ಸುಂದರಂ ಮಾತನಾಡಿ, “ಇಂದು ಆಡಳಿತದ ಸಿದ್ಧಾಂತದಲ್ಲಿ ಪ್ರೀತಿಗೆ ಇರುವ ವ್ಯಾಖ್ಯಾನವನ್ನು ಬದಲಿಸುತ್ತಿದಾರೆ. ಪ್ರಭುತ್ವದ ಪ್ರೀತಿ ಜನತೆಯ ಮೇಲಿರಬೇಕು ಎನ್ನುವುದರ ಬದಲಾಗಿ ಶ್ರೀಮಂತರ ಮೇಲಿದ್ದರೆ ಸಾಕು ಎಂಬುದೇ ಅವರು ಪ್ರತಿಪಾದಿಸುತ್ತಿರುವುದು. ದುಡಿಯುವ ಜನತೆಯ ಹೋರಾಟ ಯಾವಾಗಲೂ ಜನರ ಮೇಲಿರುವ ಪ್ರೀತಿಯಿಂದ ನಡೆಯುತ್ತದೆ. ಆ ಪ್ರೀತಿ ಪ್ರಭುತ್ವಕ್ಕೂ ಇರಬೇಕೆಂಬುದೇ ಬೇಡಿಕೆ. ಇಂದು ಸೇವಾರಂಗ, ಕಾರ್ಮಿಕ ರಂಗ, ಶೈಕ್ಷಣಿಕ ರಂಗ, ಉತ್ಪಾದನಾ ರಂಗ, ನಿವೃತ್ತಿ ಯಾವುದರಲ್ಲೂ ಪ್ರೀತಿಯ ಸ್ಪಂದನೆ ಇಲ್ಲದೆ ನಿರ್ದಯವಾಗಿ ವರ್ತಿಸಲಾಗುತ್ತಿದೆ. ಬಂಡವಾಳ ಆಕರ್ಷಿಸಲಿಕ್ಕೆ ಜನರ ಮೇಲಿನ ಪ್ರೀತಿಯನ್ನು ಕೈಬಿಡುªದೀ ಪ್ರಭುತ್ವದ ಕೇಡಿನ ಬಗ್ಗೆ ಮಾತಾಡಬೇಕಿದೆ. ಜಗತ್ತಿನಲ್ಲಿ ದ್ವೇಷ ಮತ್ತು ದುರಾಕ್ರಮಣಶೀಲತೆಗೆ ಎದುರಾಗಿ ಪ್ರೀತಿ ಗೆಲ್ಲಬೇಕು. ವಿಠ್ಠಲ ಜ್ಞಾನಕ್ಕೂ ಕ್ರಿಯೆಗೂ ಒಂದು ಪ್ರೀತಿಪದದ ಸೇತುವೆಯಾಗಿದ್ದ ಎನ್ನುತ್ತಾ ಒಂದು ಉತ್ತುಂಗ ತಲುಪಬಹುದಾದ ಸಂದರ್ಭದಲ್ಲಿ ವಿಠ್ಠಲ ಅಕಾಲಿಕವಾಗಿ ಅಗಲಿರುವುದು ದುಃಖದ ಸಂಗತಿ. ವಿಠ್ಠಲ ನಂಬಿದ ವಿಚಾರಕ್ಕೆ ನ್ಯಾಯ ಸಿಗಬೇಕೆಂದರೆ ನಾವು ಕೆಲವು ಸಮಕಾಲೀನ ಸೈದ್ಧಾಂತಿಕ ವಿಷಯಗಳನ್ನೂ ಮಾತಾಡಬೇಕಿದೆ” ಎಂದರು. ಬಹುರೂಪಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೀತಿಪದದ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, “ವಿಠ್ಠಲ ಭಂಡಾರಿ ಅವರು ನೂರಾರು ವಿದ್ಯಾರ್ಥಿ ಯುವಜನರನ್ನು ಸಂಘಟಿಸಿ ಹೋರಾಟಗಳಿಗೆ ದಿಕ್ಕು ನೀಡಿದ್ದರು. ಅದರ ಫಲ ವಾಗಿ ಇಂದಿನ ಜಿಲ್ಲೆಯಲ್ಲಿ ಸಾಂಸ್ಕೃತಿಕ ಹಾಗು ವೈಚಾರಿಕ ಪ್ರಜ್ಞೆಗಳ ಚಟುವಟಿಕೆಗಳಿಗೆ ಗಟ್ಟಿತನ ಬಂದಿದೆ. ವಿದ್ಯಾರ್ಥಿ ಹಾಗು ಯುವಜನ ಚಳವಳಿ, ಚಿಂತನ ರಂಗ ಅಧ್ಯಯನ, ಸಾಕ್ಷರತಾ ಆಂದೋಲನ, ಪಂಚವಾದ್ಯ ಸಮ್ಮೇಳನ, ಗ್ರಾಮೀಣ ಕೃಪಾಂಕ, ಜಿಲ್ಲಾ ಐಕ್ಯತಾ ಆಂದೋಲನ, ಅಂಬೇಡ್ಕರ್, ಮಾರ್ಕ್ಸ ಸೇರಿದಂತೆ ಅನೇಕ ಕಾರ್ಯಕ್ರಮಗಳು, ಜೊತೆಗೆ ನಾಡಿನಲ್ಲಿ ಭದ್ರ ನೆಲೆಯಾಗಿ ರೂಪಿಸಿದ ಸಂವಿಧಾನ ಓದು ಸೇರಿದಂತೆ ಅನೇಕ ವಿಚಾರಗಳಲ್ಲಿ ಜನಮನ ಸೆಳೆದಿದ್ದರು. ವಿಠ್ಠಲ ಅವರಂತ ಹೋರಾಟಗಾರರು ಈ ಗಾಯಗೊಂಡ ಜಿಲ್ಲೆಗೆ ಮತ್ತೆ ಮತ್ತೆ ಹುಟ್ಟಬೇಕು. ಕುವೆಂಪು ಅವರು ಬಸವಣ್ಣನಿಗೆ ‘ದೊಂದಿದಿಕ್ಕು’ ಆಗಿದ್ದಂತೆ, ವಿಠ್ಠಲ ಭಂಡಾರಿ ಅವರು ಈ ಜಿಲ್ಲೆಗೆ ಸಿಕ್ಕ ‘ದೊಂದಿದಿಕ್ಕು’ ಆಗಿದ್ದರು. ಆದರೆ ಅವರ ಕೆಲಸಗಳನ್ನು ಕೆಲವರು ಅರಿಯದೇ ಹೋದರು. ಕೆಲವರು ತಮ್ಮ ಹೆಗ್ಗಳಿಕೆಗೆ ಬಳಸಿದರು. ಆದರೆ ನಾವು ವಿಠ್ಠಲ ನಂಬಿದ ಅನುಸರಿಸಿದ ಸಿದ್ಧಾಂತವನ್ನು ಜಾರಿಗೊಳಿಸಲು ಆಂದೋಲನದಲ್ಲೇ ಇರಬೇಕಿದೆ” ಎಂದು ವಾಸರೆ ಹೇಳಿದರು. ಬಹುರೂಪಿ
ಕಾರ್ಯಕ್ರಮದಲ್ಲಿ ಲೇಖಕಿ ಡಾ. ವಿನಯ ವಕ್ಕುಂದ, ಶಿಕ್ಷಣ ತಜ್ಞ ಎಫ್.ಸಿ. ಚೇಗರಡ್ಡಿ ಅವರಿಗೆ ಕ್ರಮವಾಗಿ 2024 ಹಾಗೂ 2025 ನೇ ಸಾಲಿನ “ಪ್ರೀತಿಪದ ಸನ್ಮಾನ” ನೀಡಿ ಗೌರವಿಸಲಾಯಿತು. ಪ್ರೊ. ಶ್ರೀಧರ ನಾಯಕ ಹಾಗೂ ಕವಿ ಉಪನ್ಯಾಸಕ ರಂಜಾನ್ ಹೆಬಸೂರು ಸಮ್ಮಾನ ಪತ್ರ ಓದಿದರು. ವೇದಿಕೆಯ ಮೇಲಿದ್ದ ಗಣ್ಯರು ಹಾಗೂ ಸಹಯಾನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಮಾಧವಿ ಭಂಡಾರಿ ಕೆರೆಕೋಣ, ಯಕ್ಷಕಿರೀಟದ ಗಣೇಶ ಭಂಡಾರಿ, ಡಾ. ಎಂ.ಜಿ. ಹೆಗಡೆ ಇದ್ದರು. ಬಹುರೂಪಿ
ಬಡ ಪ್ರತಿಭಾವಂತ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಅಬ್ದುಲ್ಲಾ ಶೇಖ್, ಬಸವರಾಜ ಬೋವಿ, ಪಿ.ಎಸ್. ಪುನೀತಾ, ನಿತೀಶ ಶಂಕರ ಗೌಡ, ಸುಜಾತಾ ವೈ, ಶೇಕಪ್ಪ ಪಿ. ಬಳ್ಳಾರಿ, ಪ್ರಜ್ಞಾ ತಿಮ್ಮಪ್ಪ ಗೌಡ ಈ ಏಳು ಜನ ವಿದ್ಯಾರ್ಥಿಗಳಿಗೆ “ಪ್ರೀತಿಪದ ವಿದ್ಯಾರ್ಥಿ ಸಮ್ಮಾನ” ನೀಡಲಾಯಿತು. ಎರಡು ಗ್ರಾಮೀಣ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯ ಆಹಾರ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು. ಗಂಗಾಧರ ಹಿರೇಗುತ್ತಿ, ರಮಾನಂದ ನಾಯಕ, ಮೋಹನ ಹಬ್ಬು, ಎಂ.