ಬೆಂಗಳೂರು: ಕರ್ನಾಟಕದ ಹಿರಿಯ ಕಾರ್ಮಿಕ ನಾಯಕ ಹಾಗೂ ಎಐಟಿಯುಸಿ ಮಾಜಿ ರಾಜ್ಯ ಅಧ್ಯಕ್ಷರಾಗಿದ್ದ ಎಚ್.ವಿ.ಅನಂತಸುಬ್ಬರಾವ್ ಇನ್ನಿಲ್ಲ ಎನ್ನುವ ಸುದ್ದಿ ಆಘಾತ ಹಾಗೂ ದುಃಖ ತಂದಿದೆ. ಹಿರಿಯ ನಾಯಕನ ಆಗಲಿಕೆಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ತೀವ್ರ ಕಂಬನಿ ಮಿಡಿದಿದೆ. ಮತ್ತು ಅವರ ಶ್ರೀಮತಿ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೂ ತನ್ನ ಅತೀವ ಸಾಂತ್ವಾನ ವ್ಯಕ್ತಪಡಿಸಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ತಿಳಿಸಿದ್ದಾರೆ. ಅನಂತಸುಬ್ಬರಾವ್
ಭಾರತೀಯ ಜೀವವಿಮಾ ನಿಗಮದ ನೌಕರರಾಗಿ ಕಾರ್ಮಿಕ ಚಳವಳಿಗೆ ಧುಮಿಕಿದ ಅನಂತ ಸುಬ್ಬರಾವ್ ಅವರು ಕಳೆದ ಆರು ದಶಕಗಳಿಂದ ಕರ್ನಾಟಕದ ಎಐಟಿಯುಸಿ ರಾಜ್ಯ ನಾಯಕರಾಗಿ ಹಾಗೂ ವಿಶೇಷವಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿ ಹಾಗೂನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಅನೇಕ ಧೀರೋದತ್ತಾ ಹೋರಾಟಗಳನ್ನು ಮುನ್ನಡೆಸಿದ್ದರು ಮತ್ತು ಕಾರ್ಮಿಕರ ವರ್ಗದ ಬದುಕಿಗೊಂದು ಘನತೆಯನ್ನು ಬದುಕನ್ನು ಕಲ್ಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಇದರ ಜತೆಗೆ ರಾಜ್ಯದಲ್ಲಿ ಜಂಟಿ ಕಾರ್ಮಿಕ ಚಳವಳಿಯ ನಾಯಕರಾಗಿ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಕೇಂದ್ರ ಸರ್ಕಾರ ಜಾರಿಮಾಡಿರುವ ಕಾರ್ಮಿಕ ಕೋಡ್ ಗಳ ವಿರುದ್ದ ಐಕ್ಯ ಕಾರ್ಮಿಕ ಚಳವಳಿ ದೇಶವ್ಯಾಪಿ ಮುಷ್ಕರದ ತಯಾರಿ ನಡೆಯುತ್ತಿರುವ ಹೊತ್ತಿನಲ್ಲೇ ಅವರು ಆಗಲಿರುವುದು ಐಕ್ಯ ಚಳವಳಿಗೆ ತುಂಬಾ ನಷ್ಟವಾಗಿದೆ.
ಇದನ್ನೂ ಓದಿ: ಬೆಂಗಳೂರು | ಹಿರಿಯ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ನಿಧನ
ನಾಳೆ ಜನವರಿ 29 ರಂದು ಕರ್ನಾಟಕದ ರಸ್ತೆ ಸಾರಿಗೆ ನೌಕರರು ತಮ್ಮ 38 ತಿಂಗಳ ಬಾಕಿ ವೇತನಕ್ಕಾಗಿ ಜಂಟಿಯಾಗಿ ಸಂಘಟಿಸಿದ್ದ ಚಳವಳಿಯಲ್ಲಿ ಯಶಸ್ವಿಗೆ ಅತ್ಯಂತ ಸಕ್ರಿಯ ಪಾತ್ರವಹಿಸಿದ್ದ ಸಂದರ್ಭದಲ್ಲೇ ಅವರು ಇಂದು ಹೃದಯಾಘಾತದಿಂದ ನಿಧನರಾಗಿರುವುದು ಅತ್ಯಂತ ನೋವಿನ ಸಂಗತಿ.
ಹೀಗೆ ತನ್ನ ಕೊನೆ ಉಸಿರಿರುವವರೆಗೂ ಚಳವಳಿಯಲ್ಲಿರುವ ಕಾರ್ಯಕರ್ತರಿಗೆ ಒಬ್ಬ ಮಾದರಿ ನಾಯಕರಾಗಿದ್ದರು.
ತಮ್ಮ 85 ರ ಇಳಿವಯಸ್ಸಿನಲ್ಲೂ ಸದಾ ನಗುಮೊಗದಿಂದಲೇ ಒಬ್ಬ ಚಳವಳಿಯ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ ಹಿರಿಯ ಸಂಗಾತಿ ನಿಧನದಿಂದ ಕರ್ನಾಟಕದ ಕಾರ್ಮಿಕ ಚಳವಳಿ ಬಡವಾಗಿದೆ.
ಹಿರಿಯ ನಾಯಕ ಅನಂತಸುಬ್ಬರಾವ್ ಆಗಲಿಕೆ ಕಾರ್ಮಿಕ ಚಳವಳಿಗೆ ಅಪಾರ ನಷ್ಟ ಉಂಟುಮಾಡಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ತನ್ನ ತೀವ್ರ ದುಃಖ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಇದನ್ನೂ ನೋಡಿ: ‘ಶಸ್ತ್ರಮೇವ ಜಯತೆ’: ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ – ಸರ್ಕಾರಗಳ ಮೌನ!?Janashakthi Media
