ಲಕ್ನೋ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹಾಗೂ ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಮಾಘ ಮೇಳದ ಸಂದರ್ಭದಲ್ಲಿ ಸೇರಿದಂತೆ ಕಳೆದ ವರ್ಷ ಅಪ್ರಾಪ್ತ ವಯಸ್ಕ ಸೇರಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಫೆಬ್ರವರಿ 21ರಂದು ಉತ್ತರ ಪ್ರದೇಶದ ಪ್ರಯಾಗರಾಜ್ ನ ಝುನ್ಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸ್ವಾಮಿ
ಆಶುತೋಷ್ ಬ್ರಹ್ಮಚಾರಿ ಮಹಾರಾಜ್ ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಪ್ರಯಾಗರಾಜ್ ವಿಶೇಷ ನ್ಯಾಯಾಧೀಶರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆದೇಶಿಸಿದರು. ನ್ಯಾಯಾಲಯದ ನಿರ್ದೇಶನದ ಅನ್ವಯ ಶನಿವಾರ ತಡರಾತ್ರಿ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ವಿಧಿಗಳು ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅವಿಮುಕ್ತೇಶ್ವರಾನಂದ ಮತ್ತು ಮುಕುಂದಾನಂದ ಬ್ರಹ್ಮಚಾರಿ ಜೊತೆಗೆ ಇಬ್ಬರಿಂದ ಮೂವರು ಗುರುತಿಸಲಾಗದ ವ್ಯಕ್ತಿಗಳನ್ನೂ ದೂರಿನಲ್ಲಿ ಹೆಸರಿಸಲಾಗಿದೆ.
ಇದನ್ನೂ ಓದಿ: ‘ಭಗವಂತನ ಮರಣʼ ಬೆಂಗಳೂರು ಸಮುದಾಯದ ಹೊಸ ನಾಟಕ
ಎಫ್ಐಆರ್ ಪ್ರಕಾರ, ದೂರುದಾರರನ್ನು ಸ್ವಾಮಿ ರಾಮಭದ್ರಾಚಾರ್ಯರ ಶಿಷ್ಯ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಮತ್ತು ಇಬ್ಬರು ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕರಾಗಿದ್ದಾರೆ. ಗುರುಕುಲದಲ್ಲಿ ಹಾಗೂ ಮಾಘ ಮೇಳ ಸೇರಿದಂತೆ ವಿವಿಧ ಧಾರ್ಮಿಕ ಸಭೆಗಳ ವೇಳೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಧಾರ್ಮಿಕ ಗುರುಗಳಂತೆ ವರ್ತಿಸಿ, ‘ಗುರು ಸೇವೆ’ ಎಂಬ ನೆಪದಲ್ಲಿ ಧಾರ್ಮಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಳೆದ ವರ್ಷ ಹಲವು ಬಾರಿ ಅಪ್ರಾಪ್ತ ವಯಸ್ಕ ಮತ್ತು ಇನ್ನೊಬ್ಬ ಯುವಕನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಝುನ್ಸಿ ಪೊಲೀಸ್ ಠಾಣೆ ಹಾಗೂ ಹಿರಿಯ ಅಧಿಕಾರಿಗಳಿಗೆ ಈ ಹಿಂದೆ ಲಿಖಿತ ದೂರು ಸಲ್ಲಿಸಿದ್ದರೂ ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ. ಇದರಿಂದಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ದೂರುದಾರರು ಹೇಳಿದ್ದಾರೆ.
ಇತ್ತೀಚೆಗೆ ಪ್ರಯಾಗ್ರಾಜ್ನ ಮಾಘ ಮೇಳ ಆಯೋಜಕರೊಂದಿಗೆ ಉಂಟಾದ ಘರ್ಷಣೆ ಹಿನ್ನೆಲೆ ಅವಿಮುಕ್ತೇಶ್ವರಾನಂದ್ ಸುದ್ದಿಯ ಕೇಂದ್ರಬಿಂದುವಾಗಿದ್ದರು. ಮೌನಿ ಅಮವಾಸ್ಯೆಯಂದು ಸ್ನಾನ ಮಾಡದಂತೆ ಆಡಳಿತ ಮಂಡಳಿ ತಡೆದಿದೆ ಎಂದು ಅವರು ಆರೋಪಿಸಿದ್ದರು.
ಶನಿವಾರ ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿದ ಅವಿಮುಕ್ತೇಶ್ವರಾನಂದ್, ತಮ್ಮ ವಿರುದ್ಧದ ಪ್ರಕರಣ ಸುಳ್ಳು ಎಂದು ತಿಳಿಸಿದ್ದಾರೆ. ಆ ರೀತಿಯ ಕೃತ್ಯಗಳಿಗೆ ಕಾರಣರಾದ ನೈಜ ಆರೋಪಿಗಳನ್ನು ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.
ವಿಚಾರಣೆಯ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ ಎಂದು ಹೇಳಿದ ಅವರು, “ನ್ಯಾಯಾಲಯವು ಈ ಪ್ರಕ್ರಿಯೆಯನ್ನು ದೀರ್ಘಕಾಲ ವಿಳಂಬಿಸದೆ ವೇಗವಾಗಿ ವಿಚಾರಣೆ ನಡೆಸಬೇಕು. ಅನೇಕರು ಈ ಪ್ರಕರಣವನ್ನು ಗಮನಿಸುತ್ತಿದ್ದಾರೆ,” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ನೋಡಿ: ಕೆಂಪು ಪುಸ್ತಕ ದಿನ | ದುಡಿಯುವ ಜನತೆಯ ಕೈಪಿಡಿಹಾಡಿದವರು Janashakthi Media