ಎ. ಖತೀಬ, ತಿಲಕ ಗೌಡ, ಮಾಧವ ನಾಯ್ಕ, ಸಫೂರಾ ಶೇಖ್ ಮುಂತಾದ ಗಣ್ಯರು ಈ ಸಮ್ಮಾನ ನೀಡಿದರು. ಗಣೇಶ ರಾಠೋಡ ವಿದ್ಯಾರ್ಥಿ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಬುಡಕಟ್ಟು ಶ್ರಮಜೀವಿಗಳಾದ ಸಿದ್ದಿ ಸಮುದಾಯದ ಆಮ್ಚ್ಯಾ ಮದ್ಲ್ಯಾ ಕಲಾತಂಡ ಹುಣಶೆಟ್ಟಿಕೊಪ್ಪ ಯಲ್ಲಾಪುರದ ಲಿಲ್ಲಿ ಮತ್ತು ಸಂಗಾತಿಗಳಿಂದ ಹಾಗೂ ರಂಗಕಲಾವಿದರಾದ ವಿದ್ಯಾ ನಾಯ್ಕ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಹುರೂಪಿ
ಸಮಾರಂಭದಲ್ಲಿ ರಮಾನಂದ ನಾಯಕ ಡಾ. ಎಂ.ಡಿ. ವಕ್ಕುಂದ, ಕೃಷ್ಣ ನಾಯಕ ಹಿಚ್ಕಡ, ಮಾಸ್ತಿ ಗೌಡ, ಮಹೇಶ ನಾಯಕ, ಅಕ್ಷತಾ ಕೃಷ್ಣಮೂರ್ತಿ, ಕಸಾಪ ತಾಲೂಕು ಅಧ್ಯಕ್ಷರಾದ ರಾಮಾ ನಾಯ್ಕ , ಖೈರುನ್ನಿಸಾ, ಶಾಲಿನಿ ಕಲ್ಮನೆ, ಶ್ಯಾಮನಾಥ ನಾಯ್ಕ, ಡಿ. ಸ್ಯಾಮ್ಸನ್, ಜಲಜಾ ವಾಸರೆ, ರತ್ನದೀಪಾ, ಗಣೇಶ ನಾಯ್ಕ ಮುಗ್ವಾ, ಎ.ಎ. ಖಾನ್ ಅನೇಕ ಗಣ್ಯರು ಇದ್ದರು. ಪ್ರೀತಿಪದ ಕಾರ್ಯದರ್ಶಿ ಯಮುನಾ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಲೇಖಕರಾದ ಎನ್.ಜಿ. ನಾಯ್ಕ ನಿರೂಪಿಸಿದರು. ವೀರೇಶ್ ರಾಠೋಡ ವಂದಿಸಿದರು. ಪ್ರೀತಿಪದ ಒಡನಾಡಿಗಳಾದ ಶೇಖಪ್ಪ, ಶಶಿಧರ ಕಾನಡೆ, ಪ್ರದ್ಯುಮ್ನ, ಮಲ್ಲಿಕಾರ್ಜುನ, ವಿನಯ ಸಿದ್ದಾಪುರ, ಓಂಕಾರ ಗುನಗಿ, ಎಂ.ಎಸ್.ಶೆಟ್ಟಿ, ಮೇಘನಾ ಗೌಡ, ಯಲ್ಲಪ್ಪ, ಯೋಗಿತಾ ಹಸ್ಲರ್, ಅಜೀಜ್, ಅಕ್ಷತಾ, ಜಿತೇಂದ್ರ ನಾಯ್ಕ, ಮೀನಾ ಮಾಸ್ತಿಗೌಡ ಮುಂತಾದವರು ಪೂರಕ ಕೆಲಸಗಳನ್ನು ನಿರ್ವಹಿಸಿದರು. ಸುಮಾರು 250 ಕ್ಕೂ ಹೆಚ್ಚು ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದನ್ನೂ ನೋಡಿ: ʼಮಿಥಿಲೆಯ ಮಾವಿನ ಮರʼದಿಂದ ಎರಡು ಕವಿತೆಗಳು Janashakthi Media
