ಬಜೆಟ್ ಅಧಿವೇಶನದಲ್ಲಿ ʻರೋಹಿತ್ ವೇಮುಲ ಕಾಯ್ದೆʼ ಬಿಡುಗಡೆಗೆ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರ ‘ರೋಹಿತ್ ವೇಮುಲ ಕಾಯ್ದೆ’ ಕರಡನ್ನು ಸಾರ್ವಜನಿಕ ಚರ್ಚೆಗೆ ಕೂಡಲೇ ಬಿಡುಗಡೆಗೊಳಿಸಿ, ಬಜೆಟ್ ಅಧಿವೇಶನದಲ್ಲಿ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ‘ರೋಹಿತ್ ವೇಮುಲ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಫೆಬ್ರವರಿ 17ರಂದು ಆಗ್ರಹಿಸಿದೆ. ಬಜೆಟ್

ನಗರದ ಪ್ರೆಸ್‍ಕ್ಲಬ್‍ನಲ್ಲಿ ದಸಂಸ ಹಿರಿಯ ಹೋರಾಟಗಾರರಾದ ಮಾವಳ್ಳಿ ಶಂಕರ್, ಪ್ರಾಧ್ಯಾಪಕರಾದ ಹುಲಿಕುಂಟೆ ಮೂರ್ತಿ, ಬಸವರಾಜ ಕೌತಾಳ್, ಡಾ.ಆಶ್ನಾಸಿಂಗ್, ವಿದ್ಯಾರ್ಥಿ ಮುಖಂಡರಾದ ಲೇಖಾ, ರಾಹುಲ್, ವಕೀಲ ವಿನಯ್ ಶ್ರೀನಿವಾಸ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂದಿಗೂ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ಗೌರವ, ಆತ್ಮವಿಶ್ವಾಸ, ವ್ಯಕ್ತಿತ್ವಗಳ ಮೇಲೆ ದಾಳಿಗಳಾಗುತ್ತಿವೆ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಕೇಸರಿಕರಣದಿಂದ ಬ್ರಾಹ್ಮಣ್ಯದ ಬೇರುಗಳು ಇನ್ನಷ್ಟು ಬಲಗೊಳ್ಳುತ್ತಿವೆ. ಪಠ್ಯಕ್ರಮ, ಬೋಧನ ವಿಧಾನಗಳಲ್ಲಿ ಧರ್ಮನಿರಪೇಕ್ಷ ಮೌಲ್ಯಗಳು, ವೈಜ್ಞಾನಿಕ ಮನೋಭಾವಗಳು ಕುಂಟಿತಗೊಳ್ಳುತ್ತಿವೆ ಎಂದು ಹೋರಾಟಗಾರು ತಿಳಿಸಿದರು.

ಇದನ್ನೂ ಓದಿ: ಇ.ಡಿ ಶೋಧಕ್ಕೆ ಅಡ್ಡಿ ಆರೋಪ: ಮಮತಾ ವಿರುದ್ಧದ ಅರ್ಜಿ ವಿಚಾರಣೆ ಮಾ.18ಕ್ಕೆ

ಎನ್‍ಇಪಿ, ನೀಟ್, ಸಿಇಟಿ, ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ ಮೂಲಕ ಯುಜಿಸಿ ವ್ಯವಸ್ಥೆಯನ್ನು ವಿಲೀನಗೊಳಿಸುವ ಇತ್ತೀಚಿನ ಪ್ರಯತ್ನಗಳೆಲ್ಲವೂ ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಅವರ ಜಾತಿಯ ಆಧಾರದ ಮೇಲೆ ನಿರ್ಧರಿಸುವ ಚೌಕಟ್ಟನ್ನು ನಿರ್ಮಿಸಿವೆ. ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ. ಕಾಂಗ್ರೆಸ್ ಪಕ್ಷ 2024ರ ಚುನಾವಣಾ ಪೂರ್ವದಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿಗೊಳಿಸುವ ಭರವಸೆ ನೀಡಿತ್ತು ಎಂದು ಅವರು ಮಾಹಿತಿ ನೀಡಿದರು.

