17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes) 2026ರ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯುತ್ತಿದೆ. ‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಮಹಿಳಾ ಸಬಲೀಕರಣದ ಥೀಮ್‌ನೊಂದಿಗೆ, 60ಕ್ಕೂ ಹೆಚ್ಚು ದೇಶಗಳ ಸುಮಾರು 110ಕ್ಕೂ ಹೆಚ್ಚು ಚಿತ್ರಗಳನ್ನು ರಾಜಾಜಿನಗರದ ಲುಲು ಮಾಲ್, ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ಡಾ. ರಾಜ್‌ಕುಮಾರ್ ಭವನದಲ್ಲಿ ಪ್ರದರ್ಶಿಸಲಾಗುತ್ತಿದೆ. ಕೆಲ ಚಿತ್ರಗಳ ಬಗ್ಗೆ ಸಿನಿಮಾಸಕ್ತರಾದ ಎಂ. ನಾಗರಾಜ ಶೆಟ್ಟಿ ಪರಿಚಯಿಸಿದ್ದಾರೆ. ಬೆಂಗಳೂರು
Happy Birthday
ಸಾರಾ ಗೋಹರ್ ರ ಅರೆಬಿಕ್ ಭಾಷೆಯ ಹ್ಯಾಪಿ ಬರ್ತ್ ಡೇ ಸರಳ, ಸುಂದರ ಚಿತ್ರ. ಮನೆಗೆಲಸ ಮಾಡುತ್ತಿರುವ ತಾಹ ಎನ್ನುವ ಹುಡುಗಿ ತಾನು ಕೆಲಸ ಮಾಡುವ ಮನೆಯ – ತನ್ನ ವಯಸ್ಸಿನ ಹುಡುಗಿಯ ಹುಟ್ಟು ಹಬ್ಬವನ್ನು ಆಚರಿಸಲು ಉತ್ಸುಕಳಾಗಿದ್ದಾಳೆ. ಅವಳ ಯಜಮಾನಿ ಗಂಡನ ಸಂಬಂಧವನ್ನು ಕಡಿದುಕೊಳ್ಳುವ ಹಂತದಲ್ಲಿದ್ದಾಳೆ. ಮಗಳ ಬರ್ತ್ ಡೇ ಆಚರಿಸಲು ಆಕೆಗೆ ಮನಸ್ಸಿಲ್ಲ. ತಾಹ ಸಂಭ್ರಮದಿಂದ ಬರ್ತ್ ಡೇ ಏರ್ಪಾಡು ಮಾಡುತ್ತಾಳೆ. ಬೆಂಗಳೂರು
ಈ ಮನೆಯಲ್ಲೇ ಇರುವುದು ತನ್ನ ಬಯಕೆ ಎಂದೂ ಹೇಳುತ್ತಾಳೆ.ಆದರೆ ಕೆಲಸದಾಕೆ, ಅದರಲ್ಲೂ ಅಪ್ರಾಪ್ತ ಮಯಸ್ಸಿನವಳು ಅತಿಥಿಗಳ ಮುಂದೆ ಕಾಣಿಸಿಕೊಳ್ಳುವುದು ಮನೆಯವರಿಗೆ ಇಷ್ಟವಿಲ್ಲ. ತಾಹಳನ್ನು ಅವಳ ಮನೆಗೆ ಕಳಿಸಿಕೊಡಲಾಗುತ್ತದೆ. ಅವಳು ಏನೆಲ್ಲಾ ಕಷ್ಟ ಪಟ್ಟು, ಇಷ್ಟ ಪಟ್ಟು ಬರ್ತ್ ಡೇ ಸಂಭ್ರಮದಲ್ಲಿ ಪಾಲುಗೊಂಡರೂ ಪರಿಸ್ಥಿತಿ ಬೇರೆಯೇ ಆಗುತ್ತದೆ. ಬೆಂಗಳೂರು
ಇದನ್ನೂ ಓದಿ: ಮಾಲೂರು | ಶಾಸಕರಾಗಿ ನಂಜೇಗೌಡ ಮುಂದುವರಿಕೆ : ಮರು ಎಣಿಕೆಯಲ್ಲೂ ಮತ್ತೊಮ್ಮೆ ಜಯ
ಅಗತ್ಯವಿದ್ದಾಗ ದುಡಿಸಿಕೊಳ್ಳುವ, ಬೇಡವೆಂದಾಗ ಕಳಿಸಿಬಿಡುವ, ಕೆಲಸದವರ ಭಾವನೆಗೆ ಬೆಲೆ ಕೊಡದ ಸ್ಥಿತಿ,ಅರೇಬಿಯಾದಲ್ಲೇನು, ಎಲ್ಲೆಲ್ಲೂ ಇದೆಯಲ್ಲವೇ? ನಿರ್ದೇಶಕಿ ಅನುಕ್ರಮಣಿಕೆಯಲ್ಲಿ ಸುಲಲಿತವಾಗಿ ಚಿತ್ರ ರೂಪಿಸಿದ್ದಾರೆ.ಮುದ ನೀಡುವ ಸಿನಿಮಾ. ಬೆಂಗಳೂರು
Lost Land

ಮಾನವೀಯತೆಗೆ ಮತ್ತು ವಲಸೆಗೆ ಬಹು ದೂರ. ರಾಷ್ಟ್ರಗಳ ನಡುವೆ ಗಡಿ ಎಳೆದು ಮನುಷ್ಯರನ್ನು ಪ್ರತ್ಯೇಕಿಸುವುದು ಒಂದು ವಿಧವಾದರೆ ಧರ್ಮಗಳು ಮನುಷ್ಯರನ್ನು ವಿಭಜಿಸುವುದು ಇನ್ನೊಂದು ವಿಧಾನ. ಮ್ಯಾನ್ ಮಾರ್ ನ ಬಹುಸಂಖ್ಯಾತ ಧರ್ಮವನ್ನು ಹೆಸರಿಸದೆ ಅಲ್ಲಿನ ರೋಹಿಂಗ್ಯಾ ಅಲ್ಪಸಂಖ್ಯಾತರು ಸುರಕ್ಷೆಯ ನೆಲೆಯನ್ನು ಹುಡುಕಲು ಸ್ವಸ್ಥಾನವನ್ನು ಬಿಟ್ಟು ತೆರಳುವ ಕತೆ ಲಾಸ್ಟ್ ಲ್ಯಾಂಡ್ ಸಿನಿಮಾದ್ದು. ಈ ಕತೆಯನ್ನು ನಾಲ್ಕು ವರ್ಷದ ಹುಡುಗ ಮತ್ತವನ ಒಂಬತ್ತು ವರ್ಷದ ಅಕ್ಕನನ್ನು ಕೇಂದ್ರವಾಗಿರಿಸಿಕೊಂಡು ಹೆಣೆಯಲಾಗಿದೆ.
ಈ ಇಬ್ಬರು ಮಕ್ಕಳು ಹಿರಿಯರ ಜೊತೆ ಸುದೀರ್ಘ ಸಮುದ್ರ ಪಯಣ ಮಾಡುತ್ತಾರೆ. ಸಮುದ್ರ ದಾಟಿ ಕಾಡಿನ ಜಾಡಿನಲ್ಲಿ ಜೊತೆಯಲ್ಲಿ ಬಂದವರನ್ನೆಲ್ಲಾ ಕಳೆದುಕೊಳ್ಳುತ್ತಾರೆ. ಅಕ್ಕ ತಮ್ಮನನ್ನು ಜೋಪಾನವಾಗಿ ನೋಡಿಕೊಂಡರೂ ಅಗಲುವ ಸಂದರ್ಭ ಬರುತ್ತದೆ.ಒಬ್ಬನೇ ಉಳಿಯುವ ತಮ್ಮನ ಗತಿಯೇನು?
ಕಣ್ಣಾ ಮುಚ್ಚಾಲೆ ಆಟದಿಂದ ಆರಂಭವಾಗುವ ಸಿನಿಮಾ ಅದನ್ನು ಸೂಕ್ತವಾಗಿ ಬಳಸಿಕೊಂಡಿದೆ. ಎಲ್ಲಾದರೂ ಹೋಗಿ ನೆಲಸಬೇಕೆಂಬ ಹಪಹಪಿ,ಏಜೆಂಟರುಗಳ ಹಣದಾಸೆ,ದೇವರು ಕಾಪಾಡುತ್ತಾನೆ ಎನ್ನುವ ಭರವಸೆ ಈ ಪ್ರಯಾಣದಲ್ಲಿ ಬಂದು ಹೋಗುವ ವಿಷಯಗಳು. ದೇವರಲ್ಲಿ ನಂಬಿಕೆ ಇರಿಸಿದವರೆಲ್ಲರೂ ಕಣ್ಮರೆಯಾಗುವುದೊಂದು ವಿಪರ್ಯಾಸ.
ಸಾವು, ನೋವುಗಳನ್ನು ಹೆಚ್ಚಾಗಿ ತೋರಿಸದೆ ಪರಿಸ್ಥಿತಿಯ ಗಹನತೆ, ಮನುಷ್ಯನ ಅಸಹಾಯಕತೆಯನ್ನು ಸಿನಿಮಾ ಮನ ಮುಟ್ಟುವಂತೆ ಹೇಳುತ್ತದೆ.ರಾಜಕೀಯ, ಧರ್ಮ ಎಂದರೇನೆಂದು ತಿಳಿಯದ ಮುಗ್ಧ ಬಾಲಕ ಕೂಡಾ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವುದನ್ನು ತೋರಿಸುವ ಮೂಲಕ ಬಹುಸಂಖ್ಯಾತ ಧರ್ಮಗಳ ಅಮಾನವೀಯತೆಯನ್ನು ಸಿನಿಮಾ ಮಾರ್ಮಿಕವಾಗಿ ಹೇಳುತ್ತದೆ.
It was just an accident

ಇರಾನಿನ ಖ್ಯಾತ ನಿರ್ದೇಶಕ ಜಾಫರ್ ಫನಾಹಿ ಸಿನಿಮಾ ಕಟ್ಟುವ ವಿಧಾನವೇ ವಿಶಿಷ್ಟವಾದದ್ದು. ಈ ಚಿತ್ರದಲ್ಲಿ ನಾಯಿ ಕಾರಿನಡಿಗೆ ಸಿಲುಕುವ ಘಟನೆ ನೆಪ ಮಾತ್ರ.ಅದನ್ನು ಆಧರಿಸಿ ಅವರು ಇರಾನಿನ ಆಳ್ವಿಕೆಯ ವಿಮರ್ಶೆ ಮಾಡುತ್ತಾರೆ. ಮೇಲ್ನೋಟಕ್ಕೆ ಇದು ಸಣ್ಣ ಅಪಘಾತವಾದ ನಂತರದ ಘಟನೆಗಳಂತೆ ತೋರುತ್ತದೆ.’ಬಹುಸಂಖ್ಯಾತರು ಗಾಳಿ ಬಂದ ಕಡೆ ತೂರಿಕೊಳ್ಳುವವರು’ ಎನ್ನುವ ಮಾತಿನಿಂದಲೇ ಚಿತ್ರದ ಧಾಟಿ ಅರ್ಥ ಮಾಡಿಕೊಳ್ಳಬಹುದು.
ಸಿರಿಯಾ ಯುದ್ಧದ ಸಮಯದಲ್ಲಿ ತಮ್ಮನ್ನು ಜೈಲಿಗೆ ತಳ್ಳಿ ಕೊಡಬಾರದ ಹಿಂಸೆ ಕೊಟ್ಟವನೆಂದು ಮೆಕ್ಯಾನಿಕ್ ಒಬ್ಬನನ್ನು ಶಂಕಿಸುತ್ತಾನೆ. ಅವನ ಕೃತಕ ಕಾಲೊಂದರ ಕೀಲಿನ ಶಬ್ದದ ಮೂಲಕ ಅವನೇ ಇರಬಹುದೆಂದುಕೊಂಡರೂ ಸಮರ್ಥನೆಗಾಗಿ ಹಲವರನ್ನು ಸೇರಿಸಿಕೊಳ್ಳುತ್ತಾನೆ. ಅವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಜೈಲರ್ ನಿಂದ ನೊಂದವರೇ. ಕೆಲವರಿಗೆ ಪ್ರಾಣ ತೆಗೆಯುವಷ್ಟು ಸಿಟ್ಟಿದೆ. ತಾನೇ ಹಿಂಸೆ ಮಾಡಿದವನು ಎಂದು ಒಪ್ಪಿಕೊಳ್ಳುವ ಶಂಕಿತ, ತನ್ನನ್ನು ಸಾಯಿಸಿದರೆ ಹುತಾತ್ಮನಾಗುತ್ತೇನೆ ಎನ್ನುವಷ್ಟು ಭಂಡತನ ಉಳ್ಳವನು.
‘ಪ್ರಭುತ್ವದ ಅಪ್ಪಣೆಯಂತೆ ಕೆಲಸ ಮಾಡುತ್ತಾರೆ ಅವರದೇನು ತಪ್ಪು?’ ‘ ಇಂಥವರು ಇರುವುದರಿಂದಲೇ ಪ್ರಭುತ್ವ ನಡೆಯುವುದು” ಧರ್ಮಕ್ಕಾಗಿ ಸತ್ತರೆ ಸ್ವರ್ಗ ಸಿಗುತ್ತದೆ’ ಇಂತಹ ಮಾತುಗಳ ಮೂಲಕ ಫನಾಹಿ ವ್ಯವಸ್ಥೆಯ ಕಡು ಟೀಕೆ ಮಾಡುತ್ತಾರೆ. ಕೊನೆಯ ದೃಶ್ಯದಲ್ಲಿ ಕೇಳುವ ಕೃತಕ ಕಾಲಿನ ಕೀರಲು ಶಬ್ದ ಹಲವು ಅರ್ಥಗಳನ್ನು ಬಿಂಬಿಸುತ್ತದೆ. ನಿರ್ದೇಶಕ ಜಾಫರ್ ಫನಾಹಿ ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡುವುದಿಲ್ಲ.
ಇದನ್ನೂ ನೋಡಿ: “ರೈತ–ಕಾರ್ಮಿಕ–ಕೂಲಿಕಾರರ ಮುಷ್ಕರ | ಕೆಲಸ ಸ್ಥಗಿತ, ಬೀದಿಗಿಳಿಯಲಿದ್ದಾರೆ ದುಡಿಯುವ ಜನ” | Janashakthi Media
