ದಾವಣಗೆರೆ ಉಪಚುನಾವಣೆ: ಗ್ರಾಮಾಂತರದಲ್ಲಿ ಕಾಂಗ್ರೆಸ್–ಬಿಜೆಪಿ ತೀವ್ರ ಪೈಪೋಟಿ

ದಾವಣಗೆರೆ: ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ದಕ್ಷಿಣದ ಉಪಚುನಾವಣೆಯ ಹಿನ್ನೆಲೆ, ಚುನಾವಣಾ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದೂ, ನಿತ್ಯವೂ ವಿವಿಧ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನ ವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ. ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ. ದಾವಣಗೆರೆ

ಬೆಳಿಗ್ಗೆ, ಸಂಜೆ ಮಾತ್ರವಲ್ಲದೇ ಮಧ್ಯಾಹ್ನದ ಸುಡುಬಿಸಿಲಿನಲ್ಲೂ ಚುನಾವಣಾ ಪ್ರಚಾರದ ಕಾರ್ಯ ಸಾಗಿದೆ. ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರೂ, ಗಾಮಾಂತರ ಭಾಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಅಬ್ಬರವೇ ಹೆಚ್ಚಾಗಿ ಕಾಣುತ್ತಿದೆ.

ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ 50 ಮತಗಟ್ಟೆಗಳಿವೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ಗ್ರಾಮಗಳ ಮತಗಳೂ ಬಹುಮುಖ್ಯ ಪಾತ್ರವಹಿಸುತ್ತವೆ. ಇದೇ ಕಾರಣಕ್ಕೆ ವಿವಿಧ ಪಕ್ಷಗಳ ಮುಖಂಡರು ಗ್ರಾಮೀಣರ ಮತ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ: 12 ಟನ್ ಕಿಟ್‌ಕ್ಯಾಟ್ ನಾಪತ್ತೆ: ಯುರೋಪ್‌ನಲ್ಲಿ ಚಾಕೊಲೇಟ್ ಕಳವು ಸಂಚಲನ

ಗ್ರಾಮದ ಬಸ್‌ ನಿಲ್ದಾಣ, ಜಗುಲಿ ಕಟ್ಟೆ, ದೇವಸ್ಥಾನದ ಆವರಣ, ಹೋಟೆಲ್‌ಗಳಲ್ಲಿ ಸದ್ಯ ಉಪಚುನಾವಣೆಯ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿರುವುದು ಕಂಡು ಬರುತ್ತಿದೆ.

‘ಗ್ರಾಮದಲ್ಲಿ ಬಿಜೆಪಿ- ಕಾಂಗ್ರೆಸ್‌ ನಡುವೆ ಭಾರಿ ಪೈಪೋಟಿ ಇದೆ. ಕುಕ್ಕುವಾಡ ಶುಗರ್‌ ಕಾರ್ಖಾನೆಯಿಂದ ಸ್ಥಳೀಯರಿಗೆ ಆಗುತ್ತಿರುವ ದೂಳಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ಪ್ರಚಾರಕ್ಕೆ ಬರುವ ವಿವಿಧ ಪಕ್ಷಗಳ ಮುಖಂಡರು ಮಾತನಾಡುತ್ತಿಲ್ಲ. ಕಾರ್ಯಕರ್ತರು, ಮುಖಂಡರು ಮಾತ್ರ ಬರುತ್ತಿದ್ದಾರೆ. ರಾಜ್ಯ ಮಟ್ಟದ ನಾಯಕರು ಇನ್ನೂ ಬಂದಿಲ್ಲ’ ಎನ್ನುತ್ತಾರೆ ನಾಗರಸನಹಳ್ಳಿಯ ಪ್ರಕಾಶ್ ಡಿ.ವಿ.

‘ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು ಪಕ್ಷಗಳ ಅಭ್ಯರ್ಥಿಗಳ ಪರ ವಿವಿಧ ಗ್ರಾಮಗಳಿಗೆ ಹೋಗಿ ಬರುತ್ತಿದ್ದಾರೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಇನ್ನೂ ಗ್ರಾಮಕ್ಕೆ ಬಂದಿಲ್ಲ’ ಎಂದು ಕುಕ್ಕುವಾಡದ ಕೆ.ಎನ್.ಪ್ರಶಾಂತ್ ಹೇಳಿದರು.

‘ಚುನಾವಣಾ ಪ್ರಚಾರದ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊನೆಯ 3-4 ದಿನಗಳಿದ್ದಾಗ ದೊಡ್ಡ ಮಟ್ಟದಲ್ಲಿ ಡಿನ್ನರ್‌ ಪಾರ್ಟಿಗಳು ಆಯೋಜನೆಯಾಗುವ ವಾತಾವರಣ ಇದೆ’ ಎನ್ನುತ್ತಾರೆ ಬಲ್ಲೂರು ಗ್ರಾಮದ ಬಸವರಾಜ.

‘ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಪರ ಅವರ ತಾಯಿ ಪ್ರಭಾ ಅವರು ಗ್ರಾಮದಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಈ ಬಾರಿ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ’ ಎಂದು ಮುದಹದಡಿ ಗ್ರಾಮದ ಲೋಕೇಶ್ ಹೇಳಿದರು.

ಬಸಾಪುರ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಇನ್ನೂ ಭೇಟಿ ನೀಡಿ ಮತಯಾಚಿಸಿಲ್ಲ. ಸ್ಥಳೀಯ ಕಾರ್ಯಕರ್ತರೇ ಅವರವರ ಪಕ್ಷಗಳ ಕರಪತ್ರ ಹಂಚಿ ಪ್ರಚಾರದಲ್ಲಿ ತೊಡಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *