ವಿಧಾನಸಭಾ ಚುನಾವಣೆಗೂ ಮುನ್ನ ಎಲ್‌ಡಿಎಫ್ ರಾಜ್ಯಾದ್ಯಂತ ಜಾಥಾ ಆರಂಭ

ಕೇರಳ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ, ಆಡಳಿತಾರೂಢ ಎಡಪಕ್ಷೀಯ ಪ್ರಜಾಸತ್ತಾತ್ಮಕ ಮುನ್ನಡೆ (ಎಲ್‌ಡಿಎಫ್) ರಾಜ್ಯವ್ಯಾಪಿ ಜನಸಂಪರ್ಕ ಅಭಿಯಾನವನ್ನು ಆರಂಭಿಸಿದೆ. ಅಭಿವೃದ್ಧಿ ಹಾಗೂ ಧರ್ಮನಿರಪೇಕ್ಷತೆಯನ್ನು ಕೇಂದ್ರೀಕರಿಸಿಕೊಂಡು ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಜಾಥಾಗಳ ಸರಣಿಯನ್ನು ಎಲ್‌ಡಿಎಫ್ ನಡೆಸುತ್ತಿದೆ. ವಿಧಾನಸಭಾ

ಫೆಬ್ರವರಿ 1ರಂದು ಆರಂಭವಾದ ಈ ಅಭಿಯಾನದಲ್ಲಿ ಉತ್ತರ, ಮಧ್ಯ ಹಾಗೂ ದಕ್ಷಿಣ ಕೇರಳವನ್ನು ಒಳಗೊಂಡಂತೆ ಮೂರು ಪ್ರಮುಖ ಜಾಥಾಗಳನ್ನು ಆಯೋಜಿಸಲಾಗಿದೆ. ಉತ್ತರ ಜಾಥೆಗೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ನೇತೃತ್ವ ವಹಿಸಿದ್ದು, ಮಧ್ಯ ಜಾಥೆಗೆ ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ ಜೋಸೆ ಕೆ. ಮಣಿ ಮುನ್ನಡೆಸುತ್ತಿದ್ದಾರೆ. ದಕ್ಷಿಣ ಜಾಥೆಯನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಮುನ್ನಡೆಸುತ್ತಿದ್ದಾರೆ. ಈ ಜಾಥೆಗಳು ರಾಜ್ಯದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳನ್ನು ವ್ಯಾಪಿಸಿ, ಫೆಬ್ರವರಿ 16ರೊಳಗೆ ಸಮಾಪ್ತಿಗೊಳ್ಳಲಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉತ್ತರ ಜಾಥೆಯನ್ನು ಕುಂಬಳದಲ್ಲಿ, ಮಧ್ಯ ಜಾಥೆಯನ್ನು ಪಠಣಂತಿಟ್ಟದಲ್ಲಿ ಹಾಗೂ ದಕ್ಷಿಣ ಜಾಥೆಯನ್ನು ಚೆಲಕ್ಕಾರದಲ್ಲಿ ಉದ್ಘಾಟಿಸಿದರು. ದಕ್ಷಿಣ ಜಾಥೆ ಉದ್ಘಾಟಿಸಿ ಮಾತನಾಡಿದ ಪಿಣರಾಯಿ ವಿಜಯನ್, ಕೇರಳದ ಮಾದರಿ ಅಭಿವೃದ್ಧಿ ಸಾಧನೆಗಳಿದ್ದರೂ ಕೇಂದ್ರ ಸರ್ಕಾರ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಪ್ರತಿಭಟನೆಗಳ ಬಳಿಕ ಸಹಜ ಸ್ಥಿತಿಗೆ ಮರಳಿದ ಚುರಾಚಾಂದ್‌ಪುರ

ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್‌ ಕೂಡ ಅದೇ ನಿರ್ಲಕ್ಷ್ಯದ ಪ್ರತಿಬಿಂಬವಾಗಿದೆ ಎಂದರು. ಹಣಕಾಸು ಸಚಿವಾಲಯದ ಆರ್ಥಿಕ ಸಮೀಕ್ಷೆಯಲ್ಲಿ ಕೇರಳದ ಸಾಧನೆಗಳನ್ನು ಗುರುತಿಸಿದ್ದರೂ, ಬಜೆಟ್‌ನಲ್ಲಿ ರಾಜ್ಯದ ಕುರಿತು ಒಂದು ಉಲ್ಲೇಖವೂ ಇಲ್ಲದಿರುವುದು ಖಂಡನೀಯ ಎಂದು ಹೇಳಿದರು.

ಜಾಥಾಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ವಿವಿಧ ಸ್ಥಳಗಳಲ್ಲಿ ಜನರು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ಸ್ವಾಗತ ಸಭೆಗಳಲ್ಲಿ ಎಲ್‌ಡಿಎಫ್ ಸರ್ಕಾರ ಜಾರಿಗೊಳಿಸಿರುವ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಸಾರ್ವಜನಿಕರಿಗೆ ವಿವರಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಎಲ್‌ಡಿಎಫ್ ಸರ್ಕಾರಗಳ ಮೂಲಕ ಕಲ್ಯಾಣ, ಆರೈಕೆ ಮತ್ತು ಅಭಿವೃದ್ಧಿಯ ಮೂಲಕ ಕೇರಳ ಸಾಧಿಸಿರುವ ಪ್ರಗತಿಯನ್ನು ಜಾಥೆಗಳು ಮುಂದಿಟ್ಟುಕೊಂಡಿದ್ದು, ಎಲ್‌ಡಿಎಫ್ ಆಡಳಿತ ಮುಂದುವರಿಯಬೇಕೆಂದು ಜನತೆಗೆ ಮನವಿ ಮಾಡಲಾಗುತ್ತಿದೆ.

ಇದೇ ವೇಳೆ, ಕೇಂದ್ರ ಸರ್ಕಾರದ ಬಿಜೆಪಿ ನೇತೃತ್ವದ ಆಡಳಿತವು ಕೇರಳದ ಅಭಿವೃದ್ಧಿ ಅಗತ್ಯಗಳು ಮತ್ತು ಆರ್ಥಿಕ ಸಮಸ್ಯೆಗಳತ್ತ ತೋರಿಸುತ್ತಿರುವ ನಿರಂತರ ನಿರ್ಲಕ್ಷ್ಯವನ್ನೂ, 2025ರ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ನೀಡಿರುವ ಅನ್ಯಾಯವನ್ನೂ ಎಲ್‌ಡಿಎಫ್ ನಾಯಕರು ಜನರ ಮುಂದಿಟ್ಟಿದ್ದಾರೆ.

ಇದಕ್ಕೂ ಮೊದಲು ಜನವರಿ ತಿಂಗಳಲ್ಲಿ ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳು ಮನೆಮನೆಗೆ ಭೇಟಿ ನೀಡುವ ಅಭಿಯಾನವನ್ನು ನಡೆಸಿ, ಎಲ್‌ಡಿಎಫ್ ಸರ್ಕಾರದ ಕಲ್ಯಾಣ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೇರವಾಗಿ ಜನರಿಗೆ ತಲುಪಿಸುವ ಜೊತೆಗೆ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದವು. ಈ ಅಭಿಯಾನದ ಮುಂದುವರಿದ ಭಾಗವಾಗಿ ವಾರ್ಡ್‌ ಮಟ್ಟದ ಕುಟುಂಬ ಸಭೆಗಳು ಹಾಗೂ ಸ್ಥಳೀಯ ಮಟ್ಟದ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಲಾಗಿತ್ತು.

ಇದನ್ನೂ ನೋಡಿ: ಯುಡಿಆರ್‌ನಲ್ಲಿ ಹೂತ ಸತ್ಯಗಳು, ಎಫ್‌ಐಆರ್‌ನಲ್ಲಿ ಹೊರಬರಲಿವೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *