ಕೋಲಾರ: ಕಲಬೆರಕೆ ಹಾಲಿನ ದಂಧೆ ಶುರುವಾಗಿರುವ ಘಟನೆ ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಕೇಳಿಬಂದಿದೆ. ಇದೀಗ ಕಲಬೆರಕೆ ಹಾಲಿನ ವಿರುದ್ಧ ಸಮರ ಸಾರಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿದ್ದ ಆಂಧ್ರಪ್ರದೇಶ ಮೂಲದ 8 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಕೋಲಾರ ಜಿಲ್ಲೆಗೆ ಹೊಂದಿಕೊಂಡಂತೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿವೆ. ಹೀಗಾಗಿ ಅಲ್ಲಿನ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಖಾಸಗಿ ಡೈರಿಗಳು ಕೋಲಾರ ಜಿಲ್ಲೆಯಲ್ಲಿ ಕಲಬೆರಕೆ ಹಾಲಿನ ಅಡ್ಡೆಗಳನ್ನು ನಿರ್ಮಾಣ ಮಾಡಿ ಕಲಬೆರಕೆ ಹಾಲು ತಯಾರಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕೋಲಾರ ಡಿಸಿ ಎಂ.ಆರ್ ರವಿ ಏಕಕಾಲಕ್ಕೆ 32 ಸ್ಥಳಗಳಲ್ಲಿ ದಾಳಿ ಮಾಡಿ ಸುಮಾರು 42 ಹಾಲಿನ ಮಾದರಿಗಳನ್ನು ಸಂಗ್ರಹ ಮಾಡಿದ್ದಾರೆ. ಹಾಲಿಗೆ ಯೂರಿಯಾ, ಹಾಲಿನ ಪುಡಿ, ಕೆಲವೊಂದು ಕೆಮಿಕಲ್ ಪೌಡರ್, ಪಾಮ್ ಆಯಿಲ್, ಕೊಬ್ಬಿನ ಅಂಶ, ಉಪ್ಪು ಮಿಶ್ರಣ ಮಾಡುವ ಮೂಲಕ ಹಾಲನ್ನು ತಯಾರು ಮಾಡಿ ಅದನ್ನು ಖಾಸಗಿ ಹಾಲಿನ ಡೈರಿಗಳಿಗೆ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: ಮದುವೆಗೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಗುಜರಾತ್ ಸರ್ಕಾರದ ಪ್ರಸ್ತಾವಕ್ಕೆ ಖಂಡನೆ
ಈ ಹಾಲಿನ ದಂಧೆ ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್ ಬಂಗಾರಪೇಟೆ ತಾಲೂಕುಗಳಲ್ಲಿ ಹೆಚ್ಚಾಗಿದೆ. ಖಚಿತ ಮಾಹಿತಿ ಮೇರೆಗೆ ಜಿಲ್ಲಾಡಳಿತ ಸುಮಾರು 5-6 ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳ ನೆರವಿನೊಂದಿಗೆ ದಾಳಿ ಮಾಡಿ ಹಾಲಿನ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದೆ. ವರದಿ ಬಂದ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಖಾಸಗಿ ಡೈರಿಗಳು ಹಾಗೂ ಖಾಸಗಿ ಹಾಲು ಸಂಗ್ರಹ ಘಟಕಗಳನ್ನೇ ನಿಷೇಧ ಮಾಡುವ ನಿರ್ಧಾರಕ್ಕೆ ಬಂದಿದೆ.
ಇನ್ನೂ ಕೆಜಿಎಫ್ ತಾಲೂಕಿನ ಬಳಗೆರೆ ಎಂಬಲ್ಲಿ ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಮನೆಯಲ್ಲಿ ಅಕ್ರಮವಾಗಿ ಕಲಬೆರಕೆ ಹಾಲು ಮಾಡುತ್ತಿದ್ದ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿದ್ದಾರೆ. ಕಲಬೆರಕೆ ಮಾಡಲು ಬಳಕೆ ಮಾಡುತ್ತಿದ್ದ ನಂದಿನ ಹಾಲಿನ ಪುಡಿ ಪಾಕೆಟ್, ಮಿಲೆಟ್ಸ್ ಮಿಲ್ಕ್ ಲಡ್ಡು, 7 ಬೆಲ್ಲದ ಪಾಕೆಟ್, ಪಾಮ್ ಆಯಿಲ್, ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಸ್ತುತ ದಂಧೆಯಲ್ಲಿ ತೊಡಗಿದ್ದ ಆಂಧ್ರಪ್ರದೇಶ ಮೂಲದ 8 ಜನರನ್ನು ಬಂಧಿಸಲಾಗಿದೆ. ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಕಲಬೆರಕೆ ಹಾಲಿನ ವಿರುದ್ಧ ದಾಳಿ ಮಾಡಿ ಅವುಗಳಿಗೆ ಕಡಿವಾಣ ಹಾಕಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ನೋಡಿ: ಧಾರವಾಡ | ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಕಾಂಗ್ರೆಸ್–ಬಿಜೆಪಿಗೆ ಎಚ್ಚರಿಕೆಯ ಸಂಕೇತ! Janashakthi Media