ರಾಹುಲ್ ಗಾಂಧಿ ಕರೆಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯು ಉನ್ನತ ಶಿಕ್ಷಣದಲ್ಲಿ ಸಾಂಸ್ಥಿಕ ತಾರತಮ್ಯವನ್ನು ಎದುರಿಸುತ್ತಿರುವ ಲಕ್ಷಾಂತರ ದಲಿತ, ಆದಿವಾಸಿ ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಗಳಲ್ಲಿ ಸಮಾನ ಬದುಕಿನ ಹೊಸ ಭರವಸೆಯನ್ನು ಮೂಡಿಸಿತ್ತು. 2026ರ ಜನವರಿಯಲ್ಲಿ ರಾಜ್ಯ ಸರಕಾರ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ರಾಹುಲ್ ಗಾಂಧಿ ಸಾರ್ವಜನಿಕವಾಗಿ ತಿಳಿಸಿದ್ದರು ಹೋರಾಟಗಾರರು ನುಡಿದರು.

ಆದರೆ ಇದುವರೆಗೆ ಯಾವುದೇ ಕರಡನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಿಲ್ಲ ಮತ್ತು ಕಾಯ್ದೆಯನ್ನು ಜಾರಿಮಾಡಲು ವೇಳಾಪಟ್ಟಿ ಘೋಷಿಸಿಲ್ಲ. ಈ ವಿಳಂಬವು ರಾಜ್ಯಾದ್ಯಂತ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಉನ್ನತ ಶಿಕ್ಷಣದಲ್ಲಿನ ರಚನಾತ್ಮಕ ಜಾತಿ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು 2026ರ ಯುಜಿಸಿ ಈಕ್ವಿಟಿ ನಿಯಮಗಳು ಸೇರಿದಂತೆ ಅಸ್ತಿತ್ವದಲ್ಲಿರುವ ನಿಯಂತ್ರಣ ಕ್ರಮಗಳು ಸಾಕಾಗುವುದಿಲ್ಲ. ಪ್ರತ್ಯೇಕ ‘ರೋಹಿತ್ ವೇಮುಲ ಕಾಯ್ದೆ’ ತುರ್ತಾಗಿ ಜಾರಿಯಾಗಬೇಕಾಗಿದೆ ಎಂದು ಅವರು ವಿಶ್ಲೇಷಿಸಿದರು.

ಆದುದರಿಂದ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಿ ಕೊಟ್ಟ ಮಾತಿನಂತೆ ರೋಹಿತ್ ವೇಮುಲ ಕಾಯ್ದೆ ಜಾರಿಗೊಳಿಸುವಂತೆ ಸೂಚಿಸಬೇಕು ಮತ್ತು ಅದನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಘೋಷಿಸಬೇಕು. ಸಾರ್ವಜನಿಕ ಸಮಾಲೋಚನೆಗಾಗಿ ಕಾಯ್ದೆಯ ಕರಡನ್ನು ಬಿಡುಗಡೆ ಮಾಡಬೇಕು. ವಿಧಾನಸಭೆಯಲ್ಲಿ ಮಂಡಿಸಲು ಮತ್ತು ಅಂಗೀಕರಿಸಲು ಸ್ಪಷ್ಟವಾದ ವೇಳಾಪಟ್ಟಿಯನ್ನು ಘೋಷಿಸಬೇಕು. ರೋಹಿತ್ ವೇಮುಲಾ ಕಾಯ್ದೆಯನ್ನು ಶಾಸನಬದ್ಧವಾಗಿ ಜಾರಿಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಇದನ್ನೂ ನೋಡಿ: ದಲಿತ ನೋವಿನ ಧ್ವನಿ – ಸಂಬಳಿಗೋಲು | ಪುಸ್ತಕ ಬಿಡುಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *