ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಸೈಬರ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸಿಐಡಿ ಸೈಬರ್ ಕ್ರೈಂ ಮಹತ್ವದ ಕಾರ್ಯಾಚರಣೆ ನಡೆಸಿ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಿ, 13 ಪ್ರಮುಖ ವಂಚಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 5ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಫೆಬ್ರವರಿ 6ರಂದು ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್ಗಳನ್ನು ಬಂಧಿಸಿದೆ.
ಇದನ್ನೂ ಓದಿ: ನವದೆಹಲಿ | ಕೇಂದ್ರದ ನಡೆಗೆ ಕಿಡಿಕಾರಿದ ಮಮತಾ: ಸುಪ್ರೀಂ ಕೋರ್ಟ್ನಲ್ಲಿ ಸ್ವತಃ ವಾದ
ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಮ್ಯೂಲ್ ಅಕೌಂಟ್ಗಳ ಮೂಲಕ ಆನ್ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್ಡ್ರಾ ಮಾಡಲಾಗುತ್ತಿತ್ತು.
ದಾಳಿಯ ವೇಳೆ ಸಿಐಡಿ ಅಧಿಕಾರಿಗಳಿಗೆ ಸುಮಾರು 40,000ಕ್ಕೂ ಹೆಚ್ಚು ಅಮಾಯಕ ಜನರ ಮ್ಯೂಲ್ ಅಕೌಂಟ್ ಗಳು ಪತ್ತೆಯಾಗಿವೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಮ್ಯೂಲ್ ಅಕೌಂಟ್ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿತ್ತು. ಇನ್ನು ಸೈಬರ್ ವಂಚಕರಿಗೆ ಖಾತೆ ವಿವರ ನೀಡಿದ ಅಮಾಯಕರಿಗೆ ಈ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ.ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ನೋಡಿ: ಫೆ.12 ಸಾರ್ವತ್ರಿಕ ಮುಷ್ಕರ – ಶ್ರಮಜೀವಿಗಳ ಘೋಷಣೆ Janashakthi Media
