ವಾಷಿಂಗ್ಟನ್: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದೂ, ಮಾರ್ಚ್ 28ರಂದು ದೇಶದಾದ್ಯಂತ ಪ್ರತಿಭಟನಾಕಾರರು ರ್ಯಾಲಿ ನಡೆಸಿ ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಯ ಆಡಳಿತ ಶೈಲಿ, ವಲಸೆ ನೀತಿ ಹಾಗೂ ಇರಾನ್ ವಿರುದ್ಧದ ಯುದ್ಧದ ಕುರಿತು ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದಾರೆ.
‘ನೊ ಕಿಂಗ್ಸ್’ ಚಳವಳಿಯ ಭಾಗವಾಗಿ ಒಂದು ವರ್ಷದಲ್ಲಿ ಟ್ರಂಪ್ ವಿರುದ್ಧ ಜನರು ಮೂರನೇ ಸಲ ಬೀದಿಳಿಗಿಳಿದಿದ್ದಾರೆ. 2025ರ ಜನವರಿಯಲ್ಲಿ ಟ್ರಂಪ್ ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರ ನೀತಿಗಳು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸಕ್ಕರೆ ಬಟ್ಟಲಿನಲ್ಲೇ ಕಹಿ: ಮಂಡ್ಯದಲ್ಲಿ ಹೆಚ್ಚುತ್ತಿರುವ ಕೋಮು ಘರ್ಷಣೆಗಳು
ಅಮೇರಿಕಾದ ಅತಿ ಜನನಿಬಿಡ ನಗರವಾದ ನ್ಯೂಯಾರ್ಕ್ನಲ್ಲಿ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ಡಿ ನರೊ ಸಹ ಇದ್ದರು. ರಾಜಧಾನಿ ವಾಷಿಂಗ್ಟನ್ನಲ್ಲೂ ಪ್ರತಿಭಟನೆ ಭುಗಿಲೆದ್ದವು. ‘ಫ್ಯಾಸಿಸಂ ವಿರುದ್ಧ ಹೋರಾಡಿ’ ಎಂಬ ಬ್ಯಾನರ್ ಪ್ರದರ್ಶಿಸಿ ಮೆರವಣಿಗೆ ನಡೆಸಲಾಯಿತು.
ಟ್ರಂಪ್ ವಿರುದ್ಧದ ಭಾವನೆ ಅಮೇರಿಕಾದ ಗಡಿಯನ್ನು ದಾಟಿ ಅತ್ತ ಯುರೋಪಿನ ದೇಶಗಳಲ್ಲೂ ಪ್ರತಿಭಟನೆ ಕಂಡುಬಂದಿವೆ. ಶನಿವಾರ ಆರ್ಮ್ಸ್ಟರ್ಡಮ್, ಮ್ಯಾಡ್ರಿಡ್, ರೋಮ್ ಸೇರಿದಂತೆ ಯುರೋಪಿನ ಹಲವು ನಗರಗಳಲ್ಲಿ ಟ್ರಂಪ್ ವಿರುದ್ಧ ರ್ಯಾಲಿಗಳು ನಡೆದವು. ಸುಮಾರು 20 ಸಾವಿರ ಪೊಲೀಸ್ ಭದ್ರತೆಯಲ್ಲಿ ಮೆರವಣಿಗೆ ನಡೆಸಲಾಯಿತು.
‘ನೊ ಕಿಂಗ್ಸ್’ ಪ್ರತಿಭಟನೆ
ಕಳೆದ ಜೂನ್ನಲ್ಲಿ ಟ್ರಂಪ್ ಅವರ 79ನೇ ಹುಟ್ಟುಹಬ್ಬದಂದು ನೊ ಕಿಂಗ್ಸ್ ಪ್ರತಿಭಟನೆ ಮೊದಲ ಬಾರಿಗೆ ಹಮ್ಮಿಕೊಳ್ಳಲಾಯಿತು. ನ್ಯೂಯಾರ್ಕ್ನಿಂದ ಸ್ಯಾನ್ ಫ್ರಾನ್ಸಿಸ್ಕೊವರೆಗೆ ಸಾವಿರಾರು ಮಂದಿ ಭಾಗಿಯಾಗಿದ್ದರು.
ಅಕ್ಟೋಬರ್ನಲ್ಲಿ ನಡೆದ ಎರಡನೇ ಪ್ರತಿಭಟನೆಯಲ್ಲಿ ಏಳು ಮಿಲಿಯನ್ ಪ್ರತಿಭಟನಕಾರರು ಭಾಗಿಯಾಗಿದ್ದರು ಎಂದು ಸಂಘಟಕರು ಹೇಳಿದ್ದಾರೆ.
ಒಂದೆಡೆ ಟ್ರಂಪ್ ಅವರ ‘ಮೇಕ್ ಅಮೇರಿಕಾ ಗ್ರೇಟ್ ಎಗೈನ್’ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದ್ದರೂ ಇನ್ನೊಂದೆಡೆ ಅವರ ಧೋರಣೆಗಳು ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗುತ್ತಿದೆ.
ಇದನ್ನೂ ನೋಡಿ: ಯುವತಲೆಮಾರಿಗೆ ಕುವೆಂಪು ಓದು; ಸಾಹಿತ್ಯ ಚಿಂತನೆಗಳ ಸಡಗರ Janashakthi Media
