ಸಿಎಂ ಸಿದ್ದರಾಮಯ್ಯ ವಿರುದ್ದ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣ ಆರೋಪ: ವಿಚಾರಣೆ ಏ. 17ಕ್ಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ಪರವಾನಿಗೆಗಳನ್ನು ನೀಡಿದ ಹಾಗೂ ಗಣಿ ಗುತ್ತಿಗೆ ನವೀಕರಣ ಮಾಡಿರುವ ಆರೋಪದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಮತ್ತು ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರಿನ ಉದ್ಯಮಿ ಎಂ.ಪಿ. ವೇಣುಗೋಪಾಲ್‌ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಏಪ್ರಿಲ್​ 17ಕ್ಕೆ ನಿಗದಿಪಡಿಸಿದೆ.

ವಿಚಾರಣೆ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಾಜರಾದ ಹಿರಿಯ ವಕೀಲ ಕೆ.ಶಶಿಕಿರಣ್ ಶೆಟ್ಟಿ, ”ಅರ್ಜಿದಾರರ ಪರ ವಕೀಲರು ಸತತ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಈ ಹಿಂದೆ ವಜಾಗೊಳಿಸಿತ್ತು. ವಕೀಲರ ಮನವಿಯಂತೆ ಅರ್ಜಿಯನ್ನು ವಿಚಾರಣೆಗೆ ಮರು ಪರಿಗಣಿಸಲಾಗಿದೆ. ಆದರೆ, ಐದಾರು ಬಾರಿ ಕಾಲಾವಕಾಶ ಕೇಳಿದ್ದಾರೆ. ಈ ದಿನವೂ ಸಹ ಮತ್ತೆ ಕಾಲಾವಕಾಶ ಕೇಳುತ್ತಿದ್ದಾರೆ” ಎಂದು ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ಕೊಪ್ಪಳದಲ್ಲಿ ‘ಸಂಬಳಿಗೋಲು’ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ

‘ಅಲ್ಲದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಾಮಮೂರ್ತಿ ಗೌಡ ಎಂಬವರು ಖಾಸಗಿ ದೂರು (ಪಿಸಿಆರ್) ಸಲ್ಲಿಸಿದ್ದರು. ಆ ಖಾಸಗಿ ದೂರಿನಲ್ಲಿದ್ದ ವಿಷಯ ಮತ್ತು ಅಂಶಗಳನ್ನೇ ಪುಟ ಸಂಖ್ಯೆಗಳ ಸಮೇತ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ. ಆ ಖಾಸಗಿ ದೂರಿನಲ್ಲೂ ಸಿದ್ದರಾಮಯ್ಯ ಸೇರಿ ಈಗಿನ ಅರ್ಜಿಯಲ್ಲಿರುವ ಎಲ್ಲರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು” ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ”ಪ್ರತಿವಾದಿಯ ಪರ ವಕೀಲರು ಎತ್ತಿರುವ ಎಲ್ಲ ಅಂಶಗಳಿಗೂ ಮುಂದಿನ ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಲಾಗುವುದು” ಎಂದು ತಿಳಿಸಿದರು.

ವಾದ ಆಸಲಿಸಿದ ಪೀಠ, ಖಾಸಗಿ ದೂರಿನ ಅಂಶಗಳನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲರು ಹೇಳುತ್ತಿದ್ದಾರೆ. ಆದ್ದರಿಂದ ಖಾಸಗಿ ದೂರಿನ ಬಗ್ಗೆ ಸ್ಪಷ್ಟನೆ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿ ವಿವರ: ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿ ರಾಜ್ಯದಲ್ಲಿ ಅಕ್ರಮವಾಗಿ ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ. ಜೊತೆಗೆ, ಕೆಲವು ಗಣಿ ಕಂಪನಿಗಳನ್ನು ನವೀಕರಣ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸಿ, ತನಿಖಾ ವರದಿಯನ್ನು ಪಡೆದುಕೊಳ್ಳಬೇಕು. ಹಾಗೂ ಕೆಲವು ಗಣಿ ಕಂಪನಿಗಳ ಪರವಾನಿಗೆಯನ್ನು ರದ್ದು ಮಾಡಬೇಕು. ಅಕ್ರಮವಾಗಿ ಪರವಾನಿಗೆ ನೀಡಿದ್ದರ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು ಅರ್ಜಿದಾರರು ಕೋರಿದ್ದರು.

ಅರ್ಜಿ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ, ಅರ್ಜಿದಾರರು ಮತ್ತು ಅವರ ಪರ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು. ಇದೀಗ ವಕೀಲರು ಮತ್ತೆ ಮನವಿ ಮಾಡಿದ ಪರಿಣಾಮ ವಿಚಾರಣೆಗೆ ಪುನಃ ಪರಿಗಣಿಸಲಾಗಿದೆ.

ಇದನ್ನೂ ನೋಡಿ: “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media

Leave a Reply

Your email address will not be published. Required fields are marked *