ನಿತ್ಯಾನಂದ ಸ್ವಾಮಿ ಪಾದ್ರಿಯಾಗಿ ಆರಂಭಿಸಿ ಹಿರಿಯ ಕಮ್ಯುನಿಸ್ಟ್ ನಾಯಕರಾಗಿ ಬೆಳೆದದ್ದು : ಸಿಪಿಐ(ಎಂ) ಇತಿಹಾಸದ ವಿಶಿಷ್ಟ ಆಯಾಮ

ಸರ್ವರಿಗೆ ಸಮಪಾಲು, ಸರ್ವರಿಗೆ ಸಮಪಾಲು ಎಂಬ ಕಮ್ಯುನಿಸ್ಟ್ ವಿಚಾರಗಳು ಎಂತಹವರನ್ನೂ, ಹೇಗೆಲ್ಲಾ ಸೆಳೆಯುತ್ತದೆ ಎಂಬುದಕ್ಕೆ ಕಾಂ. ನಿತ್ಯಾನಂದ ಸ್ವಾಮಿಯವರೇ ಒಂದು ಉದಾಹರಣೆ. ಕ್ರಿಶ್ಚಿಯನ್ನರಾಗಿ ಹುಟ್ಟಿ  ಪಾದ್ರಿಯಾಗಬೇಕಾಗಿದ್ದ ನಿತ್ಯಾನಂದ ಸ್ವಾಮಿಯವರು ಕಾವಿಧಾರಿಗಳಾಗಿ , ನಂತರ ಕಾವಿಯನ್ನೂ ತೊರೆದು ಕಮ್ಯುನಿಸ್ಟ್ ವಿಚಾರಧಾರೆಗೆ ಆಕರ್ಷಿತರಾಗಿ ನಾಲ್ಕು‌ ದಶಕಗಳಿಗಿಂತ ಹೆಚ್ಚು ಬ್ರಹ್ಮಚಾರಿಗಳಾಗಿ ಇಡೀ ಜೀವನವನ್ನು ಸಿಪಿಐ(ಎಂ) ಪಕ್ಷಕ್ಕಾಗಿ ಸಮರ್ಪಿಸಿ ದುಡಿದದ್ದು ಪಕ್ಷದ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶಿಷ್ಟ ಆಯಾಮ. ಆರಂಭದಲ್ಲಿ ವಿದ್ಯಾರ್ಥಿ ಸಂಘಟನೆ ಕಟ್ಟಲು ಆಸಕ್ತಿ ವಹಿಸಿ, ನಂತರ ರೈತರಂಗದಲ್ಲಿ, ಕಾರ್ಮಿಕ ರಂಗದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಎರಡೂ ವಿಭಾಗಗಳಲ್ಲಿ , ಕೃಷಿ ಕೂಲಿಕಾರ ಸಂಘಟನೆ ಎಂಬ ವೈವಿಧ್ಯಮಯ ರಂಗಗಳಲ್ಲಿ ದುಡಿದದ್ದೂ ಕೂಡಾ ಒಂದು ವಿಶಿಷ್ಟ ಅನುಭವ.

– ಜಿ. ಎನ್‌. ನಾಗರಾಜ್‌

ಸರ್ವರಿಗೆ ಸಮಪಾಲು, ಸರ್ವರಿಗೆ ಸಮಪಾಲು ಎಂಬ ಕಮ್ಯುನಿಸ್ಟ್ ವಿಚಾರಗಳು ಎಂತಹವರನ್ನೂ, ಹೇಗೆಲ್ಲಾ ಸೆಳೆಯುತ್ತದೆ ಎಂಬುದಕ್ಕೆ ಕಾಂ. ನಿತ್ಯಾನಂದ ಸ್ವಾಮಿಯವರೇ ಒಂದು ಉದಾಹರಣೆ. ಕ್ರಿಶ್ಚಿಯನ್ನರಾಗಿ ಹುಟ್ಟಿ ಪಾದ್ರಿಯಾಗಲು ತರಬೇತಿ ಪಡೆದವರು ನಿತ್ಯಾನಂದ ಸ್ವಾಮಿಯವರು. ಪಾದ್ರಿಯಾಗಿ ತರಬೇತಿ ಪಡೆಯುವ ಅವಧಿಯಲ್ಲಿ ಎಲ್ಲ ಪಾದ್ರಿಗಳಂತೆ ಒಬ್ಬ ಪಾದ್ರಿಯಾಗುವ ಅಥವಾ ಒಂದು ವಿಶಿಷ್ಟ ಹಿಂದೂ ಕ್ರಿಶ್ಚಿಯನ್ ಪಂಥದ ಪಾದ್ರಿಯಾಗುವ ಆಯ್ಕೆಯನ್ನು ಅವರ ಮುಂದಿಡಲಾಯಿತು.

ಅದು ಬಹಳ ಅಪರೂಪದ ಪಂಥ. ಕ್ರಿಶ್ಚಿಯನ್ ಪಾದ್ರಿಯ ಸಾಮಾನ್ಯ ವೇಷ ಭೂಷಣಕ್ಕೆ ಬದಲಾಗಿ ಹಿಂದೂ ಸ್ವಾಮೀಜಿಯಂತೆ ಹೆಸರು ಬದಲಿಸಿಕೊಂಡು ಕಾವಿ ಉಡುಪುನ್ನು ಧರಿಸಿ ಸರಳ ಹೆಂಚಿನ ಮಾಡಿನ ಚರ್ಚ‌ಗಳಲ್ಲಿ ಉಪದೇಶ ನೀಡುವ ಆ ಪಂಥದ ವಿಶಿಷ್ಟತೆ ಅವರನ್ನು ಆಕರ್ಷಿಸಿತು. ಈ‌ ಪಂಥದ ಚರ್ಚ್‌ಗಳು ಇದ್ದದ್ದು ಬೆಳಗಾಂ‌ ಜಿಲ್ಲೆಯಲ್ಲಿ.‌ ನಿತ್ಯಾನಂದ ಸ್ವಾಮಿ‌ ಎಂಬ ಹೆಸರು ತಳೆದದ್ದು ಈ ಸಂದರ್ಭದಲ್ಲಿ. ಅಲ್ಲಿ ಅವರು ವಿವಿಧೆಡೆಗಳಲ್ಲಿ ಕೆಲಸ ಮಾಡುತ್ತಾ ಎಲ್ಲಮ್ಮನ, ದೇವದಾಸಿ ಪಂಥದ ಬಹು‌ಮುಖ್ಯ ಕೇಂದ್ರವಾದ ಸೌಂದತ್ತಿಯಲ್ಲಿದ್ದ ಈ‌ ಪಂಥದ ಚರ್ಚ್‌ಗೆ ವರ್ಗಾವಣೆಯಾದರು. ಕೆಲ ಸಮಯದ ನಂತರ ಸೌಂದತ್ತಿಯಲ್ಲಿ ದೇವದಾಸಿ ಪದ್ಧತಿಯ ವಿರುದ್ಧ ಆಂದೋಲನ‌ ಆರಂಭವಾಯಿತು. ಧಾರವಾಡ, ಬೆಳಗಾಂಗಳ ಪ್ರಗತಿಪರ ಸಾಹಿತಿಗಳು ಅದರ ನೇತೃತ್ವ ವಹಿಸಿದ್ದರು. ನಿತ್ಯಾನಂದ ಸ್ವಾಮಿಯವರು ಈ ಆಂದೋಲನದಲ್ಲಿ ಭಾಗವಹಿಸಲಾರಂಭಿಸಿದರು. ನನಗೆ ಸ್ವಾಮಿಯವರ ಪರಿಚಯ ಆಗಿದ್ದು ಇದೇ ಚಳುವಳಿಯ ಹಿನ್ನೆಲೆಯಲ್ಲಿ.

ಈ ಸಂದರ್ಭದಲ್ಲಿ ಅವರು ಬುದ್ಧ, ವಿವೇಕಾನಂದ ಮೊದಲಾದ ಸುಧಾರಕವರ ಚಿಂತನೆಗಳನ್ನು ಹೆಚ್ಚು ಅಭ್ಯಾಸ ಮಾಡಿದರು. ಅವರಿಂದ ಆಕರ್ಷಿತರಾಗಿ ತಮ್ಮ ಚರ್ಚ್‌ನಲ್ಲಿ ಕ್ರಿಸ್ತನ ಚಿತ್ರಗಳ ಜೊತೆಗೆ ಬುದ್ಧ, ವಿವೇಕಾನಂದರ ಚಿತ್ರಗಳನ್ನೂ ಇಟ್ಟರು‌. ಕ್ರಿಸ್ತನ ಉಪದೇಶಗಳ ಜೊತೆಗೆ ಇವರ ವಿಚಾರಗಳ ಬಗ್ಗೆಯೂ ಚರ್ಚ್‌ನಲ್ಲಿನ ತಮ್ಮ ಉಪದೇಶಗಳಲ್ಲಿ ಪ್ರಸ್ತಾಪಿಸತೊಡಗಿದರು.

ಇದನ್ನೂ ಓದಿ: ಮಾರ್ಚ್ 24ರಂದು ದಿಲ್ಲಿಯಲ್ಲಿ ಬೃಹತ್‍ ಮತಪ್ರದರ್ಶನ – ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ

ಈ ಸಂಗತಿ ಸಹಜವಾಗಿಯೇ ಚರ್ಚ್‌ನ ಹಿರಿಯ ಪಾದ್ರಿಗಳಲ್ಲಿ ಅಸಮಧಾನ ಉಂಟುಮಾಡಿತು. ಅವರ ನಿರ್ದೇಶಗಳಿಗೆ ಒಪ್ಪದೇ ತಮ್ಮದೇ ಉಪದೇಶಗಳನ್ನು ಮುಂದುವರೆಸಿದ್ದರಿಂದ ಅವರು ಚರ್ಚ್‌ನಿಂದ ಹೊರ ಹಾಕಲ್ಪಟ್ಟರು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಆದಾಯ ರಹಿತರಾದರು. ಬೀದಿಗೆಸೆಯಲ್ಪಟ್ಟರು. ಆ ಸಮಯದಲ್ಲಿ ನಿತ್ಯಾನಂದ ಸ್ವಾಮಿಯವರು ಉಪವಾಸ, ವನವಾಸವನ್ನು ಅನುಭವಿಸಬೇಕಾಯಿತು. ಆದರೆ ಆ ವೇಳೆಗೆ ದೇವದಾಸಿ ಪದ್ಧತಿ ವಿರೋಧಿ ಚಳುವಳಿಯ ಭಾಗವಾಗಿದ್ದ ಕೆಲ ಸೌಂದತ್ತಿಯ ಪ್ರಗತಿಪರರ ಸಂಪರ್ಕ ಬೆಳೆದಿತ್ತಲ್ಲಾ ,ಅವರುಗಳು ಸ್ವಾಮೀಯವರ ನೆರವಿಗೆ ಬಂದರು. ಅವರ ಸಹಾಯದಿಂದ ಒಂದು ಸಣ್ಣ ಮನೆಯನ್ನು ಬಾಡಿಗೆ ಹಿಡಿದು ಮಕ್ಕಳಿಗೆ ಇಂಗ್ಲಿಷ್ ಪಾಠ ಹೇಳಿಕೊಡುವ ವೃತ್ತಿ ಆರಂಭಿಸಿದರು. ಜೊತೆಯಲ್ಲಿ ಸೌಂದತ್ತಿಯಲ್ಲಿ ಆಗಿಂದಾಗ್ಗೆ ಪ್ರಗತಿಪರ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾರಂಭಿಸಿದರು. ಈ ವಿಚಾರ ಸಂಕಿರಣಗಳಲ್ಲಿ ಭಾಷಣ ಮಾಡಲು ನಾನು ಆಹ್ವಾನಿತನಾಗಿದ್ದೆ.

ಅದು 1979-80 ರ ಸಮಯ. ಆಗ ಅಲ್ಲಿನ ಮಲಪ್ರಭಾ ನೀರಾವರಿ ಪ್ರದೇಶದ ಪ್ರಮುಖ ಬೆಳೆಯಾದ ಹತ್ತಿಯ ಬೆಲೆ ಮಾರುಕಟ್ಟೆಯಲ್ಲಿ ಕಂಡ ದಿಢೀರ್ ಕುಸಿತ, ರಸಗೊಬ್ಬರ, ಕೀಟೌಷಧಿಗಳ ಬೆಲೆ ಏರಿಕೆ, ನೀರಾವರಿಯ ಹಲವು ಸಮಸ್ಯೆಗಳಿಂದಾಗಿ ಕಗೆಟ್ಟಿದ್ದ ರೈತರು ನವಲಗುಂದದಲ್ಲಿ ಹೋರಾಟ ಆರಂಭಿಸಿದ್ದರು. ಇದೇ ನೀರಾವರಿ ಅಚ್ಚುಕಟ್ಟಿಗೆ ಸೇರಿದ್ದ ಸೌಂದತ್ತಿಗೂ ಈ ಹೋರಾಟ ವ್ಯಾಪಿಸಿತು. ಸೌಂದತ್ತಿಯಲ್ಲಿ ದೇವಾದಾಸಿ ಪದ್ಧತಿಯ ವಿರುದ್ಧ ದನಿ ಎತ್ತಿದ್ದ ಹಲವರು ರೈತರು.

ಅವರುಗಳು ಈ ರೈತ ಹೋರಾಟದಲ್ಲಿ ಭಾವಹಿಸಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದ ಶ್ರೀ ಕಪ್ಪಣ್ಣನವರ್ ಎಂಬುವರ ನೇತೃತ್ವದಲ್ಲಿ ನಿರಂತರ ಸರದಿ ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಮುಂತಾದವು ಆರಂಭವಾದವು. ಈ ಎಲ್ಲ ಸತ್ಯಾಗ್ರಹಗಳಲ್ಲಿ ನಿತ್ಯಾನಂದಸ್ವಾಮಿಯವರು ಭಾಗವಹಿಸಿದರು. ಕಪ್ಪಣ್ಣನವರ ಜೊತೆಯಲ್ಲಿ ರೈತರನ್ನು‌ ಸಂಘಟಿಸುವುದರಲ್ಲಿ ತೊಡಗಿದರು. ನಾನು ಕೃಷಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಲೇ ರೈತ ಚಳುವಳಿಯ ಭಾಗವಾಗಿದ್ದೆ. ಹೀಗೆ ನಮ್ಮಿಬ್ಬರ ಪರಿಚಯ ಮತ್ತಷ್ಟು ಹೆಚ್ಚಾಯಿತು.

ಈ ಚಳುವಳಿ 1980 ರ ಜುಲೈ 21ರ ಮೂರು ತಾಲ್ಲೂಕುಗಳ ಪ್ರಾದೇಶಿಕ ಬಂದ್ ಸಮಯದಲ್ಲಿ ನವಲಗುಂದ, ನರಗುಂದಗಳಲ್ಲಿ ಬಂಡಾಯವಾಗಿ, ಇಡೀ ರಾಜ್ಯದಲ್ಲಿ ರೈತ ಹೋರಾಟಗಳ ಉತ್ಕರ್ಷವಾಗಿ ಪರಿವರ್ತನೆಯಾಯಿತು. ರಾಜ್ಯದಲ್ಲಿ ಗುಂಡೂರಾವ್‌ರವರ ದುರಾಡಳಿತ ಮತ್ತು ಕಾಂಗ್ರೆಸ್‌ನ ನಿರಂತರ ಆಡಳಿತ ಕೊನೆಯಾಗುವ ಮಹತ್ವದ ರಾಜಕೀಯ ಪರಿವರ್ತನೆಗೆ ನಾಂದಿಯಾಯಿತು.

ಈ ರೈತ ಚಳುವಳಿಯಲ್ಲಿ ಭಾಗವಹಿಸಿದವರ ಜೊತೆಯಲ್ಲಿ ನಿತ್ಯಾನಂದ ಸ್ವಾಮಿಯವರು, ಕಪ್ಪಣ್ಣನವರು, ಸೊಪ್ಪಿನ್, ನಾನು ಮೊದಲಾದ ಕೆಲವರು ಕರ್ನಾಟಕ ಪ್ರಾಂತ ರೈತ ಸಂಘದ ಭಾಗವಾದೆವು. ಸೌಂದತ್ತಿಯಲ್ಲಿಯೇ ಅಖಿಲ ಭಾರತ ಕಿಸಾನ್ ಸಭಾದ ಜನರಲ್ ಕೌನ್ಸಿಲ್ ಸಭೆಯನ್ನು ಸಂಘಟಿಸುವದರಲ್ಲಿ ಕಪ್ಪಣ್ಣನವರು, ನಿತ್ಯಾನಂದ ಸ್ವಾಮಿಯವರು,ನಾನೂ ಮುಖ್ಯ ಪಾತ್ರ ವಹಿಸಿದವು. ಚಾತುನ್ನಿ ಮಾಸ್ಟರ್ ಎಂಬ ಕೇರಳದ ಹಗಾರ ಮಲಪ್ರಭಾ ಹಾಗೂ ಕರ್ನಾಟಕದ ರೈತರ ಸಮಸ್ಯೆಗಳು, ರೈತ ಚಳುವಳಿಯ ಉತ್ಕರ್ಷದ ಬಗ್ಗೆ ಒಂದು ಚಿತ್ರಪಟಗಳ, ನಕ್ಷೆಗಳ ಪ್ರದರ್ಶನ ಏರ್ಪಡಿಸಿದೆವು.

