ಹುಬ್ಬಳ್ಳಿ : ಇರಾನ್ ಮತ್ತು ಜಗತ್ತಿನ ಇತರ ಭಾಗಗಳ ಮೇಲಿನ ಅಮೇರಿಕಾ ಇಸ್ರೇಲ್ ಸಾಮ್ರಾಜ್ಯಶಾಹಿ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಎಲ್ಲಾ ವಿಶ್ವ ರಾಷ್ಟ್ರಗಳ ಸಾರ್ವಭೌಮತ್ವವನ್ನು ರಕ್ಷಿಸಬೇಕು ಹಾಗೂ ಯುದ್ದಪೀಡಿತ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿ ಐಟಿಯು) ನೇತೃತ್ವದಲ್ಲಿ ಕಾರ್ಮಿಕರು ಹುಬ್ಬಳ್ಳಿ ಡಾ; ಅಂಬೇಡ್ಕರ್ ವೃತ್ತದಲ್ಲಿ ಇಂದು ಪ್ರದರ್ಶನ ನಡೆಸಿದರು.
ಕಾರ್ಮಿಕ ಸಂಘಗಳ ಜಂಟಿ ವೇದಿಕೆ(JCTU) ಹಾಗೂ ಸಂಯುಕ್ತ ಕಿಶಾನ್ ಮೋರ್ಚಾ (SKM) ಜಂಟಿ ವೇದಿಕೆಯು ಇಂದು ದೇಶಾದ್ಯಂತ ಈ ಪ್ರದರ್ಶನಕ್ಕೆ ಕರೆ ನೀಡಿತ್ತು. ಪ್ರತಿಭಟನಾ ಪ್ರದರ್ಶನ ಉದ್ದೇಶಿಸಿ ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕೆ.ಎನ್.ಉಮೇಶ ಮಾತನಾಡಿ ಇರಾನ್ ಮೇಲಿನ ಯುಎಸ್-ಇಸ್ರೇಲ್ ಮಿಲಿಟರಿ ಆಕ್ರಮಣವನ್ನು ಬಲವಾಗಿ ಖಂಡಿಸಿದರು. ಜಾಗತಿಕವಾಗಿ ತೈಲೋತ್ಪನ್ನಗಳ ಮೇಲೆ ಅಧಿಪತ್ಯ ಸಾಧಿಸಲು ಅಮೇರಿಕಾ ವೆನೆಜುವೆಲಾ, ಲಿಬಿಯಾ, ಇರಾನ್ ಮೇಲೆ ದಾಳಿ ನಡೆಸಿದೆ. ಇದರಿಂದ ಭಾರತದ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ಹೀಗಾಗಿ ಈ ಸಾಮ್ರಾಜ್ಯಶಾಹಿ ಯುದ್ದವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು
ಎರಡು ವರ್ಷಗಳ ಹಿಂದೆ ಪ್ಯಾಲಿಸ್ಟೈನ್ ಜನರಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತು ಸಮಾಜದ ಇತರ ವರ್ಗಗಳು ವಿನಾಶಕಾರಿ ಯುದ್ಧಗಳಿಗೆ ಬಲಿಯಾಗಿದ್ದಾರೆ. ಇದು ಅಮೇರಿಕಾ ಮತ್ತು ಇಸ್ರೇಲ್ ಯುದ್ದ ದಾಹಕ್ಕೆ ಉದಾಹರಣೆ ಆಗಿದೆ. ಸಮಾಜವಾದಿ ದೇಶಗಳ ಅನುಪಸ್ಥಿತಿಯಿಂದಾಗಿ ಅಮೇರಿಕನ್ ಸಾಮ್ರಾಜ್ಯಶಾಹಿ ಏಕಚಕ್ರಾಧಿಪತ್ಯದಿಂದಾಗಿ ಜಗತ್ತು ನಲುಗಿ ಹೋಗಿದೆ. ಇದರ ವಿರುದ್ದ ಜಾಗತಿವಾಗಿ ಪ್ರತಿರೋಧ ಬೆಳೆದು ಬರಬೇಕು ಎಂದು ಹಿರಿಯ ಪತ್ರಕರ್ತ ಸನತಕುಮಾರ್ ಬೆಳಗಲಿ ಕರೆ ನೀಡಿದರು.
ಅಮೇರಿಕ ಏಕಪಕ್ಷೀಯ ಅಸಮಂಜಸ ಸುಂಕ ಯುದ್ಧದ ನಂತರ, ಈಗ ಇರಾನ್ ಮೇಲೆ ಏಕಪಕ್ಷೀಯ ಬಾಂಬ್ ದಾಳಿಯು ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಸ್ಥಿತಿಗೆ ಮತ್ತು ಇಡೀ ಜಗತ್ತನ್ನು ಆರ್ಥಿಕ ಪ್ರಕ್ಷುಬ್ಧತೆಯ ಸ್ಥಿತಿಗೆ ತಳ್ಳಿದೆ. ನಾಗರಿಕ ಮೂಲಸೌಕರ್ಯ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಗರ ಪ್ರದೇಶಗಳನ್ನು ಹೇಡಿತನದಿಂದ ಗುರಿಯಾಗಿಸಿಕೊಂಡಿರುವುದು ಜಿನೀವಾ ಸಮಾವೇಶಗಳು ಸೇರಿದಂತೆ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುತ್ತದೆ. ರಾಜ್ಯದ ಮುಖ್ಯಸ್ಥ ಅಯತೊಲ್ಲಾ ಖಮೇನಿ ಮತ್ತು ಅನೇಕ ನಾಯಕರು ಕೊಲ್ಲಲ್ಪಟ್ಟಿದ್ದಾರೆ. ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಗುರಿಯಾಗಿಟ್ಟುಕೊಂಡು ನಡೆಸಿದ ಬಾಂಬ್ ದಾಳಿಯಲ್ಲಿ 165 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಅಪರಾಧಿ ಆಡಳಿತಗಳ ಕ್ರೌರ್ಯ ಮತ್ತು ಅನಾಗರಿಕತೆಯ ವಿಸ್ತರಣೆಯನ್ನು ತೋರಿಸುತ್ತದೆ. ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಆರೋಪಿಸಿದರು.
ಇಂದಿನ ಯುದ್ದ ವಿರೋಧಿ ಹಾಗೂ ವಿಶ್ವಶಾಂತಿ ಸ್ಥಾಪನೆಗಾಗಿ ಆಗ್ರಹಿಸಿ ನಡೆಸಲಾದ ಪ್ರದರ್ಶನದಲ್ಲಿ ಮುಖಂಡರಾದ ಮಹೇಶ ಪತ್ತಾರ, ಬಿ.ಐ. ಈಳಿಗೇರ, ತಿಲಕ ಗೌಡ, ಯಮುನಾ ಗಾಂವಕರ, ಗುರುಸಿದ್ದಪ್ಪ ಅಂಬಿಗೇರ, ಬಾಬಾಜಾನ ಮುಧೋಳ, ಚಿದಾನಂದ ಸವದತ್ತಿ, ಮಂಜುಳಾ ಪವಾರ, ಬಸೀರ ಮುಧೋಳ, ದೊಡ್ಡವ್ವ ಪೂಜಾರಿ, ಮಹೇಶ ಹುಲಗೋಡ, ಜಯಶ್ರೀ, ದೊಡ್ಡವ್ವ ಪೂಜಾರಿ, ಮಂಜುನಾಥ ಹುಜರಾತಿ, ಮಂಜುಳಾ ಪವಾರ ಇದ್ದರು.
