– ವಸಂತರಾಜ ಎನ್.ಕೆ
ಇರಾನ್ ಮೇಲೆ ಯು.ಎಸ್-ಇಸ್ರೇಲ್ ಯುದ್ಧ 12 ನೇ ದಿನ ಪ್ರವೇಶಿಸಿದ್ದು ಪರಸ್ಪರ ದಾಳಿಗಳು ಮುಂದುವರೆಯುತ್ತಿದ್ದರೂ, ಯುದ್ಧ ನಿಲ್ಲುವ ಕೆಲವು ಲಕ್ಷಣಗಳು ಕಾಣಿಸಲಾರಂಭಿಸಿವೆ. ಅತ್ಯಂತ ಭೀಕರ ದಾಳಿ ನಡುವೆಯೂ ಇರಾನ್ ರಾಜಕೀಯ-ಮಿಲಿಟರಿ ನಾಯಕತ್ವ ಶರಣಾಗಲು ನಿರಾಕರಿಸಿರಿದೆ. ಮಾತ್ರವಲ್ಲ, ಕೊಲ್ಲಿ ದೇಶಗಳಲ್ಲಿರುವ ಯು.ಎಸ್ ಮಿಲಿಟರಿ ನೆಲೆಗಳ ಮತ್ತು ಇಸ್ರೇಲ್ ಮೇಲೆ ತೀವ್ರ ಪ್ರತಿದಾಳಿಯನ್ನು ಮುಂದುವರೆಸುತ್ತಿದೆ. ಮಿಲಿಟರಿ ಪರಿಸ್ಥಿತಿಗಿಂತಲೂ ಇರಾನ್ ಹೋರ್ಮುಝ್ ಜಲಸಂಧಿ ಬಂದ್ ಮೂಲಕ ಸಾರಿರುವ ‘ಆರ್ಥಿಕ ಯುದ್ಧ’ ಯು.ಎಸ್ ನ್ನು ಹೈರಾಣಾಗಿಸಿದೆ. ಹಾಗಾಗಿ ಕದನ ವಿರಾಮಕ್ಕೆ ಹಿಂಬಾಗಿಲಿನ ಮೂಲಕ ಸಂಪರ್ಕ ಮಾಡುತ್ತಿದೆ. ಇರಾನ್ ಅದಕ್ಕೆ ಮೂರು ಶರತ್ತುಗಳನ್ನು ಹಾಕುತ್ತಿದೆ ಎಂದು ವರದಿಯಾಗುತ್ತಿದೆ.
ಮಾರ್ಚ್ 12 ರಾತ್ರಿ 11 ಗಂಟೆ : ಇರಾನ್ ಮೇಲೆ ಯು.ಎಸ್-ಇಸ್ರೇಲ್ ಯುದ್ಧ 12 ನೇ ದಿನ ಪ್ರವೇಶಿಸಿದ್ದು ಪರಸ್ಪರ ದಾಳಿಗಳು ಮುಂದುವರೆಯುತ್ತಿದ್ದರೂ, ಯುದ್ಧ ನಿಲ್ಲುವ ಕೆಲವು ಲಕ್ಷಣಗಳು ಕಾಣಿಸಲಾರಂಭಿಸಿವೆ. ಜೂನ್ 2025ರ ಯುದ್ಧದ ಪುನರಾವರ್ತನೆಯ ಲಕ್ಷಣಗಳು ಕಂಡು ಬಂದಿವೆ. ಇದಕ್ಕೆ ಕಾರಣ ತೀವ್ರ ಮಿಲಿಟರಿ ಕ್ಷಮತೆ ಮತ್ತು ಮೂಲಸೌಕರ್ಯಗಳ ಮೇಲೆ ಅತ್ಯಂತ ಭೀಕರ ದಾಳಿ ನಡುವೆಯೂ ಇರಾನ್ ರಾಜಕೀಯ-ಮಿಲಿಟರಿ ನಾಯಕತ್ವ ಶರಣಾಗಲು ನಿರಾಕರಿಸಿರುವುದು. ಮಾತ್ರವಲ್ಲ, ಕೊಲ್ಲಿ ದೇಶಗಳಲ್ಲಿರುವ ಯು.ಎಸ್ ಮಿಲಿಟರಿ ನೆಲೆಗಳ ಮತ್ತು ಇಸ್ರೇಲ್ ಮೇಲೆ ತೀವ್ರ ಪ್ರತಿದಾಳಿಯನ್ನು ಮುಂದುವರೆಸುತ್ತಿರುವುದು. ಮಿಲಿಟರಿ ಪರಿಸ್ಥಿತಿಗಿಂತಲೂ ಇರಾನ್ ಸಾರಿರುವ ಆರ್ಥಿಕ ಯುದ್ಧ ಯು.ಎಸ್ ನ್ನು ಹೈರಾಣಾಗಿಸಿದೆ.