ಇದೇ ಸಮಯದಲ್ಲಿ ನಾವು ಹತ್ತಾರು ಜನ ಒಟ್ಟಿಗೇ ಪಕ್ಷದ 11 ನೆಯ ಮಹಾಧಿವೇಶನದ ಪೂರ್ವದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದೆವು. ಕಾಂ. ನಿತ್ಯಾನಂದ ಸ್ವಾಮಿಯವರು ಪಕ್ಷದ ಹನ್ನೊಂದನೇ ರಾಜ್ಯ ಸಮ್ಮೇಳನದ ಪ್ರತಿನಿಧಿಯಾದರು.

ನಂತರ ನಿತ್ಯಾನಂದ ಸ್ವಾಮಿಯವರು ಸೌಂದತ್ತಿಯಲ್ಲಿ ಪ್ರಾಂತ ರೈತ ಸಂಘದ ಸಂಘಟನೆಯಲ್ಲಿ ಕ್ರಿಯಾಶೀಲರಾದರು. ಅಲ್ಲಿಯ ಹಲವು ಹಳ್ಳಿಗಳಲ್ಲಿ ರೈತ ಸಂಘದ ಘಟಕಗಳನ್ನು ಸ್ಥಾಪಿಸಿ ತಾಲ್ಲೂಕು ಸಮಿತಿ ಸ್ಥಾಪಿಸುವಲ್ಲಿ ತೊಡಗಿದರು. ನರಗುಂದದಿಂದ ಬೆಂಗಳೂರಿನವರೆಗಿನ‌ ಐತಿಹಾಸಿಕ ಕಾಲ್ನಡೆ ಜಾಥಾದಲ್ಲಿ ಕಾಂ ಪಿ.ರಾಮಚಂದ್ರ ರಾವ್, ಕಾಂ. ಹಳಕಟ್ಟಿ, ಕಾಂ. ಜಗನ್ನಾಥ್ ರವರ ಜೊತೆಯಲ್ಲಿ ಉದ್ದಕ್ಕೂ ನಡೆದರು. ಬೆಂಗಳೂರಿನ ಐತಿಹಾಸಿಕ ರೈತ ರ‌್ಯಾಲಿ ಮತ್ತು ಪ್ರತಿಭಟನೆಯಲ್ಲಿ ಮಲಪ್ರಭಾ ರೈತರ ನೇತೃತ್ವ ವಹಿಸಿ ಭಾಗವಹಿಸಿದರು.

1983 ರಲ್ಲಿ ಸೌಂದತ್ತಿಯಲ್ಲಿ ಪಕ್ಷದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ದ್ದ ಕಾಂ.ವಿ.ಎನ್ .ಹಳಕಟ್ಟಿಯವರ ಚುನಾವಣೆಗಾಗಿ ಹಗಲಿರುಳೂ ದುಡಿದರು. ಸೌಂದತ್ತಿಯಲ್ಲಿ ವಿದ್ಯಾರ್ಥಿ ಸಂಘಟನೆ ಕಟ್ಟಿ ಹಲವರು ಚಳುವಳಿಗಳ ನಾಯಕರಾಗಿ ರೂಪುಗೊಳ್ಳಲು ಕಾರಣರಾದರು.

ಕಾರ್ಮಿಕ ಚಳುವಳಿಯಲ್ಲಿ :

ಪಕ್ಷದ ಸಮಿತಿಗಳ ಪುನರ್‌ಸಂಘಟನೆಯಾಗಿ ನಾಲ್ಕು ಜಿಲ್ಲೆಗಳಿಗೆ ಅನ್ವಯಿಸುವ ಪ್ರಾದೇಶಿಕ ಸಮಿತಿಯನ್ನು ರೂಪಿಸಲಾಯಿತು. ಅದರ ಕಛೇರಿಯನ್ನು ಹಳೇ ಹುಬ್ಬಳ್ಳಿಯ ಹಳೇ ಕಟ್ಟಡವೊಂದರಲ್ಲಿ ಆರಂಭಿಸಿದಾಗ ನಿತ್ಯಾನಂದ ಸ್ವಾಮಿಯವರು ಅಲ್ಲಿ ಕಛೇರಿ ಉಸ್ತುವಾರಿಯಾಗಿ ಪ್ರಾದೇಶಿಕ ಕಾರ್ಯದರ್ಶಿಯಾಗಿದ್ದ ಕಾಂ.ವಿಜೆಕೆ ನಾಯರ್‌ರವರ ಸಹಾಯಕರಾಗಿ ಕೆಲಸ ಮಾಡಿದರು. ಹಳೇ ಹುಬ್ಬಳ್ಳಿಯಲ್ಲಿದ್ದ ಬೀಡಿ ಕಾರ್ಮಿಕರ ಸಂಘಟನೆ ಮಾಡಿದರು. ಅವರ ವೇತನ ಮತ್ತಿತರ ಬದುಕಿನ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಿದರು. ಹುಬ್ಬಳಿಯ ಕೆಲವು ಕಾರ್ಖಾನೆಗಳ ಕಾರ್ಮಿಕ ಸಂಘಟನೆಗಳ ಹೋರಾಟಗಳಲ್ಲಿ ಸಹಾಯಕರಾಗಿ ದುಡಿದರು.

