ಮುಡಾ ತನಿಖೆ ವಿವಾದ: ಸಿದ್ದರಾಮಯ್ಯ ಮೇಲ್ಮನವಿ ಜೂನ್‌ 8ಕ್ಕೆ ಮುಂದೂಡಿಕೆ

ಬೆಂಗಳೂರು: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿಸಿರುವುದನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಾಲಯವು ಜೂನ್‌ 8ಕ್ಕೆ ಮುಂದೂಡಿದೆ. ಇದರೊಂದಿಗೆ ಸತತ 10ನೇ ಬಾರಿಗೆ ಪ್ರಕರಣದ ವಿಚಾರಣೆ ಮುಂದೂಡಿದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಕ್ಷೇಪಾರ್ಹ ಭೂಮಿಯ ಮಾಲೀಕ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ಪೀಠ ನಡೆಸಿತು.

ಸಿದ್ದರಾಮಯ್ಯ ಪರವಾಗಿ ಹಾಜರಾಗಿದ್ದ ವಕೀಲ ಶತಭಿಷ್‌ ಶಿವಣ್ಣ ಅವರು “ಮೇಲ್ಮನವಿಗಳ ವಿಚಾರಣೆ ಮುಂದೂಡಿಕೆ ಕೋರಿಕೆಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ತಿಳಿಸಲಾಗಿದೆ. ಹೀಗಾಗಿ, ಅರ್ಜಿಯ ವಿಚಾರಣೆ ಮುಂದೂಡಬೇಕು” ಎಂದರು.

ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಹರೀಶ್ ರಾಣಾಗೆ ಭಾವುಕ ವಿದಾಯ

ಆಗ ಪೀಠವು “ಯಾವ ಪ್ರಕರಣ ಇದು?” ಎಂದಿತು. ಅದಕ್ಕೆ ಶತಭಿಷ್‌ ಅವರು” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತನಿಖೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದನ್ನು ಏಕಸದಸ್ಯ ಪೀಠ ಎತ್ತಿಹಿಡಿದಿದೆ. ಇದನ್ನು ಪ್ರಶ್ನಿಸಿರುವ ಮೇಲ್ಮನವಿ ಇದಾಗಿದೆ” ಎಂದರು.

ಆಗ ಪೀಠ “ಇದರ ಜೊತೆಗೆ ಹಲವು ಮೇಲ್ಮನವಿಗಳು ಇವೆಯಲ್ಲಾ?” ಎಂದಿತು. ಇದಕ್ಕೆ ಶತಭಿಷ್‌ ಅವರು “ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಪ್ರತಿನಿಧಿಸುತ್ತೇನೆ. ಇತರೆ ಪ್ರತಿವಾದಿಗಳ ಪರವಾಗಿ ಸಹೋದ್ಯೋಗಿಗಳು ಪ್ರತಿನಿಧಿಸುತ್ತಿದ್ದಾರೆ” ಎಂದರು. ಇದನ್ನು ಆಲಿಸಿದ ಪೀಠವು ಮೇಲ್ಮನವಿಗಳನ್ನು ಜೂನ್‌ 8ಕ್ಕೆ ಮುಂದೂಡಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿಸಿದ್ದ ಆದೇಶವನ್ನು ಏಕಸದಸ್ಯ ಪೀಠವು 2024ರ ಸೆಪ್ಟೆಂಬರ್‌ 24ರಂದು ಎತ್ತಿ ಹಿಡಿದಿತ್ತು. ಆನಂತರ ಒಂದು ತಿಂಗಳ ಬಳಿಕ ಸಿದ್ದರಾಮಯ್ಯ ಅವರು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಆಕ್ಷೇಪಾರ್ಹ ಭೂಮಿಯ ಮಾಲೀಕ ದೇವರಾಜು ಸಹ ಮೇಲ್ಮನವಿ ಸಲ್ಲಿಸಿದ್ದರು.

2026ರ ಜನವರಿ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಮತ್ತು ಆಕ್ಷೇಪಾರ್ಹವಾದ ಭೂಮಿಯ ಮಾಲೀಕ ಜೆ ದೇವರಾಜ್‌ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಒಪ್ಪಿಕೊಂಡಿತ್ತು. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ಕೇಳಿಬಂದಿದ್ದ ಮುಡಾ ಭ್ರಷ್ಟಾಚಾರ ಹಗರಣದಲ್ಲಿ ಅವರ ಪಾತ್ರವನ್ನು ನಿರೂಪಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎನ್ನುವುದನ್ನು ನ್ಯಾಯಾಲಯ ಒಪ್ಪಿದಂತಾಗಿತ್ತು.

2024ರ ಅಕ್ಟೋಬರ್‌ 1ರಂದು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತನಗೆ ಮಂಜೂರು ಮಾಡಿರುವ 14 ನಿವೇಶನಗಳನ್ನು ಹಿಂಪಡೆಯುವಂತೆ ಮುಡಾಗೆ ಪತ್ರ ಬರೆದಿದ್ದರು. ಇದನ್ನು ಪರಿಗಣಿಸಿ ಅಂದೇ ಮುಡಾವು ನಿವೇಶನಗಳ ಕ್ರಯಪತ್ರ ರದ್ದುಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ನೋಡಿ: ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಗೆ ಖಂಡನೆ: ಸೌದೆ ಒಲೆ ಹಚ್ಚಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *