ವಸಂತರಾಜ ಎನ್.ಕೆ
2025-26 ಋತ್ವಿಕ್ ಘಟಕ್ ಅವರ ಜನ್ಮಶತಾಬ್ಧಿ ವರ್ಷ. ಸತ್ಯಜಿತ್ ರಾಯ್, ಮೃಣಾಲ್ ಸೆನ್ ಜತೆಗೆ ಭಾರತೀಯ ಸಿನೆಮಾದ ತ್ರಿವಳಿಗಳಲ್ಲಿ ಒಬ್ಬರು ಎಂದು ಹೆಸರಾದ ಋತ್ವಿಕ್ ಘಟಕ್ , ನವೆಂಬರ್ 4, 1925ರಂದು ಜನಿಸಿದ್ದರು.. ಅವರು ಮಾಡಿದ್ದು ಎಂಟೇ ಸಿನಿಮಾ ಗಳಾದರೂ, ಅವುಗಳಲ್ಲಿ ಒಂದು ಬಿಟ್ಟರೆ, ಉಳಿದೆಲ್ಲ ರಿಲೀಸ್ ಆಗಲಿಲ್ಲ ಅಥವಾ ಕಮರ್ಶಿಯಲ್ ಆಗಿ ವಿಫಲವಾದವು. ಆದರೂ ಭಾರತದ ಸಮಾನಾಂತರ ಸಿನೆಮಾ ಎಂದು ಪರಿಚಿತವಾದ 1970ರ ನಂತರದ ದಶಕಗಳ – ಅದೂರ್ ಗೋಪಾಲಕೃಷ್ಣ, ಕುಮಾರ್ ಸಾಹನಿ, ಮಣಿ ಕೌಲ್, ಕೇತನ್ ಮೆಹ್ತಾ, ಸೈಯದ್ ಅಖ್ತರ್ ಮಿರ್ಜಾ, ಜಾನ್ ಅಬ್ರಹಾಂ ಮುಂತಾದ – ಹಲವು ನಿರ್ದೇಶಕರು ಘಟಕ್ ಅವರನ್ನು ತಮ್ಮ ಗುರು ಎಂದು ಮನ್ನಿಸುತ್ತಿದ್ದರು. ಪುಣೆಯ (ಎಫ್.ಟಿ.ಐ.ಐ) ಫಿಲಂ ಟೆಲಿವಿಶನ್ ಇನ್ಸ್ಟಿಟ್ಯೂಟ್ ನಲ್ಲಿ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಾಗಿದ್ದ ಅವರಿಗೆಲ್ಲ ಘಟಕ್ ಪ್ರಾಧ್ಯಾಪಕರಾಗಿದ್ದರು,. ಮಾತ್ರವಲ್ಲ ಹೊಸ ಭಾರತೀಯ ಸಿನೆಮಾದ ಸೌಂದರ್ಯಶಾಸ್ತ್ರದ ರೂಪುರೇಷೆಗಳನ್ನು ಅವರಲ್ಲಿ ನೆಟ್ಟಿದ್ದರು. ಆ ಮೂಲಕ ಭಾರತೀಯ ಸಿನೆಮಾಕ್ಕೆ ಹೊಸ ದಿಕ್ಕು ತೋರಿದರು.
ದೇಶ ವಿಭಜನೆಯ ಫಿಲಂ ತ್ರಿವಳಿ
ಸಿನೆಮಾ ನಿರ್ದೇಶಕರಾಗಿ ಅವರು ದೇಶ ವಿಭಜನೆಯ ತ್ರಿವಳಿ (ಪಾರ್ಟಿಶನ್ ಟ್ರಯೊಲಜಿ) ಫಿಲಂಗಳಿಗೆ ಪ್ರಸಿದ್ಧರಾದವರು. “ಮೇಘೇ ಢಾಕಾ ತಾರಾ” (1960), “ಕೋಮಲ ಗಾಂಧಾರ್” (1961), “ಸುಬರ್ಣರೇಖಾ” (1965) – ಈ ತ್ರಿವಳಿಯ ಭಾಗವಾದ ಸಿನೆಮಾಗಳು. ಸ್ವತಃ 1943ರ ಬಂಗಾಳ ಕ್ಷಾಮ ಮತ್ತು 1947ರ ಭೀಕರ ದೇಶ ವಿಭಜನೆಯ ದಾರುಣತೆಯನ್ನು ಅನುಭವಿಸಿದ ಘಟಕ್ ಅವರನ್ನು ಅದು ಗಾಢವಾಗಿ ಕಾಡಿದೆ. ಅವರ ಎಲ್ಲ ಕೃತಿಗಳಲ್ಲಿ ಅದು ಕಂಡು ಬರುತ್ತದೆ. ಘಟಕ್ “ಕಲಾ” ಮತ್ತು ‘ಜನಪ್ರಿಯ’ ಸಿನೆಮಾದ ಪರಿಕಲ್ಪನೆಯನ್ನು ತಿರಸ್ಕರಿಸಿದ್ದರೂ, ಅವರ ಮೊದಲ ಫಿಲಂ ‘ನಾಗರಿಕ್’ 1952ರಲ್ಲಿ ತಯಾರಾಗಿದ್ದು, ಭಾರತದ ನಿಜವಾದ ಮೊದಲ “ಕಲಾ ಸಿನೆಮಾ” ಆಗಿತ್ತು. ಸತ್ಯಜಿತ್ ರಾಯ್ ಅವರ ‘ಪಾಥೇರ್ ಪಾಂಚಾಲಿ” 1955ರಲ್ಲಿ, ಅಂದರೆ 3 ವರ್ಷದ ನಂತರ, ಬಿಡುಗಡೆಯಾಗಿತ್ತು. ಆದರೆ 1977ರ ವರೆಗೆ ಅದಕ್ಕೆ ಬಿಡುಗಡೆಯ ‘ಭಾಗ್ಯ’ ಸಿಗಲಿಲ್ಲ. “ಅಜಾಂತ್ರಿಕ್” (1958), ಒಂದು ನಿರ್ಜೀವಿ (ಇಲ್ಲಿ ಒಂದು ಹಳೆಯ ಕಾರು) ಸಿನೆಮಾದ ಮುಖ್ಯ ಪಾತ್ರವಾಗಿರುವ ಜಗತ್ತಿನ ಮೊದಲ ಸಿನಿಮಾ ಎನ್ನಲಾಗಿದೆ. ಈ ಕಾರು ಟ್ಯಾಕ್ಸಿ ಚಾಲಕನ ಸಂಗಾತಿ ಸಹ. ಹಳೆಯ ವ್ಯವಸ್ಥೆಯ ಸನ್ನಿವೇಶದಲ್ಲಿ ಆಧುನಿಕ ಯಂತ್ರದ ಪ್ರವೇಶದ ಪರಿಣಾಮದ ಕುರಿತು ಹಾಸ್ಯಮಯ ನಿರೂಪಣೆಯ ‘ಅಜಾಂತ್ರಿಕ್” ಹಲವು ಪದರಗಳನ್ನು ಹೊಂದಿದ್ದು ಆಧುನಿಕತೆ-ಸಂಸ್ಕೃತಿಯ ಮುಖಾಮುಖಿಯ ಬಗೆಗೂ ಹೇಳುತ್ತದೆ. “ಬಾರಿ ಟೆಕೆ ಪಲಿಯೆ” (1959) ಅವರ ಎರಡನೆಯ ಬಿಡುಗಡೆಯಾದ ಫಿಲಂ ಆಗಿತ್ತು. “ಟಿಟಾಶ್ ಏಕ್ ನದೀರ್ ನಾಮ್” (1973) ಭಾರತ-ಬಾಂಗ್ಲಾದೇಶ ಜಂಟಿ ತಯಾರಿಕೆಯಾಗಿದ್ದು, ಪರಸ್ಪರ ಹೆಣೆದುಕೊಂಡಿರುವ ಹಲವು ಕಥನಗಳ ಸಂಕೀರ್ಣ ಕಥನದ ಸ್ವರೂಪ ಹೊಂದಿದೆ. ಅವರ ಕೊನೆಯ ಮತ್ತು ಭಾಗಶಃ ಆತ್ಮಕಥಾತ್ಮಕ ಎನ್ನಬಹುದಾದ ಸಿನೆಮಾ “ಜಕ್ತಿ, “ಟಕ್ಕೊ ಔರ್ ಗಪ್ಪೊ” (ತರ್ಕ, ವಾದ ಮತ್ತು ಒಂದು ಕತೆ) 1977ರಲ್ಲಿ ತಯಾರಾಗಿದ್ದು ಅವರ ನಿಧನದ ನಂತರವೇ ಪೂರ್ಣಗೊಂಡಿತು.
ಘಟಕ್ ತಮ್ಮ ವಿದ್ಯಾರ್ಥಿ ಜೀವನದಲ್ಲೇ ಕಮ್ಯುನಿಸ್ಟ್ ಚಳುವಳಿಯ ಪ್ರಭಾವಕ್ಕೆ ಒಳಗಾಗಿದ್ದು 1955ರ ವರೆಗೆ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರಲ್ಲದೆ, ಜೀವನದ ಉದ್ದಕ್ಕೂ ಮಾರ್ಕ್ಸ್ ವಾದಿ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಅವರು ಇಂಡಿಯನ್ ಪೀಪಲ್ಸ್ ಥೀಯೇಟರ್ ಅಸೋಶಿಯೇಶನ್ (ಇಪ್ಟಾ) ಪ್ರಮುಖ ನಾಯಕರಾಗಿದ್ಧು ನಾಟಕ ಬರವಣಿಗೆ, ನಿರ್ಧೇಶನದಲ್ಲಿ ತೊಡಗಿಸಿಕೊಂಡಿದ್ದರು. ಹೊಸ ನಾಟಕಗಳನ್ನು ಬರೆದು ನಿರ್ದೇಶಿಸುವುದಲ್ಲದೆ, 1943ರ ಬಂಗಾಳದ ಬರ ಆಧಾರಿತ ಪ್ರಸಿದ್ಧ ನಾಟಕ “ನಬಾನ್ನ”ವನ್ನು ಮತ್ತೆ ಆಢಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1950ರಿಂದ ಸಿನೆಮಾ ಕತೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದರು. ಬಾಂಬೇ ಹಿಂದಿ ಸಿನೆಮಾಕ್ಕೂ ಚಿತ್ರಕತೆ ಬರೆದಿದ್ದರು. ಸೂಪರ್ ಹಿಟ್ ಫಿಲಂ ಆಧ ಪುನರ್ಜನ್ಮ ಕತೆ ಆಧಾರಿತ “ಮಧುಮತಿ” ಯ ಚಿತ್ರಕತೆ ಘಟಕ್ ಅವರದ್ದು ಎಂದು ಅಷ್ಟೇನೂ ಪರಿಚಿತವಿಲ್ಲ. ಬಹುಶಃ ಇದೊಂದೇ ಅವರ ಸೂಪರ್ ಹಿಟ್ ಫಿಲಂ! ಇದೊಂದು ;ಕಲ್ಟ್ ಫಿಲಂ” ಆಗಿ ಇದರ ಹಲವು ಆವೃತ್ತಿಗಳು ನಕಲುಗಳು ಭಾರತೀಯ ಮತ್ತು ಬೇರೆ ಭಾಷೆಗಳಲ್ಲೂ ಬಂದವು.

ಕಲಾವಿದ ಖಾಸಗಿ ಸತ್ಯವನ್ನು ಅರಿಯಬೇಕು, ಅಭಿವ್ಯಕ್ತಿಸಬೇಕು
ನಾಟಕ ಮತ್ತು ಸಿನೆಮಾದ ಜನಪರತೆ ಮತ್ತು ಸೌಂದರ್ಯಪರತೆ ಎರಡೂ ಅವರ ಕಾಳಜಿಗಳಾಗಿದ್ದವು. ಅವರು ಕಲಾ ಚಿಂತಕರಾಗಿದ್ದು, ಸಿನೆಮಾ ಕಲೆ ಬಗ್ಗೆ ಆಳವಾದ ಚಿಂತನೆ ನಡೆಸಿದ್ದರು. ಈ ಕುರಿತು ಅವರ ಬರಹಗಳು, ಚಿಂತನೆಗಳು ಈಗಲೂ ಅಧ್ಯಯನ-ಯೋಗ್ಯವಾಗಿವೆ.
“ಟಾಗೋರ್ ಒಮ್ಮೆ ಹೇಳಿದರಂತೆ ‘ಕಲೆಯಲ್ಲಿ ಸೌಂದರ್ಯವಿರಬೇಕು’ ಅಂತ. ಆದರೆ ಅದಕ್ಕಿಂತ ಮೊದಲು ಕಲೆಯಲ್ಲಿ ಸತ್ಯವಿರಬೇಕು. ಏನಿದು ಸತ್ಯ? ಚಿರಂತನ ಸತ್ಯವೆಂಬುದಿಲ್ಲ. ಪ್ರತಿ ಕಲಾವಿದ ಖಾಸಗಿ ಸತ್ಯವನ್ನು ಕಷ್ಟಯುತ ಖಾಸಗಿ ಪ್ರಕ್ರಿಯೆಯ ಮೂಲಕವೇ ಅರಿಯಬೇಕು. ಮತ್ತು ಅದನ್ನು ಅಭಿವ್ಯಕ್ತಿ ಮಾಡಬೇಕು.”
ಇದು ಅವರ ಬಹು ಚರ್ಚಿತ ಗಹನವಾದ ಹೇಳಿಕೆ. ಸಿನೆಮಾ ನಿರ್ಧೇಶಕನಾಗಿ ಅವರ ಒತ್ತು ಮನುಷ್ಯರು ಮತ್ತು ಅವರ ಬದುಕಿನ – ಅದರಲ್ಲೂ ಸಾಮಾನ್ಯ ಜನರ ದೈನಂದಿನ ಬದುಕಿನ ಬಗ್ಗೆ ಇತ್ತು. ಅವರಿಗೆ ಸಿನೆಮಾ ತಯಾರಿಕೆ ಒಂದು ಕಲಾ ರೂಪವಾಗಿತ್ತು ಮತ್ತು ಜನರ ನೋವು ಕೊನೆಗೊಳಿಸುವ ಒಂದು ಸಾದನವಾಗಿತ್ತು. ಸಾಮಾನ್ಯ ಜನರ ದುಃಖ ಮತ್ತು ನೋವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಾಧನವಾಗಿತ್ತು.
ಋತ್ವಿಕ್ ಘಟಕ್ ಅವರ ಜನ್ಮಶತಾಬ್ಧಿ ವರ್ಷದಲ್ಲಿ, ಸಿನೆಮಾ ಪ್ರೇಮಿಗಳು ಕೇವಲ ನಿರ್ದೇಶಕನನ್ನಲ್ಲ, ಚಲನಚಿತ್ರದ ವ್ಯಾಕರಣವನ್ನೇ ಪುನರ್‌ರಚಿಸಿದ ದಾರ್ಶನಿಕನನ್ನು ಸ್ಮರಿಸುತ್ತಾರೆ. ಅವರ ಫ್ರೇಮ್‌ಗಳು ಕೇವಲ ವಿನ್ಯಾಸಕ್ಕೆ ಸೀಮಿತಗೊಳ್ಳಲಿಲ್ಲ — ಅವು ಸುಟ್ಟವು, ಕಾವ್ಯಮಯವಾಗಿಯೂ ಮೂಡಿದವು. ಅವುಗಳಲ್ಲಿ ವಿಭಜನೆಯ ನೋವಿತ್ತು; ಬದುಕುಳಿಯುವ ಕೆಚ್ಚೂ ಸಹ. ಪ್ರತಿಯೊಂದು ಡಿಸಾಲ್ವ್, ರೈಲು ಸೀಟಿ, ಬಿರುಕುಬಿಟ್ಟ ಮಧುರ ದನಿ — ವಿಭಜಿತ ನಾಗರಿಕತೆಯನ್ನು ಸೂಚಿಸುವಂತಿದ್ದರೂ, ಅದು ಜೀವಂತವೂ ಆಗಿತ್ತು. ಘಟಕ್ ಅವರ ಸಿನೆಮಾಗಳು ಸಾಕ್ಷೀಕರಿಸುತ್ತಲೇ, ಸೃಜನಶೀಲವಾಗಿ ರಾಜಕೀಯ, ಮಾನವೀಯತೆಗಳನ್ನು ದಾಟಿಸುತ್ತಿದ್ದವು. ಅವರ ಕೈಯಲ್ಲಿ ಕ್ಯಾಮೆರಾ ಕೇವಲ ವೀಕ್ಷಕನಾಗಿರಲಿಲ್ಲ, ಅದು ಸತ್ಯದ ಮುಂದೆ ನಡುಗುವ ಆತ್ಮಸಾಕ್ಷಿಯಂತಿತ್ತು. ಇಂದಿಗೂ ಅವರ ಚಿತ್ರಗಳು ಪರದೆಯ ಮೇಲೆ ಮಾತ್ರವಲ್ಲ, ನಮ್ಮ ಮನಸ್ಸಿನೊಳಗೂ ಒಂದರ್ಥದಲ್ಲಿ ಅರಾಜಕವಾಗಿ, ಪ್ರಭೆಯಾಗಿ ಹಾಗೂ ಅಮರವಾಗಿ ಮಿಂಚುತ್ತವೆ!
