ಕನ್ನಡಕ್ಕೆ ಅವಕಾಶವಿಲ್ಲ: ರೈಲ್ವೆ ಪರೀಕ್ಷೆ ರದ್ದು, ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕನ್ನಡ ಭಾಷೆಗೆ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಉಂಟಾದ ಪ್ರತಿಭಟನೆ ಮತ್ತು ನಂತರದ ಪರೀಕ್ಷೆ ರದ್ದತಿ ಪ್ರಹಸನ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಭಾಷಾ ನೀತಿ ಮತ್ತು ಕನ್ನಡಿಗರಿಗೆ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈರುತ್ಯ ರೈಲ್ವೆಯ 194 ಗೂಡ್ಸ್‌ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದ ಎಲ್‌ಡಿಸಿಇ 101 ಮುಂಬಡ್ತಿ ಹುದ್ದೆಗಳಿಗೆ ಇಂದು ಪರೀಕ್ಷೆ ನಡೆಯಬೇಕಿತ್ತು. ಆದರೆ, ಈ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂಬ ಕನ್ನಡಿಗ ಉದ್ಯೋಗಿಗಳ ಬೇಡಿಕೆಯನ್ನು ರೈಲ್ವೆ ಇಲಾಖೆ ನಿರ್ಲಕ್ಷಿಸಿತ್ತು. ಕನ್ನಡ ಸಂಘಟನೆಗಳು ಮತ್ತು ಅಭ್ಯರ್ಥಿಗಳ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆಯು ಪರೀಕ್ಷೆ ಆರಂಭವಾಗುವ ಕೊನೆ ಕ್ಷಣದಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿತು. ಇದು ಅಭ್ಯರ್ಥಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.

ವಿಶೇಷವಾಗಿ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವ ಕನ್ನಡಿಗ ವಿ. ಸೋಮಣ್ಣ ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ವಾಗ್ದಾಳಿ ನಡೆಸಿದ್ದಾರೆ. ‘ಸೋಮಣ್ಣನವರು ಸಚಿವರಾಗಿರುವಾಗಲೇ ಕನ್ನಡಿಗರಿಗೆ ಇಂತಹ ಅನ್ಯಾಯವಾಗುತ್ತಿರುವುದು ದುರದೃಷ್ಟಕರ. ಅವರು ಮಾತನಾಡಲು ಶುರು ಮಾಡಿದರೆ ರೈಲ್ವೆ ಇಲಾಖೆ ಇರುವುದೇ ಕರ್ನಾಟಕಕ್ಕಾಗಿ ಎಂಬಂತೆ ಮಾತಿನ ಅರಮನೆ ಕಟ್ಟುತ್ತಾರೆ. ಆದರೆ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಅವರು ಮಾತು ಕಡಿಮೆ ಮಾಡಿ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಲಿ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದನ್ನೂ ಓದಿ: ಭ್ರಮಾಧೀನ ಸಮಾಜ – ಯುವಜನಾಂಗದ ಕನಸು

ಕೇಂದ್ರದ ವಿವಿಧ ಇಲಾಖೆಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿರುವುದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುವ ತಂತ್ರ ಎಂದು ಸಿಎಂ ಕರೆದಿದ್ದಾರೆ.

‘ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷೆಯ ಮೇಲೆ ಇರುವ ಪ್ರೀತಿ ಮತ್ತು ಕನ್ನಡದ ಮೇಲಿರುವ ತಾತ್ಸಾರ ಮನೋಭಾವವನ್ನು ನಾವು ಸಹಿಸುವುದಿಲ್ಲ. ಉತ್ತರ ಭಾರತದ ಹಿಂದಿ ಭಾಷಿಗರಿಗೆ ನೆರವಾಗಲೆಂದೇ ಈ ರೀತಿ ಮಾಡಲಾಗುತ್ತಿದೆ. ನಾವು ಹಿಂದಿಯನ್ನು ಭಾಷೆಯಾಗಿ ವಿರೋಧಿಸುವುದಿಲ್ಲ, ಆದರೆ ನಮ್ಮ ಮೇಲೆ ಹೇರುವುದನ್ನು ಖಂಡಿಸುತ್ತೇವೆ’ ಎಂದು ಗುಡುಗಿದ್ದಾರೆ.

‘ಕನ್ನಡಿಗರು ಉದ್ಯೋಗಕ್ಕಾಗಿ ಅಥವಾ ಭಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ. ಅವರು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ತಾವು ಕಲಿತ ಭಾಷೆಯಲ್ಲೇ ಪರೀಕ್ಷೆ ಬರೆಯುವುದು ಅವರ ಸಾಂವಿಧಾನಿಕ ಹಕ್ಕು’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಅಲ್ಲದೆ, ಬಿಜೆಪಿ ಸಂಸದರು ಪಕ್ಷದ ಮುಲಾಜಿಗೆ ಬಿದ್ದು ದನಿ ಎತ್ತದೆ ಬಾಯಿ ಮುಚ್ಚಿಕೊಂಡಿರುವುದು ಅಕ್ಷಮ್ಯ ಎಂದು ಅವರು ಕಿಡಿಕಾರಿದ್ದಾರೆ. ಈ ಗಂಭೀರ ಭಾಷಾ ತಾರತಮ್ಯದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ರದ್ದುಪಡಿಸಲಾದ ಪರೀಕ್ಷೆಗಳನ್ನು ಶೀಘ್ರದಲ್ಲಿಯೇ ಕನ್ನಡದಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಗೆ ಖಂಡನೆ: ಸೌದೆ ಒಲೆ ಹಚ್ಚಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *