ಕಲಬುರಗಿ | ಪ್ರಜಾಪ್ರಭುತ್ವದ ದಾರಿ ತೋರಿಸುವ ದೀಪವೇ ಸಂವಿಧಾನ – ಶಶಿಕಾಂತ ಉಡಿಕೇರಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ  ಅವರು ‘ಭಾರತೀಯರ ಬದುಕಿಗೆ ಸಂವಿಧಾನವೇ ಬೆಳಕು; ಅದನ್ನು ಬಿಟ್ಟರೆ ಪ್ರಗತಿಯೇ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ‘ಸಂವಿಧಾನವೇ ಬೆಳಕು’ ಅಭಿಯಾನದಡಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ವಿಚಾರ ಸಂಕಿರಣ ಹಾಗೂ ವಾಕಥಾನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ : ದೇವದುರ್ಗ | ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ: ನಾಗಲಕ್ಷ್ಮಿ ಚೌಧರಿ

ಈ ದೇಶದಲ್ಲಿ ಅಸಂಖ್ಯ ಭಿನ್ನತೆಗಳು, ಹಲವು ಧರ್ಮಗಳು, ಹಲವು ಜಾತಿಗಳು, ಹಲವು ತಾರತಮ್ಯಗಳಿದ್ದವು. ಜೊತೆಗೆ ಬಡತನ, ಅನಕ್ಷರತೆ ದೇಶವನ್ನು ಕಾಡುತ್ತಿದ್ದವು. ಇಂಥ ದೇಶವನ್ನು ಸುಗಮವಾಗಿ ಮುನ್ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಲು ಮಾರ್ಗದರ್ಶಿ ಗ್ರಂಥಬೇಕಿತ್ತು. 1947ರಲ್ಲಿ ಬ್ರಿಟಿಷರು ಹಾಗೂ ಅಲ್ಲಲ್ಲಿ ಆಳುತ್ತಿದ್ದ ರಾಜ ಮನೆತನಗಳ ಕಪಿಮುಷ್ಟಿಯಿಂದ ಭಾರತ ಸ್ವತಂತ್ರಗೊಂಡಿತು. ಡಾ.ಬಿ.ಆರ್‌.ಅಂಬೇಡ್ಕರ್ ರಚಿಸಿದ ‘ಸಂವಿಧಾನ’ದಿಂದ ಅದು ಸಾಕಾರವಾಯಿತು’ ಎಂದರು.

ಮಗು ಅಳದೇ ತಾಯಿಯೂ ಎದೆಹಾಲು ಕುಡಿಸಲ್ಲ. ನಾವೆಲ್ಲ ಆಗಾಗ ಹೋರಾಟದ ಧ್ವನಿ ಎತ್ತಿ ಭಾರತ ಮಾತೆಯ ಎದೆಹಾಲು ಕುಡಿದು ಇಂದು ಬೆಳೆದು ನಿಲ್ಲಲು ಶಕ್ತಿ ಕೊಟ್ಟಿದ್ದೇ ಸಂವಿಧಾನ. ಅಂದಿನಿಂದ ಇಂದಿನ ತನಕ ಸಂವಿಧಾನದ ಫಲವಾಗಿ ದೇಶ ಅಭಿವೃದ್ಧಿ ಕಂಡಿದೆ. ಸಂವಿಧಾನ ಬಿಟ್ಟು ಯೋಚಿಸುವ ವಿಚಾರಗಳು, ಚಿಂತನೆಗಳು ಭವ್ಯ ಭಾರತಕ್ಕೆ ರಚನಾತ್ಮಕ, ಸಾಮಾಜಿಕ ಹಾಗೂ ಭೌಗೋಳಿಕವಾಗಿಯೂ ಅಪಾಯಕಾರಿ’ ಎಂದರು.

‘ಸಂವಿಧಾನ’ ಕುರಿತ ವಿಚಾರ ಸಂಕಿರಣದಲ್ಲಿ ಸೇರಿದ್ದ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರಗಳು

ಕುಲಸಚಿವ ಪ್ರೊ.ರಮೇಶ ಲಂಡನಕರ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಊಹಿಸಲು ಅಸಾಧ್ಯವಾದ ರೋಗಗ್ರಸ್ತ ಸಮಾಜವಿತ್ತು. ಅದಕ್ಕೆ ಸಂವಿಧಾನ ಮದ್ದಾಗಿ ಬಂತು.  ಭಾರತವು ವಿಶ್ವಗುರು ಎನಿಸಿಕೊಳ್ಳಲು ಹೊರಟಿರುವುದಕ್ಕೆ ಪ್ರೇರಣೆಯೇ ಸಂವಿಧಾನ. ಸಮಾಜದಲ್ಲಿನ ಶೋಷಣೆ, ಗುಲಾಮಗಿರಿಗೆ ಅಂತ್ಯ ಹಾಡಲು ಸಂವಿಧಾನ ಅಸ್ತ್ರವಾಯಿತು. ಒಂದೆಡೆ ಬುದ್ಧನ ಶಾಂತಿಯ ವಿಚಾರ, ಬಸವಣ್ಣವರ ಸಮಾನತೆಯ ವಿಚಾರದ ಆದಿಯಾಗಿ ಎಲ್ಲ ಉತ್ತಮ ಆಶಯ–ಅಂಶಗಳನ್ನು ಒಗ್ಗೂಡಿಸಿ ಸಂವಿಧಾನದ ಮೂಲಕ ದೇಶದಲ್ಲಿ ಸರ್ವರಿಗೂ ಸಮಪಾಲು–ಸಮಬಾಳು ಸಾಧ್ಯವಾಗಿಸಿದ ಕೀರ್ತಿ ಡಾ.ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಮಾತನಾಡಿದರು. ‘ಪ್ರಜಾವಾಣಿ’ ಕಲಬುರಗಿ ಬ್ಯುರೊ ಮುಖ್ಯಸ್ಥ ವಿನಾಯಕ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮರಿಲಿಂಗಪ್ಪ ಇದ್ದರು. ವಿಚಾರ ಸಂಕಿರಣ ಹಾಗೂ ವಾಕಥಾನ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ನೋಡಿ : ಬಾದಲ್‌ ಸರ್ಕಾರ ನಾಟಕಗಳಲ್ಲಿ ಸಾಮಾಜಿಕ ಬದ್ಧತೆ ಇತ್ತು – ಧು. ಸರಸ್ವತಿ Janashakthi Media

Donate Janashakthi Media

Leave a Reply

Your email address will not be published. Required fields are marked *