“ನೂರರ ನೆನಪು : ಇಂದಿಗೆ ಋತ್ವಿಕ್ ಘಟಕ್”
ಈ ಹಿನ್ನೆಲೆಯಲ್ಲಿ ಋತ್ವಿಕ್ ಘಟಕ್ ಅವರ ಜನ್ಮಶತಾಬ್ಧಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜನಶಿಕ್ಷಣ ಟ್ಸಸ್ಟ್ “ನೂರರ ನೆನಪು : ಇಂದಿಗೆ ಋತ್ವಿಕ್ ಘಟಕ್” ಎಂಬ ಒಂದು ವೆಬಿನಾರ್ ಸರಣಿಯನ್ನು ಹಮ್ಮಿಕೊಂಡಿದೆ. ಈ ವೆಬಿನಾರ್ ಸರಣಿಯ ಉದ್ದೇಶಗಳಲ್ಲಿ ಹಲವು ಉಪನ್ಯಾಸ-ಸಂವಾದಗಳಲ್ಲಿ – ಘಟಕ್ ಅವರನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು, ಅವರ ಫಿಲಂಗಳ ಕುರಿತು ಮರುಚಿಂತನೆ ಮಾಡುವುದು, ಅಲ್ಲದೆ ಇಂದಿನ ಭಾರತೀಯ ಮತ್ತು ಜಾಗತಿಕ ಸಿನೆಮಾ ದ ಅವಲೋಕನಕ್ಕೆ ಘಟಕ್ ಅವರ ಚಿಂತನೆಗಳ ಕೊಡುಗೆಯ ಮೌಲ್ಯಮಾಪನ ಮಾಡುವುದೂ ಸೇರಿದೆ.
ಈ ವೆಬಿನಾರ್ ಸರಣಿಯ ಉದ್ಘಾಟನಾ ಉಪನ್ಯಾಸವನ್ನು ಖ್ಯಾತ ಸಿನೆಮಾ ಪರಿಣತ ಮತ್ತು ಹಲವು ಬೆಂಗಳೂರೂ ಚಿತ್ರೋತ್ಸವಗಳಿಗೆ ಕಲಾ ನಿರ್ದೇಶಕರಾಗಿದ್ದ ಎನ್.ವಿದ್ಯಾಶಂಕರ್ ಅವರು ಫ್ರೆಬ್ರುವರಿ 28 (ಶನಿವಾರ) ) ಸಂಜೆ 5 ಕ್ಕೆ ಮಾಡಲಿದ್ದಾರೆ. ಈ ಉಪನ್ಯಾಸ ಮತ್ತು ಇಡೀ ಸರಣಿಯನ್ನು ಇನ್ನೊಬ್ಬ ಖ್ಯಾತ ಸಿನೆಮಾ ಪರಿಣತ ಕೆ.ಫಣಿರಾಜ್ ಅವರು ಸಂಯೋಜಿಸಿ ನಿರ್ವಹಿಸಲಿದ್ದಾರೆ. ಇದನ್ನು ಝೂಮ್ ಮೂಲಕ ನಡೆಸಲಾಗುವುದು.
https://us06web.zoom.us/j/87808361541?pwd=kobJbEYawj99vNDSkFRpQ8MPuNh2cL.1
ಜನಶಕ್ತಿ ಮೀಡಿಯಾದ ಯೂ ಟ್ಯೂಬ್ ನಲ್ಲಿ ಲೈವ್ ಪ್ರಸಾರ ಸಹ ಮಾಡಲಾಗುವುದು
https://www.youtube.com/@JanashakthiMedia/streams
