ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿಯ ‘ಬಿ-ಟೀಮ್’ – ಕೇರಳ ಸಿಎಂ ಆರೋಪ

ತಿರುವನಂತಪುರಂ: ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ಬಿಜೆಪಿ ಪಕ್ಷದ ‘ಬಿ-ಟೀಮ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆಂದು newindianexpress ವರದಿ ಮಾಡಿದೆ.

ಪಿಟಿಐ ವಿಡಿಯೋಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶದ ಇತರೆ ಪ್ರತಿಪಕ್ಷ ನಾಯಕರನ್ನು ಕೇಂದ್ರ ಸಂಸ್ಥೆಗಳು ಬಂಧಿಸಿದ್ದರೂ ಅಥವಾ ವಿಚಾರಣೆಗೆ ಕರೆಸಿಕೊಂಡಿದ್ದರೂ, ಕೇರಳ ಮುಖ್ಯಮಂತ್ರಿಯನ್ನು ಮಾತ್ರ ಹೊರತುಪಡಿಸಲಾಗಿದೆ ಎಂಬ ರಾಹುಲ್ ಗಾಂಧಿ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಅದರ ನಾಯಕರು ಬಿಜೆಪಿ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಜಯನ್ ಆರೋಪಿಸಿದರು.

ಇನ್ನೂ ಮುಂದೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ತೃಪ್ತಿಪಡಿಸುವ ರಾಜಕಾರಣ (ಅಪೀಸ್ಮೆಂಟ್ ಪಾಲಿಟಿಕ್ಸ್) ನಡೆಸುತ್ತಿದ್ದು, ಬಹುಮತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಧಾರ್ಮಿಕ ಧ್ರುವೀಕರಣದ ಗುಂಪುಗಳ ಬೆಂಬಲವನ್ನು ಪಡೆಯಲು ಯತ್ನಿಸುತ್ತಿದೆ ಎಂದು ದೂರಿದರು.

ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಜ್ಯೋತಿಷಿ ಅಶೋಕ್ ಖಾರಟ್ ಬಂಧನ

ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಯಾವುದೇ ರೀತಿಯ ಧಾರ್ಮಿಕ ಧ್ರುವೀಕರಣಕ್ಕೆ ವಿರೋಧಿಯಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಗುಂಪುಗಳ ಬೆಂಬಲವನ್ನು ಹುಡುಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಬರಿಮಲೆ ಚಿನ್ನ ಕಳವು ಪ್ರಕರಣದ ಕುರಿತು ಮಾತನಾಡಿದ ವಿಜಯನ್, ಈ ಪ್ರಕರಣದ ತನಿಖೆಯನ್ನು ಕೇರಳ ಹೈಕೋರ್ಟ್ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಾಡುತ್ತಿರುವ ಆರೋಪಗಳ ನಡುವೆಯೂ ತನಿಖೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದರು.

ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಿಡುವುದಿಲ್ಲ ಎಂಬುದು ಸರ್ಕಾರದ ನಿಲುವಾಗಿದ್ದು, ಈ ವಿಷಯದ ಮೇಲೆ ಸಿಪಿಐ(ಎಂ) ವಿರುದ್ಧದ ಪ್ರತಿಪಕ್ಷದ ಆರೋಪಗಳು ಏಪ್ರಿಲ್‌ 9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

ಇದೇ ವೇಳೆ, ಕೇರಳದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ರಾಜ್ಯದ ಶಿಕ್ಷಣ ಸಂಸ್ಥೆಗಳ ಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ದಿಶೆಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಜಯನ್ ತಿಳಿಸಿದರು.

ವಯನಾಡು ಪುನರ್ವಸತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಕೇಂದ್ರ ಸರ್ಕಾರ ಕೇರಳದ ವಿರುದ್ಧ ವೈಮನಸ್ಯದ ನಿಲುವು ತೋರಿಸುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರವು ರಾಜ್ಯಕ್ಕೆ ಸಾಕಷ್ಟು ಸಹಾಯ ಮಾಡಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ಹೇಳಿಕೆಯನ್ನು “ಅಸಂಬದ್ಧ” ಎಂದು ತಿರಸ್ಕರಿಸಿದರು.

ಇದನ್ನೂ ನೋಡಿ: ₹1ಕ್ಕೆ 1 ಲೀಟರ್ ಹಾಲು – ಫ್ಲಿಪ್‌ಕಾರ್ಟ್ ವಿರುದ್ಧ ಸಿಡಿದೆದ್ದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *