ಮಣಿಪುರ: ರಾಜ್ಯದ ತಾಂಗ್ಖುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆ, ಉಗ್ರರು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಉಖ್ರೂಲ್ ಜಿಲ್ಲೆಯಲ್ಲಿ ಶಸ್ತ್ರಧಾರಿ ಫೆಬ್ರವರಿ 9ರಂದು ನಡೆದಿದೆ. ಅರ್ಧರಾತ್ರಿಯ ವೇಳೆಗೆ ಲಿಟಾನ್ ಸಾರೆಖೋಂಗ್ ಗ್ರಾಮದಲ್ಲಿ ಎರಡು ಸಮುದಾಯಗಳಿಗೆ ಸೇರಿದ ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
“ಹಾನಿಯ ಪ್ರಮಾಣವನ್ನು ಇನ್ನೂ ಅಂದಾಜಿಸಲಾಗುತ್ತಿದೆ. ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿದಿದೆ,” ಎಂದು ಜಿಲ್ಲಾ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಶಸ್ತ್ರಸಜ್ಜಿತರು ಮನೆಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದು, ಕ್ಯಾಂಮಫ್ಲಾಜ್ ಉಡುಪು ಧರಿಸಿದ ಉಗ್ರರು ಆಕಾಶಕ್ಕೆ ಸುಧಾರಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯಗಳು ಕಾಣಿಸುತ್ತವೆ.
ಇದನ್ನೂ ಓದಿ: ಭಾರತೀಯ ಕೃಷಿಯನ್ನು ಒತ್ತೆಯಿಡುವುದನ್ನುನಿಲ್ಲಿಸಬೇಕು-ಎಐಕೆಎಸ್
ಲಿಟಾನ್ ಸಾರೆಖೋಂಗ್ ಗ್ರಾಮದಲ್ಲಿ ಕುಕಿ ಸಮುದಾಯದ ಪ್ರಾಬಲ್ಯವಿದ್ದು, ಉಖ್ರೂಲ್ ಜಿಲ್ಲೆಯಲ್ಲಿ ತಾಂಗ್ಖುಲ್ ನಾಗಾ ಸಮುದಾಯದ ಪ್ರಾಬಲ್ಯವಿದೆ. ತಾಂಗ್ಖುಲ್ ಮಣಿಪುರದ ಅತಿ ದೊಡ್ಡ ನಾಗಾ ಜನಾಂಗವಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಸಂಚಾರ ತಡೆಯಲು ಮಹಾದೇವ್, ಲಾಂಬುಯಿ, ಶಾಂಗ್ಕೈ ಸೇರಿದಂತೆ ಲಿಟಾನ್ ಕಡೆಗೆ ಹೋಗುವ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾನುವಾರ ಸಂಜೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆ ಉಖ್ರೂಲ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಈ ದಾಳಿಗಳು ನಡೆದಿವೆ.
ಜಿಲ್ಲಾಧಿಕಾರಿ ಆಶಿಷ್ ದಾಸ್ ಹೊರಡಿಸಿದ ಅಧಿಸೂಚನೆಯಲ್ಲಿ, ತಾಂಗ್ಖುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವಿನ ಉದ್ವಿಗ್ನತೆಯಿಂದ ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಭಂಗವಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ.
ಭಾನುವಾರ ಸಂಜೆ 7 ಗಂಟೆಯಿಂದ ಮುಂದಿನ ಆದೇಶದವರೆಗೆ ನಿವಾಸಿಗಳ ಹೊರತು ಯಾರೂ ಮನೆಬಿಟ್ಟು ಹೊರಗೆ ಸಂಚರಿಸದಂತೆ ನಿಷೇಧ ವಿಧಿಸಲಾಗಿದೆ. ಈ ಆದೇಶವು ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಶನಿವಾರ ರಾತ್ರಿ ತಾಂಗ್ಖುಲ್ ಸಮುದಾಯದ ಸದಸ್ಯನೊಬ್ಬನ ಮೇಲೆ ಕುಕಿ-ಝೋ ಜನಾಂಗದ ಗುಂಪು ಹಲ್ಲೆ ನಡೆಸಿದ ಆರೋಪದ ಬಳಿಕ ಲಿಟಾನ್ ಪ್ರದೇಶದಲ್ಲಿ ಕುಕಿ-ಝೋ ಮತ್ತು ನಾಗಾ ಗ್ರಾಮಸ್ಥರ ನಡುವೆ ಉದ್ವಿಗ್ನತೆ ತೀವ್ರಗೊಂಡಿತ್ತು. ಆರೋಪಿಗಳನ್ನು ಬಂಧಿಸಬೇಕೆಂದು ಹಲವು ನಾಗಾ ಗ್ರಾಮಗಳ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಈ ವಿಷಯವನ್ನು ಪೀಡಿತ ಕುಟುಂಬ ಮತ್ತು ಲಿಟಾನ್ ಸಾರೆಖೋಂಗ್ ಗ್ರಾಮದ ಮುಖ್ಯಸ್ಥರ ನಡುವೆ ಸಂಪ್ರದಾಯಬದ್ಧ ರೀತಿಯಲ್ಲಿ ಪರಿಹರಿಸಲು ಒಪ್ಪಂದವಾಗಿದ್ದು, ಭಾನುವಾರ ಸಭೆ ನಡೆಸಲು ತೀರ್ಮಾನಿಸಲಾಗಿತ್ತು ಎಂದು ವರದಿಯಾಗಿದೆ.
ಆದರೆ ಸಭೆ ನಡೆಯದೇ, ಬದಲಾಗಿ ಸಮೀಪದ ಸಿಕಿಬುಂಗ್ ಗ್ರಾಮದಿಂದ ಬಂದ ಗ್ರಾಮಸ್ಥರ ಗುಂಪು ಲಿಟಾನ್ ಸಾರೆಖೋಂಗ್ ಗ್ರಾಮದ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿದ ಆರೋಪ ಕೇಳಿಬಂದಿದೆ. ಅಲ್ಲದೆ, ಲಿಟಾನ್ ಪೊಲೀಸ್ ಠಾಣೆಯ ಸಮೀಪದಿಂದ ಹಾದು ಹೋಗುವ ವೇಳೆ ಏಳು ಸುತ್ತು ಗುಂಡಿನ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಇದನ್ನೂ ನೋಡಿ: 60 ವರ್ಷದ ಉಳುಮೆಗೆ ಹಕ್ಕಿಲ್ಲವೇ? ಕಾರೆಕೆರೆ ಕಾವಲು ದಲಿತರ ನ್ಯಾಯದ ಕೂಗು Janashakthi Media