ನಂತರ ಹರಿಹರದಲ್ಲಿ ಚಳುವಳಿ ಬಿರುಸಾದಾಗ ಅವರ ಕಾರ್ಯ ಕೇಂದ್ರ ಹರಿಹರಕ್ಕೆ ವರ್ಗಾವಣೆಯಾಯಿತು. ಅಲ್ಲಿನ ಮುಖ್ಯ ಕಾರ್ಖಾನೆಗಳಾದ ಬಿರ್ಲಾ ಮಾಲೀಕತ್ವದ ಹರಿಹರ ಪಾಲಿ ಫೈಬರ್ಸ್, ಕಿರ್ಲೋಸ್ಕರ್ ಕಾರ್ಮಿಕ ಸಂಘಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾ ಕೆಲವು ಕಾರ್ಮಿಕ ಸಂಘಗಳ ಮುಖ್ಯ ನೇತೃತ್ವ ವಹಿಸಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವದರಲ್ಲಿ ಅನುಭವ ಪಡೆದರು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಗದದ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು.

ಈ ಸಮಯದಲ್ಲಿಯೇ ರಾಣಿಬೆನ್ನೂರಿನ‌ ನೇಕಾರರ ಸಂಪರ್ಕ ದೊರೆತು ಅತೀವ ಸಂಕಟಗಳನ್ನು ಅನುಭವಿಸುತ್ತಿದ್ದ ನೇಕಾರರನ್ನು ಸಂಘಟಿಸಿ ದಶಕಗಳ ಕಾಲ ಅವರ ಸಂಘವನ್ನು ಮುನ್ನಡೆಸಿದರು.

ನಂತರ ಹಾನಗಲ್‌ ತಾಲ್ಲೂಕಿನಲ್ಲಿ ಫಕೀರಪ್ಪ ಹೋತನಹಳ್ಳಿಯವರು ಮತ್ತು ನಾನು ಆರಂಭ ಮಾಡಿದ್ದ ಕೃಷಿ ಕೂಲಿಕಾರರ ಭೂ ಆಕ್ರಮಣ ಹೋರಾಟಕ್ಕೆ ಜೊತೆಗೂಡಿದರು. ಹಾನಗಲ್‌ಗೆ ತಮ್ಮ ನಿವಾಸವನ್ನು ವರ್ಗಾಯಿಸಿಕೊಂಡರು. ಅಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಫಕೀರಪ್ಪ ಹೋತನಹಳ್ಳಿಯವರ ಗೆಲುವಿಗಾಗಿ ದುಡಿದರು.

ಇದೇ ಸಮಯದಲ್ಲಿ ಪಕ್ಷದ ಧಾರವಾಡ ಜಿಲ್ಲಿಯ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.‌

ಕೃಷಿ ಕೂಲಿಕಾರ ಸಂಘಟನೆಯಲ್ಲಿ:

ಸೌಂದತ್ತಿಯಲ್ಲಿ ರೈತ ಸಂಘದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಭೂಹೀನ ಕೃಷಿ ಕೂಲಿಕಾರರ ಬಗ್ಗೆ ಆಸ್ಥೆ ವಹಿಸಿದ್ದ ಸ್ವಾಮಿಯವರು ಹಾನಗಲ್ ಭೂ ಹೋರಾಟದ ನಂತರ ಕೃಷಿ ಕೂಲಿಕಾರ ಚಳುವಳಿಯಲ್ಲಿ ಹೆಚ್ಚು ಆಸಕ್ತಿ ವಹಿಸಿದರು. ಅರಣ್ಯ ಭೂಮಿ ಆಕ್ರಮಣದಲ್ಲಿ ಭಾಗವಹಿಸಿ ಹೋತನಹಳ್ಳಿಯ ಮತ್ತು ಇತರ ನಲವತ್ತು ಕೃಷಿ ಕೂಲಿಕಾರರೊಂದಿಗ ಬೆಳಗಾಂ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಒಂದು ತಿಂಗಳ ಕಾಲ ಬಂಧಿಸಲ್ಪಟ್ಟರು.

ಕೃಷಿ ಕೂಲಿಕಾರ ಸಂಘದ ಉಪಾಧ್ಯಕ್ಷರಾಗಿ ಚುನಾಯಿತರಾದರು. 2000ದ ಇಸ್ವಿಯಲ್ಲಿ ನಾನು ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ಕೃಷಿ ಕೂಲಿಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಎರಡು ದಶಕಗಳ ಕಾಲ ರಾಜ್ಯದ ಹಲವೆಡೆಗಳಲ್ಲಿ ನಿರಂತರವಾಗಿ ಪ್ರವಾಸ ಮಾಡುತ್ತಾ ಕೃಷಿ ಕೂಲಿಕಾರ ಸಂಘವನ್ನು ಹೊಸ ಜಿಲ್ಲೆಗಳಿಗೆ ವಿಸ್ತರಿಸಿದರು. ಈ ಸಂದರ್ಭದಲ್ಲಿ ಅವರು ಗಂಗಾವತಿ ತಾಲೂಕಿನ ಮರಕುಂಬಿ‌ ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ದಶಕಗಟ್ಟಲೆ ನಡೆದ ಹೋರಾಟದ ಎಲ್ಲ ಹಂತಗಳಲ್ಲಿ ನಾಯಕತ್ವ ವಹಿಸಿದರು.

ಹಲವು ಬಾರಿ ತಾಲ್ಲೂಕು ,ಜಿಲ್ಲಾ ಕೇಂದ್ರದಲ್ಲಿ ಧರಣಿ ಸತ್ಯಾಗ್ರಹ, ಕಾಲ್ನಡಿಗೆ ಜಾಥಾ ಇವುಗಳ ನೇತೃತ್ವ ವಹಿಸಿದರು. ಇಒ ಹೋರಾಟಗಳಲ್ಲಿ ದಲಿತರಿಗೆ ಮೂಡಿದ ವಿಶ್ವಾಸದ ಫಲವಾಗಿ ಅಲ್ಲಿಯ ದಲಿತರು ಭೂಮಾಲಿಕರ ಬೆದರಿಕೆಗಳಿಗೆ ಅಂಜದೆ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ ಕಾರಣ ಜೀವಾವಧೀ ಶಿಕ್ಷೆಯೂ ಸೇರಿದಂತೆ ತೊಂಬತ್ತರಷ್ಟು ಜನರಿಗೆ ಶಿಕ್ಷೆಯಾಗಿ ಒಂದು ಐತಿಹಾಸಿಕ ದಾಖಲೆಯಾಯಿತು.

ಕೃಷಿ ಕೂಲಿಕಾರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲೇ ದಲಿತರು ಮತ್ತು ಹಿಂದುಳಿದವರಿಗಾಗಿ ಇರುವ ಸರ್ಕಾರಿ ಹಾಸ್ಟೆಲ್‌ಗಳ ಕೆಲಸಗಾರರ ಸಂಘಕ್ಕೆ ಅಧ್ಯಕ್ಷರಾಗಿ ಅವರಿಗೆ ಲಭ್ಯವಾಗಬೇಕಿದ್ದ ಹಲವು ಸವಲತ್ತುಗಳು, ಕಾಲಕಾಲಕ್ಕೆ ವೇತನ ಹೆಚ್ಚಳ, ಖಾಯಮಾತಿಗಳಿಗೆ ಹೋರಾಟಗಳ ನೇತೃತ್ವ ವಹಿಸಿದರು.

ಪಕ್ಷದಲ್ಲಿ:

ಧಾರವಾಡ ಜಿಲ್ಲೆಯ ಸಂಘಟನಾ ಸಮಿತಿಯ ಕಾರ್ಯದರ್ಶಿಯಾಗಿ ಈಗ ಮೂರು ಜಿಲ್ಲೆಯಾಗಿರುವ ಅಂದಿನ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿದರು. ರಾಜ್ಯ ಸಮಿತಿಯ ಸದಸ್ಯರಾಗಿ, ನಂತರ ಕಾರ್ಯದರ್ಶಿ ಮಂಡಲಿ ಸದಸ್ಯರಾಗಿ ಆಯ್ಕೆಯಾದರು. ಪಕ್ಷದ ಶಿಕ್ಷಣದಲ್ಲಿ ಆಸಕ್ತಿ ವಹಿಸಿ ಅಧ್ಯಯನ ಶಿಬಿರಗಳಲ್ಲಿ ಉತ್ತಮ ಉಪನ್ಯಾಸಗಳನ್ನು ನೀಡುತ್ತಿದ್ದರು. ಪಕ್ಷದ ಪತ್ರಿಕೆ ಜನಶಕ್ತಿಯ ಸಂಪಾದಕರಾಗಿ ಕೆಲಸ ಮಾಡಿದರು.

ಕ್ರಿಶ್ಚಿಯನ್ ಪಾದ್ರಿಯಾಗಬೇಕಾಗಿದ್ದ ನಿತ್ಯಾನಂದ ಸ್ವಾಮಿಯವರು ಕಾವಿಧಾರಿಗಳಾಗಿ , ನಂತರ ಕಾವಿಯನ್ನೂ ತೊರೆದು ಕಮ್ಯುನಿಸ್ಟ್ ವಿಚಾರಧಾರೆಗೆ ಆಕರ್ಷಿತರಾಗಿ ನಾಲ್ಕು‌ ದಶಕಗಳಿಗಿಂತ ಹೆಚ್ಚು ಬ್ರಹ್ಮಚಾರಿಗಳಾಗಿ ಇಡೀ ಜೀವನವನ್ನು ಪಕ್ಷಕ್ಕಾಗಿ ಸಮರ್ಪಿಸಿ ದುಡಿದದ್ದು ಪಕ್ಷದ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶಿಷ್ಟ ಆಯಾಮ. ಆರಂಭದಲ್ಲಿ ವಿದ್ಯಾರ್ಥಿ ಸಂಘಟನೆ ಕಟ್ಟಲು ಆಸಕ್ತಿ ವಹಿಸಿ, ನಂತರ ರೈತರಂಗದಲ್ಲಿ, ಕಾರ್ಮಿಕ ರಂಗದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಎರಡೂ ವಿಭಾಗಗಳಲ್ಲಿ , ಕೃಷಿ ಕೂಲಿಕಾರ ಸಂಘಟನೆ ಎಂಬ ವೈವಿಧ್ಯಮಯ ರಂಗಗಳಲ್ಲಿ ದುಡಿದದ್ದೂ ಕೂಡಾ ಒಂದು ವಿಶಿಷ್ಟ ಅನುಭವ.

ಒಟ್ಟಿಗೇ ಚಳುವಳಿಗೆ ಧುಮುಕಿ, ಒಟ್ಟಿಗೇ ಪಕ್ಷ ಸೇರಿ ನಲವತ್ತೈದು ವರ್ಷಗಳ ಕಾಲ ಒಟ್ಟಿಗೇ ರೈತ ಸಂಘ,ಕೃಷಿ ಕೂಲಿಕಾರ ಸಂಘ ಹಾಗೂ ಪಕ್ಷದಲ್ಲಿ ದುಡಿದ ಸಂಗಾತಿಯನ್ನು ಕಳೆದುಕೊಂಡು ದುಃಖತಪ್ತನಾಗಿದ್ದೇನೆ. ಹಲವು ಸಂಗಾತಿಗಳ, ಸಾವಿರಾರು ದುಡಿಯುವ ಜನರ ಪ್ರೀತಿ ಗಳಿಸಿಕೊಂಡ ನಿತ್ಯಾನಂದ ಸ್ವಾಮೀಜಿಯವರಿಗೆ ನನ್ನ ಮನದಾಳದ ನೋವಿನ ಅಂತಿಮ ನಮನಗಳು.

ಇದನ್ನೂ ನೋಡಿ: ಹೂವಾಗಬೇಕಿದ್ದದ್ದು… ಕ್ಷಿಪಣಿಯಾದದ್ದು | ಬುಷ್‌ ಅಧ್ಯಕ್ಷರಾಗಿದ್ದಾಗ ಕೃಷ್ಣ ನಾಯಕ ಹಿಚ್ಕಡ ಬರೆದ ಕವಿತೆ Janashakthi

Donate Janashakthi Media

Leave a Reply

Your email address will not be published. Required fields are marked *