ಬೆಂಗಳೂರು | ಬಿಕ್ಲು ಶಿವ ಕೊಲೆ ಕೇಸ್: 7 ತಿಂಗಳ ನಂತರ ಶಾಸಕ ಬೈರತಿ ಬಸವರಾಜ್ ಸಿಐಡಿ ಕಸ್ಟಡಿಗೆ

ಬೆಂಗಳೂರು: ಏಳು ತಿಂಗಳ ಬಳಿಕ ಸಿಐಡಿ ಅಧಿಕಾರಿಗಳು ರೌಡಿಶೀಟರ್​ ಶಿವರಾಜ್​ ಅಲಿಯಾಸ್​ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್​ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು

ಈ ಬೆಳವಣಿಗೆ ಬೆನ್ನಲೇ ಶತಾಯಗತಾಯ ಬಂಧನಕ್ಕೆ ಮುಂದಾಗಿದ್ದ ಸಿಐಡಿ ಅಧಿಕಾರಿಗಳು ವಿಶೇಷ ತಂಡ ರಚಿಸಿ ಶೋಧಕಾರ್ಯ ಬಿಗಿಗೊಳಿಸಿದ್ದವು. ನೀರಿಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್​ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ ಪರಿಣಾಮ ಬೈರತಿ ಬಸವರಾಜ್​ಗೆ ತೀವ್ರ ಹಿನ್ನೆಡೆಯಾಗಿತ್ತು.

ಇದನ್ನೂ ಓದಿ : ಬೆಂಗಳೂರು| ‘ಕರಾವಳಿಯ ರಕ್ತ-ಕಣ್ಣೀರು’ ಪುಸ್ತಕ ಬಿಡುಗಡೆ ಫೆಬ್ರವರಿ 15ರಂದು

ಅಹಮದಾಬಾದ​ನಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೈರತಿ ಆಗಮನ ವಿಚಾರ ತಿಳಿಯುತ್ತಿದ್ದಂತೆ ದೇವನಹಳ್ಳಿ ವಿಭಾಗದ ಎಸಿಪಿ ಶ್ರೀಹರ್ಷ ನೇತೃತ್ವದ ತಂಡ ಬಂಧನಕ್ಕಾಗಿ ಕಾದು ಕುಳಿತಿತ್ತು. ಇಂದು ಸಂಜೆ 6.45ಕ್ಕೆ ಆರೋಪಿಯನ್ನು ವಶಕ್ಕೆ ಪಡೆದು ಸಿಐಡಿ ಸುಪರ್ದಿಗೆ ಒಪ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ಪರೀಕ್ಷೆ ಗೆ ಏರ್​ಪೋರ್ಟ್​ನಿಂದ ನೇರವಾಗಿ ನಗರದ ಸಿಐಡಿ ಪ್ರಧಾನ ಕಚೇರಿಗೆ ತರಲಾಯಿತು. ಬಹುತೇಕ ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್​ ಕಸ್ಟಡಿಗೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಿದರಹಳ್ಳಿ ಹೋಬಳಿಯ ಕಿತ್ತಕನೂರು ಬಳಿ ಖರೀದಿಸಿದ್ದ ಜಮೀನಿಗೆ ಸಂಬಂಧಿಸಿದಂತೆ ಪ್ರಕರಣದ ಮೊದಲ ಆರೋಪಿ ಹಾಗೂ ಶಾಸಕರ ಆಪ್ತನಾಗಿದ್ದ ಜಗದೀಶ್ ಹಾಗೂ ಹತ್ಯೆಯಾದ ಬಿಕ್ಲು ಶಿವ ನಡುವೆ ಹಳೆ ವೈಷಮ್ಯವಿತ್ತು. ಕಳೆದ ಜುಲೈ 15ರಂದು ರಾತ್ರಿ ಭಾರತೀನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿರುವ ನಿವಾಸದ ಬಳಿ ಬಿಕ್ಲು ಶಿವನನ್ನು ವ್ಯವಸ್ಥಿತ ಸಂಚು ರೂಪಿಸಿ ​​ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು.  ಕೃತ್ಯದ ಬಳಿಕ ಶಿವನ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಬೈರತಿ ಬಸವರಾಜ್ ಅವರನ್ನು ಐದನೇ ಆರೋಪಿಯನ್ನಾಗಿ ಮಾಡಲಾಗಿತ್ತು.

ಆಗಸ್ಟ್ 25ರಂದು ದುಬೈನಿಂದ ದೆಹಲಿಗೆ ಬಂದಿದ್ದ ಜಗದೀಶ್ ಬಂಧನವಾಗಿತ್ತು. ಬಂಧನ ಭೀತಿಯಿಂದ ಬೈರತಿ ಕೋರ್ಟ್​ ಮೆಟ್ಟಿಲೇರಿದ್ದರಿಂದ ಬಂಧಿಸಲು ಸಾಧ್ಯವಾಗಿರಲಿಲ್ಲ.  ನಾಪತ್ತೆಯಾಗಿದ್ದ ಪ್ರಕರಣದ ಮೊದಲ ಆರೋಪಿ ಜಗದೀಶ್ ಬಂಧನಕ್ಕಾಗಿ ಬ್ಲೂಕಾರ್ನರ್​ ನೋಟಿಸ್ ಹೊರಡಿಸಲಾಗಿತ್ತು.  ಇಂದು ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ಬೆಂಗಳೂರಿಗೆ ಬಂದ ಶಾಸಕರನ್ನು ಸಿಐಡಿ ಪೊಲೀಸರು ಬಂಧಿಸಿದ್ಧಾರೆ.

ಕೊಲೆಯಲ್ಲಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಜಗದೀಶ್, ಕಿರಣ್, ಪ್ರದೀಪ್, ವಿಮಲ್, ಮದನ್, ಸ್ಯಾಮ್ಯುಯೆಲ್, ಅವಿನಾಶ್, ಅರುಣ್, ನವೀನ್, ಮುರುಗೇಶ್, ನರಸಿಂಹ, ಸುದರ್ಶನ್, ಶಿವು, ಪ್ರಸಾದ್, ಮನೋಜ್, ಫ್ಯಾಟ್ರಿಕ್ ಹಾಗೂ ಕಿರಣ್, ಅಜಿತ್ ಸೇರಿದಂತೆ 20ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಿದಂತಾಗಿದೆ.

ಇದನ್ನೂ ನೋಡಿ : ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media

Donate Janashakthi Media