ಚೆನ್ನೈ: ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ವಿರುದ್ಧ ಪೆರಂಬೂರ್‌ನಲ್ಲಿ ಪ್ರಚಾರ ನಡೆಸುವಾಗ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೆರಂಬೂರು ಮತ್ತು ಕೊಳತ್ತೂರಿನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ವಿಜಯ್ ಭಾಗವಹಿಸಿದ್ದರು. ಆದರೆ, ಭದ್ರತೆ ಕಾರಣದಿಂದ ವಿಲ್ಲಿವಕ್ಕಂನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿತ್ತು.
ಚುನಾವಣಾ ಅಧಿಕಾರಿ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಒಟ್ಟು ಐದು ಸೆಕ್ಷನ್‌ಗಳ ಅಡಿಯಲ್ಲಿ ವಿಜಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಏ. 1ರಿಂದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿದ್ದರೆ ದಂಡ
ವಿಜಯ್ ಭಾಗವಹಿಸಿದ್ದ ರ್‍ಯಾಲಿಯಲ್ಲಿ ಅನುಮತಿಗಿಂತ ಹೆಚ್ಚು ಧ್ವನಿವರ್ಧಕಗಳನ್ನು ಬಳಸಲಾಗಿದೆ. ಅಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಜತೆಗೆ, 5,000ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಲಾಗಿದೆ ಎಂದು ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೆರಂಬೂರ್‌ನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ವಿಜಯ್ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದ ಮೇಲೆ ನಿಂತು ಭಾಷಣ ಮಾಡುತ್ತಿದ್ದರು. ಆದರೆ, ಜನಸಂದಣಿ ಹೆಚ್ಚಾದ ಕಾರಣ ವಿಜಯ್ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು.
ಚುನಾವಣಾ ಆಯೋಗಕ್ಕೆ ಟಿವಿಕೆ ಪತ್ರ…
ವಿಜಯ್ ಭದ್ರತೆ ಕುರಿತು ಟಿವಿಕೆ ಪಕ್ಷವು ಚುನಾವಣಾಧಿಕಾರಿಗೆ ಪತ್ರ ಬರೆದಿದೆ. ‘ವಿಜಯ್ ಅವರ ಬೆಂಗಾವಲು ವಾಹನಗಳಿಗೆ ಯಾವುದೇ ಪೊಲೀಸ್ ಭದ್ರತೆ ಒದಗಿಸಿಲ್ಲ.
ಪೊಲೀಸ್ ರಕ್ಷಣೆ ಇಲ್ಲದಿರುವುದು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ರಾಜಕೀಯ ಪಕ್ಷದ ಕಾನೂನುಬದ್ಧ ಪ್ರಚಾರ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಇದು ಆಡಳಿತಾತ್ಮಕ ಪಕ್ಷಪಾತದ ಬಗ್ಗೆ ಕಳವಳ ಮೂಡಿಸುತ್ತದೆ’ ಎಂದು ಹೇಳಿದೆ.
ಇದನ್ನೂ ನೋಡಿ: ಐವತ್ತೈದು ವಯಸ್ಸು, ಯುವಕನ ಉತ್ಸಾಹ: ಒಂಟಿ ಕಣ್ಣಿನ ಕೃಷ್ಣಮೂರ್ತಿ ಸಾಧನೆಯ ಪಯಣ Janashakthi Media
