ಐಜಿಎನ್‌ಟಿಯು ಅಧ್ಯಾಪಕ ಸದಸ್ಯರ ಮೇಲೆ ಹಲ್ಲೆ; ಕ್ಯಾಂಪಸ್ ದಾಳಿಯಲ್ಲಿ ಎಬಿವಿಪಿ ವಿರುದ್ಧ ಆರೋಪ

ಮಧ್ಯಪ್ರದೇಶ: ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದಲ್ಲಿ (IGNTU) ವಸತಿ ನಿಲಯ (ಹಾಸ್ಟೆಲ್) ನಿರ್ವಹಣೆಯಲ್ಲಿ ನಡೆದ ಇತ್ತೀಚಿನ ಆಡಳಿತಾತ್ಮಕ ಬದಲಾವಣೆಗಳ ಹಿನ್ನೆಲೆ, ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರ ಮೇಲೆ ಮಾರ್ಚ್‌ 19ರ ರಾತ್ರಿ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ.

ಸಮಾಜಶಾಸ್ತ್ರ ಮತ್ತು ಸಾಮಾಜಿಕ ಮಾನವಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ಚಾರ್ಲ್ಸ್ ವರ್ಗೀಸ್ ಅವರ ಅಧಿಕೃತ ನಿವಾಸದಲ್ಲೇ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸಂಪರ್ಕ ಹೊಂದಿರುವ ಕೆಲ ವಿದ್ಯಾರ್ಥಿಗಳ ಅಸಮಾಧಾನವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಲಾಕಪ್‌ ಡೆತ್: ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ – ಜಿ. ಪರಮೇಶ್ವರ್

ವಸತಿ ನಿಲಯದಲ್ಲಿ ಅನಿಯಮಿತ ಕೊಠಡಿ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ವಾರ್ಡನ್ ಅವರನ್ನು ಪದಚ್ಯುತಗೊಳಿಸಲಾಗಿದ್ದು, ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಡಾ. ವರ್ಗೀಸ್ ಅವರನ್ನು ಹೊಸ ವಾರ್ಡನ್ ಆಗಿ ನೇಮಕ ಮಾಡಲಾಗಿತ್ತು. ಬಳಿಕ, ಅವರು ನಿಯಮಾನುಸಾರ ಕೊಠಡಿ ಹಂಚಿಕೆಯನ್ನು ಮರುಸಂಘಟಿಸಿದ್ದರಿಂದ ಕೆಲವು ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ಉದ್ವಿಗ್ನತೆ ಹೆಚ್ಚುತ್ತಿದ್ದು, ಅಂತಿಮವಾಗಿ ಈ ದಾಳಿಗೆ ದಾರಿಯಾಯಿತೆಂದು ಪ್ರಾಥಮಿಕ ಮಾಹಿತಿ ಸೂಚಿಸಿದೆ.

ಘಟನೆ ಕುರಿತು ವಿಶ್ವವಿದ್ಯಾಲಯ ಆಡಳಿತದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಈ ಘಟನೆಯ ಬಗ್ಗೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದು, ಕ್ಯಾಂಪಸ್ ಭದ್ರತೆ ಖಚಿತಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಧ್ಯಾಪಕರ ಸಂಘವು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದೆ ಎಂದು ತಿಳಿದುಬಂದಿದೆ. ಪ್ರಕರಣ ಕುರಿತು ಶೀಘ್ರದಲ್ಲೇ ಅಧಿಕೃತ ತನಿಖೆ ಆರಂಭಿಸುವ ನಿರೀಕ್ಷೆಯಿದೆ.

ಇದನ್ನೂ ನೋಡಿ: ಸೈಬರ್ ಹರಾಶ್ಮೆಂಟ್ ಕೂಡಾ ಲೈಂಗಿಕ ದೌರ್ಜನ್ಯ – ಡಾ. ನಂದಿನಿ ಬಿ.ಎನ್ Janashakthi Media

Donate Janashakthi Media

Leave a Reply

Your email address will not be published. Required fields are marked *