ಹಾಗಾಗಿ ಕದನ ವಿರಾಮಕ್ಕೆ ಹಿಂಬಾಗಿಲಿನ ಮೂಲಕ ಸಂಪರ್ಕ ಮಾಡುತ್ತಿದೆ. ಇರಾನ್ ಅದಕ್ಕೆ ಹಲವು ಶರತ್ತುಗಳನ್ನು ಹಾಕುತ್ತಿದೆ ಎಂದು ವರದಿಯಾಗುತ್ತಿದೆ. ಹಾಗಾಗಿಯೇ ಇತ್ತೀಚಿನ ವರೆಗೂ ಯುದ್ಧ ಹಲವು ವಾರಗಳ ಕಾಲವಾದರೂ ಸರಿ, ಇರಾನ್ ಶರಣಾಗತವಾಗುವ ವರೆಗೂ, ಅಲ್ಲಿನ ಸರಕಾರ ಬದಲಾಯಿಸುವ ವರೆಗೂ ಮುಂದುವರೆಯುತ್ತದೆ ಎಂದು ಹೇಳುತ್ತಿದ್ದ ಟ್ರಂಪ್, ಈಗ ಯಾವಾಗ ಬೇಕಾದರೂ ಯುದ್ಧ ಮುಗಿಯಬಹುದು ಎಂದು ಹೇಳುತ್ತಿದ್ದಾರೆ. ಯುದ್ಧ ಆರಂಭಿಸಿದವರು ಅದನ್ನು ನಿಲ್ಲಿಸಬೇಕು. ಇದಲ್ಲದೆ, ಇರಾನ್ ಮೂರು ಶರತ್ತುಗಳನ್ನು ಬಹಿರಂಗವಾಗಿಯೇ ಒಡ್ಡಿದೆ. ಈ ನಡುವೆ ಸರ್ವೋಚ್ಛ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಾಬಾ ಖಮೇನಿ (ಹಿಂದಿನ ನಾಯಕನ ಎರಡನೇ ಮಗ) ಇನ್ನಷ್ಟು ಉಗ್ರ ಧೋರಣೆ ಅನುಸರಿಸಲಿದ್ದಾರೆ ಎಂಭ ಸೂಚನೆಗಳಿವೆ.

ಇರಾನ್ ಮಿಲಿಟರಿ ಕ್ಷೇತ್ರದಲ್ಲಿ ಜೂನ್ 2025ರ ಯುದ್ಧದಲ್ಲಿ ಅನುಸರಿಸಿದ ತಂತ್ರಗಳನ್ನೇ ಅನುಸರಿಸಿದೆ. ದಾಳಿಯನ್ನು ಮೊದಲಿಗೆ ಅಗ್ಗದ ಕಡಿಮೆ ಕ್ಷಮತೆಯ ಡ್ರೋನ್/ಕ್ಷಿಪಣಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಬಳಸಿ, ಯು.ಎಸ್-ಇಸ್ರೇಲಿ ದುಬಾರಿ ಮೌಲ್ಯದ ಕ್ಷಿಪಣಿ-ನಿರೋಧಕ ಕ್ಷಿಪಣಿಗಳನ್ನು ಖರ್ಚು ಮಾಡಿಸುವುದು. ದಿನ 12 ರ ಹೊತ್ತಿಗೆ ಇವುಗಳ ತೀವ್ರ ಕೊರತೆ ಕಂಡು ಬರುತ್ತಿದ್ದಂತೆ ಹೆಚ್ಚಿನ ಕ್ಷಮತೆಯ ಕ್ಷಿಪಣಿಗಳನ್ನು ಬಳಸಿ ದಾಳಿಯ ತೀವ್ರತೆಯನ್ನು ಹೆಚ್ಚಿಸುವುದು ತಂತ್ರವಾಗಿತ್ತು. ಈ ಬಾರಿ ಸಹ ಈ ತಂತ್ರ ಕೆಲಸ ಮಾಡುವಂತೆ ಕಾಣುತ್ತಿದೆ.
ಇದನ್ನೂ ಓದಿ: “ಯುದ್ಧಗಳು ಸಾಮ್ರಾಜ್ಯಶಾಹಿ ದುರಾಸೆಗಾಗಿ; ಯುದ್ಧವು ವಿನಾಶಕಾರಿ” – ಸಿ. ಯತಿರಾಜು
ಪ್ರಮುಖ ವ್ಯತ್ಯಾಸವೆಂದರೆ ಈ ಬಾರಿ ಮೊದಲೇ ಎಚ್ಚರಿಸಿದಂತೆ ಕೊಲ್ಲಿ ದೇಶಗಳಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ದಾಳಿಯ ಮೂಲಕ ಅವನ್ನು ಇರಾನ್ ಹೆಚ್ಚು ಕಡಿಮೆ ನಾಶ ಮಾಡಿದೆ. ಯು.ಎಸ್-ಇಸ್ರೇಲ್ ಇರಾನಿನ ತೈಲ ಸ್ಥಾವರ ಮತ್ತು ಶೇಖರಣೆಯ ಟ್ಯಾಂಕುಗಳ ಮತ್ತು ಶಾಲೆ-ಆಸ್ಪತ್ರೆ ನೀರಿನ ಟ್ಯಾಂಕುಗಳು ಮುಂತಾದ ನಾಗರಿಕ ಸೌಲಭ್ಯಗಳ ಮೇಲೆ ಯು.ಎಸ್-ಇಸ್ರೇಲ್ ದಾಳಿ ಮಾಡಿದ ಮೇಲೆ, ಕೊಲ್ಲಿ ದೇಶಗಳ ಕೆಲವು ತೈಲ ಮತ್ತು ನಾಗರಿಕ ಸ್ಥಾವರಗಳ ಮೇಲೆ ಇರಾನ್ ದಾಳಿ ನಡೆಸಿದೆ. ಇದು ಕೊಲ್ಲಿ ದೇಶಗಳನ್ನು ತತ್ತರಗೊಳಿಸಿದೆ. ಅಲ್ಲಿನ ಶೇಖ್ ಗಳು ಯು.ಎಸ್ ಮೇಲೆ ದಾಳಿ ನಿಲ್ಲಿಸಲು ಒತ್ತಡ ಹಾಕುತ್ತಿವೆ. ರಶ್ಯ, ಚೀನಗಳನ್ನು ಮಧ್ಯಸ್ಥಿಕೆ ವಹಿಸಲು ಕೋರಿಕೊಂಡಿವೆ.
ಇರಾನಿನ ‘ಆರ್ಥಿಕ ಯುದ್ಧ’
ಹೊರ್ಮುಝ್ ಜಲಸಂಧಿಯಿಂದ ತೈಲ ಸಾಗಾಣಿಕೆ ನಿಂತಿರುವುದು ಇರಾನಿನ ದೊಡ್ಡ ಅಸ್ತ್ರ. ಮೊದಲ ದಿನಗಳಲ್ಲಿ ವಿಪರೀತವಾಗಿ ಏರಿದ ಮತ್ತು ವಿಮೆಯ ಅಲಭ್ಯತೆಯಿಂದಾಗಿ ಸಾಗಾಣಿಕೆ ನಿಂಇತ್ತು. ಇದರ ಪರಿಣಾಮವಾಗಿ ಜಾಗತಿಕ ತೈಲದಲ್ಲಿ ತೀವ್ರ ಏರುಪೇರು ಆಗುತ್ತಿದ್ದು, ಯುದ್ಧದ ಮೊದಲು ಪ್ರತಿ ಬ್ಯಾರೆಲ್ ಗೆ 67 ಡಾಲರ್ ಇದ್ದಿದ್ದು 117 ರ ವರೆಗೆ ಹೋಗಿತ್ತು. ಜಲಸಂಧಿ ಬಂದ್ ಮುಂದುವರೆದರೆ ತೈಲ ಬೆಲೆ ಬ್ಯಾರೆಲ್ ಗೆ 150 ಡಾಲರ್ ಮುಟ್ಟಲಿದೆ ಕಟಾರ್ ನ ಹಣಕಾಸು ಸಚಿವರೇ ಹೇಳಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಇರಾನಿನ ಐ.ಆರ್.ಜಿ.ಸಿ ತನ್ನ ‘ಅನುಮತಿ’ ಇಲ್ಲದೆ (ಅದರಲ್ಲೂ ಯು.ಎಸ್-ಇಸ್ರೇಲಿ ಮತ್ತು ಅದರ ಬೆಂಬಲಿಗ ದೇಶದ) ಯಾವುದೇ ಹಡಗು ಜಲಸಂಧಿ ದಾಟಲು ಪ್ರಯತ್ನಿಸಿದರೆ ಅದರ ಮೇಲೆ ದಾಳಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದೆ.
ಬರಿಯ ಬೆದರಿಕೆ ಮಾತ್ರವಲ್ಲ, ದಾಟಲು ಪ್ರಯತ್ನಿಸಿದ 5 ತೈಲ ಟ್ಯಾಂಕರ್ ಗಳ ಮೇಲೆ ದಾಳಿ ನಡೆದಿದೆ. ಹೊಸ ಸರ್ವೋಚ್ಛ ನಾಯಕ ತನ್ನ ಮೊದಲ ಹೇಳಿಕೆಯಲ್ಲಿ ಹೊರ್ಮುಝ್ ಜಲಸಂಧಿ ಮುಚ್ಚಲಾಗಿದೆ ಎಂದಿದ್ದಾರೆ. ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 200 ಡಾಲರು ಮುಟ್ಟಲಿದೆ ಎಂದು ಎಚ್ಚರಿಸಿದ್ದಾರೆ. ಇದರ ಪರಿಣಾಮವಾಗಿ, ಈಗಾಗಲೇ ಭಾರತ, ಯುರೋ ಕೂಟ ಸೇರಿದಂತೆ ಹಲವು ದೇಶಗಳಲ್ಲಿ ತೈಲ (ಪೆಟ್ರೋಲ್, ಡಿಸಿಲ್, ಎಲ್.ಪಿ.ಜಿ) ಕೊರತೆಗೆ ಕಾರಣವಾಗಿದೆ. ಯು.ಎಸ್ ನಲ್ಲೂ ಪೆಟ್ರೋಲ್ ಬೆಲೆ ಏರಲಾರಂಭಿಸಿದೆ.

ಇರಾನ್ ಮತ್ತು ಕೊಲ್ಲಿ ದೇಶಗಳ ಹಲವು ತೈಲ ಸ್ಥಾವರಗಳು ದಾಳಿಯಿಂದಾಗಿ ಉತ್ಪಾದನೆ ನಿಲ್ಲಿಸಿವೆ. ಇದರಿಂದಾಗಿ ಈಗ ಯುದ್ಧ ನಿಂತರೂ ತೈಲ ಉತ್ಪಾದನೆ ಹಳೆಯ ಮಟ್ಟಕ್ಕೆ ಬರುವುದಕ್ಕೆ ತಿಂಗಳೇ ಹಿಡಿಯಬಹುದು. ತೈಲ ಉತ್ಪನ್ನಗಳ ಮೇಲೆ ಅವಲಂಬಿಸಿರುವ ಗೊಬ್ಬರ, ರಾಸಾಯನಿಕಗಳ ಉತ್ಪಾದನೆಯಲ್ಲೂ ಕೊರತೆ ಕಾಣಿಸಿಕೊಂಡು, ಒಟ್ಟಾರೆ ಬೆಲೆಏರಿಕೆಗೆ ಕಾರಣವಾಗಬಹುದು. ಈಗಾಗಲೇ ಅದು ಆರಂಭವಾಗಿದೆ. ಆಹಾರ ಮುಂತಾದ ಆವಶ್ಯಕ ವಸ್ತುಗಳು ಆಮದು ಮೇಲೆಯೇ ಕೊಲ್ಲಿ ದೇಶಗಳೂ ಅವಲಂಬಿಸಿದ್ದು 1-2 ವಾರದಲ್ಲಿ ತೀವ್ರ ಕೊರತೆ ಕಾಣಿಸಿಕೊಳ್ಳಬಹುದು. ಮಾತ್ರವಲ್ಲ ಜಾಗತಿಕ ಶೇರು ಮಾರುಕಟ್ಟೆಯಲ್ಲಿ, ಆರ್ಥಿಕತೆಯಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ. ಜಲಸಂಧಿ ಬಂದ್ ಒಂದು ವಾರ ಮುಂದುವರೆದರೂ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಲಿದೆ. ಸಾಗಾಣಿಕೆ ಹಡಗುಗಳಿಗೆ ಯು.ಎಸ್ ನೌಕಾಪಡೆ ರಕ್ಷಣೆ ಕೊಡುವುದು ಎಂದಿದ್ದರು ಟ್ರಂಪ್. ಕೊಲ್ಲಿ ಪ್ರದೇಶದ ಯು.ಎಸ್ ನೌಕಾಪಡೆ ಇದು ಸದ್ಯಕ್ಕೆ ಸಾಧ್ಯವಿಲ್ಲವೆಂದಿದೆ.
ಇರಾನ್ ಆರ್ಥಿಕ ಯುದ್ಧವನ್ನು ಮೇಲಿನ ಹಂತಕ್ಕೆ ಒಯ್ದಿದೆ. ಕೊಲ್ಲಿ ದೇಶಗಳಲ್ಲಿರುವ ಯು.ಎಸ್-ಇಸ್ರೇಲಿಗೆ ಸೇರಿದ ಮತ್ತು ಇರಾನ್ ವಿರುದ್ಧ ಮಿಲಿಟರಿ-ಆರ್ಥಿಕ ದಾಳಿಯಲ್ಲಿ ಭಾಗವಹಿಸುತ್ತಿರುವ ಕಂಪನಿಗಳ ಕಚೇರಿಗಳು, ಸ್ಥಾವರಗಳ ಮೇಲೂ ದಾಳಿ ನಡಸುವುದಾಗಿ ಹೇಳಿದೆ. ಕೊಲ್ಲಿ ದೇಶಗಳು ಯು.ಎಸ್ ಮಿಲಿಟರಿ ನೆಲೆಗಳನ್ನು ಮುಚ್ಚಬೇಕೆಂದೂ ಹೇಳಿದೆ. ಇಂತಹ ಕಚೇರಿ, ಸ್ಥಾವರಗಳಿಂದ ಕನಿಷ್ಟ 1 ಕಿಮಿ ದೂರದಲ್ಲಿರಬೇಕೆಂದು ಇರಾನ್ ಎಚ್ಚರಿಕೆ ನೀಡಿದೆ. ಇದು ಹುಸಿ ಎಚ್ಚರಿಕೆಯಲ್ಲ. ಯಾಕೆಂದರೆ ಅಮೆಝಾನ್ ‘ಕೌಡ್ ಸರ್ವರ್’ ಸ್ಥಾವರದ ಮೇಲೆ ದಿನ 2 ರಂದೇ ಇರಾನ್ ದಾಳಿ ಮಾಡಿ ಸಾಕಷ್ಟು ಹಾನಿ ಮಾಡಿದೆ. ಗೂಗಲ್, ಮೈಕ್ರೊಸಾಫ್ಟ್, ಅಮೆಜಾನ್ ಮುಂತಾದ 6 ದೈತ್ಯ ಕಂಪನಿಗಳು, ಬ್ಯಾಂಕುಗಳ, ಹಣಕಾಸು ಸಂಸ್ಥೆಗಳನ್ನು ಹೆಸರಿಸಿ ಅವುಗಳ ಮೇಲೆ ಶೀಘ್ರವೇ ದಾಳಿ ಮಾಡುವುದಾಗಿ ಇರಾನ್ ಹೇಳಿದೆ. ಇದು ಕೊಲ್ಲಿ ದೇಶಗಳಲ್ಲೂ, ಯು.ಎಸ್ ನಲ್ಲೂ ಜಾಗತಿಕ ಆರ್ಥಿಕದಲ್ಲಿ ನಡುಕ ತಂದಿದೆ.
ಇರಾನಿನ ಮೂರು ಶರತ್ತುಗಳು
ಇವೆಲ್ಲದರ ಒಟ್ಟು ಪರಿಣಾಮವಾಗಿ ಯು.ಎಸ್-ಇಸ್ರೇಲ್ ಎರಡೂ ಹಿಂಬಾಗಿಲಿಂದ ಕದನ ವಿರಾಮಕ್ಕೆ ಕೋರಿಕೆ ಸಲ್ಲಿಸಿವೆ ಎಂದು ವರದಿಯಾಗಿದೆ. ಒಮನ್ ವಿದೇಶ ಮಂತ್ರಿಯ ಮೂಲಕ ಈ ಕುರಿತು ಮಾತುಕತೆ ನಡೆಯುತ್ತಿದೆ. ರಶ್ಯ ಅಧ್ಯಕ್ಷ ಪುಟಿನ್ ಸಹ ಇರಾನ್, ಯು.ಎಸ್ ಅಧ್ಯಕ್ಷರು ಮತ್ತು ಕೊಲ್ಲಿ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಮಧ್ಯಸ್ತಿಕೆ ವಹಿಸುತ್ತಿದ್ದಾರೆ. ಚೀನಾ ವಿದೇಶ ಮಂತ್ರಿ ಸಹ ಮಧ್ಯಸ್ತಿಕೆ ವಹಿಸಿದ್ದಾರೆ.
ಈ ಎಲ್ಲ ಮಾತುಕತೆಗಳಲ್ಲಿ ಇರಾನ್ ಕದನ ವಿರಾಮಕ್ಕೆ ಮೂರು ಶರತ್ತುಗಳನ್ನು ಹಾಕಿದೆ ಎನ್ನಲಾಗಿದೆ. ಇದನ್ನು ಇರಾನ್ ಅಧ್ಯಕ್ಷರು ಬಹಿರಂಗ ಹೇಳಿಕೆಯಲ್ಲೂ ವ್ಯಕ್ತ ಪಡಿಸಿದ್ದಾರೆ. ಅಣು-ಪ್ರಸರಣ ಒಪ್ಪಂದದ ಪ್ರಕಾರ “ಯುರೇನಿಯಂ ಮರು-ಸಂಸ್ಕರಣ’ ದ ಇರಾನಿನ ಹಕ್ಕನ್ನು ಮನ್ನಿಸಬೇಕು. ಈ ಯುದ್ಧದಲ್ಲಿ ಯು.ಎಸ್-ಇಸ್ರೇಲಿ ದಾಳಿಯಿಂದಾದ ನಷ್ಟವನ್ನು ಭರಿಸಬೇಕು. ಜಾಗತಿಕ ಬ್ಯಾಂಕ್ ಗಳಲ್ಲಿ ಸ್ಥಗಿತಗೊಳಿಸಿದ ಇರಾನ್ ನಿಧಿ ಮತ್ತು ಆಸ್ತಿಗಳನ್ನು ಮರಳಿಸುವ ಮತ್ತು ಇನ್ನೆಂದು ಯು.ಎಸ್-ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವುದಿಲ್ಲ ಎಂಬುದಕ್ಕೆ ಅಂತರಾಷ್ಟ್ರೀಯ ಗ್ಯಾರಂಟಿ ಕೊಡಬೇಕು – ಎಂಬುದು ಆ ಮೂರು ಶರತ್ತುಗಳು.
ಇವಕ್ಕೆ ಒಪ್ಪಿದರೆ ಟ್ರಂಪ್-ನೇತನ್ಯಾಹು ಒಪ್ಪಿದರೆ ಅವರಿಗೆ ಮುಖಭಂಗವಾದಂತೆ. ಒಪ್ಪದಿದ್ದರೆ ಜಾಗತಿಕವಾಗಿಯೂ ತಮ್ಮ ದೇಶದಲ್ಲಿ ಎದುರಿಸಬೇಕಾದ ತೀವ್ರ ಬಿಕ್ಕಟ್ಟು ಸಹ ಅಷ್ಟೇ ಗಂಭಿರವಾಗಿದೆ. ಎರಡೂ ಕಡೆಯವರು ಒಪ್ಪಬಹುದಾದ ಕ್ರಮಗಳನ್ನು ಸೂಚಿಸಲು ರಶ್ಯಾ, ಚೀನಾ, ಒಮನ್ ಪ್ರಯತ್ನ ನಡೆಸಿವೆ. ಉದಾಹರಣೆಗೆ “ಯುರೇನಿಯಂ ಮರು-ಸಂಸ್ಕರಣ’ ದ ಇರಾನಿನ ಹಕ್ಕನ್ನು ಮನ್ನಿಸುತ್ತಲೇ, ಈವರೆಗೆ ಸಂಸ್ಕರಿಸಿದ ಯುರೇನಿಯಂ ನ್ನು ಚೀನಾ ಅಥವಾ ರಶ್ಯಾದ ಸುಪರ್ದಿಗೆ ಒಪ್ಪಿಸುವುದು ಒಂದು ಇಂತಹ ಸೂಚನೆ. ಇತರ ಶರತ್ತುಗಳಲ್ಲೂ ಇಂತಹ ಸೂಚನೆಗಳನ್ನು ಕೊಡಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ನೋಡಿ: Karnataka Legislative Assembly Live – Day 06 | ವಿಧಾನಸಭೆ ಬಜೆಟ್ ಅಧಿವೇಶನದ ನೇರಪ್ರಸಾರ
