ವಿಬಿಜಿ ರಾಮ್ ಜಿ ಯೋಜನೆ ರದ್ದು ಮಾಡಲು ದಲಿತ ಸೇನೆ ಆಗ್ರಹ

ಬೆಂಗಳೂರು: ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ವಿಬಿ–ಜಿ ರಾಮ್ ಜಿ ಯೋಜನೆಯನ್ನು ರದ್ದು ಮಾಡಿ, ಮೊದಲಿದ್ದ ಹಾಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ದಲಿತ ಸೇನೆ ಆಗ್ರಹಿಸಿದೆ.

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್, ಗ್ರಾಮೀಣ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಎರಡು ದಶಕಗಳಿಂದ ಗ್ರಾಮೀಣ ಕೂಲಿ ಕಾರ್ಮಿಕರು, ಮಹಿಳೆಯರು, ದಲಿತರು, ಸಣ್ಣ ಹಾಗೂ ಅಂಚಿನ ರೈತರಿಗೆ ಜೀವನೋಪಾಯದ ಭದ್ರತೆಯನ್ನು ಒದಗಿಸುತ್ತಿರುವ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸಿ, ಅದರ ಬದಲಾಗಿ ವಿಬಿ-ಜಿ ರಾಮ್ ಜಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿರುವುದು ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಮನರೇಗಾ ಯೋಜನೆ ಬೇಡಿಕೆಯಿದ್ದಲ್ಲಿ ಕೆಲಸ ನೀಡುವ ಕಾನೂನುಬದ್ಧ ಹಕ್ಕನ್ನು ಕಾರ್ಮಿಕರಿಗೆ ಒದಗಿಸಿತ್ತು. ಆದರೆ ಹೊಸ ವಿಬಿ–ಜಿ ರಾಮ್ ಜಿ ಯೋಜನೆಯಲ್ಲಿ ಕೆಲಸದ ದಿನಗಳಿಗೆ ಮಿತಿ, ಕೃಷಿ ಋತುವಿನಲ್ಲಿ ಕೆಲಸ ನಿರಾಕರಣೆ, ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಅನುದಾನ ಹಂಚಿಕೆ ಮುಂತಾದ ಅಂಶಗಳು ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಪ್ರಯತ್ನವಾಗಿವೆ. ಇದರಿಂದ ಗ್ರಾಮೀಣ ಬಡವರು, ವಿಶೇಷವಾಗಿ ಮಹಿಳೆಯರು ಮತ್ತು ಅಸಂಘಟಿತ ಕಾರ್ಮಿಕ ವರ್ಗ ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಜಾವೀದ್ ಖಾನ್ ವಿವರಿಸಿದ್ದಾರೆ.

ಇದನ್ನೂ ಓದಿ : ವಿಚಾರಣೆಯಲ್ಲಿ ಪೌರತ್ವ: ಬಂಧನ, ಗಡೀಪಾರು ಅಭಿಯಾನಗಳ ವಿರುದ್ಧ ದನಿ ಎತ್ತಿದ ವಲಸೆ ಕಾರ್ಮಿಕರು

ಕಾರ್ಮಿಕ ಸಂಘಟನೆಗಳು, ರೈತ ಸಂಘಗಳು, ರಾಜ್ಯ ಸರಕಾರಗಳು ಹಾಗೂ ಸಾರ್ವಜನಿಕರೊಂದಿಗೆ ಸಮಗ್ರ ಚರ್ಚೆ ನಡೆಸದೆ, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಸೂಕ್ತ ಚರ್ಚೆಯಿಲ್ಲದೆ, ಇಂತಹ ಮಹತ್ವದ ಯೋಜನಾ ಬದಲಾವಣೆ ಮಾಡಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ಹೆಚ್ಚಾಗುವ ಹಾಗೂ ನಿರುದ್ಯೋಗ ಗಂಭೀರವಾಗುವ ಆತಂಕವಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯ ಹಾಗೂ ಬಡವರ ಪರ ಧೋರಣೆಯುಳ್ಳ ನಾಯಕನಾಗಿರುವ ಸಿಎಂ ಸಿದ್ದರಾಮಯ್ಯನವರು ವಿಬಿ–ಜಿ ರಾಮ್ ಜಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಬೇಕು. ಮನರೇಗಾ ಯೋಜನೆಯನ್ನು ಅದರ ಮೂಲ ಆತ್ಮದೊಂದಿಗೆ ಮುಂದುವರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಕಾರ್ಮಿಕರ 100 ದಿನಗಳ ಉದ್ಯೋಗ ಹಕ್ಕು, ಸಮಯಕ್ಕೆ ಸರಿಯಾದ ಕೂಲಿ ಪಾವತಿ ಹಾಗೂ ಗ್ರಾಮ ಪಂಚಾಯಿತಿ ಆಧಾರಿತ ಯೋಜನಾ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಜಾವೀದ್ ಖಾನ್ ಮನವಿ ಮಾಡಿದ್ದಾರೆ.

ಇದನ್ನೂ ನೋಡಿ : ‘ಶಸ್ತ್ರಮೇವ ಜಯತೆ’: ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ – ಸರ್ಕಾರಗಳ ಮೌನ!?Janashakthi Media

 

Donate Janashakthi Media

Leave a Reply

Your email address will not be published. Required fields are marked *