ಬೆಂಗಳೂರು: ಕೇಂದ್ರ ಸರ್ಕಾರವನ್ನು ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆಯಿಂದಾಗಿ ಲಿಂಗತ್ವ ಅಲ್ಪಸಂಖ್ಯಾತರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ಕೂಡಲೇ ಇದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಲಾಯಿತು.
‘ತಿದ್ದುಪಡಿ ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಒಪ್ಪಿಗೆ ನೀಡಲಾಗಿದೆ. ರಾಷ್ಟ್ರಪತಿ ಕೂಡ ಮಸೂದೆಗೆ ಅಂಕಿತ ಹಾಕಿದ್ದು, ಇದು ಕಾಯ್ದೆಯಾದರೆ ಅಂತರ್ಲಿಂಗಿ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧೀಕರಣಗೊಳಿಸುವ ವ್ಯವಸ್ಥೆಯಾಗಿ ಮಾರ್ಪಡಲಿದೆ’ ಎಂದು ಆತಂಕ ವ್ಯಕ್ತಪಡಿಸಲಾಯಿತು.
ಇದನ್ನೂ ಓದಿ: “ರಾಮ, ಕೃಷ್ಣ, ಶಿವ” – ಭ್ರಮೆಯಿಂದ ಮಾನವೀಯತೆಯ ಕಡೆಗೆ ಸಾಗುವ ರಂಗಪ್ರಯೋಗ
ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಹಕ್ಕುಗಳ ಹೋರಾಟಗಾರ್ತಿ ಅಕ್ಕೈಪದ್ಮಶಾಲಿ ಮಾತನಾಡಿ, ‘ಸಮುದಾಯದ ಸ್ವಗೌರವ, ಆತ್ಮವಿಶ್ವಾಸ, ಘನತೆಗೆ ವಿರುದ್ಧವಾಗಿರುವ ಈ ಕಾಯ್ದೆಯನ್ನು ತಿರಸ್ಕರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಾದ್ಯಂತ ವಿರೋಧ ವ್ಯಕ್ತವಾಗಿದ್ದು, ಕಾಯ್ದೆ ಜಾರಿಗೊಳಿಸಬಾರದು’ ಎಂದು ಆಗ್ರಹಿಸಿದರು.
‘ವೈದ್ಯಕೀಯ ಮಂಡಳಿಯ ಮುಂದೆ ನಗ್ನವಾಗುವ, ಸ್ವಲಿಂಗತ್ವ ನಿರ್ಧರಿಸುವ ಹಕ್ಕನ್ನು ಕಸಿದುಕೊಂಡು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಒಪ್ಪಲಾಗದು. ಇದರ ವಿರುದ್ದ ಪ್ರತಿಭಟನೆ ನಡೆಸುವ ಜತೆಗೆ ಕಾನೂನು ಹೋರಾಟ ಅನಿವಾರ್ಯ’ ಎಂದು ತಿಳಿಸಿದರು.
ನಟಿ ರಮ್ಯಾ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ಅವರ ಬದುಕಿಗೆ ಪೂರಕವಾಗಿ ಹಕ್ಕುಗಳನ್ನು ನೀಡುವ ಬದಲು ಸರ್ಕಾರ ವಿರುದ್ದ ರೀತಿಯಲ್ಲಿ ನಡೆದುಕೊಳ್ಳುವಂತೆ ಕಾಯ್ದೆ ಜಾರಿಗೆ ತರಲು ಹೊರಟಿದೆ. ಈ ನಿಟ್ಟಿನಲ್ಲಿ ನಡೆಸಲಾಗುವ ಹೋರಾಟಗಳಿಗೆ ಬೆಂಬಲ ನೀಡುತ್ತೇನೆ’ ಎಂದು ಹೇಳಿದರು.
ನಟ ಚೇತನ್, ಮೇಘನಾ ಚೇತನ್ ಕೂಡ ಮಾತನಾಡಿದರು. ಒಕ್ಕೂಟದ ಅಧ್ಯಕ್ಷರಾದ ಪ್ರಕಾಶಿ, ಕರ್ನಾಟಕ ಅಂತರ್ಲಿಂಗಿ ಅಸೋಸಿಯೇಷನ್ ಅಧ್ಯಕ್ಷರಾದ ಅಬೇದ ಬೇಗಮ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ, ವಕೀಲೆ ಜಯ್ನಾ ಕೊಠಾರಿ, ಲೇಖಕಿ ಮಮತಾ ಸಾಗರ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಉರಿಗೌಡ–ನಂಜೇಗೌಡ ಸೃಷ್ಟಿಕರ್ತರಿಗೆ ‘ಹೈದರ್ ಅಲಿ–ಟಿಪ್ಪು ಸುಲ್ತಾನ್’ ಪುಸ್ತಕವೇ ಉತ್ತರ Janashakthi Media
